ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ ಯುವ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್, ಕನ್ನಡಿಗರ ಸಂತಸವನ್ನ ಇಮ್ಮಡಿಗೊಳಿಸಿದ್ದಾರೆ. ಮಯಾಂಕ್ ಆಯ್ಕೆ ಹಾಗೂ ಆಟದ ಕುರಿತು ಕೋಚ್ ಇರ್ಫಾನ್ ಸೇಠ್ ಜೊತೆ ನಡೆಸಿದ ಸಂದರ್ಶನ ಇಲ್ಲಿದೆ.
ಬೆಂಗಳೂರು(ಡಿ.25): ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ತಂಡ ಪ್ರಕಟಿಸಿದೆ. ಸುದೀರ್ಘ ದಿನಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಸ್ಥಾನ ನೀಡಲಾಗಿದೆ. ಇದೀಗ ಮಯಾಂಕ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆಡಲು ತುದಿಗಾಲಲ್ಲಿ ನಿಂತಿದ್ದಾರೆ.
ಮೆಲ್ಬೋರ್ನ್‌ನಲ್ಲಿ ನಡೆಯಲಿರುವ 3ನೇ ಪಂದ್ಯದಲ್ಲಿ ಮಯಾಂಕ್ ಟೀಂ ಇಂಡಿಯಾಗೆ ಪಾದರ್ಪಣೆ ಮಾಡಲಿದ್ದಾರೆ. ಭಾರತ 295ನೇ ಆಟಗಾರನಾಗಿ ಟೀಂ ಇಂಡಿಯಾ ಎಂಟ್ರಿ ಕೊಡಲಿರುವ ಮಯಾಂಕ್ ಅತ್ಯುತ್ತಮ ಪ್ರದರ್ಶನ ನೀಡೋ ವಿಶ್ವಾಸದಲ್ಲಿದ್ದಾರೆ. ಮತ್ತೊರ್ವ ಕನ್ನಡಿಗ ಕೆಎಲ್ ರಾಹುಲ್ ಬದಲು ತಂಡದಲ್ಲಿ ಅವಕಾಶ ಪಡೆದಿರುವ ಮಯಾಂಕ್ ಅಗರ್ವಾಲ್ ತಂಡದಲ್ಲಿ ಖಾಯಂ ಸ್ಥಾನ ಪಡೆಯೋ ಎಲ್ಲಾ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಮೆಲ್ಬರ್ನ್ ಟೆಸ್ಟ್’ಗೆ ಟೀಂ ಇಂಡಿಯಾ ಪ್ರಕಟ: 2 ಬದಲಾವಣೆ
ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್(KIOC)ನಲ್ಲಿ ಮಯಾಂಕ್ ಅಗರ್ವಾಲ್ ಕ್ರಿಕೆಟ್ ಜರ್ನಿ ಆರಂಭವಾಗಿತ್ತು. ಕೋಚ್ ಇರ್ಫಾನ್ ಸೇಠ್ ಗರಡಿಯಲ್ಲಿ ಪಳಗಿದ ಮಯಾಂಕ್ ದೇಸಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೇ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದರು. ಆದರೆ ಆಡೋ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.
ಇದನ್ನೂ ಓದಿ: ಇಂಡೋ-ಆಸಿಸ್ ಬಾಕ್ಸಿಂಗ್ ಡೇ ಟೆಸ್ಟ್- ಏನಿದರ ವಿಶೇಷತೆ?
ಮಯಾಂಕ್ ಆಯ್ಕೆ ಬೆನ್ನಲ್ಲೇ ಸುವರ್ಣ್ ನ್ಯೂಸ್.ಕಾಂ, ಅಗರ್ವಾಲ್ ಕೋಚ್ ಇರ್ಫಾನ್ ಸೇಠ್ ಸಂದರ್ಶನ ನಡೆಸಿತು. ಮಯಾಂಕ್ ಅಗರ್ವಾಲ್ ಆಯ್ಕೆ ಅತೀವ ಸಂತಸ ತಂದಿದೆ. ಟೀಂ ಇಂಡಿಯಾದಲ್ಲಿ ಆಡಲು ಮಯಾಂಕ್ ಅರ್ಹ ಕ್ರಿಕೆಟಿಗ ಎಂದು ಮೊದಲ ಪ್ರತಿಕ್ರಿಯೆ ನೀಡಿದರು.
15ನೇ ವರ್ಷದಲ್ಲಿ ಮಯಾಂಕ್ ಅಗರ್ವಾಲ್ KIOC ಅಕಾಡೆಮಿ ಸೇರಿಕೊಂಡರು. ಫಸ್ಟ್ ಲೀಗ್ ಆಟಕ್ಕೂ ಒಂದು ವಾರ ಮೊದಲು ಆಭ್ಯಾಸ ಮಾಡುತ್ತಿದ್ದ ಮಯಾಂಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡರು. ಬ್ಯಾಂಡೇಜ್ ಸುತ್ತಿಕೊಂಡು ಬಂದ ಮಯಾಂಕ್ ಹಾಗೇ ಪಂದ್ಯ ಆಡಿ ಸೆಂಚುರಿ ಸಿಡಿಸಿದರು ಎಂದು ಕೋಚ್ ಇರ್ಫಾನ್ ಸೇಠ್ ಮಯಾಂಕ್ ಕುರಿತು ರೋಚಕ ಕತೆಯನ್ನ ಬಿಚ್ಚಿಟ್ಟರು.
ಇದನ್ನೂ ಓದಿ: ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ವಿರಾಟ್ ಕೊಹ್ಲಿ: ಕೋಚ್ ಲ್ಯಾಂಗರ್!
ನ್ಯೂಜಿಲೆಂಡ್‌ನಲ್ಲಿ ನಡೆದ 2010ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಮಯಾಂಕ್ ಅದ್ಬುತ ಪ್ರದರ್ಶನ ನೀಡಿದ್ದರು. ಇದಕ್ಕಾಗಿ KIOC ಅಕಾಡೆಮಿ ಸನ್ಮಾನ ಸಮಾರಂಭ ಹಮ್ಮಿಕೊಂಡಿತ್ತು. ಸನ್ಮಾನಕ್ಕಾಗಿ ವೇದಿಕೆಗೆ ಆಗಮಿಸಿದ ಮಯಾಂಕ್, ತನ್ನ ಕಾರು ಚಾಲಕನನ್ನ ವೇದಿಕೆಗೆ ಕರೆದರು. ಚಾಲಕನಿಂದಲೇ ನಾನು ಸರಿಯಾದ ಸಮಯಕ್ಕೆ ಮೈದಾನ ತಲುಪಲು ಸಾಧ್ಯವಾಗಿದೆ. ಹೀಗಾಗಿ ನನ್ನ ಶ್ರೇಯಸ್ಸಿನಲ್ಲಿ ಡ್ರೈವರ್ ಪಾಲು ಇದೆ ಎಂದು ಕೋಚ್ ಇರ್ಫಾನ್ ಹೇಳಿದರು.
ಖುಷಿ ಖುಷಿಯಾಗಿ ಆಡು ಎಂದು ಇರ್ಫಾನ್ ಸೇಠ್ ಶಿಷ್ಯನಿಗಿ ಕಿವಿ ಮಾತು ಹೇಳಿದ್ದಾರೆ. ಕಠಿಣ ಅಭ್ಯಾಸ, ಪರಿಶ್ರಮದಿಂದ ಮಯಾಂಕ್ ಕರ್ನಾಟಕ ಮಾತ್ರವಲ್ಲ, ದೇಶಕ್ಕೆ ಹೆಮ್ಮೆ ತರುವ ವಿಶ್ವಾಸವಿದೆ ಎಂದು ಕೋಚ್ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅತ್ಯುತ್ತಮ ಪ್ರದರ್ಶನ ನೀಡಲಿ. ಮೂಲಕ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳಲಿ ಅನ್ನೋದೇ ಕನ್ನಡಿಗರ ಆಶಯ.
ಈ ಸಂದರ್ಶನವನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: