ಗ್ಲಾಸ್ಗೋ ಕೂಟ: ಚಿಕ್ಕದಾದರೂ ಚೊಕ್ಕವಾಗಿದ್ದ ಕಾಮನ್‌ವೆಲ್ತ್ ಗೇಮ್ಸ್ ಉದ್ಘಾಟನೆ

Kannadaprabha News   | Kannada Prabha
Published : Jul 25, 2026, 10:12 AM IST
Commonwealth Games

ಸಾರಾಂಶ

ಆಸ್ಟ್ರೇಲಿಯಾ ಹಿಂದೆ ಸರಿದ ನಂತರ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಚಾಲನೆ ದೊರೆತಿದೆ. ಭಾರತ ತಂಡವನ್ನು ಮೀರಾಬಾಯಿ ಚಾನು ಮತ್ತು ಲವ್ಲೀನಾ ಮುನ್ನಡೆಸಿದರೆ, ಜುಡೋ ಪಟು ತುಲಿಕಾ ಮಾನ್‌ ಡೋಪಿಂಗ್‌ನಿಂದ ಹೊರಬಿದ್ದಿದ್ದು ಭಾರತಕ್ಕೆ ಆರಂಭಿಕ ಆಘಾತ ನೀಡಿದೆ. ಈಜುಪಟು ಶ್ರೀಹರಿ ನಟರಾಜ್ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಗ್ಲಾಸ್ಗೋ: ಕೆಲ ವರ್ಷಗಳ ಹಿಂದೆ ಕಾಮನ್‌ವೆಲ್ತ್‌ ಕ್ರೀಡಾಕೂಟ ಇತಿಹಾಸದ ಪುಟಗಳನ್ನು ಸೇರುವ ಆತಂಕವಿತ್ತು. ದುಬಾರಿ ಖರ್ಚು ವೆಚ್ಚದ ಕಾರಣ ಕ್ರೀಡಾಕೂಟ ಆಯೋಜನೆಯಿಂದ 2023ರಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಹಿಂದೆ ಸರಿದಾಗ, ಸ್ವಯಂ ಪ್ರೇರಣೆಯಿಂದ ಕೂಟದ ಆತಿಥ್ಯಕ್ಕೆ ಮುಂದೆ ಬಂದ ಸ್ಕಾಟ್ಲೆಂಡ್‌ ಬಹಳ ಅಚ್ಚುಕಟ್ಟಾಗಿ ಕ್ರೀಡಾಕೂಟವನ್ನು ಆಯೋಜಿಸಿದೆ. ಗುರುವಾರ ತಡರಾತ್ರಿ ನಡೆದ ಉದ್ಘಾಟನಾ ಸಮಾರಂಭವೇ ಇದಕ್ಕೆ ಸಾಕ್ಷಿ.

ಆಡಂಬರವಿಲ್ಲದ ಉದ್ಘಾಟನಾ ಸಮಾರಂಭ

ಈ ಹಿಂದಿನ ಆಡಂಬರವಿಲ್ಲದಿದ್ದರೂ, ಆಕರ್ಷಣೆಗಳಿಗೆ ಕೊರತೆ ಇಲ್ಲದಂತೆ ಉದ್ಘಾಟನಾ ಸಮಾರಂಭವನ್ನು ನಡೆಸಲಾಯಿತು. ಚಿಕ್ಕದಾಗಿದ್ದರೂ ಚೊಕ್ಕವಾಗಿದ್ದ ಉದ್ಘಾಟನಾ ಕಾರ್ಯಕ್ರಮ ಹಲವು ಮೊದಲುಗಳಿಗೆ ಸಾಕ್ಷಿಯಾಯಿತು.

ಇದೇ ಮೊದಲ ಬಾರಿಗೆ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಜೊತೆಗೆ ಇದೇ ಮೊದಲ ಬಾರಿಗೆ ಎಲ್ಲಾ 74 ದೇಶಗಳ ಕ್ರೀಡಾಪಟುಗಳು ಕಾರ್ಯಕ್ರಮದ ಆರಂಭದಲ್ಲೇ ಪಥ ಸಂಚಲನ ಮೂಲಕ ಕ್ರೀಡಾಂಗಣ ಪ್ರವೇಶಿಸಿದರು.

ರಾಷ್ಟ್ರಧ್ವಜ ಹಿಡಿದು ಒಲಿಂಪಿಕ್‌ ಪದಕ ವಿಜೇತೆಯರಾದ ಮೀರಾಬಾಯಿ ಚಾನು ಹಾಗೂ ಲವ್ಲೀನಾ ಬೊರ್ಗೊಹೈನ್‌ ಭಾರತ ತಂಡವನ್ನು ಮುನ್ನಡೆಸಿದರು.

 

ಬ್ರಿಟನ್‌ನ ರಾಜ ಚಾರ್ಲ್ಸ್‌ III ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಪ್ಲ್ಯಾಸ್ಟಿಕ್‌ ತ್ಯಾಜ್ಯ ಸಾಗರಗಳನ್ನು ಹೇಗೆ ಮಲಿನಗೊಳಿಸುತ್ತಿವೆ ಹಾಗೂ ಅದರಿಂದ ಆಗುತ್ತಿರುವ ಅನಾಹುತ, ಸಮಸ್ಯೆಗಳು, ನಾಗರಿಕರು ಏನು ಮಾಡಬೇಕು ಎನ್ನುವ ಸಂದೇಶಗಳನ್ನು ಒಳಗೊಂಡ ಕಾರ್ಯಕ್ರಮಗಳು ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದವು. ಜೊತೆಗೆ ಸ್ಕಾಟಿಶ್‌ ಪರಂಪರೆಯನ್ನು ಸಾರುವ, ಅಲ್ಲಿನ ಕಲೆಯನ್ನು ಪರಿಚಯಿಸುವ ನೃತ್ಯ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಭಾರತೀಯ ಶೈಲಿಯ ನೃತ್ಯಗಳೂ ನೋಡುಗರ ಗಮನ ಸೆಳೆದವು.

ಭಾರತಕ್ಕೆ ಮತ್ತೊಂದು ಡೋಪ್‌ ಶಾಕ್‌!

ಗ್ಲಾಸ್ಗೋ/ನವದೆಹಲಿ: ಭಾರತದ ಕಾಮನ್‌ವೆಲ್ತ್‌ ಕ್ರೀಡಾಕೂಟ ಅಭಿಯಾನದಲ್ಲಿ ಡೋಪಿಂಗ್‌ ಪ್ರಕರಣಗಳದ್ದೇ ಸದ್ದು ಹೆಚ್ಚಾಗಿದೆ. ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಜುಡೋ ಪಟು ತುಲಿಕಾ ಮಾನ್‌, ಗ್ಲಾಸ್ಗೋಗೆ ತೆರಳುವ ಮೊದಲೇ ಕೂಟದಿಂದ ಹೊರಬಿದ್ದಿದ್ದಾರೆ.

ಭಾರತೀಯ ಅಥ್ಲೀಟ್‌ಗಳು ತಾವಿರುವ ಸ್ಥಳದ ಬಗ್ಗೆ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ (ನಾಡಾ)ಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ನಾಡಾ ಅಧಿಕಾರಿಗಳು ಯಾವುದೇ ಸಂದರ್ಭದಲ್ಲಿ ತೆರಳಿ ಡೋಪಿಂಗ್‌ ಪರೀಕ್ಷೆ ನಡೆಸಬಹುದು. ಆದರೆ ತುಲಿಕಾ 12 ತಿಂಗಳ ಅವಧಿಯಲ್ಲಿ 3 ಬಾರಿ ತಾವಿರುವ ಸ್ಥಳದ ಬಗ್ಗೆ ಮಾಹಿತಿ ನೀಡಲು ವಿಫಲವಾಗಿ, ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ನಾಡಾ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ತುಲಿಕಾರನ್ನು ನಾಡಾ 2 ವರ್ಷ ನಿಷೇಧಗೊಳಿಸುವ ಸಾಧ್ಯತೆ ಇದೆ.

ಶ್ರೀಹರಿ ಸೆಮೀಸ್‌ಗೆ: ಕೂಟದ 2ನೇ ದಿನವಾದ ಶುಕ್ರವಾರ, ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ 2 ಬಾರಿ ಒಲಿಂಪಿಯನ್‌, ಕರ್ನಾಟಕದ ಶ್ರೀಹರಿ ನಟರಾಜ್‌ ಸೆಮಿಫೈನಲ್‌ ಪ್ರವೇಶಿಸಿದರು.

ಅಶೋಕ್‌ಗೆ 4ನೇ ಸ್ಥಾನ: ಪುರುಷರ ಪವರ್‌-ಲಿಫ್ಟಿಂಗ್‌ ಸ್ಪರ್ಧೆಯ ಲೈಟ್‌ವೇಟ್‌ ವಿಭಾಗದಲ್ಲಿ ಭಾರತಕ್ಕೆ ಪದಕ ಕೈತಪ್ಪಿತು. ಅಶೋಕ್‌ ಮಲಿಕ್‌ 143.8 ಅಂಕ ಗಳಿಸಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಿಂಬಾಬ್ವೆ ವಿರುದ್ಧ ಸೂರ್ಯವಂಶಿ ಅರ್ಧ ಶತಕ ಬಾರಿಸಿದ್ರೂ ಟೀಕೆಗೆ ಒಳಗಾದ ಗಂಭೀರ್.. ಕಾರಣ ಬೇರೆಯದ್ದೇ ಇದೆ!
IND vs ZIM: ಎರಡನೇ ಟಿ20ಗೆ ಟೀಮ್ ಇಂಡಿಯಾ ಪ್ಲೇಯಿಂಗ್ 11 ಔಟ್! ತಾರಾ ಓಪನರ್‌ಗೆ ಶಾಕ್! ಯುವ ಬಿರುಗಾಳಿಗೆ ಒಲಿದ ಚಾನ್ಸ್!