
ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸಿದ್ದಾರೆ. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಆದರೆ ಈ ಸ್ಫೋಟಕ ಪ್ರದರ್ಶನದ ಬೆನ್ನಲ್ಲೇ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಟೀಕೆಗೆ ಗುರಿಯಾಗಿದ್ದಾರೆ.
ಕಳೆದ ಮೂರು ಪಂದ್ಯಗಳಲ್ಲಿ ಎರಡಂಕಿಯ ಮೊತ್ತ ದಾಟಲು ವಿಫಲರಾಗಿದ್ದ ವೈಭವ್ ಸೂರ್ಯವಂಶಿ, ತಮ್ಮ ನಾಲ್ಕನೇ ಪಂದ್ಯದಲ್ಲಿ ವಿಶ್ವರೂಪ ಪ್ರದರ್ಶಿಸಿದರು. ಕೇವಲ 18 ಎಸೆತಗಳಲ್ಲಿ 50 ರನ್ ಬಾರಿಸಿದ ಇವರು, ಜಿಂಬಾಬ್ವೆ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅರ್ಧಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ವೈಭವ್ ಅವರ ಈ ಅದ್ಭುತ ಬ್ಯಾಟಿಂಗ್ ನೋಡಿದ ಮಾಜಿ ಕ್ರಿಕೆಟಿಗ ಮತ್ತು 1983ರ ವಿಶ್ವಕಪ್ ವಿಜೇತ ಕೆ.ಶ್ರೀಕಾಂತ್, ಗೌತಮ್ ಗಂಭೀರ್ ವಿರುದ್ಧ ಕಿಡಿಕಾರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಕ್ಕೆ ವೈಭವ್ ಅವರನ್ನು ತಂಡದಿಂದ ಕೈಬಿಟ್ಟಿದ್ದನ್ನು ಶ್ರೀಕಾಂತ್ ಪ್ರಶ್ನಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶ್ರೀಕಾಂತ್, ವೈಭವ್ ಬಳಿ ಅದ್ಭುತವಾದ ಶಾಟ್‌ಗಳಿವೆ. ಅವರು ಆಡಿದ ಒಂದು ಶಾಟ್ ಕೂಡ ಅಡ್ಡಬ್ಯಾಟ್‌ನಿಂದ ಬಂದಿರಲಿಲ್ಲ. ಇಂತಹ ವಿಶೇಷ ಆಟಗಾರನನ್ನು ಕೇವಲ ಮೂರು ಪಂದ್ಯಗಳ ವೈಫಲ್ಯದ ನಂತರ ಕೈಬಿಟ್ಟ ಗೌತಮ್ ಗಂಭೀರ್ ನಿರ್ಧಾರ ಮೂರ್ಖತನದ್ದು. ಒಬ್ಬ ಯುವ ಆಟಗಾರನ ಆತ್ಮವಿಶ್ವಾಸವನ್ನು ಕುಗ್ಗಿಸುವುದು ಎಷ್ಟು ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಜಿಂಬಾಬ್ವೆ ಸರಣಿಗೆ ಗೌತಮ್ ಗಂಭೀರ್ ತಂಡದ ಜೊತೆಗಿಲ್ಲ. ಅವರ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇಂಗ್ಲೆಂಡ್ ಸರಣಿಯ ಬಳಿಕ ಮನೆಗೆ ಹೋಗದೆ, ನೇರವಾಗಿ ರಾಜಸ್ಥಾನ್ ರಾಯಲ್ಸ್ ಕ್ಯಾಂಪ್‌ಗೆ ತೆರಳಿ ಶಾರ್ಟ್ ಬಾಲ್ ಎದುರಿಸಲು ತರಬೇತಿ ಪಡೆದಿದ್ದ ವೈಭವ್ ಅವರ ಶ್ರಮವನ್ನು ಶ್ರೀಕಾಂತ್ ಶ್ಲಾಘಿಸಿದ್ದಾರೆ. ಸಾಮಾನ್ಯವಾಗಿ ಸತತ ವೈಫಲ್ಯ ಅನುಭವಿಸಿದ ಆಟಗಾರರು ತಮ್ಮ ಸ್ಥಾನ ಉಳಿಸಿಕೊಳ್ಳಲು ನಿಧಾನವಾಗಿ ಆಡುತ್ತಾರೆ. ಆದರೆ ವೈಭವ್ ಮಾತ್ರ 250 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿ ಎಲ್ಲರ ಹುಬ್ಬೇರಿಸಿದ್ದಾರೆ. 18 ಎಸೆತಗಳಲ್ಲಿ 50 ರನ್ ಹೊಡೆಯುವುದು ಅವರಿಗೆ ಮಕ್ಕಳಾಟದಂತಿದೆ. ಇದೇ ಅವರ ಶ್ರೇಷ್ಠತೆ ಎಂದು ಶ್ರೀಕಾಂತ್ ಬಣ್ಣಿಸಿದ್ದಾರೆ. ಒಟ್ಟಿನಲ್ಲಿ ವೈಭವ್ ಸೂರ್ಯವಂಶಿ ಅವರ ಈ ಆಟವು ಭಾರತೀಯ ಕ್ರಿಕೆಟ್‌ನ ಭವಿಷ್ಯದ ಭರವಸೆಯನ್ನು ಮೂಡಿಸಿದೆ. ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಮ್ಯಾನೇಜ್‌ಮೆಂಟ್ ಎಡವುತ್ತಿದೆಯೇ ಎಂಬ ಪ್ರಶ್ನೆ ಈಗ ಕ್ರೀಡಾ ವಲಯದಲ್ಲಿ ಚರ್ಚೆಯಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.