ಕೊನೆಗೂ ವಂಚಕರ ವಿರುದ್ಧ ದ್ರಾವಿಡ್‌ ದೂರು

By Suvarna Web DeskFirst Published Mar 18, 2018, 9:06 AM IST
Highlights

ಷೇರು ವ್ಯವಹಾರದ ನೆಪದಲ್ಲಿ ಗ್ರಾಹಕರಿಗೆ ನೂರಾರು ಕೋಟಿ ರು. ವಂಚಿಸಿದ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪನಿ ವಿರುದ್ಧ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರು : ಷೇರು ವ್ಯವಹಾರದ ನೆಪದಲ್ಲಿ ಗ್ರಾಹಕರಿಗೆ ನೂರಾರು ಕೋಟಿ ರು. ವಂಚಿಸಿದ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪನಿ ವಿರುದ್ಧ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ತಮಗೆ ವಿಕ್ರಂ ಕಂಪನಿಯು ನಾಲ್ಕು ಕೋಟಿ ರು. ವಂಚಿಸಿದೆ ಎಂದು ಸದಾಶಿವನಗರ ಠಾಣೆಯಲ್ಲಿ ಶುಕ್ರವಾರ ರಾಹುಲ್‌ ದೂರು ಸಲ್ಲಿಸಿದ್ದಾರೆ. ಇದರೊಂದಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ ಹಣ ಕಳೆದುಕೊಂಡವರ ಪಟ್ಟಿಯಲ್ಲಿ ಕೇಳಿಬಂದಿದ್ದ ರಾಹುಲ್‌ ದ್ರಾವಿಡ್‌ ಹೆಸರು ಇದೀಗ ದೃಢವಾಗಿದೆ.

ಷೇರು ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂದು ವಿಕ್ರಂ ಕಂಪನಿ ಹೇಳಿತ್ತು. ಈ ಮಾತು ನಂಬಿ ಆ ಕಂಪನಿಯಲ್ಲಿ ನಾನು ಹೂಡಿಕೆ ಮಾಡಿದೆ. ಆದರೆ ಆರಂಭದಲ್ಲಿ ಲಾಭ ಎಂದು ಸ್ಪಲ್ಪ ಹಣ ನೀಡಿದ ಕಂಪನಿ, ತರುವಾಯ ಸಂಪರ್ಕ ಕಡಿದುಕೊಂಡಿತು. ಈ ಬಗ್ಗೆ ವಿಚಾರಿಸಿದರೆ ಸ್ಪಷ್ಟವಿವರಣೆ ನೀಡದೆ ಕಂಪನಿ ನಿರ್ದೇಶಕ ರಾಘವೇಂದ್ರ ಶ್ರೀನಾಥ್‌ ಹಾಗೂ ಅವರ ಸಹವರ್ತಿಗಳು ಜಾರಿಗೊಂಡರು. ಇದರಿಂದ ನನಗೆ ಸುಮಾರು .4 ಕೋಟಿ ಮೋಸವಾಗಿದೆ ಎಂದು ರಾಹುಲ್‌ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

ರಾಹುಲ್‌ ಅವರ ದೂರಿನ್ವಯ ವಿಕ್ರಂ ಕಂಪನಿ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ. ಈ ಬಗ್ಗೆ ದಾಖಲೆ ಸಲ್ಲಿಸುವಂತೆ ರಾಹುಲ್‌ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

350ರಿಂದ 400 ಕೋಟಿ ವಂಚನೆ-ಡಿಸಿಪಿ: ವಿಕ್ರಂ ಇನ್ಸ್‌ವೆಸ್ಟ್‌ಮೆಂಟ್‌ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಮುಂದುವರೆದಿದ್ದು, ಇದುವರೆಗಿನ ತನಿಖೆಯಲ್ಲಿ ಆರೋಪಿಗಳು 350ರಿಂದ 400 ಕೋಟಿವರೆಗೆ ವಂಚಿಸಿರುವ ಬಗ್ಗೆ ದಾಖಲೆಗಳು ಪತ್ತೆಯಾಗಿವೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ, ಇದುವರೆಗೆ ದಾಖಲೆಗಳ ತಪಾಸಣೆಯಿಂದ ಸುಮಾರು 1800 ಮಂದಿ ಹಣ ಕಳೆದುಕೊಂಡಿರುವ ಮಾಹಿತಿ ಸಿಕ್ಕಿದೆ ಎಂದರು. ಈಗಾಗಲೇ ಕಂಪನಿಯ ಆರ್ಥಿಕ ವಹಿವಾಟಿನ ಕುರಿತು ಬ್ಯಾಂಕ್‌ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಸರ್ಕಾರದ ನೋಂದಣಿ ಮಾಡಿಸದೆ 2008ರಲ್ಲಿ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಹಾಗೂ ವಿಕ್ರಂ ಗ್ಲೋಬಲ್‌ ಸೊಲ್ಯೂಷನ್‌ ಹೆಸರಿನಲ್ಲಿ ಕಂಪನಿಗಳನ್ನು ಆರಂಭಿಸಿದ ರಾಘವೇಂದ್ರ ಶ್ರೀನಾಥ್‌, ಆನಂತರ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ಹೇಳಿ ಸಾರ್ವಜನಿಕರಿಗೆ ವಂಚಿಸಿದ್ದಾರೆ ಎಂದು ಡಿಸಿಪಿ ವಿವರಿಸಿದರು.

ರಾಘವೇಂದ್ರ ನ್ಯಾಯಾಂಗ ಬಂಧನಕ್ಕೆ: ಇನ್ನೊಂದೆಡೆ ಪೊಲೀಸ್‌ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ರಾಘವೇಂದ್ರ ಶ್ರೀನಾಥ್‌ನನ್ನು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನಗರದ 4ನೇ ಎಸಿಎಂಎಂ ನ್ಯಾಯಾಲಯವು ಶನಿವಾರ ಆದೇಶಿಸಿದೆ.

ಈ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಕಂಪನಿ ನಿರ್ದೇಶಕ ರಾಘವೇಂದ್ರ ಶ್ರೀನಾಥ್‌ ಹಾಗೂ ಆತನ ಸಹವರ್ತಿಗಳಾದ ಸೂತ್ರಂ ಸುರೇಶ್‌, ನರಸಿಂಹಮೂರ್ತಿ, ಕೆ.ಸಿ.ನಾಗರಾಜ್‌ ಹಾಗೂ ಪ್ರಹ್ಲಾದ್‌ ಸೇರಿ ಐದು ಮಂದಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದರು.

ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ-ಮೆಣಸಿನಕಾಯಿ ಮಾರಾಟ ನಡೆಸುವುದಾಗಿಯೂ ಶ್ರೀನಾಥ್‌ ಕಂಪನಿ ಆರಂಭಿಸಿದ್ದ. ಇದೇ ಮಾದರಿಯಲ್ಲೇ ಚೆನ್ನೈನಲ್ಲಿ ಕೂಡಾ ಆತ ಕಂಪನಿಗಳನ್ನು ಹುಟ್ಟುಹಾಕಿದ್ದ. ಅವುಗಳಲ್ಲಿ ಷೇರು ಮಾರುಕಟ್ಟೆಹೂಡಿಕೆಯಲ್ಲಾದ ನಷ್ಟದ ಲೆಕ್ಕವನ್ನು ತೋರಿಸಿ ಜನರಿಗೆ ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

click me!