US Open 2023 ಅಮೆರಿಕದ ಕೊಕೊ ಗಾಫ್‌ಗೆ ಒಲಿದ ಚೊಚ್ಚಲ ಯುಎಸ್ ಓಪನ್ ಕಿರೀಟ

Published : Sep 11, 2023, 10:42 AM IST
US Open 2023 ಅಮೆರಿಕದ ಕೊಕೊ ಗಾಫ್‌ಗೆ ಒಲಿದ ಚೊಚ್ಚಲ ಯುಎಸ್ ಓಪನ್ ಕಿರೀಟ

ಸಾರಾಂಶ

1999ರಲ್ಲಿ ಸೆರೆನಾ ವಿಲಿಯಮ್ಸ್‌ ಬಳಿಕ ಯುಎಸ್‌ ಓಪನ್‌ ಗೆದ್ದ ಅತಿಕಿರಿಯ ಆಟಗಾರ್ತಿ ಎಂಬ ಖ್ಯಾತಿಗೆ 19 ವರ್ಷದ ಗಾಫ್‌ ಪಾತ್ರರಾಗಿದ್ದಾರೆ. ಸೆರೆನಾ ತಮಗೆ 17 ವರ್ಷ 11 ತಿಂಗಳಾಗಿದ್ದಾಗ ಮೊದಲ ಬಾರಿ ಯುಎಸ್‌ ಓಪನ್‌ ಗೆದ್ದಿದ್ದರು. ತಮ್ಮ 22ನೇ ವಯಸ್ಸಿಗೇ ಎಲ್ಲಾ 4 ಗ್ರ್ಯಾನ್‌ಸ್ಲಾಂ ಜಯಿಸಿ ಇತಿಹಾಸ ಸೃಷ್ಟಿಸಿದ್ದರು.

ನ್ಯೂಯಾರ್ಕ್‌(ಸೆ.10): ಗ್ರ್ಯಾನ್‌ಸ್ಲಾಂ ಟೆನಿಸ್‌ ಲೋಕದ ಮಹಿಳಾ ಸಿಂಗಲ್ಸ್‌ನಲ್ಲಿ ಮತ್ತೋರ್ವ ಹೊಸ ಚಾಂಪಿಯನ್‌ನ ಉದಯವಾಗಿದೆ. ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಅಮೆರಿಕದ 19 ವರ್ಷದ ಕೊಕೊ ಗಾಫ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಮತ್ತೊಮ್ಮೆ ಮಹಿಳಾ ಟೆನಿಸ್‌ನಲ್ಲಿ ಅಮೆರಿಕನ್ನರ ಪ್ರಾಬಲ್ಯದ ಮುನ್ಸೂಚನೆ ರವಾನಿಸಿದ್ದಾರೆ.

ಭಾನುವಾರ ಬೆಳಗಿನ ಜಾವ(ಭಾರತೀಯ ಕಾಲಮಾನ) ನಡೆದ ರೋಚಕ ಫೈನಲ್‌ ಹಣಾಹಣಿಯಲ್ಲಿ 6ನೇ ಶ್ರೇಯಾಂಕಿತೆ ಗಾಫ್‌, ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌, ಬೆಲಾರಸ್‌ನ ಅರೈನಾ ಸಬಲೆಂಕಾ ವಿರುದ್ಧ 2-6, 6-3, 6-2 ಅಂತರದಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿ 2ನೇ ಗ್ರ್ಯಾನ್‌ಸ್ಲಾಂ ಗೆಲುವಿನತ್ತ ದಾಪುಗಾಲಿಟ್ಟಿದ್ದ ವಿಶ್ವ ನಂ.1 ಸಬಲೆಂಕಾಗೆ 2ನೇ ಸೆಟ್‌ನಲ್ಲಿ ಗಾಫ್‌ರಿಂದ ಆಘಾತ ಎದುರಾಯಿತು. ತಮ್ಮ ಆಕರ್ಷಕ ಹಾಗೂ ಬಲವಾದ ಹೊಡೆತಗಳ ಮೂಲಕ ಸಬಲೆಂಕಾರನ್ನು ಹಿಂದಿಕ್ಕಿದ ಗಾಫ್‌, ಚೊಚ್ಚಲ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗೆ ಮುತ್ತಿಟ್ಟರು.

ವೃತ್ತಿಪರ ಟೆನಿಸ್‌ ಆರಂಭಿಸಿ ಐದೇ ವರ್ಷಕ್ಕೆ ಪ್ರಶಸ್ತಿ!

19 ವರ್ಷದ ಗಾಫ್‌ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟಿದ್ದು 14ನೇ ವಯಸ್ಸಿಗೆ. 2018ರಲ್ಲಿ ಕಿರಿಯರ ವಿಭಾಗದಲ್ಲಿ ಫ್ರೆಂಚ್‌ ಓಪನ್‌ ಸಿಂಗಲ್ಸ್‌, ಯುಎಸ್‌ ಓಪನ್‌ ಕಿರಿಯರ ಡಬಲ್ಸ್‌ನಲ್ಲಿ ಗಾಫ್‌ ಚಾಂಪಿಯನ್‌ ಆಗಿದ್ದರು. 2019ರಲ್ಲಿ ವಿಂಬಲ್ಡನ್‌ ಅರ್ಹತಾ ಸುತ್ತಿನಿಂದ ಪ್ರಧಾನ ಸುತ್ತಿಗೇರಿ, ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದರು. ಬಳಿಕ 2022ರಲ್ಲಿ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಫೈನಲ್‌ಗೇರಿ ಎಲ್ಲರ ಗಮನ ಸೆಳೆದಿದ್ದರು.

US Open 2023: ನೋವಾಕ್ ಜೋಕೋವಿಚ್ vs ಮೆಡ್ವೆಡೆವ್ ಫೈನಲ್ ಫೈಟ್

ಸೆರೆನಾ ಬಳಿಕ ಪ್ರಶಸ್ತಿ ಗೆದ್ದ ಅತಿಕಿರಿಯ ಆಟಗಾರ್ತಿ

1999ರಲ್ಲಿ ಸೆರೆನಾ ವಿಲಿಯಮ್ಸ್‌ ಬಳಿಕ ಯುಎಸ್‌ ಓಪನ್‌ ಗೆದ್ದ ಅತಿಕಿರಿಯ ಆಟಗಾರ್ತಿ ಎಂಬ ಖ್ಯಾತಿಗೆ 19 ವರ್ಷದ ಗಾಫ್‌ ಪಾತ್ರರಾಗಿದ್ದಾರೆ. ಸೆರೆನಾ ತಮಗೆ 17 ವರ್ಷ 11 ತಿಂಗಳಾಗಿದ್ದಾಗ ಮೊದಲ ಬಾರಿ ಯುಎಸ್‌ ಓಪನ್‌ ಗೆದ್ದಿದ್ದರು. ತಮ್ಮ 22ನೇ ವಯಸ್ಸಿಗೇ ಎಲ್ಲಾ 4 ಗ್ರ್ಯಾನ್‌ಸ್ಲಾಂ ಜಯಿಸಿ ಇತಿಹಾಸ ಸೃಷ್ಟಿಸಿದ್ದರು.

ಸ್ಟ್ಯಾಂಡ್ಸ್‌ನಲ್ಲಿ ಕುಣಿದು ಗಮನ ಸೆಳೆದಿದ್ದ ಹುಡುಗಿ ಈಗ ಚಾಂಪಿಯನ್‌!

ಬಾಲ್ಯದಲ್ಲೇ ಟೆನಿಸ್‌ನತ್ತ ಒಲವು ಹೊಂದಿದ್ದ ಗಾಫ್‌ ಅಮೆರಿಕದಲ್ಲಿ ನಡೆಯುವ ಟೆನಿಸ್‌ ಪಂದ್ಯಗಳ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಬರುತ್ತಿದ್ದರು. ತಮಗೆ 8ನೇ ವರ್ಷವಾಗಿದ್ದಾಗ ಯುಎಸ್‌ ಓಪನ್‌ ಪಂದ್ಯ ನೋಡಲು ಬಂದಿದ್ದ ಗಾಫ್‌, ಸ್ಟ್ಯಾಂಡ್ಸ್‌ನಲ್ಲಿ ಕುಣಿದು ಗಮನ ಸೆಳೆದಿದ್ದರು. ಅದರ ವಿಡಿಯೋ ಸದ್ಯ ಭಾರೀ ವೈರಲ್‌ ಆಗಿದ್ದು, ತಾವು ಅಂದು ಕುಣಿದಾಡಿದ್ದ ಅದೇ ಕ್ರೀಡಾಂಗಣದಲ್ಲಿ 11 ವರ್ಷಗಳ ಬಳಿಕ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.

"ನಾನು ನಿನ್ನನ್ನು ಕೊಲ್ಲುತ್ತೇನೆ": ಶೋಯೆಬ್ ಅಖ್ತರ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

9 ವರ್ಷದಲ್ಲಿ 8ನೇ ಚಾಂಪಿಯನ್‌

ಗಾಫ್‌ ಕಳೆದ 9 ವರ್ಷದಲ್ಲಿ ಯುಎಸ್‌ ಓಪನ್‌ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದ 8ನೇ ಆಟಗಾರ್ತಿ. 2012, 2013, 2014ರಲ್ಲಿ ಸೆರೆನಾ ವಿಲಿಯಮ್ಸ್‌ ಸತತ 3 ಬಾರಿ ಚಾಂಪಿಯನ್ ಆಗಿದ್ದರು. ಆ ಬಳಿಕ 2015ರಿಂದ 2023ರ ವರೆಗೆ 8 ಬೇರೆ ಬೇರೆ ಆಟಗಾರ್ತಿಯರು ಚಾಂಪಿಯನ್‌ ಆಗಿದ್ದಾರೆ. 2015ರಲ್ಲಿ ಇಟಲಿಯ ಫ್ಲಾವಿಯಾ ಪೆನ್ನೆಟ್ಟಾ, 2016ರಲ್ಲಿ ಜರ್ಮನಿಯ ಆ್ಯಂಜಿಲಿಕ್‌ ಕೆರ್ಬೆರ್‌, 2017ರಲ್ಲಿ ಅಮೆರಿಕದ ಸ್ಲೋನ್‌ ಸ್ಟೀಫನ್ಸ್‌, 2018ರಲ್ಲಿ ಜಪಾನ್‌ನ ನವೊಮಿ ಒಸಾಕ, 2019ರಲ್ಲಿ ಕೆನಡಾದ ಬಿಯಾನ್ಕಾ ಆ್ಯಂಡ್ರೆಸ್ಕ್ಯು, 2020ರಲ್ಲಿ ಮತ್ತೆ ಒಸಾಕ, 2021ರಲ್ಲಿ ಬ್ರಿಟನ್‌ನ ಎಮ್ಮಾ ರಾಡುಕಾನು, 2022ರಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಚಾಂಪಿಯನ್‌ ಆಗಿದ್ದರು.

₹24.93 ಕೋಟಿ: ಚಾಂಪಿಯನ್‌ ಪಟ್ಟಕ್ಕೇರಿದ ಕೊಕೊಗೆ 30 ಲಕ್ಷ ಅಮೆರಿಕನ್‌ ಡಾಲರ್‌(ಅಂದಾಜು 24.93 ಕೋಟಿ ರು.) ಬಹುಮಾನ ಮೊತ್ತ ದೊರೆಯಿತು.

₹12.46 ಕೋಟಿ: ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟ ಸಬಲೆಂಕಾಗೆ 15 ಲಕ್ಷ ಅಮೆರಿಕನ್‌ ಡಾಲರ್‌ (ಅಂದಾಜು 12.46 ಕೋಟಿ ರು.) ಬಹುಮಾನ ಮೊತ್ತ ದೊರೆಯಿತು.

ಪಂದ್ಯ ಶುರುವಾಗಲು 10 ನಿಮಿಷ ಇರುವ ವರೆಗೂ ನಾನು ನನ್ನ ಮೊಬೈಲ್‌ನಲ್ಲಿ ತಲ್ಲೀನಳಾಗಿದ್ದೆ. ಸಾಮಾಜಿಕ ತಾಣಗಳಲ್ಲಿ ಅನೇಕರು ನಾನು ಗೆಲ್ಲುವುದಿಲ್ಲ, ಗೆಲ್ಲಲು ಅರ್ಹಳಲ್ಲ ಎಂದು ಅನೇಕರು ಅಭಿಪ್ರಾಯಿಸಿದ್ದರು. ಇದು ನನ್ನಲ್ಲಿ ಗೆಲ್ಲಬೇಕು ಎನ್ನುವ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿತು - ಕೊಕೊ ಗಾಫ್‌
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?