
ಮುಂಬೈ(ಆ.02): ಐಸಿಸಿ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡ ಸೋಲುಂಡು ಹೊರಬಿದ್ದ ಬಳಿಕ ತಂಡದ ಪ್ರಧಾನ ಕೋಚ್ ಹಾಗೂ ಸಹಾಯಕ ಸಿಬ್ಬಂದಿಯ ಹುದ್ದೆಗಳ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಹಲವು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಭಾರತ ತಂಡದ ಕೋಚ್ ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಳೆದ ತಿಂಗಳು ಕೋಚ್ ಹುದ್ದೆಗಳಿಗೆ ಹೊಸದಾಗಿ ಅರ್ಜಿ ಆಹ್ವಾನಿಸಿತ್ತು. ಟೀಂ ಇಂಡಿಯಾದ ಕೋಚ್, ಸಹಾಯಕ ಸಿಬ್ಬಂದಿ ಹುದ್ದೆಗೇರಲು ಭಾರೀ ಬೇಡಿಕೆಯಿದ್ದು, ಬರೋಬ್ಬರಿ 2000ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ನೂತನ ಕೋಚ್; ಯಾರ ಕಡೆ ಕೊಹ್ಲಿ ಒಲವು ?
ಈ ಪ್ರಮಾಣದ ಅರ್ಜಿಗಳು ಬಂದರೂ, ಅತ್ಯಂತ ಜನಪ್ರಿಯ ವ್ಯಕ್ತಿಗಳ್ಯಾರೂ ಕೋಚ್ ಆಗಲು ಮುಂದೆ ಬಂದಿಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ರವಿಶಾಸ್ತ್ರಿ ಹಾಲಿ ಪ್ರಧಾನ ಕೋಚ್ ಆಗಿದ್ದು, ಬೌಲಿಂಗ್ ಕೋಚ್ ಆಗಿ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಆಗಿ ಸಂಜಯ್ ಬಾಂಗರ್, ಫೀಲ್ಡಿಂಗ್ ಕೋಚ್ ಆಗಿ ಆರ್.ಶ್ರೀಧರ್ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವಕಪ್ ಬಳಿಕ ಮುಕ್ತಾಯಗೊಂಡಿದ್ದ ಇವರ ಗುತ್ತಿಗೆಗಳನ್ನು ವಿಂಡೀಸ್ ಪ್ರವಾಸದ ವರೆಗೂ ವಿಸ್ತರಿಸಲಾಗಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ರೇಸಲ್ಲಿ ರವಿಶಾಸ್ತ್ರಿಗೆ ಈ ಇಬ್ಬರು ದಿಗ್ಗಜರ ಸವಾಲ್..?
ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ, ನ್ಯೂಜಿಲೆಂಡ್‌ನ ಮಾಜಿ ಕೋಚ್ ಮೈಕ್ ಹೆಸ್ಸನ್, ಭಾರತದ ಮಾಜಿ ಆಲ್ರೌಂಡರ್ ರಾಬಿನ್ ಸಿಂಗ್, 2007ರ ಟಿ20 ವಿಶ್ವಕಪ್ ವೇಳೆ ಭಾರತ ತಂಡದ ವ್ಯವಸ್ಥಾಪಕರಾಗಿದ್ದ ಲಾಲ್‌ಚಂದ್ ರಜಪೂತ್ ಪ್ರಧಾನ ಕೋಚ್ ಆಗಲು ಆಸಕ್ತಿ ತೋರಿದ್ದಾರೆ. ಅರ್ಜಿ ಸಲ್ಲಿಸಲು ಬಿಸಿಸಿಐ ನೀಡಿದ್ದ ಗಡುವು ಬುಧವಾರ ಮುಕ್ತಾಯಗೊಂಡ ಬಳಿಕ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಸಹ ಪ್ರಧಾನ ಕೋಚ್ ಆಗಲು ಬಯಸಿದ್ದಾರೆ ಎನ್ನಲಾಗಿತ್ತು. ಮಾಧ್ಯಮಗಳಲ್ಲಿ ಅವರ ಹೆಸರು ಕೇಳಿಬಂದ ಬಳಿಕ, ಮಹೇಲಾ ಆಪ್ತರು ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿಯೇ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರವಿಶಾಸ್ತ್ರಿ ಬದಲಿಸುವುದೇ ಒಳ್ಳೆಯದು ಎಂದ ರಾಬಿನ್ ಸಿಂಗ್
ಬೌಲಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವವರ ಪೈಕಿ ಭಾರತ ತಂಡದ ಮಾಜಿ ವೇಗಿ, ಕರ್ನಾಟಕದ ವೆಂಕಟೇಶ್ ಪ್ರಸಾದ್ ಪ್ರಮುಖರಾಗಿದ್ದಾರೆ. ಫೀಲ್ಡಿಂಗ್ ಕೋಚ್ ಹುದ್ದೆಗೆ ದ.ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಜಾಂಟಿ ರೋಡ್ಸ್ ಅರ್ಜಿ ಹಾಕಿದ್ದಾರೆ.
ಕಪಿಲ್ ಸಮಿತಿಯಿಂದ ಸಂದರ್ಶನ:
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಸೂಕ್ತ ಎನಿಸಿದವರನ್ನು ಬಿಸಿಸಿಐ ಆಯ್ಕೆ ಮಾಡಿ, ಅಂತಿಮ ಪಟ್ಟಿಸಿದ್ಧಪಡಿಸಲಿದೆ. ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿ ಅಂತಿಮ ಪಟ್ಟಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಕಪಿಲ್ ದೇವ್ ನೇತೃತ್ವದ ತ್ರಿಸದಸ್ಯ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸಲಿದೆ. ಆಗಸ್ಟ್ 14 ಹಾಗೂ 15ರಂದು ಸಂದರ್ಶನ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್‌ಗಳನ್ನು ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ನೇಮಕ ಮಾಡಲಿದೆ.
ಬಿಸಿಸಿಐ ಮೂಲಗಳ ಪ್ರಕಾರ ಬೌಲಿಂಗ್ ಕೋಚ್ ಭರತ್ ಅರುಣ್ ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಬ್ಯಾಟಿಂಗ್ ಕೋಚ್ ಹುದ್ದೆಯಿಂದ ಸಂಜಯ್ ಬಾಂಗರ್‌ರನ್ನು ವಜಾಗೊಳಿಸುವ ಸಾಧ್ಯತೆ ಇದೆ. ಜಾಂಟಿ ರೋಡ್ಸ್ ಅರ್ಜಿ ಹಾಕಿರುವ ಕಾರಣ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಸ್ಥಾನಕ್ಕೂ ಕುತ್ತು ಬರುವ ಸಂಭವವಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.