ಪ್ರೊ ಕಬಡ್ಡಿ 7 ಡೆಲ್ಲಿ ಬಗ್ಗುಬಡಿದು ಎರಡನೇ ಸ್ಥಾನಕ್ಕೇರಿದ ಗುಜರಾತ್

By Web DeskFirst Published Aug 1, 2019, 9:00 PM IST
Highlights

ಪ್ರೊ ಕಬಡ್ಡಿ ಟೂರ್ನಿಯಲ್ಲಿ ಎರಡು ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವು ಡೆಲ್ಲಿಯನ್ನು ಮಣಿಸುವುದರೊಂದಿಗೆ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಈ ಪಂದ್ಯದ ವರದಿ ಇಲ್ಲಿದೆ ನೋಡಿ..

ಮುಂಬೈ(ಆ.01) ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೂ ದಬಾಂಗ್ ಡೆಲ್ಲಿ ತಂಡವನ್ನು 26-31 ಅಂಕಗಳಿಂದ ಮಣಿಸಿದ ಗುಜರಾತ್ ಫಾರ್ಚೂನ್‌ಜೈಂಟ್ಸ್ ಅಂಕಪಟ್ಟಿಯಲ್ಲಿ ಡೆಲ್ಲಿ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಎರಡು ಬಾರಿ ಫೈನಲ್ ಪ್ರವೇಶಿಸಿ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿರುವ ಗುಜರಾತ್ ಈ ಆವೃತ್ತಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದ ಡೆಲ್ಲಿಗೆ ಮೊದಲ ಸೋಲುಣಿಸಿದೆ.

Photo Gallery: ಪ್ರೋ ಕಬಡ್ಡಿಯಲ್ಲಿ ಮಿಂಚಿದ ನಾಯಕ ವಿರಾಟ್ ಕೊಹ್ಲಿ!

ಆರಂಭದಿಂದಲೂ ಉಭಯ ತಂಡಗಳು ಒಂದೊಂದು ಅಂಕ ಗಳಿಸಲು ಸಾಕಷ್ಟು ಹರಸಾಹಸಪಟ್ಟವು. ಪ್ರೊ ಕಬಡ್ಡಿಯಲ್ಲಿ 50ನೇ ಪಂದ್ಯವಾಡಿದ ಸಚಿನ್ ತನ್ವಾರ್ ಮೊದಲ ರೇಡ್‌ನಲ್ಲೇ ಗುಜರಾತ್ ತಂಡಕ್ಕೆ ಅಂಕ ತಂದಿತ್ತರು. ಮೂರನೇ ನಿಮಿಷದಲ್ಲಿ ಮಾಡು ಇಲ್ಲವೇ ಮಡಿ ರೇಡ್‌ನಲ್ಲಿ ಸಚಿನ್ ಅವರನ್ನು ಟ್ಯಾಕಲ್ ಮಾಡಿದ ಜೋಗಿಂದರ್ ನರ್ವಾಲ್ ಡೆಲ್ಲಿ ಪರವಾಗಿ ಅಂಕಗಳ ಖಾತೆ ತೆರೆದರು. ಇದಾದ ಕೆಲ ಹೊತ್ತಿನಲ್ಲೇ GB ಮೋರೆ ಒಟ್ಟಾರೆ ಟೂರ್ನಿಯಲ್ಲಿ ನೂರು ಅಂಕ ಗಳಿಸಿದ ಸಾಧನೆ ಮಾಡಿದರು. ಪಂದ್ಯದ 16ನೇ ನಿಮಿಷದಲ್ಲಿ ಗುಜರಾತ್ ತಂಡವನ್ನು ಆಲೌಟ್ ಮಾಡುವಲ್ಲಿ ಡೆಲ್ಲಿ ಯಶಸ್ವಿಯಾಯಿತು. ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಗುಜರಾತ್ ಆಲೌಟ್‌ಗೆ ಗುರಿಯಾಯಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಡೆಲ್ಲಿ 14-11 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು.

ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

ಮೊದಲಾರ್ಧದ ಹಿನ್ನಡೆಯನ್ನು ಮೆಟ್ಟಿ ನಿಲ್ಲುವಲ್ಲಿ ಗುಜರಾತ್ ತಂಡ ಯಶಸ್ವಿಯಾಯಿತು. ಆಕ್ರಮಣಕಾರಿಯಾಟಕ್ಕೆ ಮೊರೆಹೋದ ಗುಜರಾತ್ ಪದೇ ಪದೇ ಡೆಲ್ಲಿ ಮೇಲೆ ಒತ್ತಡ ಹೇರಲಾರಂಭಿಸಿತು. ಡೆಲ್ಲಿ ಪರ ನವೀನ್ ಕುಮಾರ್ ಹತ್ತು ಅಂಕ ಪಡೆದರಾದರೂ ಉಳಿದವರಿಂದ ಸೂಕ್ತ ಸಹಾಯ ಒದಗಲಿಲ್ಲ. GB ಮೋರೆ (9), ರೋಹಿತ್ ಗುಲಿಯಾ(8) ಹಾಗೂ ಸಚಿನ್ 4 ಅಂಕ ಗಳಿಸುವ ಮೂಲಕ ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

 

click me!