ಪೃಥ್ವಿ ಡೋಪಿಂಗ್‌ ಪ್ರಕರಣ: ಬಿಸಿಸಿಐ ಎಡವಟ್ಟು?

By Web DeskFirst Published Aug 2, 2019, 10:36 AM IST
Highlights

ಟೀಂ ಇಂಡಿಯಾ ಯುವ ಕ್ರಿಕೆಟಿಗ ಪೃಥ್ವಿ ಶಾ ಡೋಪಿಂಗ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪೃಥ್ವಿ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವುದು ಮೇ 2 ರಂದು ಬಿಸಿಸಿಐಗೆ ತಿಳಿದಿತ್ತು. ಆದರೆ ಬಿಸಿಸಿಐ ನಿಷೇಧ ಹೇರಿರುವುದು ಜುಲೈ ತಿಂಗಳಲ್ಲಿ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ನವದೆಹಲಿ(ಆ.02): ಭಾರತ ತಂಡದ ಯುವ ಕ್ರಿಕೆಟಿಗ ಪೃಥ್ವಿ ಶಾ ಡೋಪಿಂಗ್‌ ಪ್ರಕರಣದಲ್ಲಿ ಬಿಸಿಸಿಐ ಭಾರೀ ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ. ಬಿಸಿಸಿಐ ಪರವಾಗಿ ಡೋಪಿಂಗ್‌ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಉದ್ದೀಪನಾ ಪರೀಕ್ಷಾ ಪ್ರಯೋಗಾಲಯ (ಎನ್‌ಡಿಟಿಎಲ್‌) ಮೇ 2ರಂದೇ ಶಾ ನಿಷೇಧಿತ ಟೆರ್ಬುಟಾಲಿನ್‌ ಮದ್ದು ಸೇವಿಸಿರುವ ವರದಿಯನ್ನು ಬಿಸಿಸಿಐಗೆ ನೀಡಿದೆ. ಆ ಬಳಿಕ ಸ್ವತಂತ್ರ ವಿಮರ್ಶೆ ಸಮಿತಿಯನ್ನು ರಚಿಸಿದ ಬಿಸಿಸಿಐ, ಜುಲೈ 16ರಂದು ಪೃಥ್ವಿಗೆ ನೋಟಿಸ್‌ ಜಾರಿ ಮಾಡಿ ವಿವರಣೆ ನೀಡುವಂತೆ ಸೂಚಿಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: ಅಂಡರ್-19 ವಿಶ್ವಕಪ್ ವೀರ ಪೃಥ್ವಿ ಇದೀಗ ವಿಲನ್..!

ಪೃಥ್ವಿ ಶಾ ಡೋಪಿಂಗ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎನ್ನುವುದು ಮಾರ್ಚ್‌ನಲ್ಲೇ ತಿಳಿದಿದ್ದರೂ ಅವರನ್ನು ಐಪಿಎಲ್‌ನಲ್ಲಿ ಮುಂದುವರಿಯಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದ್ದೇಕೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಮೇ 2ರ ಬಳಿಕ ಪೃಥ್ವಿ ಎಲಿಮಿನೇಟರ್‌ ಸೇರಿ 3 ಐಪಿಎಲ್‌ ಪಂದ್ಯಗಳನ್ನು ಆಡಿದ್ದರು. ಬಳಿಕ ಮುಂಬೈ ಪ್ರೀಮಿಯರ್‌ ಲೀಗ್‌ (ಎಂಪಿಎಲ್‌) ಟಿ20 ಟೂರ್ನಿಯಲ್ಲೂ ಪಾಲ್ಗೊಂಡಿದ್ದರು.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ ಆಡಳಿತ ಮಂಡಳಿ ಹಾಗೂ ಎಂಪಿಎಲ್‌ ಆಯೋಜಕರು, ತಮ್ಮ ಜತೆ ಬಿಸಿಸಿಐ ಯಾವುದೇ ಸಂವಹನ ನಡೆಸಲಿಲ್ಲ ಎಂದು ತಿಳಿಸಿದ್ದಾರೆ. ಇದರೊಂದಿಗೆ ಬಿಸಿಸಿಐನ ಡೋಪಿಂಗ್‌ ಪರೀಕ್ಷೆಯ ಪಾರದರ್ಶಕತೆಯ ಬಗ್ಗೆಯೂ ಅನುಮಾನ ಹುಟ್ಟಿದೆ.

ಇದನ್ನೂ ಓದಿ:ತಿಳಿಯದೇ ತಪ್ಪಾಗಿದೆ; ಬಿಸಿಸಿಐ ನಿರ್ಧಾರವನ್ನು ಗೌರವಿಸುತ್ತೇನೆ: ಪೃಥ್ವಿ ಶಾ

ಇದಾಗಿಯೂ, ಗಾಯಾಳು ಪೃಥ್ವಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅವಕಾಶ ನೀಡಿತ್ತು. ಜುಲೈ 16ರಂದು ಅವರಿಗೆ ನೋಟಿಸ್‌ ಕಳುಹಿಸಿದ ನಂತರವೂ ಪೃಥ್ವಿ ಎನ್‌ಸಿಎನಲ್ಲಿ ಹಾಜರಿದ್ದರು. ಜು.17ರಂದು ಶಿಖರ್‌ ಧವನ್‌ ಎನ್‌ಸಿಎನಲ್ಲಿ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದರು. ಆ ಫೋಟೋದಲ್ಲಿ ಪೃಥ್ವಿ ಸಹ ಇದ್ದಿದ್ದು, ಬಿಸಿಸಿಐಗೆ ಮತ್ತಷ್ಟುಮುಜುಗರ ಉಂಟಾಗುವಂತೆ ಮಾಡಿದೆ.

ಕ್ರಿಕೆಟಿಗನಾಗಿದ್ದಕ್ಕೆ ಶಾ ಪಾರು!
ಭಾರತೀಯ ಕ್ರಿಕೆಟಿಗನಾಗಿದ್ದ ಕಾರಣ ಪೃಥ್ವಿ ಶಾ ದೊಡ್ಡ ಶಿಕ್ಷೆಯಿಂದ ಪಾರಾಗಿದ್ದಾರೆ. ಇದೇ ತಪ್ಪನ್ನು ಒಲಿಂಪಿಕ್ಸ್‌ ವ್ಯಾಪ್ತಿಗೆ ಸೇರುವ ಕ್ರೀಡೆಯ ಆಟಗಾರ ಮಾಡಿದ್ದರೆ ಕನಿಷ್ಠ 2 ವರ್ಷ ಶಿಕ್ಷೆಗೆ ಗುರಿಯಾಗಬೇಕಿತ್ತು. ಈ ಹಿಂದೆ ರಷ್ಯಾದ ಟೆನಿಸ್‌ ತಾರೆ ಮಾರಿಯಾ ಶರಪೋವಾ ನಿಷೇಧಿತ ಟೆರ್ಬುಟಾಲಿನ್‌ ಔಷಧಿ ಸೇವಿಸಿದ್ದ ಕಾರಣ 2 ವರ್ಷ ನಿಷೇಧಕ್ಕೆ ಒಳಗಾಗಿದ್ದರು.

ಬಿಸಿಸಿಐ ವಿರುದ್ಧ ಸಿಟ್ಟಾದ ಕೇಂದ್ರ ಕ್ರೀಡಾ ಸಚಿವಾಲಯ
ಕೇಂದ್ರ ಸರ್ಕಾರ ಅಥವಾ ವಿಶ್ವ ಉದ್ದೀಪನಾ ಮದ್ದು ಸೇವನೆ ನಿಗ್ರಹ ಘಟಕ (ವಾಡಾ)ದಿಂದ ಮಾನ್ಯತೆ ಪಡೆಯದ ಕಾರಣ ಬಿಸಿಸಿಐ ಡೋಪಿಂಗ್‌ ಪರೀಕ್ಷೆ ನಡೆಸುವಂತಿಲ್ಲ. ಪರೀಕ್ಷೆ ನಡೆಸುವ ಅಧಿಕಾರವನ್ನು ಯಾರು ಕೊಟ್ಟಿದ್ದು ಎಂದು ಕೇಂದ್ರ ಕ್ರೀಡಾ ಸಚಿವಾಲಯ ಬಿಸಿಸಿಐ ಅನ್ನು ಪ್ರಶ್ನಿಸಿದೆ. ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿಗೆ ಪತ್ರದ ಮೂಲಕ ಚಾಟಿ ಬೀಸಿರುವ ಕ್ರೀಡಾ ಸಚಿವಾಲಯ, ಸ್ವಹಿತಾಸಕ್ತಿಯ ಆರೋಪ ಮಾಡಿದೆ. ಬಿಸಿಸಿಐಯೇ ಪರೀಕ್ಷೆ ನಡೆಸಲಿದೆ, ಆಟಗಾರರಿಗೆ ಶಿಕ್ಷೆ ವಿಧಿಸಲಿದೆ. ಇದು ಸರಿಯಲ್ಲ. ಕ್ರಿಕೆಟ್‌ ಮಂಡಳಿಯಲ್ಲಿ ಸೂಕ್ತ ವ್ಯವಸ್ಥೆಯ ಕೊರತೆ ಇದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

click me!