ಗುಂಡಿ ಬಿದ್ದ ಟ್ರ್ಯಾಕ್‌ನಲ್ಲೇ ಅಥ್ಲೀಟ್‌ಗಳ ಅಭ್ಯಾಸ- ಪದಕ ಬೇಟೆ ಹೇಗೆ?

By Web DeskFirst Published May 16, 2019, 9:47 AM IST
Highlights

ಕಂಠೀರವ ಕ್ರೀಡಾಂಗಣದಲ್ಲಿ ಗುಂಡಿ ಬಿದ್ದ ಟ್ರ್ಯಾಕ್‌ನಲ್ಲೇ ಅಥ್ಲೀಟ್‌ಗಳ ಅಭ್ಯಾಸ | ಪದೇ ಪದೇ ಗಾಯಗೊಳ್ಳುತ್ತಿರುವ ಕ್ರೀಡಾಳುಗಳು |  ರಾಜ್ಯ ಕ್ರೀಡಾ ಇಲಾಖೆಯ ಜಾಣ ಕುರುಡುತನ | ಇಂಥ ಸ್ಥಿತಿಯಲ್ಲಿ ಅಭ್ಯಾಸ ನಡೆಸಿ ಪದಕ ಬೇಟೆ ಹೇಗೆ; ಯುವ ಅಥ್ಲೀಟ್‌ಗಳ ಪ್ರಶ್ನೆ

ಬೆಂಗಳೂರು(ಮೇ.16): ಕರ್ನಾಟಕ ರಾಜ್ಯ ಅಥ್ಲೀಟ್‌ಗಳು ಒಲಿಂಪಿಕ್‌ನಲ್ಲಿ ಪದಕ ಗೆದ್ದರೆ ₹5 ಕೋಟಿ ಕೊಡುತ್ತೇವೆ. ಜೊತೆಯಲ್ಲಿ ‘ಎ’ ದರ್ಜೆ ಸರ್ಕಾರಿ ಕೆಲಸ ನೀಡುತ್ತೇವೆ ಎಂದು ಉದ್ದುದ್ದ ಭಾಷಣ ಮಾಡುವ ಸರ್ಕಾರದ ಪ್ರತಿನಿಧಿಗಳು, ಅಥ್ಲೀಟ್‌ಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನೇ ನೀಡುತ್ತಿಲ್ಲ. ಇಷ್ಟಾದರೂ ರಾಜ್ಯ ಸರ್ಕಾರಕ್ಕೆ ಮಾತ್ರ ಅಥ್ಲೀಟ್‌ಗಳು ಪದಕ ಜಯಿಸಬೇಕು. 

ಇದನ್ನೂ ಓದಿ: ಕಂಠೀರವ ಟ್ರ್ಯಾಕ್ ತುಂಬಾ ಗುಂಡಿ - ನಿರ್ವಹಣೆಗಿಲ್ಲ ಸಿಬ್ಬಂದಿ!

ಮಣ್ಣಿನ ಟ್ರ್ಯಾಕ್ ಮೇಲಾದರೂ ಓಡಿ ಅಭ್ಯಾಸ ನಡೆಸಿ, ಒಲಿಂಪಿಕ್‌ನಲ್ಲಿ ಪದಕ ಗೆದ್ದು ಬಿಡಿ ಎನ್ನುವುದು ಸರ್ಕಾರದ ಮಾತು. ಆದರೆ, ರಾಜ್ಯದ ಪ್ರತಿಷ್ಠಿತ ಕ್ರೀಡಾಂಗಣವಾದ ಕಂಠೀರವದ ಗುಂಡಿ ಬಿದ್ದ ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸಿ ಪದಕ ತರುವುದಾದರೂ ಹೇಗೆ? ಎಂದು ಅಥ್ಲೀಟ್‌ಗಳು, ಅವರಿಗೆ ಮಾರ್ಗದರ್ಶನ ನೀಡುವ ತರಬೇತುದಾರರು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ತಮ್ಮ ನೋವನ್ನು ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡಿದ್ದಾರೆ.

ಕೆಲವೊಂದು ರಾಜ್ಯಗಳು ಅಥ್ಲೀಟ್‌ಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕೋಟಿಗಟ್ಟಲೇ ಹಣ ಸುರಿಯುತ್ತವೆ. ಆದರೆ ರಾಜ್ಯ ಸರ್ಕಾರ ಮಾತ್ರ ಇದರಲ್ಲಿ ಹಿಂದೆ ಬಿದ್ದಿದೆ. ಸದ್ಯ ಕಂಠೀರವ ಕ್ರೀಡಾಂಗಣದಲ್ಲಿನ ಗುಂಡಿ ಬಿದ್ದಿರುವ ಸಿಂಥೆಟಿಕ್ ಟ್ರ್ಯಾಕ್ ಸರಿಪಡಿಸಿ ಎಂದು ಕ್ರೀಡಾ ಇಲಾಖೆಗೆ ಅಥ್ಲೆಟಿಕ್ಸ್ ಸಂಸ್ಥೆ ಸಾಕಷ್ಟು ಬಾರಿ ಮನವಿ ಮಾಡಿದೆ. ಆದರೆ ಟ್ರ್ಯಾಕ್ ಅಳವಡಿಕೆ ಕಾರ್ಯ ಇದುವರೆಗೂ ಆಗಿಲ್ಲ. ಅಥ್ಲೀಟ್‌ಗಳು ಹಾಳಾಗಿರುವ ಟ್ರ್ಯಾಕ್‌ನಲ್ಲೇ ಅಭ್ಯಾಸ ಮಾಡುತ್ತಿದ್ದಾರೆ.  ಅಭ್ಯಾಸದ ವೇಳೆ ಹಲವು ಗಾಯಗೊಂಡ ಉದಾಹರಣೆಗಳೂ ಇವೆ. ಟ್ರ್ಯಾಕ್ ಸಮಸ್ಯೆಯಿಂದಾಗಿ ಯುವ ಕ್ರೀಡಾಪಟುಗಳು ಅಥ್ಲೆಟಿಕ್ಸ್‌ನಿಂದ ದೂರವಾಗುತ್ತಿದ್ದಾರೆ. ಇಷ್ಟಾದರೂ ಕ್ರೀಡಾ ಇಲಾಖೆ ಮಾತ್ರ ಈಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಇದನ್ನೂ ಓದಿ:ರಾತ್ರೋರಾತ್ರಿ ಸೆಲೆಬ್ರಿಟಿಯಾಗಿದ್ದ RCB ಅಭಿಮಾನಿಗೆ ನೆಟ್ಟಿಗರ ಕಿರುಕುಳ!

ಅಥ್ಲೆಟಿಕ್ಸ್‌ಗೆ ಕಡಿಮೆಯಾದ ಬೇಡಿಕೆ: ಒಂದು ಕಾಲದಲ್ಲಿ ರಾಜ್ಯ ಅಥ್ಲೀಟ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ್ದರು. ಇದೀಗ ರಾಜ್ಯದ ಹಿರಿಯ ಅಥ್ಲೀಟ್‌ಗಳನ್ನು ಕೇಳುವವರೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಅಥ್ಲೀಟ್ ಗಳನ್ನು ಕಡೆಗಣಿಸಿರುವುದರಿಂದ ಅಥ್ಲೆಟಿಕ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಂ.ರಾ. ಟೂರ್ನಿ ಗಳಲ್ಲಿ ಹೊರ ರಾಜ್ಯಗಳ ಅಥ್ಲೀಟ್‌ಗಳು ಕರ್ನಾಟಕವನ್ನು ಪ್ರತಿನಿಧಿಸುವಂತಹ ದುಸ್ಥಿತಿ ರಾಜ್ಯಕ್ಕೆ ಬಂದಿದೆ ಎಂದು ಹೆಸರು ಹೇಳಲಿಚ್ಛಿಸದ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಹಿರಿಯ ಸದಸ್ಯರೊಬ್ಬರು
‘ಸುವರ್ಣನ್ಯೂಸ್.ಕಾಂ’ಗೆ ಮಾಹಿತಿ ನೀಡಿದ್ದಾರೆ.

ಧನಂಜಯ ಎಸ್‌.ಹಕಾರಿ
 

click me!