ವಿಶ್ವದ ಎಲ್ಲಾ ಪ್ರತಿಷ್ಠಿತ ಕೂಟಗಳಲ್ಲಿ ಚಿನ್ನ ಗೆದ್ದಿರುವ ಜಾವೆಲಿನ್ ತಾರೆ
2024ರ ಪ್ಯಾರಿಸ್ ಒಲಿಂಪಿಕ್ಸ್ ಚಿನ್ನ ಗೆಲ್ಲುವುದು ನೀರಜ್ ಮುಂದಿನ ಟಾರ್ಗೆಟ್
ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದಿರುವ ನೀರಜ್
ಬುಡಾಪೆಸ್ಟ್(): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಭಾರತದ ‘ಸಾರ್ವಕಾಲಿಕ ಶ್ರೇಷ್ಠ’ ಅಥ್ಲೀಟ್ ಎನಿಸಿದ್ದಾರೆ. 25ನೇ ವಯಸ್ಸಿಗೇ ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್, ಡೈಮಂಡ್ ಲೀಗ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಎಲ್ಲದರಲ್ಲೂ ಚಿನ್ನ ಗೆದ್ದ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರ ಮುಂದಿನ ಗುರಿ ಏನು ಎನ್ನುವ ಕುತೂಹಲ ಸಹಜವಾಗಿಯೇ ಕ್ರೀಡಾಭಿಮಾನಿಗಳಲ್ಲಿ ಮೂಡಲಿದೆ. ಸ್ವತಃ ನೀರಜ್ ಹೇಳಿರುವಂತೆ, ಅವರ ಮುಂದಿನ ಗುರಿ 2024ರ ಪ್ಯಾರಿಸ್ ಒಲಿಂಪಿಕ್ಸ್.
ಭಾನುವಾರ ರಾತ್ರಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ 88.17 ಮೀ. ದೂರಕ್ಕೆ ಜಾವೆಲಿನ್ ಎಸೆದು ಚಿನ್ನ ಹೆಕ್ಕಿದ ನೀರಜ್, ಸ್ಪರ್ಧೆಯ ಬಳಿಕ ಸುದ್ದಿಗಾರರ ಜೊತೆ ಸಂತಸ ಹಂಚಿಕೊಂಡರು. ಈ ವೇಳೆ ತಮ್ಮ ಮುಂದಿನ ಗುರಿ ಬಗ್ಗೆ ಮಾತನಾಡಿದ ಅವರು, ‘ಒಂದು ಹಂತಕ್ಕೆ ಜಾವೆಲಿನ್‌ನಲ್ಲಿ ನನ್ನ ಪಯಣ ಮುಗಿದಿದೆ. ಆದರೆ ನಾನು ಹೊಸ ಪಯಣವನ್ನು ಆರಂಭಿಸಲಿದ್ದೇನೆ. ಎಲ್ಲಾ ಕೂಟಗಳಲ್ಲೂ ಪದಕ ಗೆದ್ದಿದ್ದೇನೆ. ಈಗ ನನ್ನ ದೇಹವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಿದೆ. ಕ್ರೀಡೆಯನ್ನು ಮತ್ತಷ್ಟು ಆನಂದಿಸುವತ್ತ ಗಮನ ಹರಿಸಲು ನಿರ್ಧರಿಸಿದ್ದೇನೆ’ ಎಂದ ನೀರಜ್, ತಮ್ಮ ಮುಂದಿರುವ ಗುರಿಯನ್ನು ಸ್ಪಷ್ಟಪಡಿಸಿದರು.
ಚಿನ್ನ ಗೆದ್ದ ನೀರಜ್‌ನ ಬಂಗಾರ ನಡೆ, ಧ್ವಜರಹಿತ ಪಾಕ್‌ನ ಅರ್ಶದ್ ಕರೆದು ತಿರಂಗ ಪಕ್ಕಕ್ಕೆ ನಿಲ್ಲಿಸಿದ ಚೋಪ್ರಾ!
90 ಮೀ. ದಾಟುವ ಗುರಿ!
ನೀರಜ್ ಎಲ್ಲಾ ಪದಕಗಳನ್ನು ಗೆದ್ದರೂ ಅವರಿಗೆ ಇನ್ನೂ 90 ಮೀ. ಗಡಿ ದಾಟಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಾತನಾಡಿರುವ ನೀರಜ್, ‘90 ಮೀ. ದಾಟುವುದು ಯಾವಾಗ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ನಾನು ಸ್ಥಿರತೆ ಕಾಯ್ದುಕೊಂಡರೂ, ನನ್ನ ಪ್ರದರ್ಶನ ಗುಣಮಟ್ಟ ಹೆಚ್ಚಾಗಿಲ್ಲ. ಪ್ರತಿ ಬಾರಿಯೂ ಕಣಕ್ಕಿಳಿಯುವಾಗ ಈ ಸಲ 90 ಮೀ. ದಾಟಲಿದ್ದೇನೆ ಎನಿಸುತ್ತದೆ. ಆದರೆ ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಹೊಸ ದಾರಿಗಳನ್ನು ಹುಡಕಬೇಕಿದೆ’ ಎಂದಿದ್ದಾರೆ.
'ಮಿತಿ ಮೀರಿ ಪ್ರಯತ್ನಿಸುವ ವ್ಯಕ್ತಿಗೆ ತಮ್ಮ ದೇಹದ ಮೇಲೆ ಹೆಚ್ಚು ಒತ್ತಡ ಬೀಳದಂತೆ ನೋಡಿಕೊಳ್ಳುವುದು ಕಷ್ಟ. ಮುಂದೆ ನಾನು ಒತ್ತಡ ನಿರ್ವಹಣೆಯಲ್ಲಿ ಪರಿಪಕ್ವತೆ ಕಂಡುಕೊಳ್ಳಬೇಕಿದೆ. ಹೆಚ್ಚು ಒತ್ತಡಕ್ಕೆ ಸಿಲುಕದೆ ಶಾಂತಚಿತ್ತದಿಂದ ಆಡುವುದನ್ನು ಅಭ್ಯಾಸ ಮಾಡಬೇಕಿದೆ. ಭಾರತೀಯರಿಗೆ ಒಂದು ಮಾತು ಹೇಳಲು ಇಚ್ಛಿಸುತ್ತೇನೆ. ನಾನು ಪ್ರತಿ ಬಾರಿ ಗೆಲ್ಲಬೇಕು ಎಂದು ಎಲ್ಲರೂ ನಿರೀಕ್ಷಿಸುತ್ತಾರೆ ಎಂದು ತಿಳಿದಿದೆ. ಆದರೆ ನಾನು ಎಂದಾದರೂ ಸೋತರೆ ನನ್ನನ್ನು ಎಲ್ಲರೂ ಕ್ಷಮಿಸಬೇಕು. ಏಕೆಂದರೆ ಅದು ಸಹ ಬಹಳ ಮುಖ್ಯ.'
- ನೀರಜ್ ಚೋಪ್ರಾ, ಜಾವೆಲಿನ್ ವಿಶ್ವ ಚಾಂಪಿಯನ್
ಎಲ್ಲಾ ಪ್ರತಿಷ್ಠಿತ ಪದಕ ಗೆದ್ದ ವಿಶ್ವದ ಅತಿ ಕಿರಿಯ!
ವಿಶ್ವ ಅಥ್ಲೆಟಿಕ್ಸ್, ಒಲಿಂಪಿಕ್ಸ್, ಕಾಂಟಿನೆಂಟಲ್(ಏಷ್ಯಾ) ಮೂರೂ ಕೂಟಗಳಲ್ಲಿ ಚಿನ್ನ ಗೆದ್ದ ವಿಶ್ವದ ಅತಿಕಿರಿಯ ಎನ್ನುವ ದಾಖಲೆಯನ್ನು 25 ವರ್ಷದ ನೀರಜ್ ಚೋಪ್ರಾ. ಒಟ್ಟಾರೆ ಈ ಸಾಧನೆ ಮಾಡಿದ 3ನೇ ಅಥ್ಲೀಟ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಚೆಕ್ ಗಣರಾಜ್ಯದ ಯಾನ್ ಜೆಲೆನ್ಜಿ, ಫಿನ್‌ಲ್ಯಾಂಡ್‌ನ ಆ್ಯಂಡೆರ್ಸ್ ಥಾರ್ಕಿಲ್ಡ್ಸೆನ್ ಈ ಸಾಧನೆ ಮಾಡಿದ್ದರು. ಜೆಲೆನ್ಜಿ ಎಲ್ಲಾ ಮೂರು ಪದಕ ಗೆದ್ದಾಗ ಅವರಿಗೆ 28 ವರ್ಷವಾಗಿತ್ತು. ಆ್ಯಂಡೆರ್ಸ್ 27ನೇ ವಯಸ್ಸಲ್ಲಿ ಈ ಸಾಧನೆಗೈದಿದ್ದರು.
Neeraj Chopra: ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ‘ವಿಶ್ವ’ ವಿಜೇತ!
ಸಂಪೂರ್ಣ ಫಿಟ್ ಇಲ್ಲದಿದ್ರೂ ವಿಶ್ವ ಕಿರೀಟ ಗೆದ್ದ ನೀರಜ್!
ನೀರಜ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವಾಗ ಇದಷ್ಟು ಫಿಟ್ ವಿಶ್ವ ಚಾಂಪಿಯನ್‌ಶಿಪ್ ವೇಳೆ ಇರಲಿಲ್ಲ. ಬುಡಾಪೆಸ್ಟ್‌ಗೆ ತೆರಳುವ ಮುನ್ನ ನೀರಜ್ ಈ ಋತುವಿನಲ್ಲಿ ಕೇವಲ 2 ಕೂಟಗಳಲ್ಲಷ್ಟೇ ಸ್ಪರ್ಧಿಸಿದ್ದರು. ಮೊದಲ ಕೂಟದಲ್ಲಿ ಅವರು ತೊಡೆಸಂದು ಸೆಳೆತಕ್ಕೆ ತುತ್ತಾಗಿದ್ದರು. ಈಗಲೂ ನೋವು ಕಾಣಿಸಿಕೊಳ್ಳುವ ಕಾರಣ, ನೀರಜ್ ಅಭ್ಯಾಸದ ವೇಳೆ ಹೆಚ್ಚು ಎಸೆತಗಳಿಗೆ ಮುಂದಾಗಲಿಲ್ಲ. ಅರ್ಹತಾ ಸುತ್ತಿನಲ್ಲೂ ಮೊದಲ ಯತ್ನದಲ್ಲೇ ಯಶಸ್ಸು ಕಂಡ ಬಳಿಕ ಬಾಕಿ 2 ಯತ್ನಗಳಿಗೆ ಕೈಹಾಕಲಿಲ್ಲ. ಫೈನಲ್ ವೇಳೆಯೂ ನೀರಜ್‌ಗೆ ನೋವು ಕಾಣಿಸಿಕೊಂಡಿದಂತೆ. ಆದರೂ, ಅವರು ಎಲ್ಲರನ್ನೂ ಹಿಂದಿಕ್ಕಲು ಸಫಲರಾದರು. ಮುಂದಿನ ತಿಂಗಳು ಏಷ್ಯನ್ ಗೇಮ್ಸ್‌ಗೂ ಮುನ್ನ ನೀರಜ್ ಫಿಟ್ ಆಗುವ ನಿರೀಕ್ಷೆಯಲ್ಲಿದ್ದಾರೆ.