ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಇಂದಿಗೆ 12 ವರ್ಷ ತುಂಬಿವೆ. 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ದ ಯುವಿ ಅಕ್ಷರಶಃ ಅಬ್ಬರಿಸಿದ್ದರು. ಈ ಮೂಲಕ ಸಿಕ್ಸರ್ ಕಿಂಗ್ ಆಗಿ ಹೊರಹೊಮ್ಮಿದ್ದರು. ಹೀಗಿತ್ತು ನೋಡಿ ಆ ಕ್ಷಣ..
ಬೆಂಗಳೂರು[ಸೆ.19]: ಟೀಂ ಇಂಡಿಯಾದ ಮೋಸ್ಟ್ ಸ್ಟೈಲೀಷ್ ಕ್ರಿಕೆಟಿಗ ಯುವರಾಜ್ ಸಿಂಗ್ ಇಂದಿಗೆ 12 ವರ್ಷಗಳ ಹಿಂದೆ ಒಂದೇ ಓವರ್’ನಲ್ಲಿ ಆರೂ ಎಸೆತಗಳನ್ನು ಸಿಕ್ಸರ್’ಗಟ್ಟಿ ಅಪರೂಪದ ದಾಖಲೆ ಬರೆದಿದ್ದರು. ಈ ಮೂಲಕ ಚೊಚ್ಚಲ ಟಿ20 ವಿಶ್ವಕಪ್’ನಲ್ಲೇ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ಗೌರವಕ್ಕೂ ಯುವಿ ಭಾಜನರಾಗಿದ್ದರು.
ಕೆನಡಾ ಟಿ20 ಲೀಗ್; ಯುವಿ ಘರ್ಜನೆಗೆ ಅಭಿಮಾನಿಗಳ ಶ್ಲಾಘನೆ!
undefined
ಹೌದು, ಸೆಪ್ಟೆಂಬರ್19, 2007ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಹಾಕಿದ 6 ಎಸೆತದಲ್ಲೂ ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದರು. ಡರ್ಬನ್’ನ ಕಿಂಗ್ಸ್’ಮೇಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಯುವಿ 6 ಸಿಕ್ಸರ್ ಸಿಡಿಸಿ ಅಕ್ಷರಶಃ ಅಬ್ಬರಿಸಿದ್ದರು. ಈ ಮೂಲಕ ಅಂದಿನಿಂದ ಇಂದಿನವರೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಒಂದೇ ಓವರ್’ನಲ್ಲಿ 6 ಸಿಕ್ಸರ್ ಬಾರಿಸಿದ ಏಕೈಕ ಭಾರತೀಯ ಕ್ರಿಕೆಟಿಗ ಎನ್ನುವ ದಾಖಲೆ ಯುವಿ ಹೆಸರಿನಲ್ಲೇ ಉಳಿದಿದೆ.
ಹೀಗಿತ್ತು ನೋಡಿ ಆ ಕ್ಷಣ...
ವಿಡಿಯೋ ಕೃಪೆ: ICC
2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಲು ಇಂಗ್ಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಇಂಗ್ಲೆಂಡ್ ಆಲ್ರೌಂಡರ್ ಆ್ಯಂಡ್ರೂ ಫ್ಲಿಂಟಾಪ್ 17 ಓವರ್ ಬೌಲಿಂಗ್ ಮಾಡುವ ವೇಳೆ ಯುವಿ ಜತೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತರು. ರೊಚ್ಚಿಗೆದ್ದ ಯುವಿ ಸಿಟ್ಟಿಗೆ ಬ್ರಾಡ್ ಬಲಿಯಾಗಬೇಕಾಯಿತು. 19 ಓವರ್’ನ 6 ಎಸೆತವನ್ನು ಯುವಿ ಸಿಕ್ಸರ್’ಗಟ್ಟಿದರು. ಮಾತ್ರವಲ್ಲದೇ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದುವರೆಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ದಾಖಲೆಯೂ ಯುವಿ ಹೆಸರಿನಲ್ಲಿಯೇ ಇದೆ.
ಯುವರಾಜ್ ಸಿಂಗ್ ಆ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 58 ರನ್ ಬಾರಿಸಿದ್ದರು. ಇದರಲ್ಲಿ 3 ಬೌಂಡರಿ ಹಾಗೂ 7 ಮುಗಿಲೆತ್ತರದ ಸಿಕ್ಸರ್’ಗಳೂ ಒಳಗೊಂಡಿದ್ದವು. ಪರಿಣಾಮ ಭಾರತ 4 ವಿಕೆಟ್ ಕಳೆದುಕೊಂಡು 218 ರನ್ ಬಾರಿಸಿತ್ತು. ಇನ್ನು ಗುರಿ ಬೆನ್ನತ್ತಿದ ಇಂಗ್ಲೆಂಡ್ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಬಾರಿಸಲಷ್ಟೇ ಶಕ್ತವಾಯಿತು. ಭಾರತ 18 ರನ್’ಗಳ ಗೆಲುವಿನ ನಗೆ ಬೀರಿತು. ಇನ್ನು ಸೆಪ್ಟೆಂವರ್ 24ರಂದು ಜೊಹಾನ್ಸ್’ಬರ್ಗ್’ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿಯನ್ನು ಮಣಿಸಿ ಧೋನಿ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.