ಒಂಟಿತನ ಎಂದರೆ ಸುಮ್ಮನಿರುವುದು ಚಿಗುರುವ ಸಂಭ್ರಮ, ಉದುರುವ ಬೇಸರ ಯಾವುದೂ ಇಲ್ಲದ ಎಲೆಯ ಹಾಗೆ!

By Kannadaprabha News  |  First Published Sep 9, 2024, 1:23 PM IST

ನಿಜವಾಗಿ ಮನುಷ್ಯ ಒಂಟಿಯಾದ ಕೂಡಲೆ ಸುಮ್ಮನಿರಬೇಕು. ಝೆನ್ ಧ್ಯಾನಿಯಂತಿರಬೇಕು. ಆಂತರ್ಯದ ಖಾಲಿರಸ್ತೆಯಲ್ಲಿ ಮುಂದಿನ ತಿರುವಿನವರೆಗೆ ನಡೆಯಬೇಕು ತಾಳ್ಮೆಯಿಂದ ಸುಮ್ಮನೇ


- ಕುಸುಮ ಆಯರಹಳ್ಳಿ

ಪ್ರಾಣಿಗಳೇ ಒಂಟಿಯಾಗಿರುವುದಿಲ್ಲ. ಇನ್ನು ಮಾತು ಬಲ್ಲ ಮಾನವರು ನಾವು ಒಂಟಿಯಾಗಿರಲು ಬಯಸುತ್ತೇವೆಯೇ? ನನಗೆ ಒಂಟಿಯಾಗಿರಬೇಕು ಅನಿಸಿಬಿಟ್ಟಿದೆ ಅಂತಾರಲ್ಲಾ… ಅದು ಒಂಟಿತನವಲ್ಲ. ಏಕಾಂತದ ಆಯ್ಕೆ. ಜನರಿಂದ, ಗುಂಪಿನಿಂದ, ಶಬ್ದಗೌಜಿನಿಂದ ತುಸು ದೂರ ನಿಲ್ಲಬೇಕೆಂದು ಬೇಕಾಗಿ ಮಾಡಿಕೊಳ್ಳುವ ಆಯ್ಕೆ. ಆದರೆ ಒಂಟಿತನ? ಅದು ಧುತ್ತೆಂದು ತಾನಾಗೇ ಬಂದೊದಗುವುದು. ಒಂಟಿಯಾಗಿರುವುದೆಂದರೆ ಎಲ್ಲೋ ನಿರ್ಜನ ಪ್ರದೇಶದಲ್ಲಿ ಒಬ್ಬರೇ ಇರುವುದೆಂದಲ್ಲ. ಕಿಕ್ಕಿರಿದ ಜನಸಂದಣಿಯ ನಡುವೆಯೂ ಅಪರಿಚಿತರಾಗಿ ಅನಾಥರಾಗಿ ಇದ್ದೇವೆ ಎನಿಸುವಂತಾ ವಿಚಿತ್ರ ಸ್ಥಿತಿ..

Tap to resize

Latest Videos

undefined

ಕಿಂಗ್ ಖಾನ್ ಅಳಿಯ ಆಗ್ತಾರಾ ಅಗಸ್ತ್ಯ ನಂದಾ: ಮಗನ ಗರ್ಲ್‌ಫ್ರೆಂಡ್‌ ಫೋಟೋಗೆ ಶ್ವೇತಾ ಬಚ್ಚನ್ ಕಾಮೆಂಟ್ ವೈರಲ್

ಈ ಮನುಷ್ಯ ಲೋಕದಲ್ಲಿ ಒಂಟಿಯಾಗುವುದು ಅಂದರೆ ಭಾವನಾತ್ಮಕವಾಗಿ ನಮ್ಮನ್ನು ಯಾರೂ ಅವಲಂಬಿಸದಿರುವುದು ಮತ್ತು ನಾವು ಯಾರನ್ನೂ ಅವಲಂಬಿಸದಿರುವುದು. ಹುಸಿಮುನಿಸಿಗೂ ಯಾರೂ ಇರದಿರುವುದು. ನಮ್ಮ ಭೌತಿಕ ಇರುವಿಕೆ ಅಥವಾ ಇಲ್ಲದಿರುವಿಕೆ ಈ ಲೋಕದ ಯಾವ ಒಂದು ಜೀವಕ್ಕೂ ಸಣ್ಣ ವ್ಯತ್ಯಾಸವನ್ನೂ ಉಂಟುಮಾಡದಿರುವುದು. ಕುಟುಂಬ ಸ್ನೇಹಿತರು ಯಾರೂ ಇಲ್ಲದವರು ಒಂಟಿಗರು ಎಂದೇನೂ ಅಲ್ಲ. ನೆಂಟರು, ಬಳಗ, ಸ್ನೇಹಿತರು ಸಾವಿರಾರು ಜನ ಇದ್ದರೂ ಬಾಧಿಸಬಹುದು ಒಂಟಿತನ. ಯಾರೋ ತಾಯಿ ಸ್ವಂತ ಮಗನ ಮನೆಯಲ್ಲಿ ಸಕಲ ಸೌಲಭ್ಯಗಳಿದ್ದೂ ಒಂಟಿಯಾಗಿರಬಹುದು. ಇರಬಹುದು ಯಾವುದೋ ಮಗು ಕೂಡ ಹಾಗೆ ಎಲ್ಲರಿದ್ದೂ ಒಂಟಿಯಾಗಿ. ಇತರ ಪ್ರಾಣಿಗಳನ್ನು ಇದು ಬಾಧಿಸುತ್ತದೆಯೋ ಇಲ್ಲವೋ, ಒಂಟಿತನವೆಂಬುದು ಭಾವನೆ, ವಿವೇಚನೆ, ಭಾವನಾತ್ಮಕ ಅವಲಂಬನೆಗಳಿರುವ ಮನುಷ್ಯರಿಗೆ ಉಂಟಾಗುವ ಒಂದು ಮಾನಸಿಕ ಸ್ಥಿತಿ.

ಯಾವ ಕಂಪನಿಯ ಪೆಟ್ರೋಲ್‌ ಹಾಕಿಸಿದ್ರೆ ಲಾಭ? ಇಲ್ಲಿದೆ ನೋಡಿ ಯೂಟ್ಯೂಬ್‌ ಚಾನೆಲ್‌ ಮಾಡಿದ ಟೆಸ್ಟ್‌ ರಿಸಲ್ಟ್‌

ಹೇರ್‌ಪಿನ್‌ ರಸ್ತೆಯ ಯಾವುದೋ ತಿರುವಿನ ಮರೆಯಲ್ಲಿ ಕಾದುಕೂತ ದರೋಡೆಕೋರರಂತೆ ಕೂತಿದ್ದು, ಬದುಕ ವಾಹನ ತಡೆದು ನಿಲ್ಲಿಸಿ ಜೊತೆಗಿದ್ದ ಎಲ್ಲವನ್ನೂ ಕಿತ್ತುಕೊಂಡು ‘ರೈಟ್ ರೈಟ್…ಹೋಗಿನ್ನು ಮುಂದಕ್ಕೆ’ ಅಂತ ಕಳಿಸುತ್ತದೆ ಕಾಣದ ಕೈ. ಹಿಂದಿನ ತಿರುವಿನಲ್ಲಿದ್ದದ್ದು ಯಾವುದೂ ಈಗಿಲ್ಲ. ಯಾರೂ ಇಲ್ಲ. ಆ ಕ್ಷಣಕ್ಕೆ ಬದುಕೆಂಬುದು ಬೋಳುಗುಡ್ಡೆ.

ಒಂಟಿತನದ ಸ್ಥಿತಿ ಒದಗಿದ ನಂತರ ರಸ್ತೆ ಸಾಗಬೇಕಾದ ಕಾಲುಗಳಿಗೆ ಮೂರು ಆಯ್ಕೆಗಳು. ಒಂದು; ಜೊತೆಗೆ ಹಿಡಿದು ನಡೆಯಲು ಚಿಕ್ಕದೋ ದೊಡ್ಡದೋ ಕೈ ಇರದ ಮೇಲೆ ಇನ್ನು ಯಾಕಾಗಿ ನಡೆಯಬೇಕು? ಎಂದು ತೀರ್ಮಾನಿಸುವುದು. ಎರಡನೆಯದು; ಪಯಣ ತಾನಾಗಿ ನಿಲ್ಲುವವರೆಗೆ ನಮಗೆ ನಿಲ್ಲಿಸುವ ಹಕ್ಕಿಲ್ಲವೆಂದು ಬಗೆದು ಹಾಗೋ ಹೀಗೋ ನಡೆದು ದಾರಿ ದೂಡುವುದು. ಮೂರನೆಯದು; ಹೀಗೇಕಾಯಿತು? ಇದರ ಕಾರಣವೇನು? ಏನು ಇದೆಲ್ಲದರ ಅರ್ಥ? ಎಂದು ತರ್ಕ, ತತ್ವಗಳ ಮೂಲಕ ಉತ್ತರ ಹುಡುಕಲು ಯತ್ನಿಸುವುದು. ಆದರೆ ನಿಜವಾಗಿ ಮನುಷ್ಯ ಒಂಟಿಯಾದ ಕೂಡಲೆ ಸುಮ್ಮನಿರಬೇಕು. ಝೆನ್ ಧ್ಯಾನಿಯಂತಿರಬೇಕು. ಆಂತರ್ಯದ ಖಾಲಿರಸ್ತೆಯಲ್ಲಿ ಮುಂದಿನ ತಿರುವಿನವರೆಗೆ ನಡೆಯಬೇಕು ತಾಳ್ಮೆಯಿಂದ ಸುಮ್ಮನೇ.

ಕೆಲವರ ಪಾಲಿಗೆ ಮುಂದಿನ ತಿರುವಲ್ಲಿ ಮತ್ತೇನೋ, ಯಾರೋ ಕಾದಿರಬಹುದು. ಮತ್ತೆ ಕೆಲವರಿಗೆ ಅಂತ ಅವಕಾಶವಾಗದೆಯೇ ಮುಗಿದುಹೋಗಬಹುದು. ಆದರೆ ನಾವು ಸುಮ್ಮನಿರಬೇಕು. ಈ ಬದುಕು ನಮ್ಮದೇ ಅಲ್ಲ ಎಂಬಂತೆ

ಕೆಣಕಿ, ಕೆದಕಿ ನೋಡಿದರೆ ಎಲ್ಲ ಮನುಷ್ಯರೂ ಆಳದಲ್ಲಿ ಒಂಟಿಯಾಗಿಯೇ ಇರುತ್ತಾರೆ. ಆದರೆ ಅದು ಇಡಿಯಾಗಿ ಮತ್ತು ತೀವ್ರವಾಗಿ ಆವರಿಸಿಕೊಳ್ಳುವ ಸ್ಥಿತಿ ಕೆಲವರಿಗೆ ಕೆಲವು ಸಮಯದಲ್ಲಿ ಬರುತ್ತದಷ್ಟೆ. ಆದರೆ ಇದು ಶಾಪವಲ್ಲ, ಮನುಷ್ಯಲೋಕದೊಳಗೇ ಇದ್ದೂ ಇಲ್ಲದಂತೆ, ನಡುವೆಯೇ ಇದ್ದರೂ ಅಂತರದಲ್ಲಿ ನಿಂತಂತೆ ಲೋಕವನ್ನು ಗಮನಿಸಬಹುದಾದ ಸ್ಥಿತಿ.

ಒಂಟಿತನವೆಂಬುದು ಸಾವಿನ ಸಮಯದ ಸ್ಮಶಾನ ವೈರಾಗ್ಯದ ಕಾಲಾವಧಿಯನ್ನು ವಿಸ್ತರಿಸಿದಂತಾ ಸ್ಥಿತಿ. ನಿರಂತರ ವೈರಾಗ್ಯದ ಸ್ಥಿತಿ. ಬೆಳಕು ಕಾಣಿಸುವ ಸ್ಥಿತಿ. ಕಾಣುವ ಮನಸಿರಬೇಕಷ್ಟೆ. ಸಾಹಿತಿಯೋ, ವಿಜ್ಞಾನಿಯೋ, ಅನಕ್ಷರಸ್ಥ ವ್ಯಕ್ತಿಯೋ, ಮತ್ಯಾರೋ… ಒಂಟಿತನವೆಂಬುದು ಯಾವ ಮುಲಾಜಿಲ್ಲದೇ ಎಲ್ಲರನ್ನೂ ಸಾದಾ ಮನುಷ್ಯರಾಗಿಸುತ್ತದೆ ಮತ್ತು ಯಾವ ಭೇದವೂ ಇರದೇ ಒಂದೇ ಬಣ್ಣದ ಬೆಳಕುಗಾಣಿಸುತ್ತದೆ. ಅವರವರ ಅಭಿವ್ಯಕ್ತಿ ಬೇರೆಯಾದರೂ ಪಡೆದ ಅನುಭವ ಒಂದೇ.

ಶಬ್ದಪ್ರತಿಭೆ ಇದ್ದವರು, ತರ್ಕಪ್ರತಿಭೆ ಇದ್ದವರು ಒಂಟಿತನವನ್ನೂ ರಸವತ್ತಾಗಿ ವರ್ಣಿಸಿದ ಮಾತ್ರಕ್ಕೇ ಅದೊಂದು ರೊಮ್ಯಾಂಟಿಕ್ ಅನುಭವವಲ್ಲ, ಈ ಯಾತನೆಯ ಯಾತನೆ ಅನುಭವಿಸಿದವರಿಗಷ್ಟೇ ಗೊತ್ತು. ಆದರೆ ಯಾವುದೇ ನೋವಿನಂತೆ ಒಂಟಿತನವೂ ಒಂದು ಬಗೆಯ ಸುಡುವಿಕೆ. ಸುಟ್ಟರೇ ಬೆಳಕು.

ಹಾಗೆಂದು ಅದು ಬಯಸತಕ್ಕ, ಬಯಸಿದ ಕಾರಣವಾಗಿ ಖರೀದಿಸತಕ್ಕ ಸರಕೂ ಅಲ್ಲ. ಓಹ್ ಒಂಟಿತನವೆಂಬುದು ಅದೆಷ್ಟು ದುಬಾರಿ ನೋಡಿ. ಏಕಾಂತವನ್ನಾದರೆ ಹಣ ಮತ್ತು ಸಮಯ, ಅವಕಾಶಗಳಿಂದ ಪಡೆದುಬಿಡಬಹುದು. ಆದರೆ ಒಂಟಿತನ? ತಂತಾನೇ ಬರುವುದು. ಬಾ ಎಂದರೆ ಬರುವುದಲ್ಲ, ಬೇಡವೆಂದರೆ ಬಿಡುವುದೂ ಅಲ್ಲ, ನೋಟೀಸು, ಮುನ್ಸೂಚನೆ ಕೊಡುವುದಿಲ್ಲ, ಸಿದ್ಧತೆಗೆ, ತಯಾರಿಗೆ ಅವಕಾಶವಿಲ್ಲ. ಬಂದ ಮೇಲೆ ಎಷ್ಟುಕಾಲದ ಅತಿಥಿ ತಾನೆಂದು ಪಕ್ಕಾ ಹೇಳುವುದಿಲ್ಲ. ಅದಕ್ಕೆ ಅದರದೇ ಇಚ್ಛೆ.

ಧುತ್ತೆಂದು ಆವರಿಸುವ ಒಂಟಿತನವನ್ನು ನಿರ್ವಹಿಸಲು ಹಲವರು ಹಲವು ಸಲಹೆಗಳನ್ನು ನೀಡುತ್ತಾರೆ. ಜಾಗ ಬದಲಿಸುವಿಕೆ, ಬೆರೆಯುವಿಕೆ, ಧ್ಯಾನ, ಥೆರಪಿ, ಚಿಕಿತ್ಸೆ ಇನ್ನೊಂದು ಮತ್ತೊಂದು.. ‘ಓಹೋ, ಹೌ ಟು ಡೀಲ್ ವಿತ್ ಲೋನ್ಲಿನೆಸ್ ಅಂತ ನೀವು ಕೇಳೋದು ಹೆಚ್ಚಾ ನಾ ಹೇಳೋದು ಹೆಚ್ಚಾ..’ ಅಂತ ಗೂಗಲು ಪುಟಗಟ್ಟಲೆ ಮಾಹಿತಿಯನ್ನೂ, ಗಂಟೆಗಟ್ಟಲೆ ಬೋಧನೆಯನ್ನೂ ಸೂಚಿಸುತ್ತದೆ. ಒಂದು ಹಂತಕ್ಕೆ ಅದು ನಮಗೆ ಆ ಕ್ಷಣವನ್ನು ದಾಟಿಕೊಳ್ಳಲು ಸಹಾಯ ಮಾಡಬಹುದು ಕೂಡ.

ಆದರೆ ಸುಮ್ಮನೇ ಇರುವುದರ, ಸುಮ್ಮನೇ ಅಂದರೆ ಸುಮ್ಮನೇ…ಗಿಡವೊಂದರ ಎಲೆಯ ಹಾಗೆ. ಚಿಗುರುವ ಸಂಭ್ರಮ, ಉದುರುವ ಬೇಸರ ಯಾವುದೂ ಇಲ್ಲದ ಹಾಗೆ. ದಿನ ದಿನವೂ ಬರುವುದು ತಪ್ಪದ ಸೂರ್ಯನ ನಿರ್ಮಮಕಾರ ದಿನಚರಿಯ ಹಾಗೆ, ಸುಮ್ಮನೇ ಇದ್ದುಬಿಡಬೇಕು. ಇರಬೇಕು, ಮಾರುಕಟ್ಟೆಯ ನಡುವೆ ಧ್ಯಾನಕ್ಕೆ ಕೂತ ಹಾಗೆ. ಸುಮ್ಮನೆ ನಡೆಯಬೇಕು, ಹಾಯಬೇಕು ತಿರುವುಗಳನ್ನು. ಒಂಟಿತನದಲ್ಲಿ ಪೂರ್ತಿಯಾಗಿ ಮುಳುಗಬೇಕು. ಸಮುದ್ರದ ಆಳಕ್ಕೆ ಇನ್ನೂ ಆಳಕ್ಕೆ ಮುಳುಗಿದಂತೆ ಸಿಗುವ ಬಗೆಬಗೆಯ ಸರುಕಳಂತೆ, ತಳದತಳ ಮುಟ್ಟಿದಾಗ ಸಿಗುವ ಅವರ್ಣನೀಯ ಅನುಭವಕ್ಕಾಗಿ ಒಂಟಿತನದ ತಳಮುಟ್ಟಬೇಕು.

ಒಂಟಿತನ, ಏನೋ ಕಳೆದುಕೊಂಡಂಗೆ ಆಗ್ತಿದೆ ಅಂದ್ರೆ ಅಪ್ಪಿಕೊಳ್ಳಿ! ಇದ್ರಿಂದ್ ಆಗೋ ಲಾಭ ಒಂದೆರಡಲ್ಲ

ಹಲವು ಪರಿಕರಗಳ, ಪರಿಸರಗಳ ಜೊತೆಗಿದ್ದರೂ ಸುಮ್ಮನಿರಬೇಕು. ಸುಮ್ಮನಿರುತ್ತಾ ಒಳಗೊಳಗೇ ಒಳಗಿಳಿಯುತ್ತಾ ತಳಮುಟ್ಟಬೇಕು. ಒಮ್ಮೆ ದುಃಖದ, ಒಂಟಿತನದ ತಳಮುಟ್ಟಿ ಮೇಲೆ ಬಂದ ನಂತರದ ಜಗತ್ತು ಕಾಣುವ ರೀತಿಯೇ ಬೇರೆ. ಒಂಟಿತನವೆಂದರೆ ಕಾಲಸತ್ಯವನ್ನು ಒಪ್ಪಿಕೊಳ್ಳುವಂತೆ ಮಾಡುವ, ನಿರ್ಮಮಕಾರದ ಸ್ಥಿತಿಗೊಯ್ದುಬಿಡುವ ಮಾರ್ಗ. ಲೋಕವನ್ನು ಕಾಣಬಲ್ಲ ಒಂದು ಭಿನ್ನನೋಟ. ಅದು ರೋಗವಲ್ಲ, ಶಾಪವಂತೂ ಅಲ್ಲವೇ ಅಲ್ಲ.

ಹೀಗೆಲ್ಲಾ ಮಾಡೋರಾದ್ರೆ ನೀವು ಜೀವಮಾನ ಪೂರ್ತಿ ಒಂಟಿಯಾಗಿಯೇ ಕಳೀಬೇಕಾಗುತ್ತೆ!

click me!