ನೀವು ನೋಡೋ ಸೀರಿಯಲ್ ಕಥೆ ಇಲ್ಲಿದೆ: ಸಿನಿಮಾ ಡಲ್, ಟೀವಿ ಹೌಸ್‌ಫುಲ್‌! ಏನಿದು ಟಿಆರ್‌ಪಿ ಲೆಕ್ಕಾಚಾರ?

By Kannadaprabha NewsFirst Published Sep 9, 2024, 12:49 PM IST
Highlights

ಇತ್ತೀಚೆಗೆ ಸಿನಿಮಾ ನೋಡೋಕೆ ಪ್ರೇಕ್ಷಕರೇ ಬರುತ್ತಿಲ್ಲ ಎನ್ನುವ ಮಾತು ಕೇಳುತ್ತಲೇ ಇರುತ್ತೇವೆ. ಆದರೆ ಟಿವಿಯಲ್ಲಿ ಸೀರಿಯಲ್ ನೋಡೋರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೆಲ್ಲದರ ನಡುವೆ ಏನಿದು ಟಿಆರ್‌ಪಿ ಎನ್ನುವವರ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಇಲ್ಲಿದೆ ನೋಡಿ

- ಸುಧೀಂದ್ರ ಭಾರದ್ವಾಜ್‌

ಸಿನೆಮಾಗಳಿಗೆ ಪ್ರೇಕ್ಷಕರು ಬರುತ್ತಿಲ್ಲ. ನಾಟಕಗಳಿಗೆ ಜನ ಬರುತ್ತಿಲ್ಲ. ಸಭೆ ಸಮಾರಂಭಗಳ ಕಡೆಗೂ ತಲೆ ಹಾಕುತ್ತಿಲ್ಲ. ಮದುವೆ – ಮುಂಜಿಗಳಿಗೆ ಬಂಧು ಬಳಗದವರೇ ಬರುತಿಲ್ಲ. ಹೋಗಲಿ, ನೆಂಟರೇ ಮನೆಗೆ ಬಂದರೂ ಮಾತನಾಡಿಸಲು ಯಾರೂ ಎದ್ದುಬರುತ್ತಿಲ್ಲ! ಇದು ಇಂದು ಎಲ್ಲೆಡೆ ಕೇಳಿಬರುತ್ತಿರುವ ದೂರು. ಮತ್ತು ಹಾಗೆ ಜನ ಹಾಗೆ ಎಲ್ಲಿಗೂ ಹೋಗದಿರುವುದಕ್ಕೆ ಕಾರಣ ಎಂದು ಬೈಸಿಕೊಳ್ಳುತ್ತಿರುವುದು ಟಿವಿ!

Latest Videos

ನಾಟಕ, ಸಿನೆಮಾಗಳ ಜತೆಗೆ ಮನರಂಜನೆಯ ಇನ್ನೊಂದು ಪುಟ್ಟ ಕಿಟಕಿಯಂತೆ ತೆರೆದುಕೊಂಡಿದ್ದು ಟಿವಿ. ಆದರೆ, ನೋಡ ನೋಡುತ್ತಲೇ ಎಲ್ಲಾ ಗೃಹಲಕ್ಷ್ಮಿಯರನ್ನು ತನ್ನತ್ತ ಸೆಳೆದುಕೊಂಡು ಇವತ್ತು ಸಿನೆಮಾಗೆ ಸವಾಲೆಸೆಯುವ ಮಟ್ಟಕ್ಕೆ ಬೆಳೆದುನಿಂತಿದೆ. ಈಗ ಟಿವಿ ಎಂಬುದು ಕೇವಲ ಒಂದು ಮನರಂಜನೆಯ ಪೆಟ್ಟಿಗೆಯಾಗಿರದೇ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮಾಡುವ ಮಾರುಕಟ್ಟೆಯಾಗಿ ಬೆಳೆದಿದೆ. ನ್ಯೂಸ್‌ ಚಾನೆಲ್ಲುಗಳನ್ನು ಪಕ್ಕಕ್ಕಿಟ್ಟರೆ, ಇವತ್ತು ಬಹುದೊಡ್ಡ ವಹಿವಾಟು ನಡೆಯುತ್ತಿರುವುದು ಸ್ಪೋರ್ಟ್ಸ್‌ ಮತ್ತು ಎಂಟರ್‌ಟೇನ್‌ಮೆಂಟ್‌ ಚಾನೆಲ್‌ ಅಥವಾ ಮನರಂಜನಾ ವಾಹಿನಿಗಳಲ್ಲಿ. ಭಾರತದಲ್ಲಿ ಜೀವಕ್ಕಿಂತಲೂ ಅಮೂಲ್ಯವಾಗಿರುವ ಕ್ರಿಕೆಟ್ಟಿನಲ್ಲಿ ಐಪಿಎಲ್‌ ಶುರುವಾದ ಮೇಲೆ, ಸ್ಪೋರ್ಟ್ಸ್‌ ಚಾನೆಲ್ಲುಗಳ ಖದರೇ ಬದಲಾಗಿ ಹೋಗಿದೆ. ಕ್ರಿಕೆಟ್ಟಿನ ಅಬ್ಬರದ ಮಧ್ಯೆ, ಆಗೀಗ ಬರುವ ಬ್ರೇಕಿಂಗ್‌ ನ್ಯೂಸುಗಳು, ವರ್ಷಕ್ಕೊಂದರಂತೆ ಬರುವ ಎಲೆಕ್ಷನ್ನುಗಳು ಜನರನ್ನು ಟಿವಿ ಮುಂದೆ ಕೂರುವಂತೆ ಮಾಡಿವೆ. ಇಂಥ ಹೊತ್ತಿನಲ್ಲಿ ಜನರಲ್‌ ಎಂಟರ್‌ಟೇನ್ಮೆಂಟ್‌ ಚಾನೆಲ್‌ (ಜಿಇಸಿ) ಎಂದು ಕರೆಯಲ್ಪಡುವ ಮನರಂಜನಾ ವಾಹಿನಿಗಳದ್ದು ಬೇರೆಯದೇ ತೆರನಾದ ಹೋರಾಟ!

ತುಕ್ಕು ಹಿಡಿದ ಮೊಳೆಗಳು ಶತ್ರುಗಳಲ್ಲ: ಟೆಟನಸ್ ಕುರಿತು ತಿಳಿದಿರಬೇಕಾದ ವಿಚಾರಗಳು!

ಇವತ್ತು ಕರ್ನಾಟಕದಲ್ಲಿ ಜನಸಾಮಾನ್ಯರ ಅತಿ ನೆಚ್ಚಿನ ಮನರಂಜನೆ ಯಾವುದಾದರೂ ಇದ್ದರೆ, ಅದು ಟಿವಿ ಸೀರಿಯಲ್ಲುಗಳು ಮತ್ತು ರಿಯಾಲಿಟಿ ಶೋಗಳು! ಕರ್ನಾಟಕದಲ್ಲಿ ಚಂದನವೂ ಸೇರಿದಂತೆ ಒಟ್ಟು ಆರು ಜಿಇಸಿಗಳಿವೆ. ಅಷ್ಟೂ ಚಾನೆಲ್ಲುಗಳನ್ನು ಸೇರಿಸಿ ದಿನಕ್ಕೆ ಸುಮಾರು ಐವತ್ತು ಮೆಗಾ ಧಾರಾವಾಹಿಗಳು ಪ್ರಸಾರವಾಗುತ್ತವೆ. ವಾರದ ಏಳೂ ದಿನ ಪ್ರಸಾರವಾಗುವ ಕೆಲವು ಸೀರಿಯಲ್ಲುಗಳನ್ನು ಬಿಟ್ಟರೆ ಬಹುತೇಕ ಎಲ್ಲವೂ ಸೋಮವಾರದಿಂದ ಶುಕ್ರವಾರ ಸಂಜೆ 6 ರಿಂದ ರಾತ್ರಿ 10.30ರ ತನಕ ಪ್ರಸಾರವಾಗುತ್ತವೆ. ವಾರದ ದಿನಗಳಲ್ಲಿ ಸಂಜೆ 6 ರಿಂದ ರಾತ್ರಿ 10.30 ಜಿಇಸಿಗಳ ಪಾಲಿನ ಪ್ರೈಮ್‌ ಟೈಮ್. ಬಹುತೇಕ ಹೆಣ್ಮಕ್ಕಳು ಟಿವಿ ಮುಂದೆ ಕೂರೋ ಹೊತ್ತಿದು! ಈ ಹೊತ್ತಿನಲ್ಲೇ ಅತಿ ಹೆಚ್ಚು ಆದಾಯ ಹುಟ್ಟುವುದು. ಇದಲ್ಲದೇ ನಾನ್‌ ಪ್ರೈಮ್‌ ಟೈಮ್‌ ಎಂದು ಕರೆಸಿಕೊಳ್ಳುವ ಮಧ್ಯಾಹ್ನ ಮತ್ತು ಮಧ್ಯಾಹ್ನದ ನಂತರದ ಹೊತ್ತಿನಲ್ಲಿ ಹೆಚ್ಚಾಗಿ ರಿಪೀಟ್‌ ಅಥವಾ ಡಬ್ಬಿಂಗ್‌ ಧಾರಾವಾಹಿಗಳು ಪ್ರಸಾರವಾಗುತ್ತವೆ.

ಇನ್ನು ವಾರಾಂತ್ಯದ್ದು ಬೇರೆಯದೇ ಆಟ. ಅಲ್ಲಿ ರಿಯಾಲಿಟಿ ಶೋಗಳ ರಂಗು. ಹಾಡು, ಕುಣಿತ, ಕಾಮೆಡಿ, ಟಾಕ್‌ ಶೋ, ಗೇಮ್‌ ಶೋ, ಕಪಲ್‌ ಶೋ.. ಇತ್ಯಾದಿಗಳು ಮನೆ ಮಂದಿಯನ್ನು ಹಿಡಿದು ಕೂರಿಸುತ್ತವೆ. ಸೀರಿಯಲ್ಲುಗಳು ಬಹುತೇಕ ಹೆಣ್ಣುಮಕ್ಕಳನ್ನೇ ಕೇಂದ್ರೀಕರಿಸಿದ್ದರೆ, ರಿಯಾಲಿಟಿ ಶೋಗಳು ಗಂಡಸರು, ಮಕ್ಕಳನ್ನೂ ತಮ್ಮ ತೆಕ್ಕೆಗೆ ಸೆಳೆದುಕೊಳ್ಳುತ್ತವೆ. ಜತೆಗೆ, ಆಗಾಗ ನಡೆಯುವ ವಿಶೇಷ ಈವೆಂಟುಗಳು, ಧಾರಾವಾಹಿಗಳ ಸಾಧನೆ ಸಂಭ್ರಮಿಸುವ ಕುಟುಂಬ, ಅನುಬಂಧ ಅವಾರ್ಡ್‌ ಕಾರ್ಯಕ್ರಮಗಳು ವೀಕ್ಷಕರನ್ನು ಬಹುವಾಗಿ ಸೆಳೆಯುತ್ತವೆ.

ಏನಿದು ಟಿಆರ್‌ಪಿ?

ಎಲ್ಲರೂ ʼಟಿಆರ್‌ಪಿʼ (ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್) ಬಗ್ಗೆ ಮಾತನಾಡುತ್ತಾರೆ. ಆದರೆ, ಹಾಗಂದರೇನು ಎಂದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಸರಳವಾಗಿ ಹೇಳುವುದಾದರೆ ಒಂದು ಟಿವಿ ಕಾರ್ಯಕ್ರಮವನ್ನು ಮೂವತ್ತು ನಿಮಿಷದ ಅವಧಿಯಲ್ಲಿ ಎಷ್ಟು ಮಂದಿ ನೋಡಿದರು (ರೀಚ್) ಮತ್ತು ಎಷ್ಟು ಸಮಯ ನೋಡಿದರು(ಟೈಮ್‌ ಸ್ಪೆಂಟ್) ಎಂಬುದರ ಆಧಾರದ ಮೇಲೆ ರೇಟಿಂಗ್‌ ನಿರ್ಧಾರವಾಗುತ್ತದೆ. ಇದನ್ನು ನಿರ್ವಹಿಸಲೆಂದೇ ಬಾರ್ಕ್‌ (ಬ್ರಾಡ್‌ಕಾಸ್ಟ್‌ ಆಡಿಯೆನ್ಸ್‌ ರೀಸರ್ಚ್‌ ಕೌನ್ಸಿಲ್)‌ ಎಂಬ ಸಂಸ್ಥೆ ಇದೆ. ಇಲ್ಲಿ ಬೇರೆ ಬೇರೆ ಭೌಗೋಳಿಕ ವಿಭಾಗಗಳಿಗೆ, ಸಾಮಾಜಿಕ, ಆರ್ಥಿಕ ಸ್ತರಗಳಿಗೆ ಸೇರಿದ ವೀಕ್ಷಕರನ್ನು ಪರಿಗಣಿಸಲಾಗುತ್ತದೆ. ಇದು ಎಲ್ಲ ಚಾನೆಲ್ಲುಗಳು, ಜಾಹೀರಾತು ಉದ್ಯಮ ಸೇರಿ ರೂಪಿಸಿಕೊಂಡಿರುವ, ಸರಕಾರದ ಮಾನ್ಯ ಮಾಡಿರುವ ವ್ಯವಸ್ಥೆ. ಬಾರ್ಕ್‌ ರೇಟಿಂಗ್‌ ಆಧಾರದ ಮೇಲೆ ಒಂದು ಚಾನೆಲ್ಲಿನ ಜಾಹೀರಾತು ದರ ನಿಗದಿಯಾಗುವುದು. ರೇಟಿಂಗ್‌ ಜಾಸ್ತಿ ಇದ್ದರೆ, ಜಾಹೀರಾತು – ದರವೂ ಹೆಚ್ಚು, ಆದಾಯವೂ ಹೆಚ್ಚು. ಅಲ್ಲಿಗೆ ಇದೊಂದು ಸರಳ ಲೆಕ್ಕಾಚಾರ. ಒಳ್ಳೆಯ ಗುಣಮಟ್ಟದ ಕಾರ್ಯಕ್ರಮ ಅಥವಾ ಸಿನೆಮಾ ಹೆಚ್ಚು ಜನರನ್ನು ತಲುಪುತ್ತವೆ. ಹೆಚ್ಚು ವೀಕ್ಷಕರನ್ನು ತಲುಪುವ ಕಾರ್ಯಕ್ರಮಕ್ಕೆ ಹೆಚ್ಚು ರೇಟಿಂಗ್‌ ಬರುತ್ತದೆ, ಹೆಚ್ಚು ರೇಟಿಂಗ್‌ ಬಂದರೆ ಚಾನೆಲ್ಲುಗಳಿಗೆ ಹೆಚ್ಚು ಆದಾಯ ಬರುತ್ತದೆ. ಈ ಕಾರಣಕ್ಕಾಗಿಯೇ ರೇಟಿಂಗ್‌ ಇಲ್ಲದ ಕಾರ್ಯಕ್ರಮಗಳನ್ನು ನಿಲ್ಲಿಸಲಾಗುತ್ತದೆ ಮತ್ತು ಥಿಯೇಟರಲ್ಲಿ ಓಟದ ಸಿನೆಮಾಗಳನ್ನು ಚಾನೆಲ್ಲುಗಳು ಖರೀದಿಸಲು ಹಿಂದೇಟು ಹಾಕುತ್ತವೆ.

ಕಿರುತೆರೆ ವರ್ಸಸ್ ಹಿರಿತೆರೆ: ಟಿವಿ ಹೌಸ್‌ಫುಲ್ಲು, ಥಿಯೇಟರ್ ಖಾಲಿ ಖಾಲಿ!

ಬಹುಶಃ ನಮ್ಮಲ್ಲಿ ಅತಿಹೆಚ್ಚು ತಪ್ಪುಕಲ್ಪನೆ, ಪೂರ್ವಗ್ರಹ ಇರುವ ವಿಷಯಗಳಲ್ಲಿ ಟಿವಿ ಸೀರಿಯಲ್ಲುಗಳಿಗೆ ಮುಂಚೂಣಿಯ ಸ್ಥಾನ! ಅವುಗಳ ಗುಣಮಟ್ಟದ ಬಗ್ಗೆ ಅಥವಾ ಅವುಗಳನ್ನು ‘ಎಳೆಯುವʼ ಬಗ್ಗೆ ಕೆಲವರು ತಾತ್ಸಾರವಾಗಿ ಮಾತನಾಡುವುದನ್ನು ಕೇಳಬಹುದು. ಆದರೆ, ಸೀರಿಯಲ್ಲುಗಳೆಂಬ ಭಾವುಕ ಲೋಕದೊಳಗಿನ ವಾಸ್ತವವೇ ಬೇರೆ. ಕಾಲಾಂತರದಲ್ಲಿ ಎಲ್ಲ ಗ್ರಾಹಕರು ಜಾಗೃತರಾಗಿರುವಂತೆ ಸೀರಿಯಲ್ಲುಗಳ ವೀಕ್ಷಕರೂ ಈಗ ಹೆಚ್ಚು ಜಾಗೃತರಾಗಿದ್ದಾರೆ. ಬೇಕಾಬಿಟ್ಟಿ ಕತೆ ಎಳೆದಾಡಿದರೆ, ವಾಹಿನಿಗಳ, ನಿರ್ಮಾಪಕರ ಮೂಗಿನ ನೇರಕ್ಕೆ ಕತೆ ಮಾಡಿದರೆ ಮುಲಾಜಿಲ್ಲದೇ ನಿರಾಕರಿಸುತ್ತಾರೆ. ಹೀಗಾಗಿ ವೀಕ್ಷಕರ ಜತೆ ನಿರಂತರ ಸಂಪರ್ಕವನ್ನು ವಾಹಿನಿಗಳು ಹೊಂದಿರುತ್ತವೆ. ಪ್ರತಿಯೊಂದು ವಾಹಿನಿಯೂ ತನ್ನದೇ ಸರ್ವೇ, ಸಂಶೋಧನೆಗಳನ್ನು ನಿರಂತರವಾಗಿ ನಡೆಸುತ್ತಲೇ ಇರುತ್ತವೆ. ಕಾಲಕಾಲಕ್ಕೆ ವೀಕ್ಷಕರ ಆದ್ಯತೆ, ಜೀವನಶೈಲಿ, ಬೇಕುಬೇಡಗಳಲ್ಲಿ ಆಗುವ ಬದಲಾವಣೆಗಳ ಕುರಿತು ತಾಜಾ ಮಾಹಿತಿ ಕಲೆಹಾಕುವ ಕೆಲಸವನ್ನು ವಾಹಿನಿಯ ರೀಸರ್ಚ್ ಮತ್ತು ಅನಾಲಿಸಿಸ್‌ ಟೀಮು ಮಾಡುತ್ತಲೇ ಇರುತ್ತದೆ. ಈ ತಂಡ ನೀಡುವ ಮಾಹಿತಿ ಆಧರಿಸಿ ಕತೆ, ಚಿತ್ರಕತೆಗಳನ್ನು ರೂಪಿಸಲಾಗುತ್ತದೆ. ವಾಹಿನಿಗಳ ತಂಡಗಳು ಇಡೀ ರಾಜ್ಯ ಸುತ್ತಿ ವೀಕ್ಷಕರ ಮನೆಗೆ ತೆರಳಿ ಅವರ ಇಷ್ಟ ಅನಿಷ್ಟಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತವೆ. ಈ ಕಾರಣದಿಂದಾಗಿಯೇ ಇವತ್ತಿಗೂ ಬಹುದೊಡ್ಡ ಸಂಖ್ಯೆಯ ವೀಕ್ಷಕರು, ಅದರಲ್ಲೂ ಮಹಿಳೆಯರು ಟಿವಿ ಸೀರಿಯಲ್ಲುಗಳನ್ನು ಅಷ್ಟೊಂದು ಪ್ರೀತಿಸುವುದು! ತಮ್ಮ ಬದುಕಿನ ಕತೆಗಳೇ, ತಮ್ಮ ಮನದ ಭಾವಗಳೇ ತೆರೆಯ ಮೇಲೆ ಬಂದಾಗ ಅವರಿಗೆ ಅದೇನೋ ನೆಮ್ಮದಿ. ಬಹುತೇಕ ವೀಕ್ಷಕರು ಸೀರಿಯಲ್ಲಿನ ಕಂತುಗಳನ್ನು ಕೇವಲ ಕತೆಯಾಗಿ ನೋಡದೇ ತಮ್ಮದೇ ಪ್ರಪಂಚದಲ್ಲಿ ಜೀವಂತವಿರುವ ಒಂದು ಬದುಕು ಎಂದೇ ಭಾವಿಸುತ್ತಾರೆ. ಅಲ್ಲಿನ ಪಾತ್ರಗಳಲ್ಲಿ ತಮ್ಮನ್ನು ಕಾಣುತ್ತಾರೆ. ಟಿವಿ ಸೀರಿಯಲ್ಲುಗಳ ಯಶಸ್ಸು ಅಡಗಿರವುದೇ ಇಲ್ಲಿ.

ಇವತ್ತು ಟಿವಿ ಸೀರಿಯಲ್ಲುಗಳ ಬಹಳಷ್ಟು ಪಾತ್ರಗಳು ಸಿನೆಮಾ ತಾರೆಗಳಿಗಿಂತ ವೀಕ್ಷಕರಿಗೆ ಹತ್ತಿರ. ಪುಟ್ಟಕ್ಕನ ಮಕ್ಕಳು ಸೀರಿಯಲ್ಲಿನ ಪುಟ್ಟಕ್ಕ, ಕಂಠಿ, ಸಹನಾ, ಶ್ರೀರಸ್ತು ಶುಭಮಸ್ತುವಿನ ತುಳಸಿ, ಮಾಧವ, ಪೂರ್ಣಿ, ಅಮೃತಧಾರೆಯ ಗೌತಮ್‌, ಭೂಮಿಕಾ, ಸೀತಾರಾಮದ ರಾಮ, ಸೀತಾ, ಸಿಹಿ, ಲಕ್ಷ್ಮಿ ನಿವಾಸದ ಜಯಂತ್‌, ಜಾನು, ಸಿದ್ದು, ಭಾವನಾ, ಭಾಗ್ಯಲಕ್ಷ್ಮಿಯ ಭಾಗ್ಯ.. ಇವರೆಲ್ಲಾ ಟಿವಿ ಪರದೆಯ ಚೌಕಟ್ಟನ್ನೂ ಮೀರಿ ಜನಮಾನಸವನ್ನು ತಲುಪಿದ್ದಾರೆ. ಈ ಪ್ರೀತಿ, ಅಕ್ಕರೆ, ಜನಪ್ರಿಯತೆ ಮನಗಂಡೇ ಉಮಾಶ್ರೀ, ಸುಧಾರಾಣಿ ಅವರಂಥ ಮೇರು ಕಲಾವಿದರು ತಮ್ಮ ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಸೀರಿಯಲ್ಲುಗಳಗಎ ಸಮಯ ನೀಡುತ್ತಿರುವುದು!

1970, 80, 90ರ ದಶಕದಲ್ಲಿ ಸಿನೆಮಾ ಥಿಯೇಟರಿನೆಡೆಗೆ ಕುಟುಂಬ ಸಮೇತ ಬರುತ್ತಿದ್ದ ವೀಕ್ಷಕರೆಲ್ಲ ಇವತ್ತು ಸೀರಿಯಲ್ಲುಗಳ ಮುಂದೆ ಕೂತಿದ್ದಾರೆ. ಕಾರಣ, ಇವತ್ತಿನ ಬಹುತೇಕ ಸಿನೆಮಾಗಳಲ್ಲಿ ಕೌಟುಂಬಿಕ ಅಂಶಗಳು ಮಾಯವಾಗಿರುವುದು. ಅಣ್ಣಾವ್ರು, ವಿಷ್ಣುವರ್ಧನ್‌, ಅನಂತನಾಗ್‌ ಮುಂತಾದವರ ಸಿನೆಮಾಗಳಲ್ಲಿ ಅವರಿಗೆ ಸಿಗುತ್ತಿದ್ದ ರಸಾಸ್ವಾದ ಇವತ್ತು ಸಿನೆಮಾಗಳಲ್ಲಿ ಕಾಣೆಯಾಗಿದೆ. ಅದೇ ವಿಷಯಗಳನ್ನು ಧಾರಾವಾಹಿಗಳು, ಅಲ್ಲಿನ ಪಾತ್ರಗಳು ಅವರಿಗೆ ನೀಡುತ್ತಿವೆ. ಅಂದಿನ ಸಿನೆಮಾಗಳ ನಾಯಕರು ಪ್ರತಿಪಾದಿಸುತ್ತಿದ್ದ ಆದರ್ಶ, ಪ್ರತಿನಿಧಿಸುತ್ತಿದ್ದ ಮೌಲ್ಯಗಳನ್ನು ಇವತ್ತಿನ ಸೀರಿಯಲ್ಲಿನ ನಾಯಕಿಯರಲ್ಲಿ ವೀಕ್ಷಕರು ಕಾಣುತ್ತಿದ್ದಾರೆ, ಬದುಕಿಗೆ ಹತ್ತಿರವಾದ ಸರಳ ಸೂಕ್ಷ್ಮ ವಿಷಯಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಇವತ್ತಿನ ಯಶಸ್ವಿ ಧಾರಾವಾಹಿಗಳು ಮಾಡುತ್ತಿವೆ ಎಂಬುದು ಬಹುತೇಕ ವೀಕ್ಷಕರ ಅನಿಸಿಕೆ. ಹೀಗಾಗಿ ಕೇವಲ ಮಹಿಳಾ ವೀಕ್ಷಕರು ತಾವಷ್ಟೇ ಅಲ್ಲದೇ ಮನೆಮಂದಿಯ ಜತೆ ಕೂತು ಧಾರಾವಾಹಿಗಳನ್ನು ಎಂಜಾಯ್‌ ಮಾಡುತ್ತಾರೆ.

ಸೀರಿಯಲ್ಲುಗಳ ನಿರ್ಮಾಣದ ವಿಷಯಕ್ಕೆ ಬಂದರೆ ಇದು ಕೆಲವು ದಿನ ಅಥವಾ ತಿಂಗಳುಗಳ ಆಟವಲ್ಲ. ಬಹುತೇಕ ಧಾರಾವಾಹಿಗಳು ಕನಿಷ್ಟ ಎರಡರಿಂದ ಮೂರು ವರ್ಷ ಅಂದರೆ ಸುಮಾರು ಐನೂರರಿಂದ ಎಂಟು ನೂರು ಎಪಿಸೋಡುಗಳಷ್ಟು ಪ್ರಸಾರವಾಗುತ್ತವೆ. ಹೀಗಾಗಿ ಒಮ್ಮೆ ಶುರುವಾದರೆ ಸುಮಾರು ಮೂರು ವರ್ಷಗಳ ನಿರಂತರ ತಪಸ್ಸು ಇದು. ಹತ್ತಾರು ಕಲಾವಿದರು, ತಂತ್ರಜ್ಞರನ್ನು ಒಂದೆಡೆ ಸೇರಿಸಿ ನಿತ್ಯ ಶೂಟಿಂಗ್‌ ನಡೆಸುವ ಹೋರಾಟ ಒಂದು ಕಡೆಯಾದರೆ, ಪ್ರತಿ ದಿನದ ಕತೆ, ಚಿತ್ರಕತೆ ಸಂಭಾಷಣೆಗಳನ್ನು ಹೊಸೆಯುವ ಕೆಲಸದಲ್ಲಿ ಇನ್ನೊಂದು ಕ್ರಿಯೇಟಿವ್‌ ತಂಡ ತಲ್ಲೀನವಾಗಿರುತ್ತದೆ. ನಿರ್ಮಾಪಕ-ನಿರ್ದೇಶಕರ ತಂಡದ ಜತೆಗೆ ಆಯಾ ಚಾನೆಲ್ಲುಗಳ ಫಿಕ್ಷನ್‌ ವಿಭಾಗದ ತಂಡಗಳು ಸೇರಿಕೊಂಡು ಈ ನಿರಂತರ ಸೃಷ್ಟಿಕ್ರಿಯೆಯನ್ನು ಜಾರಿಯಲ್ಲಿಡುತ್ತವೆ. ಇದೊಂಥರಾ ಗಿಡವೊಂದನ್ನು ನೆಟ್ಟು, ನಿತ್ಯ ನೀರುಣಿಸಿ, ಪೋಷಿಸಿ, ಅದರಲ್ಲಿ ಮೊಗ್ಗಾಗಿ, ಹೂವರಳಿ, ಅವುಗಳನ್ನು ಕಿತ್ತು, ಮಾಲೆ ಕಟ್ಟಿ, ದೇವರಿಗೆ ಅರ್ಪಿಸುವಂಥ ಸದ್ದಿಲ್ಲದೇ ನಡೆಯುವ ಪ್ರಕ್ರಿಯೆ. ಇಲ್ಲಿ ಯಾವುದರಲ್ಲಿ ಚೂರೇ ಚೂರು ವ್ಯತ್ಯಾಸವಾದರೂ ಇಡೀ ಹೂಮಾಲೆ ಹಾಳಾಗುತ್ತದೆ! ಹಾಗಾಗದಂತೆ ಕಟ್ಟೆಚ್ಚರದಿಂದ ಹಗಲಿರುಳು ಕೆಲಸ ಮಾಡುತ್ತವೆ ಈ ತಂಡಗಳು.

ಕರ್ನಾಟಕದಲ್ಲಿ ಇವತ್ತು ಎಲ್ಲ ವಾಹಿನಿಗಳನ್ನೂ ಸೇರಿಸಿ ಪ್ರತಿನಿತ್ಯ ಐವತ್ತಕ್ಕೂ ಹೆಚ್ಚು ಧಾರಾವಾಹಿಗಳ ಶೂಟಿಂಗ್‌ ನಡೆಯುತ್ತಲೇ ಇರುತ್ತದೆ. ಒಂದೊಂದು ಧಾರಾವಾಹಿಯಲ್ಲಿ ಏನಿಲ್ಲವೆಂದರೂ ಸುಮಾರು ಅರವತ್ತು ಮಂದಿ ಕೆಲಸಮಾಡುತ್ತಾರೆ. ಚಾನೆಲ್ಲುಗಳಲ್ಲಿ ಕೆಲಸ ಮಾಡುವವರು ಪ್ರತ್ಯೇಕ. ಕರ್ನಾಟಕದಲ್ಲಿ ಮನರಂಜನಾ ಚಾನೆಲ್ಲುಗಳ ಒಟ್ಟಾರೆ ವಹಿವಾಟು ಈಗ ವಾರ್ಷಿಕ ಒಂದು ಸಾವಿರ ಕೋಟಿ ರೂ.ಗಳ ಸಮೀಪವಿದೆ. ಇದರಲ್ಲಿ ಶೇ.6೦ರಷ್ಟು ಪಾಲು ಸೀರಿಯಲ್ಲುಗಳದ್ದು! ಹಾಗಯೇ ರಾಜ್ಯದಲ್ಲಿ ಮನರಂಜನಾ ವಾಹಿನಿಗಳು ಒಟ್ಟಾಗಿ ಪ್ರತಿನಿತ್ಯ ಸುಮಾರು ಮೂರೂವರೆ ಕೋಟಿ ವೀಕ್ಷಕರನ್ನು ತಲುಪುತ್ತಿವೆ! ಈ ಅಗಾಧತೆಯನ್ನು ಮನಗಂಡೇ ಜಾಹೀರಾತುದಾರರು ಟಿವಿ ಶೋಗಳ ಮೇಲೆ, ಅದರಲ್ಲೂ ಸೀರಿಯಲ್ಲುಗಳಿಗೆ ಹೆಚ್ಚಿನ ಆದ್ಯತೆ ನೀಡುವುದು. ಬಹುತೇಕ ಗೃಹಬಳಕೆಯ ಗ್ರಾಹಕ ವಸ್ತುಗಳ ಗುರಿ 35 ವರ್ಷ ಮೇಲ್ಪಟ್ಟ ಮಹಿಳೆಯರನ್ನು ತಲುಪುವುದು! ಏಕೆಂದರೆ, ನಿತ್ಯೋಪಯೋಗಿ ವಸ್ತುಗಳಾದ ಸೋಪು, ಶಾಂಪೂ, ಪೇಸ್ಟು, ಬ್ರಶ್ಶು, ಅಡುಗೆ ಎಣ್ಣೆ.. ಇತ್ಯಾದಿಗಳನ್ನು ಯಾವುದನ್ನು, ಎಷ್ಟು ತರಬೇಕು ಎಂಬುದನ್ನು ನಿರ್ಧರಿಸುವುದು ಅವರೇ ತಾನೇ?! ಈ ಮಹಿಳೆಯರೇ ಸೀರಿಯಲ್ಲುಗಳ ಕಟ್ಟಾ ಅಭಿಮಾನಿಯಾಗಿರುವುದರಿಂದ ಚಾನೆಲ್ಲುಗಳು ಮತ್ತು ಜಾಹೀರಾತುದಾರರು ಅವರೆಡೆಗೆ ದೃಷ್ಟಿನೆಟ್ಟಿರುವುದು.

ಇನ್ನು ಧಾರಾವಾಹಿಗಳಲ್ಲಿ ಜಾಹೀರಾತುಗಳ ಹಾವಳಿ ಹೆಚ್ಚು ಎಂಬ ಗೊಣಗಾಟ ಆಗೀಗ ಕೇಳಿಬರುವುದುಂಟು. ಆದರೆ, 30 ನಿಮಿಷದ ಎಪಿಸೋಡಿನಲ್ಲಿ 22 ನಿಮಿಷ ಕಂಟೆಂಟು ಇರಲೇಬೇಕೆಂಬ ನಿಯಮವಿದೆ. ಉಳಿದಂತೆ 7 ನಿಮಿಷದ ಜಾಹೀರಾತು ಮತ್ತು ಒಂದು ನಿಮಿಷದ ಪ್ರೋಮೋ ಪ್ರಸಾರ ಮಾಡಲು ಅನುಮತಿ ಇದೆ.

ಇಷ್ಟೆಲ್ಲ ಆರ್ಥಿಕ, ಸಾಮಾಜಿಕ ಪ್ರಾಮುಖ್ಯತೆ ಪಡೆದಿರುವ ಸೀರಿಯಲ್‌ ಜಗತ್ತು ಕೂಡಾ ಸವಾಲುಗಳಿಂದ ಮುಕ್ತವಾಗಿಲ್ಲ. ಸ್ಮಾರ್ಟ್‌ ಫೋನುಗಳು, ಅದರಲ್ಲೂ ರೀಲ್ಸುಗಳು ಸೀರಿಯಲ್ಲುಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿವೆ. ಬಹುತೇಕ ಗೃಹಿಣಿಯರ ಕೈಗೂ ಸ್ಮಾರ್ಟ್‌ ಫೋನ್‌ ಬಂದಿರುವುದರಿಂದ ಮತ್ತು ಅವರೆಲ್ಲರೂ ಈ ರೀಲ್ಸ್‌ ನೋಡುವುದರೆಡೆಗೆ ಆಕರ್ಷಿತರಾಗುತ್ತಿರುವುದು ಸೀರಿಯಲ್ ವೀಕ್ಷಣೆಗೆ ತೊಡಕಾಗುತ್ತಿದೆ. 30 ಸೆಕೆಂಡು, ಒಂದು ನಿಮಿಷದ ರೀಲುಗಳು ವೀಕ್ಷಕರ ಸಹನೆಯನ್ನು ಇನ್ನಿಲ್ಲದಂತೆ ಕಡಿಮೆ ಮಾಡಿಬಿಟ್ಟಿವೆ. ಹೀಗಾಗಿ ಅರ್ಧ ತಾಸಿನ ಎಪಿಸೋಡುಗಳನ್ನು ನೋಡುವ ತಾಳ್ಮೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಹಾಗೆಯೇ, ಟಿವಿಗಿಂತ ಮೊದಲು ಎಪಿಸೋಡುಗಳು ಓಟಿಟಿಯಲ್ಲಿ ಅಪ್ಲೋಡ್‌ ಆಗುವುದರಿಂದ ಮತ್ತು ಅವುಗಳನ್ನು ಸ್ಮಾರ್ಟ್‌ ಫೋನುಗಳಲ್ಲಿ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನೋಡುವ ಅವಕಾಶ ಇರುವುದರಿಂದ, ನಿಗದಿತ ಸಮಯಕ್ಕೇ ಟಿವಿಗೆ ಅಂಟಿಕೊಳ್ಳಬೇಕಾದ ಅನಿವಾರ್ಯತೆ ಕಡಿಮೆಯಾಗಿದೆ. ಜತೆಗೆ ಏರುತ್ತಿರುವ ನಿರ್ಮಾಣ ವೆಚ್ಚ, ದೊಡ್ಡ ಸಂಖ್ಯೆಯ ತಂಡವನ್ನು ನಿರಂತರವಾಗಿ ನಿಭಾಯಿಸುವ ಅನಿವಾರ್ಯತೆ ನಿತ್ಯವೂ ಹೊಸ ಸವಾಲುಗಳನ್ನು ತಂದೊಡ್ಡುತ್ತಿವೆ. ಆದರೆ, ಇದನ್ನೆಲ್ಲ ಮೀರಿ ಸೀರಿಯಲ್‌ ಉದ್ಯಮವಾಗಿ ಬೆಳೆಯುತ್ತಿದೆ. ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಸಿನೆಮಾವನ್ನು ಮೀರಿಸುವ ಮೇಕಿಂಗ್‌ ನೋಡಲು ಸಿಗುತ್ತಿದೆ. ಸಿನೆಮಾ ವಿಷಯ ಬಂದಾಗ ಬೇರೆ ಭಾಷೆಯ ಚಿತ್ರರಂಗವನ್ನು ನಾವು ಉದಾಹರಿಸುವಂತೆ, ಸೀರಿಯಲ್‌ ವಿಷಯ ಬಂದಾಗ ಬೇರೆ ರಾಜ್ಯದವರು ಕನ್ನಡದ ಉದಾಹರಣೆ ಕೊಡುವಷ್ಟರ ಮಟ್ಟಿಗೆ ನಮ್ಮ ಸೀರಿಯಲ್ಲುಗಳು ಬೆಳೆದುನಿಂತಿವೆ!
 

click me!