ಶಿವಮೊಗ್ಗ ಜಿಲ್ಲೆಯನ್ನು ಇಬ್ಭಾಗವಾಗಿಸಿ ಸಾಗರ ಜಿಲ್ಲೆಯನ್ನಾಗಿಸುವ ಪ್ರಸ್ತಾಪದ ಬಗ್ಗೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅಸಮಾಧಾನ ಹೊರಹಾಕಿದರು.
ಸಾಗರ [ಅ.21]: ರೈಲ್ವೆ ಕೋಚಿಂಗ್ ಟರ್ಮಿನಲ್ ಎಲ್ಲಿ ನಿರ್ಮಾಣ ಮಾಡಬೇಕು ಎನ್ನುವುದರ ಕುರಿತು ಇನ್ನೂ ಅಂತಿಮ ನಿರ್ಣಯ ಕೈಗೊಂಡಿಲ್ಲ. ತಾಳಗುಪ್ಪ ಮತ್ತು ಕೋಟೆಗಂಗೂರು ಎರಡು ಕಡೆ ಸ್ಥಳ ಗುರುತಿಸಲಾಗಿದ್ದು, ಸ್ಥಳ ಇನ್ನೂ ಅಂತಿಮಗೊಂಡಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಾಲೂಕಿನ ಹೆಗ್ಗೋಡಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರೈಲ್ವೆ ಕೋಚಿಂಗ್ ಸ್ಥಾಪನೆ ವಿಷಯವನ್ನು ಇರಿಸಿಕೊಂಡು ಕೆಲವು ಹಿರಿಯರು ಶಿವಮೊಗ್ಗ ಜಿಲ್ಲೆಯನ್ನು ಇಬ್ಭಾಗ ಮಾಡುವ ಪ್ರಸ್ತಾಪ ಮಾಡಿರುವುದು ತೀರ ಬೇಸರದ ಸಂಗತಿ. ಶಿವಮೊಗ್ಗ ಜಿಲ್ಲೆ ಸಾಂಸ್ಕೃತಿಕ, ಸಾಹಿತ್ಯ, ಪ್ರಾಕೃತಿಕ, ಐತಿಹಾಸಿಕವಾಗಿ ತನ್ನದೆ ಮಹತ್ವ ಹೊಂದಿದೆ. ಅನೇಕ ಹಿರಿಯರು ಜಿಲ್ಲೆಯನ್ನು ಸದೃಢವಾಗಿ ಕಟ್ಟುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ. ರೈಲ್ವೆ ಟರ್ಮಿನಲ್ ಎರಡನೇ ವಿಷಯ. ಅದನ್ನು ಇರಿಸಿಕೊಂಡು ಶಿವಮೊಗ್ಗ ಜಿಲ್ಲೆ ವಿಭಾಗಿಸಿ, ಸಾಗರವನ್ನು ಜಿಲ್ಲೆಯಾಗಿಸುವ ಪ್ರಸ್ತಾಪ ಸರಿಯಲ್ಲ ಎಂದರು.
ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಕೋಚಿಂಗ್ ಟರ್ಮಿನಲ್ ಆಗಬೇಕು ಎಂದು ಕೇಂದ್ರದಲ್ಲಿ ಪ್ರಸ್ತಾಪಿಸಿ 60 ಕೋಟಿ ರು. ಅನುದಾನ ತೆಗೆದಿರಿಸಿದ್ದೇನೆ. ರೈಲ್ವೆ ಇಲಾಖೆ ಅಧಿಕಾರಿಗಳು ಎರಡೂ ಕಡೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಕೋಚಿಂಗ್ ಟರ್ಮಿನಲ್ ನಿರ್ಮಾಣ ಮಾಡಲು 28 ರಿಂದ 32 ಎಕರೆ ಜಮೀನು ಬೇಕಾಗುತ್ತದೆ. ಸದ್ಯ ಕೋಟೆಗಂಗೂರಿನಲ್ಲಿ 17.2 ಎಕರೆ ಜಮೀನು ಇದ್ದರೆ, ತಾಳಗುಪ್ಪದಲ್ಲಿ 19.4 ಎಕರೆ ಜಮೀನು ಇದೆ. ಎಲ್ಲೆ ಟರ್ಮಿನಲ್ ನಿರ್ಮಾಣ ಮಾಡಬೇಕಾದರೂ ಕನಿಷ್ಠ 10 ಎಕರೆ ಜಮೀನಿನ ಅಗತ್ಯವಿದೆ. ಅಧಿಕಾರಿಗಳು ಎರಡೂ ಕಡೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಲ್ಲಿ ಕೋಚಿಂಗ್ ಟರ್ಮಿನಲ್ ನಿರ್ಮಾಣ ಮಾಡಬೇಕು ಎನ್ನುವುದರ ಬಗ್ಗೆ ಅಂತಿಮ ನಿರ್ಣಯಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ರೈಲ್ವೆ ಹೋರಾಟ ಸಮಿತಿ ಟರ್ಮಿನಲ್ ವಿಷಯ ಮುಂದಿಟ್ಟುಕೊಂಡು ಜಿಲ್ಲೆಯನ್ನು ವಿಭಜಿಸುವ ಪ್ರಸ್ತಾಪ ಮಾಡಿದೆ. ರೈಲ್ವೆ ಹೋರಾಟ ಸಮಿತಿ ಮತ್ತು ಅದರ ಹೋರಾಟದ ಬಗ್ಗೆ ನನಗೆ ಅಪಾರ ಗೌರವವಿದೆ. ಕನಿಷ್ಟಕೋಚಿಂಗ್ ಟರ್ಮಿನಲ್ ವಿಷಯಕ್ಕೆ ಸಂಬಂಧಪಟ್ಟಂತೆ ನನ್ನ ಗಮನ ಸೆಳೆಯಬಹುದಿತ್ತು. ಒಂದು ಮನವಿಯನ್ನೂ ನೀಡದೆ, ಸೌಜನ್ಯಕ್ಕೂ ಚರ್ಚೆ ನಡೆಸದೆ ಕೋಟೆಗಂಗೂರಿಗೆ ಕೋಚಿಂಗ್ ಟರ್ಮಿನಲ್ ಸ್ಥಳಾಂತರವಾಗಲು ರಾಜಕೀಯ ಹಿತಾಸಕ್ತಿ ಕಾರಣ ಎಂದು ಹೇಳಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ತಾಳಗುಪ್ಪದಲ್ಲಿ ರೈಲ್ವೆ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗಲು ನನ್ನದೇನು ಅಭ್ಯಂತರವಿಲ್ಲ. ಆದರೆ ರೈಲ್ವೆ ಅಧಿಕಾರಿಗಳು, ತಾಂತ್ರಿಕವಾಗಿ ಇದನ್ನು ಅನುಮೋದಿಸಬೇಕಾಗಿದೆ. ರೈಲ್ವೆ ಟರ್ಮಿನಲ್‌ನಂತಹ ದೊಡ್ಡ ಯೋಜನೆಯೊಂದು ಶಿವಮೊಗ್ಗ ಜಿಲ್ಲೆಗೆ ಬಂದಿದ್ದಕ್ಕೆ ಮೊದಲು ಸ್ವಾಗತ ಮಾಡೋಣ. ನಂತರ ತಾಂತ್ರಿಕ ಪರಿಣಿತರ ಸಲಹೆಯಂತೆ ಅದು ಎಲ್ಲಿ ನಿರ್ಮಾಣವಾಗಬೇಕೋ ಅಲ್ಲಿಯೆ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಬೈಂದೂರು-ಆನಂದಪುರಂ-ಶಿಕಾರಿಪುರ-ರಾಣಿಬೆನ್ನೂರು ಸಂಪರ್ಕಕ್ಕಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸಣ್ಣಪುಟ್ಟವಿಷಯಕ್ಕೆ ಜಿಲ್ಲೆ ವಿಭಜನೆ ಪ್ರಸ್ತಾಪ ಮಾಡಿ ಸಾಗರ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸುವುದು ಬೇಡ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಡಕೆ ಬಗ್ಗೆ ಕೇಂದ್ರದ ಗಮನ ಸೆಳೆಯುತ್ತೇವೆ: ಕೇಂದ್ರ ಸರ್ಕಾರವು 16 ದೇಶಗಳ ಜೊತೆಗೆ ಅಡಕೆ ಆಮದು ಮಾಡಿಕೊಳ್ಳುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದಿಂದ ಅಡಕೆ ಬೆಳೆಗಾರರ ಮೇಲೆ ಆಗುವ ಸಮಸ್ಯೆ ಕುರಿತು ಕೇಂದ್ರದ ಗಮನ ಸೆಳೆಯಲಾಗುತ್ತದೆ. ಮಲೆನಾಡು ಭಾಗದ ಸಂಸದರ ಜೊತೆ ಚರ್ಚೆ ಮಾಡಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಡಕೆ ಬೆಳೆಗಾರರ ಹಿತವನ್ನು ಕಾಪಾಡುವ ಕೆಲಸ ಮಾಡಲಾಗುತ್ತದೆ. ಅಡಕೆ ಬೆಳೆಗಾರರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದರು.
ಶಿಕಾರಿಪುರ ಜಿಲ್ಲೆ ಇಲ್ಲ: ಶಿಕಾರಿಪುರವನ್ನು ಜಿಲ್ಲೆ ಮಾಡಲಾಗುತ್ತದೆ ಎನ್ನುವುದು ಕೇವಲ ಊಹಾಪೋಹದ ಚರ್ಚೆ. ಅಂತಹ ಯಾವ ಪ್ರಸ್ತಾಪವೂ ಇಲ್ಲ. ಜಿಲ್ಲೆಯ ಜನರು ಊಹಾಪೋಹದ ಚರ್ಚೆಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರದ ಬಳಿ ಇಂತಹ ಯಾವುದೆ ವಿಷಯ ಚರ್ಚೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಎಚ್.ಹಾಲಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಪ್ರಮುಖರಾದ ಎಸ್.ದತ್ತಾತ್ರಿ, ಪ್ರಸನ್ನ ಕೆರೆಕೈ, ಗುರುಮೂರ್ತಿ ಶಿಕಾರಿಪುರ, ದೇವೇಂದ್ರಪ್ಪ ಯಲಕುಂದ್ಲಿ, ಯು.ಎಚ್.ರಾಮಪ್ಪ, ಟಿ.ಡಿ.ಮೇಘರಾಜ್ ಇನ್ನಿತರರು ಹಾಜರಿದ್ದರು.