ಬೆಂಗಳೂರು(ಏ.15): ಮಂಗನ ಕಾಯಿಲೆಗೆ ಅಗತ್ಯವಾಗಿರುವ ವೈದ್ಯಕೀಯ ಸೌಕರ್ಯಗಳನ್ನು ಶಿವಮೊಗ್ಗದ ಮೆಗ್ಗಾನ್ ಹಾಗೂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ರೋಗ ಹರಡದಂತೆ ಹೆಚ್ಚಿನ ಗಮನ ನೀಡಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಮಲೆನಾಡಿನ ಭಾಗಗಳಲ್ಲಿ ಉಲ್ಬಣಗೊಂಡಿರುವ ಮಂಗನ ಕಾಯಿಲೆ ಬಗ್ಗೆ ವಿಧಾನಸೌಧದಲ್ಲಿಂದು ಈಶ್ವರಪ್ಪ ನೇತೃತ್ವದ ಇಂದು ಉನ್ನತ ಮಟ್ಟದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರದ ನಿರ್ಲಕ್ಷ್ಯ: ತನ್ನದೇ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಹಾಲಪ್ಪ!
ಶಿವಮೊಗ್ಗ, ಸಾಗರ, ಸೊರಬ, ತೀರ್ಥಹಳ್ಳಿ ಭಾಗದಲ್ಲಿ ಮಂಗನ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ್ದೇನೆ. ಈ ಭಾಗದ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಮುಂದಿನ ಸೋಮವಾರ ಬೆಂಗಳೂರಿನಿಂದ ಉನ್ನತ ಮಟ್ಟದ ವೈದ್ಯಾಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ನಡೆಸಲಿದ್ದಾರೆ. ವರದಿ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಶಾಸಕ ಹರತಾಳು ಹಾಲಪ್ಪ, ವಿಧಾನಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಮಂಗನ ಕಾಯಿಲೆ ಬಗ್ಗೆ ಪ್ರಸ್ತಾಪಿಸಿ ಕಳೆದ ವರ್ಷ 23 ಮಂದಿ ಹಾಗೂ ಈಗ 4 ಮಂದಿ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಮಂಗನ ಕಾಯಿಲೆಯ ತೀವ್ರತೆಯನ್ನು ಅರ್ಥಮಾಡಿಕೊಂಡಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಕಳೆದ ವಾರವಷ್ಟೇ ತೀರ್ಥಹಳ್ಳಿಯಲ್ಲಿ ಮಂಗನಕಾಯಿಲೆಗೆ ಸುಬ್ರಮಣ್ಯ ಎನ್ನುವವರು ಮೃತಪಟ್ಟಿದ್ದರು. 2020ರಲ್ಲೇ ಕೆಎಫ್‌ಡಿ ರೋಗಕ್ಕೆ 5 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೆಲದಿನಗಳ ಹಿಂದಷ್ಟೇ ಶಿವಮೊಗ್ಗ ಜಿಲ್ಲಾಡಳಿತ ಮಂಗನ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿರುವ 31 ಹಳ್ಳಿಯ ಕಾಡುಗಳಿಗೆ ಪ್ರವೇಶಿಸದಂತೆ ಜನರಿಗೆ ನಿರ್ಬಂಧ ವಿಧಿಸಿದೆ.
ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮತ್ತೊಂದು ಬಲಿ
ಒಟ್ಟಿನಲ್ಲಿ ಜಗತ್ತಿನಾದ್ಯಂತ ಕೊರೋನಾ ವೈರಸ್ ರುದ್ರನರ್ತನ ಮಾಡುತ್ತಿದ್ದರೆ,
ಕ್ಯಾಸನೂರು ಫಾರೆಸ್ಟ್ ಡಿಸೀಸ್(KFD) ಮಲೆನಾಡಿನ ಭಾಗದ ಜನರ ನಿದ್ದೆಗೆಡಿಸಿದೆ. ಈ ಸಭೆಯ ಬಳಿಕವಾದರೂ ಮಲೆನಾಡಿನ ಸಂಕಷ್ಟಕ್ಕೆ ಸರ್ಕಾರ ಮುಂದಾಗುತ್ತಾ? ಇಲ್ಲವೇ ಇದು ಹತ್ತರ ಜೊತೆಗೆ ಹನ್ನೊಂದನೇ ಸಭೆ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.