ಇಂಡಿಯಾ ಲಾಕ್‌ಡೌನ್‌ನಿಂದಾಗಿ ಮುಖ್ಯಮಂತ್ರಿ ತವರು ಕ್ಷೇತ್ರದ 98 ವರ್ಷದ ವೃದ್ದೆಯ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಮಾನವೀಯತೆ ಇಲ್ಲದ ನೌಕರಶಾಹಿ ವರ್ತನೆ ಒಬ್ಬ ವ್ಯಕ್ತಿಯ ಊಟವನ್ನೂ ಕಸಿದುಕೊಳ್ಳುತ್ತದೆ ಎನ್ನುವುದಕ್ಕೆ ಒಂದು ಜ್ವಲಂತ ಸಾಕ್ಷಿ ಇಲ್ಲಿದೆ ನೋಡಿ. ಸಂಬಂಧಪಟ್ಟ ಅಧಿಕಾರಿಗಳೇ ಇತ್ತ ಗಮನ ಕೊಡಿ...
- ಗೋಪಾಲ್ ಯಡಗೆರೆ
ಶಿವಮೊಗ್ಗ(ಏ.06) ಹಣೆ ಬರಹ ಸರಿಯಿಲ್ಲ ಎನ್ನುತ್ತಾರೆ. ಆದರೆ ಈ ವೃದ್ಧೆಯ ಹಣೆ ಬರಹದ ಜೊತೆಗೆ ಕೈಗೆರೆಯೂ ಸರಿಯಿಲ್ಲ. ಗೆರೆಯಿಲ್ಲದ ಬೆರಳನ್ನು ಸರ್ಕಾರದ ಹೆಬ್ಬರಳ ಗುರುತನ್ನು ಪತ್ತೆ ಹಚ್ಚುವ ಮೆಷಿನ್ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಈ ಅಜ್ಜಿಗೆ ಕಳೆದ ನಾಲ್ಕು ವರ್ಷದಿಂದ ಪಡಿತರ ನಿಲ್ಲಿಸಲಾಗಿದೆ. ಲಾಕ್‌ಡೌನ್‌ನ ಪರಿಸ್ಥಿತಿಯಲ್ಲಿ ಭಿಕ್ಷೆಗೂ ಗತಿಯಿಲ್ಲದ ಕಾರಣ ಅಕ್ಷರಶಃ ಉಪವಾಸ ಬಿದ್ದಿದ್ದಾರೆ.
98 ವರ್ಷದ ವೃದ್ಧೆ ಲಕ್ಷ್ಮಮ್ಮನ ಕತೆಯಿದು. ಕಾನೂನು ಮತ್ತು ಮಾನವೀಯತೆ ಇಲ್ಲದ ನೌಕರಶಾಹಿ ವರ್ತನೆ ಒಬ್ಬ ವ್ಯಕ್ತಿಯ ಊಟವನ್ನೂ ಕಸಿದುಕೊಳ್ಳುತ್ತದೆ ಎಂಬುದಕ್ಕೆ ಈ ಲಕ್ಷ್ಮಮ್ಮ ಜ್ವಲಂತ ಉದಾಹರಣೆ. ಲಾಕ್‌ಡೌನ್ ಆದ ಬಳಿಕ ಈ ವೃದ್ಧೆಯ ಈ ಪರಿಸ್ಥಿತಿ ಬಯಲಿಗೆ ಬಂದಿದೆ.
ಪರ್ಮಿಟ್ ಸರಂಡರ್: ಸಾರಿಗೆ ಇಲಾಖೆಗೆ ಹೊಸ ತಲೆನೋವು
ತಾಲೂಕಿನ ಉಂಬ್ಳೆಬೈಲು ಗ್ರಾ.ಪಂ. ವ್ಯಾಪ್ತಿಯ ಗಣಿದಾಳು ಗ್ರಾಮದಲ್ಲಿ ವಾಸವಾಗಿರುವ ಈ ವೃದ್ಧೆಯ ವಾಸ ಹರಕು ಮುರುಕು ಗುಡಿಸಲು. ಬಾಗಿಲೇ ಇಲ್ಲದ, ಗೋಡೆಯಲ್ಲಿನ ಕಿಂಡಿಗಳೇ ಕಿಟಕಿಗಳಾಗಿರುವ ವಸ್ತುಸ್ಥಿತಿ. ಗಂಡ ತೀರಿ ಹೋಗಿ ಎಷ್ಟೋ ವರ್ಷಗಳಾಗಿವೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ. ಮಗ ಜೊತೆಯಲ್ಲಿ ಇಲ್ಲ. ತೀರಾ ಹಣ್ಣು ಹಣ್ಣು ಮುದುಕಿಯಾಗಿರುವ ಇವರು ಇಷ್ಟು ದಿನ ಅಲ್ಲಲ್ಲಿ ಸುತ್ತಿ ಭಿಕ್ಷೆ ಬೇಡಿ ಊಟ ಮಾಡುತ್ತಿದ್ದರು. ಇವರ ಓರ್ವ ಹೆಣ್ಣು ಮಗಳೂ ಹತ್ತಿರದಲ್ಲಿಯೇ ಇದ್ದು ಆಕೆ ಕೂಡ ಸುಮಾರು 70-75 ವರ್ಷದ ವೃದ್ಧೆ. ಇಳಿ ವಯಸ್ಸಿನಲ್ಲಿಯೂ ಕೂಲಿ ಮಾಡುವ ಇವರು ಒಂದು ತುತ್ತು ಅಮ್ಮನಿಗೆಂದು ತಂದುಕೊಟ್ಟು ಹೋಗುತ್ತಿದ್ದರು. ಈಗ ಅವರಿಗೂ ಕೂಲಿ ಇಲ್ಲ. ತಮಗೆ ತುತ್ತು ಅನ್ನ ಇಲ್ಲದ ಸ್ಥಿತಿ. ವೃದ್ಧ ತಾಯಿಗೆ ಏನು ಕೊಟ್ಟಾರು?
ಜಿಲ್ಲಾ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ನಾಲ್ಕು ವರ್ಷದವರೆಗೆ ಪಡಿತರ ಸಿಗುತ್ತಿತ್ತು. ಆದರೆ ಆ ಬಳಿಕ ಆಧಾರ್ ಲಿಂಕ್ ಮಾಡಬೇಕೆಂದರು. ಆಧಾರ್ ಎಂದರೆ ಏನೆಂದೇ ಗೊತ್ತಿಲ್ಲದ ಈ ವೃದ್ಧೆಗೆ ಅದಾವುದೂ ಲಿಂಕ್ ಆಗಲಿಲ್ಲ. ಆ ನಂತರ ಇವರ ಕೈ ಬೆರಳು ಮೆಷಿನ್ ತೆಗೆದುಕೊಳ್ಳುತ್ತಿಲ್ಲ. ರೇಖೆ ಅಳಿಸಿ ಹೋಗಿದೆ ಎಂದರು. ಆದರೆ ಸಮಸ್ಯೆ ಪರಿಹರಿಸಲು ಮಾತ್ರ ಯಾವ ಅಧಿಕಾರಿಯೂ ಮುಂದಾಗಲಿಲ್ಲ. ಬದಲಾಗಿ ಕಾರಣ ಹೇಳಿ ಪಡಿತರ ಚೀಟಿ ರದ್ದುಗೊಳಿಸಿದರು.
ಭಿಕ್ಷೆಯೂ ಸಿಗದ ಸ್ಥಿತಿಯಲ್ಲಿ ವೃದ್ಧೆ ಲಕ್ಷ್ಮಮ್ಮ ಕಂಡ ಕಂಡವರನ್ನು ಒಂಚೂರು ಅಕ್ಕಿ ಕೊಡ್ತಿರಾ ಎಂದು ಸರಿಯಾಗಿ ಅರ್ಥವಾಗದ ಮಾತಲ್ಲಿ ಕೇಳುತ್ತಾರೆ. ಹಸಿದು ದಿಕ್ಕೆಟ್ಟು ಕೂತಿರುವ ಈ ವೃದ್ಧೆಗೆ ಜಿಲ್ಲಾಡಳಿತ ಮಾನವೀಯ ನೆರವು ನೀಡಬೇಕಿದೆ. ಈಗ ಊಟ ಬೇಕು. ನಂತರ ಸರಿಯಾದ ವ್ಯವಸ್ಥೆಯೊಂದನ್ನು ಕಲ್ಪಿಸಬೇಕು. ಸ್ಥಳೀಯ ಗ್ರಾ.ಪಂ. ಕೂಡ ಸ್ಪಂದಿಸಬೇಕು.