ಪರ್ಮಿಟ್‌ ಸರಂಡರ್‌: ಸಾರಿಗೆ ಇಲಾಖೆಗೆ ಹೊಸ ತಲೆನೋವು

By Kannadaprabha NewsFirst Published Apr 6, 2020, 5:29 PM IST
Highlights

ಕೊರೋನಾ ವೈರಸ್ ಭೀತಿಯಿಂದಾಗಿ ಲಾಕ್‌ಡೌನ್ ಬಿಸಿ ಇದೀಗ ಖಾಸಗಿ ಸಾರಿಗೆ ವಾಹನ ಮಾಲೀಕರಿಗೂ ತಟ್ಟುತ್ತಿದ್ದು, ತಮ್ಮ ವಾಹನಗಳ ಪರ್ಮಿಟ್‌ಗಳನ್ನು ಆರ್‌ಟಿಓ ಕಚೇರಿಗೆ ಸರಂಡರ್‌ ಮಾಡಲು ಮುಂದಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ವರದಿ: ಗೋಪಾಲ್‌ ಯಡಗೆರೆ

ಶಿವಮೊಗ್ಗ(ಏ.06): ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ ಪರಿಣಾಮಗಳು ದಿನಕ್ಕೊಂದು ರೂಪದಲ್ಲಿ ಹೊರ ಬರುತ್ತಿದೆ. ಇದೀಗ ಖಾಸಗಿ ಸಾರಿಗೆ ವಾಹನ ಮಾಲೀಕರು ತಮ್ಮ ವಾಹನಗಳ ಪರ್ಮಿಟ್‌ಗಳನ್ನು ಆರ್‌ಟಿಓ ಕಚೇರಿಗೆ ಸರಂಡರ್‌ ಮಾಡಲು ಮುಂದಾಗಿದ್ದಾರೆ. ಇದು ಸಾರಿಗೆ ಇಲಾಖೆಗೆ ಹೊಸ ತಲೆನೋವು ತಂದಿದೆ.

ಈಗಾಗಲೇ ಖಾಸಗಿ ಬಸ್‌ಗಳು ಒಂದೊಂದಾಗಿ ತಮ್ಮ ಪರ್ಮಿಟ್‌ ಸರಂಡರ್‌ ಮಾಡುತ್ತಿದ್ದು, ಇದೀಗ ಇತರೆ ಸಾರಿಗೆ ವಾಹನಗಳು ಕೂಡಾ ಇದೇ ಹಾದಿ ಹಿಡಿದಿರುವುದೇ ಈ ತಲೆ ನೋವಿಗೆ ಕಾರಣ.

ಲಾಕ್‌ಡೌನ್‌ನಿಂದಾಗಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ದವಾಗಿದೆ. ವಾಹನ ಓಡಾಡಲಿ ಬಿಡಲಿ ಪರ್ಮಿಟ್‌ ಶುಲ್ಕ ಕಟ್ಟಲೇಬೇಕು. ಈಗಾಗಲೇ ವಾಹನಗಳು ತಮ್ಮ ಓಡಾಟ ನಿಲ್ಲಿಸಿರುವುದರಿಂದ ಮಾಲೀಕರಿಗೆ ಆದಾಯವೇ ಇಲ್ಲವಾಗಿದೆ. ಹಾಗೆಂದು ವಾಹನಗಳ ಮಾಮೂಲಿ ನಿರ್ವಹಣೆಯ ಜೊತೆಗೆ ಸಿಬ್ಬಂದಿಗಳ ಸಂಬಳ ಮಾತ್ರ ಕೊಡಲೇಬೇಕು. ಇದನ್ನು ನೀಡಲು ಸಾಧ್ಯವಾಗದ ಸ್ಥಿತಿಗೆ ಬಂದು ನಿಂತಿದ್ದಾರೆ.

ಸಾಗರದಲ್ಲಿ ಮತ್ತೆರಡು ಹೊಸದಾಗಿ ಕೆಎಫ್‌ಡಿ ಪ್ರಕರಣ ಪತ್ತೆ

ಈಗಾಗಲೇ ವಾಹನಗಳ ಬಿಡಿ ಭಾಗ, ಟೈರ್‌ಗಳ ದರ ಏರಿಕೆಯಿಂದ ನಿರ್ವಹಣೆ ಕಷ್ಟಎಂದು ಖಾಸಗಿ ವಾಹನ ಮಾಲೀಕರು ಒದ್ದಾಡುತ್ತಿದ್ದರು. ಇಂತಹ ಹೊತ್ತಿನಲ್ಲಿಯೇ ಲಾಕ್‌ಡೌನ್‌ ಎದುರಾಗಿದೆ. ವಾಹನ ನಿಂತರೂ ತೆರಿಗೆ ಹಣ ಕಟ್ಟಲೇಬೇಕಾಗಿರುವುದರಿಂದ ವಾಹನ ಮಾಲೀಕರು ತಮ್ಮ ಪರ್ಮಿಟ್‌ ಸರಂಡರ್‌ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಆರ್‌ಟಿಓ ಅಧಿಕಾರಿಗಳಿಗೆ ತಮ್ಮ ವಾಹನ ತೆರಿಗೆಯನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಮನವಿ ನೀಡಿದ್ದಾರೆ. ಆದರೆ ಇದಕ್ಕೆ ಇಲಾಖೆಯಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲದ ಕಾರಣ ವಾಹನ ಮಾಲೀಕರು ಅಂತಿಮವಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ತೆರಿಗೆ ಹೇಗಿರುತ್ತೆ:

ಯಾವುದೇ ವಾಣಿಜ್ಯ ಉದ್ದೇಶದ ಸಾರಿಗೆ ವಾಹನಗಳಿಗೆ ಸಂಬಂಧಿಸಿದ ತೆರಿಗೆಯನ್ನು ಮೂರು ತಿಂಗಳು ಮುಂಚಿತವಾಗಿ ಪಾವತಿಸಬೇಕು. ಮ್ಯಾಕ್ಸಿ ಕ್ಯಾಬ್‌, ಖಾಸಗಿ ಸಿಟಿ ಬಸ್‌, ಟ್ಯಾಕ್ಸಿ ಸೇರಿದಂತೆ ವಿವಿಧ ರೀತಿಯ ಖಾಸಗಿ ಪ್ರಯಾಣಿಕರ ವಾಹನಗಳ ಮಾಲೀಕರು ತಮ್ಮ ತಮ್ಮ ವಾಹನಗಳ ಸೀಟಿನ ಸಾಮರ್ಥ್ಯದ ಆಧಾರದ ಮೇಲೆ ತೆರಿಗೆಯನ್ನು ಮುಂಗಡವಾಗಿ ಪಾವತಿಸಬೇಕು. ಏಪ್ರಿಲ್‌ 14ರ ತನಕ ಘೋಷಣೆಯಾಗಿರುವ ಲಾಕ್‌ಡೌನ್‌, ಆ ಬಳಿಕವೂ ಮುಂದುವರೆದರೆ ಹೇಗೆಂಬ ಆತಂಕ ಮಾಲೀಕರಲ್ಲಿ ಮನೆ ಮಾಡಿದೆ.

ಪರ್ಮಿಟ್‌ ರದ್ದತಿ ಕಷ್ಟಸಾಧ್ಯ:

ನಿತ್ಯ ನೂರಾರು ಸಂಖ್ಯೆಯಲ್ಲಿ ಪರ್ಮಿಟ್‌ ರದ್ದತಿ ಅರ್ಜಿ ಸಲ್ಲಿಕೆಯಾಗುತ್ತಿದೆ. ಈ ಅರ್ಜಿಗಳನ್ನು ಇತ್ಯರ್ಥಗೊಳಿಸುದೇ ಇಲಾಖೆಗೊಂದು ದೊಡ್ಡ ಸಮಸ್ಯೆ. ವಾಹನದ ಮಾಲೀಕರು ನಿಗದಿತ ನಮೂನೆಯೊಂದಿಗೆ ಶುಲ್ಕ ಪಾವತಿಸಿ ಪರ್ಮಿಟ್‌ ರದ್ದತಿಗೆ ಅರ್ಜಿ ಸಲ್ಲಿಸಿದ ನಂತರ ಸಾರಿಗೆ ಇಲಾಖೆಯ ಬ್ರೇಕ್‌ ಇನ್‌ ಸ್ಪೆಕ್ಟರ್‌ ಸ್ಥಳಕ್ಕೆ ತೆರಳಿ ಸಂಬಂಧಪಟ್ಟ ವಾಹನದ ಚಾಸಿ ಹಾಗೂ ಎಂಜಿನ್‌ ಸಂಖ್ಯೆ ಪಡೆದು ಪಂಚನಾಮೆ ಮಾಡಿ ವರದಿ ನೀಡಬೇಕು. ಇದಾದ ನಂತರ ಪರ್ಮಿಟ್‌ ರದ್ದತಿಯೊಂದಿಗೆ ಮುಂಗಡ ತೆರಿಗೆ ಪಾವತಿಯಲ್ಲಿ ವಿನಾಯಿತಿ ಸಿಗುತ್ತದೆ.

ರಾಜ್ಯದ ಜಿಲ್ಲಾ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಆದರೆ ಪ್ರಸ್ತುತ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಸಲ್ಲಿಕೆಯಾಗಿರುವ ಪರ್ಮಿಟ್‌ ಸರಂಡರ್‌ ಕೋರಿಕೆ ಅರ್ಜಿಯನ್ನು ಇತ್ಯರ್ಥಪಡಿಸಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಇಲ್ಲಿನ ಕುವೆಂಪು ಪ್ರವಾಸಿ ಮ್ಯಾಕ್ಸಿ ಕ್ಯಾಬ್‌ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸತೀಶ್‌ ಪೂಜಾರಿ.

ರಾಜ್ಯಾದ್ಯಂತ ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಧ್ಯದ ಸಂದರ್ಭದಲ್ಲಿ ಇಲಾಖೆಯು ತುರ್ತು ಸೇವೆಗಳನ್ನು ಆದ್ಯತೆ ಮೇರೆಗೆ ನೀಡುತ್ತಿದೆ. ವಾಹನ ಸಂಚಾರಕ್ಕೆ ನಿರ್ಬಂಧ ಇರುವಾಗ ಬ್ರೇಕ್‌ ಇನ್‌ಸ್ಪೆಕ್ಟರ್‌ಗಳು ವಾಹನಗಳಿರುವ ಸ್ಥಳಕ್ಕೆ ತೆರಳಿ ಮಹಜರ್‌ ನಡೆಸಿ ವರದಿ ನೀಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸುತ್ತಾರೆ.

ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸುಮಾರು ಮೂರುವರೆ ಸಾವಿರ ಮ್ಯಾಕ್ಸಿ ಕ್ಯಾಬ್‌ ಹಾಗೂ ಪ್ರವಾಸಿ ಕಾರು, ಮಿನಿ ಬಸ್‌ ಮತ್ತಿತರ ವಾಹನಗಳಿವೆ. ಇವೆಲ್ಲವೂ ಸುಮಾರು ಒಂದು ತಿಂಗಳಿನಿಂದ ಸಂಚಾರ ನಿಲ್ಲಿಸಿವೆ. ಪರಿಸ್ಥಿತಿ ಹೀಗಿರುವಾಗ ಪರ್ಮಿಟ್‌ ರದ್ದು ಕೋರಿ ಬರುವ ಅರ್ಜಿಯನ್ನು ನಿಗದಿತ ಸಮಯದೊಳಗೆ ಇತ್ಯರ್ಥಪಡಿಸುವುದು ಆಗದ ಮಾತು ಎಂದು ಹೇಳಲಾಗುತ್ತಿದೆ.

ಜಿಲ್ಲೆಯಲ್ಲಿ ಇದೀಗ ಸುಮಾರು 450 ಕ್ಕೂ ಹೆಚ್ಚು ಇಂತಹ ಅರ್ಜಿ ಸಲ್ಲಿಕೆಯಾಗಿದೆ. ಆದರೆ ಸದ್ಯಕ್ಕೆ ವಾಹನ್‌ ಸಾಫ್ಟ್‌ವೇರ್‌ ಬಿಟ್ಟು ಇತರೆ ತಂತ್ರಾಂಶ ಕೆಲಸ ಮಾಡುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ವಾಹನಗಳ ಮಹಜರ್‌ ಇತ್ಯಾದಿ ಕೆಲಸ ಮಾಡಲು ಆಗುವುದಿಲ್ಲ. ಈ ವಿಷಯ ಸರ್ಕಾರದ ಗಮನಕ್ಕೆ ತರಲಾಗಿದೆ.

- ದೀಪಕ್‌ಗೌಡ, ಆರ್‌ಟಿಓ, ಶಿವಮೊಗ್ಗ
 

click me!