ಗುರುತ್ವಾಕರ್ಷಣೆಗೆ ಕಾಯುತ್ತಾ: ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ಆರೋಗ್ಯ ಮತ್ತು ಭೂಮಿಯಲ್ಲಿ ಚೇತರಿಕೆ

ಬಾಹ್ಯಾಕಾಶ ಪ್ರಯಾಣಗಳು ಬೆಲೆಕಟ್ಟಲಾಗದ ವೈಜ್ಞಾನಿಕ ಹೊಳಹುಗಳನ್ನು ನೀಡುತ್ತವಾದರೂ, ಭೂಮಿಗೆ ಮರಳಿದ ಬಳಿಕ, ಗಗನಯಾತ್ರಿಗಳಿಗೆ ಹೊಂದಿಕೊಳ್ಳಲು ಬಹಳಷ್ಟು ಸವಾಲುಗಳನ್ನೂ ಒಡ್ಡುತ್ತವೆ. 


ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ಸೂಕ್ಷ್ಮ ಗುರುತ್ವಾಕರ್ಷಣಾ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತಾ, ಅಲ್ಲಿ ಸುದೀರ್ಘ ಅವಧಿಯನ್ನು ಕಳೆದಿದ್ದಾರೆ. ಬಾಹ್ಯಾಕಾಶ ಪ್ರಯಾಣಗಳು ಬೆಲೆಕಟ್ಟಲಾಗದ ವೈಜ್ಞಾನಿಕ ಹೊಳಹುಗಳನ್ನು ನೀಡುತ್ತವಾದರೂ, ಭೂಮಿಗೆ ಮರಳಿದ ಬಳಿಕ, ಗಗನಯಾತ್ರಿಗಳಿಗೆ ಹೊಂದಿಕೊಳ್ಳಲು ಬಹಳಷ್ಟು ಸವಾಲುಗಳನ್ನೂ ಒಡ್ಡುತ್ತವೆ. ಇಂತಹ ಆರೋಗ್ಯ ಕಾಳಜಿಗಳ ಜೊತೆಗೆ, ಬೋಯಿಂಗ್ ಸಿಎಸ್‌ಟಿ-100 ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷಗಳು ಭೂಮಿಗೆ ಸುನಿತಾ ವಿಲಿಯಮ್ಸ್ ಅವರ ಪುನರಾಗಮನದ ಮೇಲೆ ಪರಿಣಾಮ ಬೀರಿದ್ದವು.

Latest Videos

ಹೆಚ್ಚಿನ ವಿಳಂಬ ಮತ್ತು ಬಾಹ್ಯಾಕಾಶ ನೌಕೆಗಳ ಪಯಣ: ಮೂಲತಃ ಬೋಯಿಂಗ್ ಸಿಎಸ್‌ಟಿ-100 ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಹೊಂದಿದ್ದ ತಾಂತ್ರಿಕ ದೋಷಗಳ ಕಾರಣದಿಂದಾಗಿ ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ವಾಸ ನಿರೀಕ್ಷಿತ ಅವಧಿಯನ್ನು ಮೀರಿ ಸಾಗಿತ್ತು. ಸುನಿತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅವರು ಕಳೆದ ಜೂನ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ಅವರು ಆಗಮಿಸಿದ್ದ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಕಾರ್ಯಾಚರಣೆಯಲ್ಲಿ ಉಂಟಾಗಿದ್ದ ದೋಷಗಳ ಪರಿಣಾಮವಾಗಿ, ನಾಸಾ ಗಗನ ನೌಕೆಯನ್ನು ಸಿಬ್ಬಂದಿ ರಹಿತವಾಗಿ ಭೂಮಿಗೆ ಕರೆತರುವ ನಿರ್ಧಾರ ಕೈಗೊಂಡಿತು. ಈ ನಿರ್ಧಾರದ ಪರಿಣಾಮವಾಗಿ, ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರು ಭೂಮಿಗೆ ಮರಳಲು ಪರ್ಯಾಯ ವ್ಯವಸ್ಥೆ ಲಭ್ಯವಾಗುವ ತನಕ ಅಲ್ಲಿಯೇ ಉಳಿದುಕೊಳ್ಳಬೇಕಾಯಿತು.

ಏರೋ ಇಂಡಿಯಾ 2025: ಜಾಗತಿಕ ಅವಕಾಶಗಳ ರನ್‌ವೇ, ರೋಮಾಂಚಕ ವೈಮಾನಿಕ ಪ್ರದರ್ಶನ

ಈ ಅವಧಿಯಲ್ಲಿ ಇನ್ನೊಂದು ಬಾಹ್ಯಾಕಾಶ ನೌಕೆ ಐಎಸ್ಎಸ್‌ಗೆ ತೆರಳಿದ್ದರೂ, ಸಾಗಾಣಿಕಾ ಸಮಸ್ಯೆಗಳು ಮತ್ತು ಪೂರ್ವ ಯೋಜಿತ ಸಿಬ್ಬಂದಿ ಬದಲಾವಣೆ ತಕ್ಷಣವೇ ಅವರು ಭೂಮಿಗೆ ಬರುವುದನ್ನು ನಿರ್ಬಂಧಿಸಿತು. ಸೆಪ್ಟೆಂಬರ್ ತಿಂಗಳಲ್ಲಿ, ಸ್ಪೇಸ್ ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ 'ಫ್ರೀಡಮ್' ಬಾಹ್ಯಾಕಾಶ ನೌಕೆ ಕ್ರ್ಯೂ-9 ಸಿಬ್ಬಂದಿಗಳನ್ನು ಐಎಸ್ಎಸ್‌ಗೆ ಕರೆತಂದಿತು. ಇದು ಕ್ರಮೇಣ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಪುನರಾಗಮನಕ್ಕೆ ಅನುಕೂಲವಾಗುವಂತೆ ಹೆಚ್ಚುವರಿ ಆಸನಗಳನ್ನು ಹೊಂದುವ ರೀತಿಯಲ್ಲಿ ಮಾರ್ಪಾಡುಗಳನ್ನು ಹೊಂದಿತ್ತು. ಇದೇ ವೇಳೆ, ಮಾರ್ಚ್ ತಿಂಗಳಲ್ಲಿ ಉಡಾವಣೆಗೊಂಡ ಕ್ರ್ಯೂ-10 ಯೋಜನೆ ಎಂದಿನಂತೆ ಐಎಸ್ಎಸ್‌ನಲ್ಲಿ ಬದಲಾವಣೆಗಾಗಿ ನಾಲ್ವರು ಗಗನಯಾತ್ರಿಗಳನ್ನು ಒಯ್ದಿತ್ತು. ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರ ಪುನರಾಗಮನ ಈಗ ಕ್ರ್ಯೂ-10 ಸಿಬ್ಬಂದಿಗಳಿಗೆ ಕಾರ್ಯಾಚರಣಾ ಹಸ್ತಾಂತರ ಮತ್ತು ಯೋಜನಾ ನಿಯಂತ್ರಣ ವೇಳಾಪಟ್ಟಿಯ ಮೇಲೆ ಅವಲಂಬಿಸಿದೆ.

ಬಾಹ್ಯಾಕಾಶದ ದೈಹಿಕ ಪರಿಣಾಮ: ಸ್ನಾಯುಗಳು ಮತ್ತು ಮೂಳೆಗಳ ಬದಲಾವಣೆ: ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ವಾಸ ಮಾಡುವುದರಿಂದ ದೇಹದ ಸ್ನಾಯುಗಳಲ್ಲಿ ಮಹತ್ವದ ಬದಲಾವಣೆಗಳು ಕಂಡುಬರುತ್ತವೆ. ದೇಹದ ಮೇಲೆ ಒತ್ತಡ ಹೇರುವ ಗುರುತ್ವಾಕರ್ಷಣೆ ಲಭ್ಯವಿಲ್ಲದೆ, ದೇಹದ ಸ್ನಾಯುಗಳು ದುರ್ಬಲಗೊಂಡು, ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತವೆ. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ನಡೆಯುವುದಕ್ಕಿಂತಲೂ ಹೆಚ್ಚಾಗಿ ತೇಲುತ್ತಾ ಸಾಗುವುದರಿಂದ, ಅವರ ಕಾಲುಗಳು, ಬೆನ್ನು ಮತ್ತು ಕೋರ್ ಸ್ನಾಯುಗಳು ಅಟ್ರಫಿ ಅಥವಾ ಸವೆತವನ್ನು ಎದುರಿಸುತ್ತವೆ. ಅಂದರೆ, ಅವರು ಭೂಮಿಗೆ ಮರಳಿದಾಗ ದುರ್ಬಲರಾದಂತೆ ತೋರುತ್ತಾರೆ.

ಅದರೊಡನೆ, ಯಾಂತ್ರಿಕ ಒತ್ತಡಗಳ ಕೊರತೆಯೂ ಸಹ ಮೂಳೆಗಳ ಖನಿಜಗಳು ನಶಿಸುವಂತೆ ಮಾಡಿ, ಮೂಳೆಗಳು, ಅದರಲ್ಲೂ ಬೆನ್ನು ಹುರಿ ಮತ್ತು ಸೊಂಟದ ಮೂಳೆಗಳು ಮುರಿಯುವ ಅಪಾಯ ಎದುರಾಗುವಂತೆ ಮಾಡುತ್ತದೆ. ಕಾಲಕ್ರಮೇಣ ದೇಹ ಇಷ್ಟೊಂದು ದುರ್ಬಲವಾಗುತ್ತಾ ಸಾಗುವುದರಿಂದ, ಗಗನಯಾತ್ರಿಗಳು ಭೂಮಿಗೆ ಮರಳಿದ ಬಳಿಕ, ಕಠಿಣವಾದ ಪುನಶ್ಚೇತನ ಕಾರ್ಯಕ್ರಮಗಳನ್ನು ಅನುಸರಿಸಿ, ತಮ್ಮ ಸ್ನಾಯುಗಳ ಶಕ್ತಿಯನ್ನು ವೃದ್ಧಿಸಿ, ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಬೇಕಾಗುತ್ತದೆ.

ಹೃದಯ ರಕ್ತನಾಳಗಳ ಹೊಂದಾಣಿಕೆ: ತಲೆ ಸುತ್ತುವುದು ಮತ್ತು ರಕ್ತಪರಿಚಲನಾ ಸವಾಲುಗಳು: ಬಾಹ್ಯಾಕಾಶ ಪ್ರಯಾಣದ ಪರಿಣಾಮವಾಗಿ, ದೇಹದ ಪರಿಚಲನೆಯಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇದರಿಂದಾಗಿ ದೇಹದೊಳಗಿನ ದ್ರವಗಳ ಚಲನೆ ಬದಲಾಗುತ್ತದೆ. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ, ದೇಹದ ದ್ರವಗಳು ಮೇಲ್ಭಾಗಕ್ಕೆ ಚಲಿಸಿ, ಮುಖ ಊದಿಕೊಳ್ಳುವಂತೆ ಮಾಡುತ್ತದೆ. ಕಾಲುಗಳಲ್ಲಿ ರಕ್ತದ ಪೂರೈಕೆ ಕಡಿಮೆಯಾಗುತ್ತದೆ. ಗಗನಯಾತ್ರಿಗಳು ಭೂಮಿಗೆ ಮರಳಿದ ಬಳಿಕ, ಗುರುತ್ವಾಕರ್ಷಣೆ ಈ ದ್ರವಗಳನ್ನು ಮತ್ತೊಮ್ಮೆ ಕೆಳಭಾಗಕ್ಕೆ ಎಳೆಯುತ್ತದೆ. ಇದರಿಂದ ಗಗನಯಾತ್ರಿಗಳಿಗೆ ತಮ್ಮ ರಕ್ತದೊತ್ತಡವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. 

ಇದರ ಪರಿಣಾಮವಾಗಿ ಅವರು ಭೂಮಿಯಲ್ಲಿ ಎದ್ದು ನಿಲ್ಲಲು ಅಥವಾ ನಡೆದಾಡಲು ಪ್ರಯತ್ನ ನಡೆಸುವಾಗ ತಲೆಸುತ್ತು, ತಲೆ ಹಗುರವಾಗುವುದು, ಅಥವಾ ಮೂರ್ಛೆ ಹೋಗುವುದು ಕಾಣಿಸಿಕೊಳ್ಳಬಹುದು. ಬಾಹ್ಯಾಕಾಶದಲ್ಲಿ ಕಡಿಮೆ ಕಾರ್ಯಾಚರಣೆಗೆ ಹೊಂದಿಕೊಂಡ ಹೃದಯಕ್ಕೆ ಭೂಮಿಯ ಗುರುತ್ವಾಕರ್ಷಣೆಗೆ ಮರಳಿ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಗಗನಯಾತ್ರಿಗಳಿಗೆ ರಕ್ತಪರಿಚಲನೆ ಸಹಜವಾಗುವಂತೆ ಮಾಡಲು ಮತ್ತು ಆರ್ಥೋಸ್ಟ್ಯಾಟಿಕ್ ಇಂಟಾಲರೆನ್ಸ್ (ಅಂದರೆ ನಿಲ್ಲುವಾಗ ಸ್ಥಿರ ರಕ್ತದೊತ್ತಡ ಕಾಯ್ದುಕೊಳ್ಳಲು ಕಷ್ಟವಾಗುವುದು) ತಡೆಗಟ್ಟಲು ಕಾರ್ಡಿಯೋವಾಸ್ಕ್ಯುಲರ್ ತರಬೇತಿ ನೀಡಲಾಗುತ್ತದೆ.

ಗುರುತ್ವಾಕರ್ಷಣೆಯ ಮರು ಕಲಿಕೆ: ಸಮತೋಲನ ಮತ್ತು ಇಂದ್ರಿಯಗಳ ಮರು ಹೊಂದಾಣಿಕೆ: ಭೂಮಿಗೆ ಮರಳುವ ಗಗನಯಾತ್ರಿಗಳು ಸಾಮಾನ್ಯವಾಗಿ ದೇಹದ ಸಮತೋಲನ ಮತ್ತು ಹೊಂದಾಣಿಕೆಯನ್ನು ಸಾಧಿಸಲು ಕಷ್ಟಪಡುತ್ತಾರೆ. ಸಮತೋಲನ ಕಾಯ್ದುಕೊಳ್ಳಲು ನೆರವಾಗುವ ವೆಸ್ಟಿಬುಲರ್ ವ್ಯವಸ್ಥೆ ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಗೆ ಹೊಂದಿಕೊಂಡಿರುತ್ತದೆ. ಭೂಮಿಗೆ ಮರಳಿದ ಬಳಿಕ, ವೆಸ್ಟಿಬುಲರ್ ವ್ಯವಸ್ಥೆ ಗುರುತ್ವಾಕರ್ಷಣೆಯಲ್ಲಿ ಕಾರ್ಯಾಚರಿಸುವುದನ್ನು ಮರಳಿ ಕಲಿಯಬೇಕಾಗುತ್ತದೆ. ಇದು ತಲೆಸುತ್ತು, ವಾಕರಿಕೆ, ಮತ್ತು ತಾತ್ಕಾಲಿಕ ಅಡಚಣೆಗಳಿಗೆ ಕಾರಣವಾಗುತ್ತದೆ. ಅದರೊಡನೆ, ಪ್ರಾದೇಶಿಕ ಅರಿವು ಮತ್ತು ಇಂದ್ರಿಯಗಳ ಹೊಂದಾಣಿಕೆಗಳ ಮೇಲೂ ಪರಿಣಾಮ ಉಂಟಾಗುತ್ತದೆ. ಮೆದುಳು ಬೇರೆ ಬೇರೆ ಇಂದ್ರಿಯ ವ್ಯವಸ್ಥೆಗಳಾದ ದೃಷ್ಟಿ, ಸಮತೋಲನ, ಮತ್ತು ಸ್ನಾಯುಗಳ ಮಾಹಿತಿಗಳನ್ನು ಸಂಸ್ಕರಿಸಿ, ಭೂಮಿಗೆ ಹೊಂದಿಕೊಳ್ಳಬೇಕಾಗುತ್ತದೆ. ಗಗನಯಾತ್ರಿಗಳು ಭೂಮಿಗೆ ಮರಳಿದ ನಂತರ, ಅವರ ನರ ವ್ಯವಸ್ಥೆ ಸಂಪೂರ್ಣವಾಗಿ ಹೊಂದಿಕೊಳ್ಳುವ ತನಕ ನೇರವಾಗಿ ನಡೆಯಲು ಮತ್ತು ಸರಳ ಯಾಂತ್ರಿಕ ಕಾರ್ಯಗಳನ್ನು ಕೈಗೊಳ್ಳಲು ಕಷ್ಟಪಡಬೇಕಾಗುತ್ತದೆ.

ದೃಷ್ಟಿ ಮತ್ತು ಚರ್ಮದ ಸಂವೇದನೆ: ಬಾಹ್ಯಾಕಾಶ ಯಾತ್ರೆಯ ಬಚ್ಚಿಟ್ಟ ಪರಿಣಾಮಗಳು: ಬಹಳಷ್ಟು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ದೇಹದ ದ್ರವಗಳಲ್ಲಿನ ಬದಲಾವಣೆಗಳ ಪರಿಣಾಮದಿಂದ, ಇಂಟ್ರಾಕಾರ್ನಿಯಲ್ ಒತ್ತಡ ಉಂಟಾಗಿ, ತಾತ್ಕಾಲಿಕ ದೃಷ್ಟಿ ಬದಲಾವಣೆಗಳನ್ನು ಎದುರಿಸುತ್ತಾರೆ. ದೃಷ್ಟಿಯ ಮೇಲಿನ ದೀರ್ಘಕಾಲೀನ ಪರಿಣಾಮದ ಕುರಿತು ಇನ್ನೂ ಅಧ್ಯಯನಗಳು ಮುಂದುವರಿದಿವೆ. ಕೆಲವು ಗಗನಯಾತ್ರಿಗಳು ಭೂಮಿಗೆ ಮರಳಿ ಹಲವು ವಾರಗಳ ಬಳಿಕವೂ ಗಮನವಿಟ್ಟು ನೋಡುವಲ್ಲಿ ಸಮಸ್ಯೆ ಎದುರಿಸುವುದಾಗಿ ಹೇಳಿದ್ದಾರೆ. ಇನ್ನೊಂದು ಮಾಮೂಲಿಯಾದ, ಆದರೆ ಅಷ್ಟಾಗಿ ಗಮನಕ್ಕೆ ಬರದ ಇನ್ನೊಂದು ವಿಚಾರವೆಂದರೆ, ಚರ್ಮದ ಸಂವೇದನೆ. ಬಾಹ್ಯಾಕಾಶದಲ್ಲಿ, ಗಗನಯಾತ್ರಿಗಳ ಕಾಲುಗಳು ನೆಲದೊಡನೆ ಸಂಪರ್ಕಕ್ಕೆ ಬರುವುದು ಬಹಳ ಅಪರೂಪ. ಇದರ ಪರಿಣಾಮವಾಗಿ, ಕಾಲುಗಳ ಚರ್ಮ ಬಹಳ ಮೃದುವಾಗಿ, ಅತ್ಯಂತ ಸಂವೇದನೆ ಹೊಂದುತ್ತದೆ. ಈ ಪ್ರಕ್ರಿಯೆಯನ್ನು 'ಬೇಬಿ ಫೂಟ್' ಎಂದು ಕರೆಯಲಾಗುತ್ತದೆ. ಇದರ ಪರಿಣಾಮವಾಗಿ, ಭೂಮಿಗೆ ಮರಳಿದ ಬಳಿಕ, ಮೊದಲಿಗೆ ನಡೆದಾಡುವುದು ಕಷ್ಟಕರವಾಗಲಿದೆ. ಕಾಲಕ್ರಮೇಣ, ಕಾಲುಗಳು ಮತ್ತೊಮ್ಮೆ ದೇಹದ ಭಾರವನ್ನು ಹೊರುವುದಕ್ಕೆ ಹೊಂದಿಕೊಂಡ ಬಳಿಕ, ಹಿಮ್ಮಡಿಯ ಚರ್ಮ ನಿಧಾನವಾಗಿ ದಪ್ಪಗಾಗಿ, ಸಹಜವಾದ ಸಂವೇದನೆ ಮರಳುತ್ತದೆ.

ಪುನಶ್ಚೇತನ ಪ್ರಕ್ರಿಯೆ: ಒಂದು ರಚನಾತ್ಮಕ ಚೇತರಿಕೆ: ಭೂಮಿಯ ವಾತಾವರಣಕ್ಕೆ ಮರಳಿ ಸುಗಮವಾಗಿ ಹೊಂದಿಕೊಳ್ಳುವಂತೆ ಮಾಡಲು, ಗಗನಯಾತ್ರಿಗಳು ಸುದೀರ್ಘ ಪುನಶ್ಚೇತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಇದು ಹಲವು ಅಂಶಗಳನ್ನು ಒಳಗೊಂಡಿದೆ. ಅವೆಂದರೆ:

ದೈಹಿಕ ಚಿಕಿತ್ಸೆ: ಸ್ನಾಯುಗಳ ಸಾಂದ್ರತೆ ಮತ್ತು ಶಕ್ತಿ, ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಲು ಶಕ್ತಿ ವರ್ಧಕ ವ್ಯಾಯಾಮಗಳನ್ನು ಒಳಗೊಂಡಿದೆ.

ಕಾರ್ಡಿಯೋವಾಸ್ಕ್ಯುಲರ್ ಹೊಂದಾಣಿಕೆ: ಹೃದಯ ಮತ್ತೆ ಸಹಿಷ್ಣುತೆ ಸಾಧಿಸಲು ಮತ್ತು ರಕ್ತಪರಿಚಲನಾ ಸಾಮರ್ಥ್ಯ ಗಳಿಸಲು ನೆರವಾಗುವ ತರಬೇತಿ.

ಸಮತೋಲನ ಮತ್ತು ಸಹಕಾರದ ವ್ಯಾಯಾಮಗಳು: ವೆಸ್ಟಿಬುಲರ್ ವ್ಯಾಯಾಮಗಳು ದೈಹಿಕ ಸ್ಥಿರತೆಯನ್ನು ಕಾಪಾಡಲು ಒಳಗಿವಿಯ ತರಬೇತಿ ನೀಡುತ್ತವೆ.

ವೈದ್ಯಕೀಯ ಮೇಲ್ವಿಚಾರಣೆ: ಗಗನಯಾತ್ರಿಗಳ ಚೇತರಿಕೆಯನ್ನು ಗಮನಿಸಲು ಮತ್ತು ದೀರ್ಘಾವಧಿಯ ಸಂಕೀರ್ಣತೆಗಳನ್ನು ತಡೆಯಲು ವೈದ್ಯಕೀಯ ಮೇಲ್ವಿಚಾರಣೆ ನಡೆಸಲಾಗುತ್ತದೆ.

ಬಾಹ್ಯಾಕಾಶ ಯಾತ್ರೆಯಲ್ಲಿ ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶ ಯಾತ್ರೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದು, ಭೂಮಿಗೆ ಮರಳಿದ ಬಳಿಕ ಬರುವ ಸವಾಲುಗಳನ್ನು ಎದುರಿಸಲು ಅವರು ಸಿದ್ಧರಿದ್ದಾರೆ. ಅವರು ಪುನಶ್ಚೇತನ ಕಾರ್ಯಕ್ರಮಕ್ಕೆ ಒಳಗಾಗುವಾಗ, ಅವರ ಚೇತರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ, ಅವರು ಸಂಪೂರ್ಣ ದೈಹಿಕ ಸಾಮರ್ಥ್ಯ ಮತ್ತು ಚಲನೆಯನ್ನು ಮರಳಿ ಪಡೆಯುವುದನ್ನು ಖಾತ್ರಿಪಡಿಸಲಾಗುತ್ತದೆ.

ಬಾಹ್ಯಾಕಾಶ ಯಾತ್ರೆಯ ಸವಾಲುಗಳನ್ನು ಮೀರಲು ಸಾಧ್ಯವೇ?: ಬಾಹ್ಯಾಕಾಶ ಯಾತ್ರೆ ಸರಿಸಾಟಿಯಿಲ್ಲದ ವೈಜ್ಞಾನಿಕ ಪ್ರಗತಿಗೆ ಹಾದಿ ಮಾಡಿಕೊಡುತ್ತದಾದರೂ, ಅದರೊಡನೆ ಬಹಳಷ್ಟು ಮಾನಸಿಕ ಸವಾಲುಗಳೂ ಎದುರಾಗುತ್ತವೆ. ಸ್ನಾಯುಗಳು ಮತ್ತು ಮೂಳೆಗಳ ಸಾಂದ್ರತೆಯ ನಷ್ಟದಿಂದ, ಇಂದ್ರಿಯಗಳ ಮರುಹೊಂದಾಣಿಕೆಯ ತನಕ ಗಗನಯಾತ್ರಿಗಳು ಭೂಮಿಗೆ ಮರಳಿದ ಬಳಿಕ ಬಹಳಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಬಾಹ್ಯಾಕಾಶ ನೌಕೆಯ ದೋಷದ ಕಾರಣದಿಂದಾಗಿ ಸುನಿತಾ ವಿಲಿಯಮ್ಸ್ ಅವರ ಪುನರಾಗಮನ ಬಹಳಷ್ಟು ವಿಳಂಬಗೊಂಡಿತು. ಆದರೆ, ಅವರು ಭೂಮಿಗೆ ಮರಳಿದ ಬಳಿಕ, ಅವರ ಗಮನ ಸಂಪೂರ್ಣವಾಗಿ ಚೇತರಿಕೆ ಮತ್ತು ಮರು ಹೊಂದಾಣಿಕೆಗಳತ್ತ ಇರಲಿದೆ. ಉತ್ತಮವಾಗಿ ರೂಪಿತವಾದ ಪುನಶ್ಚೇತನ ಯೋಜನೆಯ ಮೂಲಕ, ಭೂಮಿಗೆ ಮರಳಿದ ಬಳಿಕ, ಸುನಿತಾ ವಿಲಿಯಮ್ಸ್ ಅವರು ತನ್ನ ಶಕ್ತಿ, ಸಮತೋಲನಗಳನ್ನು ಮರಳಿ ಪಡೆಯಲಿದ್ದಾರೆ.

ಬಜೆಟ್ 2025: ಭಾರತದ ಬಾಹ್ಯಾಕಾಶ ಕನಸಿಗೆ 13,416 ಕೋಟಿ ರೂಪಾಯಿಗಳ ಉತ್ತೇಜನ

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

click me!