
ನೀಡಿದ ಮಾತನ್ನು ತಪ್ಪುವುದು ಮತ್ತು ಸಂದರ್ಭ ಬಂದಾಗ ಬೆನ್ನು ತೋರಿಸಿ ಓಡುವುದು ಪಾಕಿಸ್ತಾನಕ್ಕೆ ಹೊಸದೇನಲ್ಲ. ಜಗತ್ತಿಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿ, ಸಮಯ ಬಂದಾಗ ಜಾರಿಕೊಳ್ಳುವುದರಲ್ಲಿ ತಾನು ಎತ್ತಿದ ಕೈ ಎಂಬುದನ್ನು ಇಸ್ಲಾಮಾಬಾದ್ ಮತ್ತೊಮ್ಮೆ ಸಾಬೀತುಪಡಿಸಿದೆ. ಇತ್ತೀಚೆಗೆ ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ದೇಶಗಳು ಸೇರಿ ಅದ್ದೂರಿಯಾಗಿ ಸಹಿ ಹಾಕಿದ್ದ ಮಕ್ಕಾ ರಕ್ಷಣಾ ಒಪ್ಪಂದ (Mecca Pact) ಇದಕ್ಕೆ ತಾಜಾ ಉದಾಹರಣೆಯಾಗಿದೆ. ಒಪ್ಪಂದಕ್ಕೆ ಸಹಿ ಹಾಕುವಾಗ ದೊಡ್ಡ ಮಟ್ಟದ ಬಿಲ್ಡಪ್ ನೀಡಿದ್ದ ಪಾಕಿಸ್ತಾನ, ಈಗ ಸೌದಿ ಅರೇಬಿಯಾಕ್ಕೆ ಸೇನಾ ನೆರವಿನ ಅಗತ್ಯ ಬಂದಾಗ ಕಳ್ಳಬಾಗಿಲ ಮೂಲಕ ಕಾಲ್ಕಿತ್ತಿದೆ.
ಕಳೆದ ತಿಂಗಳು ಪವಿತ್ರ ಭೂಮಿ ಮಕ್ಕಾದಲ್ಲಿ ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ದೇಶಗಳು ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ವೇಳೆ ಇಸ್ಲಾಮಾಬಾದ್‌ನಲ್ಲಿ ಭಾರಿ ವಿಜೃಂಭಣೆಯ ಪ್ರಚಾರ ಕೈಗೊಳ್ಳಲಾಗಿತ್ತು. ಒಂದು ದೇಶದ ಮೇಲಿನ ದಾಳಿಯನ್ನು ಮೂರೂ ದೇಶಗಳ ಮೇಲಿನ ಯುದ್ಧ ಘೋಷಣೆ ಎಂದು ಪರಿಗಣಿಸಲಾಗುವುದು. ಮೂರು ದೇಶಗಳು ಸೇರಿ ಜಂಟಿಯಾಗಿ ಶತ್ರುವನ್ನು ಮೆಟ್ಟಿಮಿಟ್ಟಲಿವೆ. ಇದು ಮುಸ್ಲಿಂ ಜಗತ್ತಿನ ಸಾಂಪ್ರದಾಯಿಕ 'ನ್ಯಾಟೋ' (NATO)" ಎಂದೆಲ್ಲಾ ಪಾಕಿಸ್ತಾನದ ನಾಯಕರು ಕೊಚ್ಚಿಕೊಂಡಿದ್ದರು.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಪ್ರಮುಖ ಟಿವಿ ಚಾನೆಲ್‌ಗಳಲ್ಲಿ ಭಾಗವಹಿಸಿ, ಸೌದಿ ಅರೇಬಿಯಾದ ನೆಲಕ್ಕೆ ತೊಂದರೆಯಾದರೆ ಅಥವಾ ಯೆಮೆನ್ ಯುದ್ಧದ ಬಿಸಿ ಸೌದಿಗೆ ತಟ್ಟಿದರೆ, ನಮ್ಮ ಪಡೆಗಳು ತಕ್ಷಣವೇ ರಂಗಕ್ಕಿಳಿಯಲಿವೆ. ಸೌದಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಗಂಭೀರ ಮಾತುಗಳನ್ನಾಡಿದ್ದರು. ಆದರೆ, ನಿಜವಾದ ಪರೀಕ್ಷೆಯ ಸಮಯ ಬಂದಾಗ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ರಾಜತಾಂತ್ರಿಕರು ಒಪ್ಪಂದದಲ್ಲಿದ್ದ ಒಂದು 'ಲೂಪ್‌ಹೋಲ್' (ಲೋಪದೋಷ) ಬಳಸಿ ಸುಲಭವಾಗಿ ಕಾಲ್ಕಿತ್ತಿದ್ದಾರೆ.
ಇತ್ತೀಚೆಗೆ ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಪ್ರಮುಖ ನಗರಗಳು ಮತ್ತು ಇಂಧನ ಸಂಸ್ಕರಣಾ ಘಟಕಗಳ ಮೇಲೆ ಭೀಕರ ಕ್ಷಿಪಣಿ ದಾಳಿಗಳನ್ನು ನಡೆಸಿದರು. ಈ ಹಂತದಲ್ಲಿ 'ಮಕ್ಕಾ ಒಪ್ಪಂದ'ದ ಪ್ರಕಾರ ಪಾಕಿಸ್ತಾನ ತನ್ನ ಸೈನ್ಯವನ್ನು ಸೌದಿಯ ರಕ್ಷಣೆಗೆ ಕಳುಹಿಸುತ್ತದೆ ಎಂದು ಇಡೀ ಜಗತ್ತು ನಿರೀಕ್ಷಿಸಿತ್ತು. ಆದರೆ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಸಜ್ಜದ್ ಹೈದರ್ ಖಾನ್, "ಸೌದಿ ಅರೇಬಿಯಾದ ನೆರವಿಗೆ ಸೈನಿಕರನ್ನು ಕಳುಹಿಸುವ ಯಾವುದೇ ಚರ್ಚೆಗಳು ಪ್ರಸ್ತುತ ನಡೆಯುತ್ತಿಲ್ಲ, ಸೂಕ್ತ ಸಮಯ ಬಂದಾಗ ನೋಡೋಣ ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ಸಂಪೂರ್ಣವಾಗಿ ನುಣುಚಿಕೊಂಡಿದ್ದಾರೆ. ಅತ್ತ ಸೌದಿ ಮೇಲೆ ಕ್ಷಿಪಣಿಗಳು ಬೀಳುತ್ತಿದ್ದರೂ, ರಕ್ಷಣಾ ಸಚಿವ ಖವಾಜಾ ಆಸಿಫ್ ತಮಗೆ ಯಾವುದೂ ತಿಳಿದೇ ಇಲ್ಲ ಎಂಬಂತೆ ನಟಿಸುತ್ತಿದ್ದಾರೆ.
ಪಾಕಿಸ್ತಾನ ಸೌದಿ ಅರೇಬಿಯಾವನ್ನು ಬಿಟ್ಟು ಓಡಲು ಪ್ರಮುಖವಾಗಿ ಮೂರು ಕಾರಣಗಳಿವೆ;
ಇರಾನ್ ಕೋಪದ ಭಯ; ಯೆಮೆನ್‌ನ ಹೌತಿ ಬಂಡುಕೋರರಿಗೆ ಇರಾನ್ ಸಂಪೂರ್ಣ ಬೆಂಬಲ ನೀಡುತ್ತಿದೆ. ಪಾಕಿಸ್ತಾನವು ಇರಾನ್ ಜೊತೆ ಸುದೀರ್ಘ ಗಡಿ ಹಂಚಿಕೊಂಡಿದೆ. ಹೌತಿಗಳ ವಿರುದ್ಧ ಸೌದಿಗೆ ಬೆಂಬಲವಾಗಿ ನಿಂತರೆ, ಇರಾನ್‌ನೊಂದಿಗೆ ನೇರ ವೈರತ್ವ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯ ಪಾಕಿಸ್ತಾನಕ್ಕಿದೆ.
ಆರ್ಥಿಕ ದಿವಾಳಿತನ; ಈಗಾಗಲೇ ತೀವ್ರ ಬಡತನ ಮತ್ತು ಆಂತರಿಕ ಭಯೋತ್ಪಾದನೆಯಿಂದ ನಲುಗುತ್ತಿರುವ ಪಾಕಿಸ್ತಾನಕ್ಕೆ, ಮತ್ತೊಂದು ವಿದೇಶಿ ಯುದ್ಧದಲ್ಲಿ ಭಾಗಿಯಾಗುವಷ್ಟು ಆರ್ಥಿಕ ಹಾಗೂ ಸೈನಿಕ ಸಾಮರ್ಥ್ಯವಿಲ್ಲ.
ಅಸಿಮ್ ಮುನೀರ್ ತಂತ್ರ; ಜನರಲ್ ಅಸಿಮ್ ಮುನೀರ್ ತಮ್ಮ ದೇಶವನ್ನು ಪ್ರಾದೇಶಿಕ ಯುದ್ಧಕ್ಕೆ ತಳ್ಳಲು ಬಯಸುವುದಿಲ್ಲ. ಹೀಗಾಗಿ, ಇರಾನ್‌ಗೆ ತೆರೆಮರೆಯಲ್ಲಿ ಮನವಿ ಮಾಡುತ್ತಾ, ಯುದ್ಧಭೂಮಿಯಿಂದ ದೂರ ಉಳಿದಿದ್ದಾರೆ.
ಪಾಕಿಸ್ತಾನಕ್ಕೆ ಉಚಿತ ಅಥವಾ ಅಗ್ಗದ ದರದಲ್ಲಿ ತೈಲ ಬೇಕಾದಾಗ, ಶತಕೋಟಿ ಡಾಲರ್ ಸಾಲ ಬೇಕಾದಾಗ ಅಥವಾ ಆರ್ಥಿಕ ನೆರವಿನ ಅಗತ್ಯವಿದ್ದಾಗ ಮೊದಲು ಓಡುವುದು ಸೌದಿ ಅರೇಬಿಯಾದ ಬಳಿಗೇ. ಆದರೆ, ಸೌದಿ ಅರೇಬಿಯಾ ತನ್ನ ಭದ್ರತೆಗಾಗಿ ಪಾಕ್ ಸೈನ್ಯದ ನೆರವು ಕೇಳಿದಾಗ ಇಸ್ಲಾಮಾಬಾದ್ ನೆಪಗಳನ್ನು ಹೇಳಿ ಕಾಲ್ಕೀಳುತ್ತಿದೆ.
ಪಾಕಿಸ್ತಾನದ ಈ ಮೋಸದ ಆಟದಿಂದಾಗಿ ಮುಸ್ಲಿಂ ಒಕ್ಕೂಟ ಹಾಗೂ 'ಉಮ್ಮಾ' ಭಾವನೆಗೆ ಭಾರಿ ಧಕ್ಕೆಯಾಗಿದೆ. ಪ್ರಸ್ತುತ ಸೌದಿ ಅರೇಬಿಯಾವನ್ನು ಹೌತಿಗಳ ದಾಳಿಯಿಂದ ರಕ್ಷಿಸಲು ಯಾರೂ ಇಲ್ಲದಂತಾಗಿದ್ದು, ಪಾಕಿಸ್ತಾನದ ಈ 'ಹಿಂಬಾಗಿಲ ಪಲಾಯನ' ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.