
ನಾವು ಪ್ರತಿದಿನ ರಾತ್ರಿ ಆಕಾಶದಲ್ಲಿ ಕಾಣುವ ಬೆಣ್ಣೆಯಂತಹ ಚಂದ್ರ ಹೇಗೆ ಹುಟ್ಟಿದ ಎಂದು ಎಂದಾದರೂ ಯೋಚಿಸಿದ್ದೀರಾ? ಈ ಪ್ರಶ್ನೆಗೆ ವಿಜ್ಞಾನಿಗಳು ಹಲವು ದಶಕಗಳಿಂದ ಬೇರೆ ಬೇರೆ ಉತ್ತರಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ, ಇತ್ತೀಚಿನ ವಿಜ್ಞಾನ ಸಂಶೋಧನೆಯೊಂದು ಬಾಹ್ಯಾಕಾಶ ಜಗತ್ತನ್ನೇ ಬೆರಗುಗೊಳಿಸುವಂತಹ ಆಶ್ಚರ್ಯಕರ ಸತ್ಯವನ್ನು ಹೊರಹಾಕಿದೆ. ನಾವೆಲ್ಲರೂ ಅಂದುಕೊಂಡಂತೆ ಚಂದ್ರನ ರಚನೆಗೆ ವರ್ಷಗಳು ಬೇಕಾಗಲಿಲ್ಲ, ಬದಲಿಗೆ ಕೇವಲ 5 ಗಂಟೆಗಳಲ್ಲಿ ಚಂದ್ರ ಸೃಷ್ಟಿಯಾಗಿದ್ದ ಎಂಬ ಹೊಸ ಸಿದ್ಧಾಂತ ಮುನ್ನೆಲೆಗೆ ಬಂದಿದೆ.
ಇಲ್ಲಿಯವರೆಗೆ ಬಾಹ್ಯಾಕಾಶ ವಿಜ್ಞಾನಿಗಳು ನಂಬಿದ್ದ ಸಿದ್ಧಾಂತದ ಪ್ರಕಾರ, ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಕಲ್ಲಿನಂತಹ ದೊಡ್ಡ ಕಾಯವೊಂದು ಭೂಮಿಗೆ ಡಿಕ್ಕಿ ಹೊಡೆದಿತ್ತು. ಈ ಭೀಕರ ಘರ್ಷಣೆಯಿಂದ ಭೂಮಿಯಿಂದ ಬೃಹತ್ ಪ್ರಮಾಣದ ಬಂಡೆಗಳು ಮತ್ತು ಧೂಳಿನ ಕಣಗಳು ಬಾಹ್ಯಾಕಾಶಕ್ಕೆ ಹಾರಿಬಿದ್ದವು. ಇವು ಭೂಮಿಯ ಸುತ್ತ ಉಂಗುರಾಕಾರದಲ್ಲಿ ಸುತ್ತಲು ಪ್ರಾರಂಭಿಸಿದವು. ಕಾಲಕ್ರಮೇಣ ಗುರುತ್ವಾಕರ್ಷಣೆಯ ಪ್ರಭಾವದಿಂದ ಈ ಶಿಲಾಖಂಡರಾಶಿಗಳು ಒಂದಕ್ಕೊಂದು ಸೇರಿಕೊಳ್ಳುತ್ತಾ, ತಿಂಗಳುಗಳು ಅಥವಾ ವರ್ಷಗಳ ಸುದೀರ್ಘ ಅವಧಿಯಲ್ಲಿ ಚಂದ್ರ ರೂಪುಗೊಂಡನು ಎಂದು ವಿಜ್ಞಾನಿಗಳು ಭಾವಿಸಿದ್ದರು.
ಆದರೆ, ಅಮೆರಿಕದ 'ಸೌತ್‌ವೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್' ಮತ್ತು 'ಅರಿಜೋನಾ ವಿಶ್ವವಿದ್ಯಾಲಯ'ದ ವಿಜ್ಞಾನಿಗಳ ತಂಡ ನಡೆಸಿದ ಹೊಸ ಅಧ್ಯಯನವು ಹಳೆಯ ಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಸಂಶೋಧಕಿ ಅಡೀನ್ ಡೆಂಟನ್ ಅವರ ನೇತೃತ್ವದಲ್ಲಿ ನಡೆದ ಈ ಅಧ್ಯಯನದ ವರದಿಯು ಪ್ರಸಿದ್ಧ 'ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್'ನಲ್ಲಿ ಪ್ರಕಟವಾಗಿದೆ.
ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ನಮ್ಮ ಸೌರವ್ಯೂಹವು ಅತ್ಯಂತ ಚಿಕ್ಕದಾಗಿದ್ದಾಗ, ಮಂಗಳ ಗ್ರಹದ ಗಾತ್ರದಲ್ಲಿದ್ದ 'ಥಿಯಾ' ಎಂಬ ಪ್ರೋಟೋಪ್ಲಾನೆಟ್ (ಪ್ರಾಚೀನ ಗ್ರಹ) ಅತ್ಯಂತ ವೇಗವಾಗಿ ಬಂದು ನೇರವಾಗಿ ಭೂಮಿಗೆ ಡಿಕ್ಕಿ ಹೊಡೆಯಿತು. ಈ ಕಲ್ಪನಾತೀತ ದುರಂತ ಘರ್ಷಣೆಯ ನಂತರ ಜರುಗಿದ ಬೆಳವಣಿಗೆಗಳನ್ನು ವಿಜ್ಞಾನಿಗಳು ಸೂಪರ್‌ಕಂಪ್ಯೂಟರ್ ಸಿಮ್ಯುಲೇಶನ್ (ತಂತ್ರಜ್ಞಾನದ ಆಧಾರಿತ ವಿನ್ಯಾಸ) ಮೂಲಕ ಪುನಃ ಸೃಷ್ಟಿಸಿ ವಿಶ್ಲೇಷಿಸಿದರು.
ವಿಜ್ಞಾನಿಗಳು ಈ ಬಾರಿ ಸೂಪರ್‌ಕಂಪ್ಯೂಟರ್‌ನಲ್ಲಿ ಸಿಮ್ಯುಲೇಶನ್ ನಡೆಸುವಾಗ ಕೇವಲ ಕಲ್ಲುಗಳ ಗಾತ್ರವನ್ನು ಮಾತ್ರ ಪರಿಗಣಿಸಲಿಲ್ಲ, ಬದಲಿಗೆ ಘರ್ಷಣೆಯ ಸಮಯದಲ್ಲಿ ಉಂಟಾದ ಬಂಡೆಗಳ ವಿಪರೀತ ತಾಪಮಾನ ಮತ್ತು ಅವುಗಳ ಸಾಂದ್ರತೆ ಅಥವಾ ಬಲವನ್ನು (Strength) ಪ್ರಮುಖ ಅಂಶವಾಗಿ ಸೇರಿಸಿಕೊಂಡರು.
ಈ ಹೊಸ ವಿಶ್ಲೇಷಣೆಯನ್ನು ಅಳವಡಿಸಿ ಸಿಮ್ಯುಲೇಶನ್ ಚಾಲನೆ ಮಾಡಿದಾಗ ವಿಜ್ಞಾನಿಗಳಿಗೆ ಆಶ್ಚರ್ಯ ಕಾಯ್ದಿತ್ತು. ಮಹಾ ಘರ್ಷಣೆಯ ನಂತರ ಭೂಮಿಯಿಂದ ಚಿಮ್ಮಿದ ದ್ರವ್ಯರಾಶಿಯು ಸುದೀರ್ಘ ಸಮಯ ಬಾಹ್ಯಾಕಾಶದಲ್ಲಿ ಸುತ್ತುತ್ತಾ ಕಾಯಲಿಲ್ಲ. ಬದಲಾಗಿ, ಘರ್ಷಣೆಯಾದ ತಕ್ಷಣವೇ ಕ್ಷಿಪ್ರವಾಗಿ ಒಂದಾಗಲು ಪ್ರಾರಂಭಿಸಿತು. ಕೇವಲ 5 ಗಂಟೆಗಳ ಅಲ್ಪಾವಧಿಯಲ್ಲಿ ಚಂದ್ರನ ಬಹುಪಾಲು ಆಕಾರವು ರೂಪುಗೊಂಡು, ಭೂಮಿಯ ಕಕ್ಷೆಯನ್ನು ಸೇರಿ ಸ್ಥಿರವಾಯಿತು ಎಂಬುದು ಈ ಸಂಶೋಧನೆಯಿಂದ ತಿಳಿದುಬಂದಿದೆ.
ಚಂದ್ರನ ಸೃಷ್ಟಿ ಕೇವಲ 5 ಗಂಟೆಗಳಲ್ಲಿ ಆಗಿದೆ ಎಂಬ ಈ ಸಿದ್ಧಾಂತವು ಸೌರಮಂಡಲದ ವಿಕಾಸದ ಅಧ್ಯಯನಕ್ಕೆ ಹೊಸ ದಾರಿಯನ್ನು ತೋರಿಸಿದೆ. ಚಂದ್ರನಲ್ಲಿರುವ ಶೇ. 80 ಕ್ಕಿಂತ ಹೆಚ್ಚು ಭಾಗವು ಭೂಮಿಯ ಹೊರಪದರಕ್ಕೆ (Mantle) ಹೋಲುತ್ತದೆ ಎಂಬುದಕ್ಕೆ ಇದುವರೆಗೆ ಸರಿಯಾದ ಉತ್ತರವಿರಲಿಲ್ಲ. ಆದರೆ, ಈ ತ್ವರಿತ ಸೃಷ್ಟಿಯ ಸಿದ್ಧಾಂತವು ಭೂಮಿಯ ಮೇಲ್ಮೈಯ ಭಾಗವೇ ಕ್ಷಣಾರ್ಧದಲ್ಲಿ ಪ್ರತ್ಯೇಕಗೊಂಡು ಚಂದ್ರನಾಗಿ ಬದಲಾಯಿತು ಎಂಬುದಕ್ಕೆ ಸೂಕ್ತ ಪುರಾವೆ ಒದಗಿಸುತ್ತದೆ.
ಬ್ರಹ್ಮಾಂಡದ ಇತಿಹಾಸದಲ್ಲೇ ಅತ್ಯಂತ ರೋಮಾಂಚಕಾರಿ ಎನ್ನಲಾದ ಈ ಘಟನೆ, ಭೂಮಿ ಮತ್ತು ಚಂದ್ರನ ನಡುವಿನ ಸಂಬಂಧವನ್ನು ವಿವರಿಸುವಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಕೇವಲ 5 ಗಂಟೆಗಳಲ್ಲಿ ನಡೆದ ಆ ಮಹಾ ಘಟನೆಯು ಇಂದು ನಮಗೆ ಪ್ರತಿದಿನ ಬೆಳಕು ನೀಡುವ ಸುಂದರ ಚಂದ್ರನನ್ನು ಕರುಣಿಸಿದೆ ಎಂಬುದು ನಿಜಕ್ಕೂ ವಿಸ್ಮಯಕಾರಿ ಸತ್ಯ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.