ಚಂದ್ರನ ಕಕ್ಷೆ ಸೇರುವ ಹೆದ್ದಾರಿಯಲ್ಲಿದೆ ಚಂದ್ರಯಾನ-3, ಮುಂದಿರುವ ಸವಾಲೇನು?

By Santosh Naik  |  First Published Aug 1, 2023, 3:03 PM IST

ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ಹಿಡಿಯಲು ಸಾಧ್ಯವಾಗದಿದ್ದರೆ, ಅದು ಸುಮಾರು 10 ದಿನಗಳ ನಂತರ 236 ಕಿಲೋಮೀಟರ್ ಭೂ ಪರಿಧಿಗೆ ಮರಳುತ್ತದೆ. ಪ್ರಸ್ತುತ, ಚಂದ್ರಯಾನವು ಗಂಟೆಗೆ 38,520 ಕಿಲೋಮೀಟರ್ ವೇಗದಲ್ಲಿ ಚಂದ್ರನ ಕಡೆಗೆ ಹೋಗುತ್ತಿದೆ. ಚಂದ್ರನತ್ತ ಸಾಗುವ ಹೆದ್ದಾರಿಯಲ್ಲಿ ಚಂದ್ರಯಾನ ನೌಕೆಯನ್ನು ದೂಡಲು 179 ಕೆಜಿ ಇಂಧನ ಬಳಸಲಾಗಿದೆ.
 


ಬೆಂಗಳೂರು (ಆ.1): ಭಾರತದ ಅತ್ಯಂತ ಮಹಾತ್ವಾಕಾಂಕ್ವೆಯ ಯೋಜನೆ ಸರಿಯಾಗಿ ಇಂದು ಚಂದ್ರನ ಹೆದ್ದಾರಿಯಲ್ಲಿದೆ. ಇದನ್ನು ಲೂನಾರ್‌ ಟ್ರಾನ್ಸ್‌ಫರ್‌ ಟ್ರಾಜೆಕ್ಟರಿ ಅಥವಾ ಟ್ರಾನ್ಸ್‌ ಲೂನಾರ್‌ ಇಂಜಕ್ಷನ್‌ ಎನ್ನಲಾಗಯತ್ತದೆ. ಆಗಸ್ಟ್‌ 1ರ ಮಧ್ಯರಾತ್ರಿಯ 20 ನಿಮಿಷಗಳ ಅವಧಿಯಲ್ಲಿ ಭೂಮಿಯ ಪರಿಭ್ರಮಣೆ ಮುಗಿಸಿದ ನೌಕೆಯನ್ನು ಚಂದ್ರನ ಹೆದ್ದಾರಿಗೆ ದೂಡಲಾಗಿದೆ. ಇದನ್ನು ಟ್ರಾನ್ಸ್‌ ಲೂನಾರ್‌ ಟ್ರಾಜೆಕ್ಟರಿ ಎನ್ನಲಾಗುತ್ತದೆ. ನೌಕೆಯ ಪ್ರಪಲ್ಶನ್‌ ಮಾಡ್ಯುಲ್‌ ಅನ್ನು (ನೌಕೆಯ ಇಂಜಿನ್‌ ರೀತಿ ಎಂದರ್ಥಮಾಡಿಕೊಳ್ಳಬಹುದು) 20 ನಿಮಿಷಗಳ ಕಾಲ ಸ್ವಿಚ್‌ ಆನ್‌ ಮಾಡಲಾಯಿತು. ಅಂದಾಜು 179 ಕೆಜಿ ಇಂಧನ ಬಳಸಿಕೊಂಡು ನೌಕೆಯನ್ನು ಚಂದ್ರನ ಹೆದ್ದಾರಿಗೆ ನೂಕಲಾಗಿದೆ. ಭೂಮಿಯ ಸುತ್ತ ನೌಕೆಯ ಐದು ಪರಿಭ್ರಮಣೆ ಮಾಡುವ ಸಲುವಾಗಿ ನೌಕೆ ಇಲ್ಲಿಯವರೆಗೂ 500-600 ಕೆಜಿ ಇಂಧನ ಬಳಕೆ ಮಾಡಿಕೊಳ್ಳಲಾಗಿದೆ. ಉಡಾವಣೆ ಮಾಡುವ ಸಮಯದಲ್ಲಿ ಪ್ರಪಲ್ಶನ್‌ ಮಾಡ್ಯುಲ್‌ನಲ್ಲಿ ಒಟ್ಟು 1696.39 ಕೆಜಿ ಇಂಧನ ತುಂಬಲಾಗಿತ್ತು. ಪ್ರಸ್ತುತ ಈಗ 1100-1200 ಕೆಜಿ ಇಂಧನ ನೌಕೆಯಲ್ಲಿದೆ. ಚಂದ್ರನ ಹೆದ್ದಾರಿಯಲ್ಲಿ ನೌಕೆ ಆಗಸ್ಟ್‌ 5ರವರೆಗೆ ಪ್ರಯಾಣ ಮಾಡಲಿದೆ.

ಆಗಸ್ಟ್‌ 5ರ ಸಂಜೆ 7.30ರ ವೇಳೆಗೆ ಚಂದ್ರನ ಮೊದಲ ಕಕ್ಷೆಗೆ ಚಂದ್ರಯಾನ-3 ನೌಕೆಯನ್ನು ಸೇರಿಸಬೇಕು. ಈ ಕಕ್ಷೆಯಿಂದ ಚಂದ್ರನ ಮೇಲ್ಮೈವರೆಗಿನ ಅಂತರ 11 ಸಾವಿರ ಕಿಲೋಮೀಟರ್‌ಗಳು. ಭೂಮಿಯ ಸುತ್ತ ಹೇಗೆ ಚಂದ್ರಯಾನ-3 ನೌಕೆ ಐದು ಬಾರಿ ಸುತ್ತಿದೆಯೋ, ಅದೇ ರೀತಿಯಲ್ಲಿ ಚಂದ್ರನ ಕಕ್ಷೆಯಲ್ಲೂ ಐದು ಬಾರಿ ಸುತ್ತಿ ಚಂದ್ರನ ಮೇಲ್ಮೈಗೆ ಸಮೀಪವಾಗಲಿದೆ. ಚಂದ್ರನಿಂದ 100 ಕಿಲೋಮೀಟರ್‌ ದೂರದಲ್ಲಿರುವವರೆಗೂ ನೌಕೆ ಸುತ್ತಲಿದೆ.

ಪ್ರಪಲ್ಶನ್‌ ಮಾಡ್ಯುಲ್‌ನಿಂದ ಆಗಸ್ಟ್‌ `17 ರಂದು ಲ್ಯಾಂಡರ್‌ ಬೇರ್ಪಡಲಿದೆ: ಚಂದ್ರನ 100 ಕಿಲೋಮೀಟರ್ ಕಕ್ಷೆಯನ್ನು ಆಗಸ್ಟ್‌ 17 ರಂದು ಸಾಧಿಸಲಾಗುತ್ತದೆ. ಅದೇ ದಿನ ಪ್ರಪಲ್ಶನ್‌ ಮಾಡ್ಯುಲ್‌ನಿಂದ ಲ್ಯಾಂಡರ್‌ ಮಾಡ್ಯುಲ್‌ ಬೇರ್ಪಡಲಿದೆ. ಆಗಸ್ಟ್‌ 18 ರಿಂದ 20ರವರೆಗೆ ಲ್ಯಾಂಡರ್‌ ಮಾಡ್ಯುಲ್‌ ಡಿಆರ್ಬಿಟ್‌ ಮಾಡಲು ಆರಂಭಿಸುತ್ತದೆ. ಅಂದರೆ, ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ನಿಧಾನವಾಗಿ ಚಂದ್ರನ 100x30 ಕಿಮೀ ಕಕ್ಷೆಗೆ ಹೋಗುತ್ತದೆ. ಇದರ ನಂತರ, ಲ್ಯಾಂಡಿಂಗ್ ಆಗಸ್ಟ್ 23 ರ ಸಂಜೆ 6 ಗಂಟೆಯ ವೇಳೆಗೆ ನಡೆಯಲಿದೆ.

ಚಂದ್ರನ ಗುರುತ್ವಾಕರ್ಷಣೆ ಸಿಗದಿದ್ದರೆ ಭೂಕಕ್ಷಗೆ ವಾಪಸ್‌: ಚಂದ್ರಯಾನ-3 ಪ್ರಸ್ತುತ ಗಂಟೆಗೆ 38,520 ಕಿಲೋಮೀಟರ್ ವೇಗದಲ್ಲಿ ಚಂದ್ರನತ್ತ ಸಾಗುತ್ತಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಭೂಕಕ್ಷೆ ಸುತ್ತುವಾಗ ಹೇಗೆ ಚಂದ್ರಯಾನ-3 ನೌಕೆಯ ವೇಗವನ್ನು ಹೆಚ್ಚಿಸಲಾಯಿತೋ, ಅದೇ ರೀತಿ ಚಂದ್ರನ ಕಕ್ಷೆ ಸುತ್ತಿ ಮೇಲ್ಮೈ ಸನಿಹ ಹೋಗುವವರೆಗೂ ನೌಕೆಯ ವೇಗವನ್ನು ವಿಜ್ಞಾನಿಗಳು ಪ್ರತಿದಿನ ಕಡಿಮೆ ಮಾಡುತ್ತಾ ಬರುತ್ತಾರೆ. ಚಂದ್ರನ ಮೇಲ್ಮೈನಿಂದ 11 ಸಾವಿರ ಕಿಲೋಮೀಟರ್‌ ದೂರದಲ್ಲಿ ಚಂದ್ರನ ಗುರುತ್ವಾಕರ್ಷಣೆಯೂ ಶೂನ್ಯವಾಗಿರಲಿದ್ದು, ಭೂಮಿಯ ಗುರುತ್ವಾಕರ್ಷಣೆ ಕೂಡ ಶೂನ್ಯವಾಗಿರುತ್ತದೆ. ಇದನ್ನು ಎಲ್‌1 ಪಾಯಿಂಟ್‌ ಎನ್ನಲಾಗುತ್ತದೆ. ಚಂದ್ರನ ಗುರುತ್ವಾಕರ್ಷಣೆಯು ಭೂಮಿಯ ಗುರುತ್ವಾಕರ್ಷಣೆಗಿಂತ 6 ಪಟ್ಟು ಕಡಿಮೆ. ಅದಕ್ಕಾಗಿಯೇ ಚಂದ್ರಯಾನ-3 ರ ವೇಗವನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ಅದು ಚಂದ್ರನ ಕಕ್ಷೆಯನ್ನು ಹಿಡಿಯಲು ಸಾಧ್ಯವಾಗುವುದಿಲ್ಲ. ಹಾಗಂತ ಗಾಬರಿಯಾಗುವ ಅಗತ್ಯವಿಲ್ಲ, ಚಂದ್ರನ ಕಕ್ಷೆ ಹಿಡಿಯಲು ಸಾಧ್ಯವಾಗದೇ ಇದ್ದರೂ ಚಂದ್ರಯಾನವು 3.69 ಲಕ್ಷ ಕಿಲೋಮೀಟರ್‌ಗಳಿಂದ ಭೂಮಿಯ ಐದನೇ ಕಕ್ಷೆಯ ಪೆರಿಜಿಗೆ ಅಂದರೆ 230 ಗಂಟೆಗಳಲ್ಲಿ 236 ಕಿಲೋಮೀಟರ್‌ಗೆ ಹಿಂತಿರುಗುತ್ತದೆ. ಈ ಪ್ರಯಾಣಕ್ಕೆ 10 ದಿನಗಳು ಬೇಕಾಗುತ್ತದೆ.

Latest Videos

undefined

ನಾಲ್ಕೇ ದಿನದಲ್ಲಿ ಚಂದ್ರನತ್ತ ಹೋಗುತ್ತೆ ಅಮೆರಿಕಾ, ಭಾರತಕ್ಕೆ ಏಕೆ 42 ದಿನ?

ನೌಕೆಯ ವೇಗದಲ್ಲಿ ಭಾರೀ ಇಳಿಕೆ: ಆಗಸ್ಟ್ 5 ರಿಂದ ಆಗಸ್ಟ್ 23 ರವರೆಗೆ ಚಂದ್ರಯಾನ-3 ರ ವೇಗವನ್ನು ನಿರಂತರವಾಗಿ ಕಡಿಮೆ ಮಾಡಲಾಗುತ್ತದೆ. ಚಂದ್ರನ ಗುರುತ್ವಾಕರ್ಷಣೆ ಅಂದಾಜಿನಲ್ಲಿ ಹೇಳುವುದಾದರೆ, ಪ್ರಸ್ತುತ ಚಂದ್ರಯಾನ-3 ರ ವೇಗವು ಬಹಳ ಹೆಚ್ಚಾಗಿದೆ. ಇದನ್ನು ಸೆಕೆಂಡಿಗೆ 1 ಕಿಲೋಮೀಟರ್‌ಗೆ ಇಳಿಸಬೇಕು. ಅಂದರೆ ಗಂಟೆಗೆ 3600 ಕಿಲೋಮೀಟರ್ ವೇಗ. ಈ ವೇಗದಲ್ಲಿದ್ದರೆ ಮಾತ್ರವೇ ಚಂದ್ರಯಾನ-3, ಚಂದ್ರನ ಕಕ್ಷೆಯನ್ನು ಹಿಡಿಯಲಿದೆ. ನಂತರ ಕ್ರಮೇಣ ಅದನ್ನು ದಕ್ಷಿಣ ಧ್ರುವದಲ್ಲಿ ಇಳಿಸಲಾಗುತ್ತದೆ.

ಆಸ್ಟ್ರೇಲಿಯಾದ ರಾತ್ರಿ ಆಕಾಶದಲ್ಲಿ ಕಂಡ ಚಂದ್ರಯಾನ-3, ಫೋಟೋ ವೈರಲ್‌!

ಸಂಪೂರ್ಣ ತಿರುಗಲಿದೆ ಪ್ರಪಲ್ಶನ್‌ ಮಾಡ್ಯುಲ್‌ ಮುಖ: ಇಲ್ಲಿಯವರೆಗೆ ಚಂದ್ರಯಾನ-3 ರ ಇಂಟಿಗ್ರೇಟೆಡ್ ಮಾಡ್ಯೂಲ್ ಚಂದ್ರನ ಕಡೆಗೆ ಮುಖ ಮಾಡಿತ್ತು. ಚಂದ್ರನ ಹೆದ್ದಾರಿಯ ಪ್ರಯಾಣದಲ್ಲಿ ಅದನ್ನು ಸಂಪೂರ್ಣವಾಗಿ ತಿರುಗಿಸಲಾಗುತ್ತದೆ. ಅದಕ್ಕೆ ಕಾರಣವೂ ಇದೆ. ಇದರಿಂದ ಚಂದ್ರಯಾನ-3ಯನ್ನು ಕಕ್ಷೆಗೆ ಇಳಿಸುವಾಗ ಅಥವಾ ಡಿಬೂಸ್ಟ್ ಮಾಡುವಾಗ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಡಿಆರ್ಬಿಟಿಂಗ್‌ ಎಂದರೆ ಚಂದ್ರಯಾನ-3 ಸುತ್ತುತ್ತಿರುವ ವಿರುದ್ಧ ದಿಕ್ಕಿನಲ್ಲಿ ಚಲಿಸುವುದು ಎಂದರ್ಥ. ಡೀಬೂಸ್ಟಿಂಗ್ ಎಂದರೆ ವೇಗವನ್ನು ಕಡಿಮೆ ಮಾಡುವುದು. ಅಂತೆಯೇ, ಚಂದ್ರಯಾನ-3 ರ ವೇಗವನ್ನು ಕಡಿಮೆ ಮಾಡುವ ಮೂಲಕ, ಅದರ ಲ್ಯಾಂಡರ್ ಅನ್ನು ದಕ್ಷಿಣ ಧ್ರುವದ ಬಳಿ ಇಳಿಸಲಾಗುತ್ತದೆ.

click me!