ನಾಲ್ಕೇ ದಿನದಲ್ಲಿ ಚಂದ್ರನತ್ತ ಹೋಗುತ್ತೆ ಅಮೆರಿಕಾ, ಭಾರತಕ್ಕೆ ಏಕೆ 42 ದಿನ?
ಅಮೆರಿಕಾದ ನಾಸಾ ತನ್ನ ಚಂದ್ರಯಾನಕ್ಕೆ ತೆಗೆದುಕೊಳ್ಳುವ ಸಮಯ ಬರೀ ನಾಲ್ಕು ದಿನ ಮಾತ್ರ. ಹಾಗಿದ್ದಾಗ ಭಾರತ ತನ್ನ ಚಂದ್ರಯಾನಕ್ಕೆ 42 ದಿನಗಳು ಏಕೆ ತೆಗೆದುಕೊಳ್ಳುತ್ತಿದೆ ಎನ್ನುವುದು ಬಹುತೇಕ ಎಲ್ಲರ ಪ್ರಶ್ನೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ಭೌತಶಾಸ್ತ್ರ, ಇನ್ನೊಂದು ವೆಚ್ಚ.
ನವದೆಹಲಿ (ಜು.17): ಚಂದ್ರ ನೇರವಾಗಿ ನಮ್ಮ ಬರಿಗಣ್ಣಿಗೆ ಕಾಣುವಷ್ಟು ಹತ್ತಿರದಲ್ಲಿದ್ದಾನೆ. ಭೂಮಿಗೂ ಚಂದ್ರನಿಗೂ ಇರುವ ಅಂತರ 3.83 ಲಕ್ಷ ಕಿಲೋಮೀಟರ್ ಮಾತ್ರ. ರಾಕೆಟ್‌ನ ವೇಗಕ್ಕೆ ಹೋಲಿಸುವುದಾದರೆ, ಈ ದೂರವನ್ನು ನಾಲ್ಕು ದಿನಗಳಲ್ಲಿ ಕ್ರಮಿಸಬಹುದು. ಹೆಚ್ಚೆಂದರೆ ಒಂದು ವಾರ. ಹಾಗಿದ್ದರೂ ಭಾರತ ಯಾಕೆ ತನ್ನ ರಾಕೆಟ್‌ಅನ್ನು ನೇರವಾಗಿ ಚಂದ್ರನಿಗೆ ಕಳಿಸೋದಿಲ್ಲ? ಪ್ರತಿ ಬಾರಿಯೂ ಚಂದ್ರಯಾನ ಮಾಡುವಾಗ, ಭೂಮಿಯ ಸುತ್ತ 5 ಹಾಗೂ ಚಂದ್ರನ ಸುತ್ತ 6 ಅಥವಾ 7 ಪರಿಭ್ರಮಣೆ ಮಾಡುವುದೇಕೆ ಎನ್ನುವ ಪ್ರಶ್ನೆಗಳು ಕಾಡುತ್ತಿರಬಹುದು. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ನಾಲ್ಕು ದಿನಗಳಿಂದ ಒಂದು ವಾರದೊಳಗೆ ಚಂದ್ರನ ಮೇಲೆ ತನ್ನ ನೌಕೆಗಳನ್ನು ತಲುಪಿಸುತ್ತದೆ. ಇಸ್ರೋ ಇಂಥ ಕೆಲಸಗಳನ್ನು ಏಕೆ ಮಾಡೋದಿಲ್ಲ ಎನ್ನುವ ಪ್ರಶ್ನೆಗಳು ನಿಮ್ಮಲ್ಲಿ ಇರಬಹುದು. ನಾಲ್ಕು ದಿನಗಳ ಬದಲು ಚಂದ್ರನಲ್ಲಿಗೆ ನೌಕೆ ತಲುಪಿಸಲು 40 ಅಥವಾ 42 ದಿನಗಳನ್ನು ತೆಗೆದುಕೊಳ್ಳುವುದರ ಹಿಂದೆ ನಿರ್ದಿಷ್ಟ ಕಾರಣವೇನಾದರೂ ಇದೆಯೇ ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ. ಇದಕ್ಕೆ ಎರಡು ಕಾರಣಗಳಿವೆ. ಬಾಹ್ಯಾಕಾಶ ನೌಕೆಯನ್ನು ಭೂಮಿಯ ಸುತ್ತಲೂ ತಿರುಗಿಸುವ ಮೂಲಕ ನಿಗದಿತ ಗ್ರಹಕ್ಕೆ ಕಳುಹಿಸುವ ಪ್ರಕ್ರಿಯೆಯು ಭಾರೀ ಅಗ್ಗ.
ಹಾಗಂತ ಚಂದ್ರನಲ್ಲಿಗೆ ನೇರವಾಗಿ ರಾಕೆಟ್‌ಅನ್ನು ಕಳಿಸುವ ಶಕ್ತಿ ಇಸ್ರೋಗೆ ಇಲ್ಲವೆಂದಲ್ಲ. ಆದರೆ, ಇಸ್ರೋ ಯೋಜನೆಗಳಿಗೂ ನಾಸಾ ಯೋಜನೆಗಳಿಗೂ ಅಗಾಧ ವ್ಯತ್ಯಾಸವಿದೆ. ಹಣಕಾಸು ವಿಚಾರದಲ್ಲಿ ನಾಸಾಗೆ ಅಲ್ಲಿನ ಸರ್ಕಾರ ಹಾಗೂ ಕಾರ್ಪೋರೇಟ್ ವಲಯದ ದೊಡ್ಡ ಪ್ರಮಾಣದ ನೆರವು ಸಿಗುತ್ತದೆ. ಅದರೊಂದಿಗೆ ನಾಸಾದ ಬಳಿ ಇರುವಂತ ದೈತ್ಯ ಹಾಗೂ ಶಕ್ತಿಶಾಲಿ ರಾಕೆಟ್‌ಗಳು ಇಸ್ರೋ ಬಳಿಯಲ್ಲಿಲ್ಲ. ಪ್ರಸ್ತುತ ನಾಸಾ ತನ್ನ ಆರ್ಟೆಮಿಸ್ ಯೋಜನೆಗೆ ಬಳಸುತ್ತಿರುವ ಎಸ್‌ಎಲ್‌ಎಸ್ ರಾಕೆಟ್ ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್‌ಗಳು. ಇದರಿಂದಾಗಿ ಕೇವಲ ನಾಲ್ಕೇ ದಿನಗಳಲ್ಲಿ ನಾಸಾ ತನ್ನ ನೌಕೆಯನ್ನು ಚಂದ್ರನಲ್ಲಿಗೆ ತಲುಪಿಸುತ್ತದೆ. ಇಂಥ ರಾಕೆಟ್‌ಗಳ್ನು ನಿರ್ಮಿಸಲು ಶತಕೋಟಿಯ ಲೆಕ್ಕದಲ್ಲಿ ಹಣ ಬೇಕಾಗುತ್ತದೆ. ಎಸ್‌ಎಲ್‌ಎಸ್ ರಾಕೆಟ್‌ಗಾಗಿ ನಾಸಾ ಮಾಡಿರುವ ವೆಚ್ಚ ಬರೋಬ್ಬರಿ 11.8 ಬಿಲಿಯನ್ ಅಮೆರಿಕನ್ ಡಾಲರ್.
2010 ರಲ್ಲಿ, ಚೀನಾ ಚಾಂಗ್'ಇ-2 ಮಿಷನ್ ಅನ್ನು ಚಂದ್ರನಲ್ಲಿಗೆ ಕಳುಹಿಸಿತು. ಕೇವಲ ನಾಲ್ಕೇ ದಿನದಲ್ಲಿಇದು ಚಂದ್ರನನ್ನು ತಲುಪಿತ್ತು. ಚಾಂಗ್‌ಇ-3 ಕೂಡ ಇಷ್ಟೇ ಸಮಯದಲ್ಲಿ ಚಂದ್ರನನ್ನು ಮುಟ್ಟಿತ್ತು. ಸೋವಿಯತ್ ಒಕ್ಕೂಟದ ಮೊದಲ ಚಂದ್ರಯಾನ ಲೂನಾ-1 ಕೇವಲ 36 ಗಂಟೆಗಳಲ್ಲಿ ಚಂದ್ರನ ಸಮೀಪ ತಲುಪಿತು. ಅಮೆರಿಕದ ಅಪೊಲೊ-11 ಕಮಾಂಡ್ ಮಾಡ್ಯೂಲ್ ಕೊಲಂಬಿಯಾ ಕೂಡ ಮೂರು ಗಗನಯಾತ್ರಿಗಳೊಂದಿಗೆ ನಾಲ್ಕು ದಿನಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ ತಲುಪಿತ್ತು. ಚೀನಾ, ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ಈ ಬಾಹ್ಯಾಕಾಶ ನೌಕೆಗಳಿಗೆ ದೊಡ್ಡ ರಾಕೆಟ್‌ಗಳನ್ನು ಬಳಸಿದ್ದವು. ಚೀನಾ ಈಗ ಚಾಂಗ್ ಝೆಂಗ್ 3ಸಿ ರಾಕೆಟ್ ಬಳಸುತ್ತಿದೆ. ಈ ಕಾರ್ಯಾಚರಣೆಯ ವೆಚ್ಚ 1026 ಕೋಟಿ ರೂಪಾಯಿಗಳು. ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನ ಉಡಾವಣೆ ವೆಚ್ಚ 550 ಕೋಟಿಗಳಿಂದ 1000 ಕೋಟಿಗಳವರೆಗೆ ಇರುತ್ತದೆ. ಇಸ್ರೋದ ರಾಕೆಟ್‌ನ ಉಡಾವಣೆ ವೆಚ್ಚ 150 ರಿಂದ 450 ಕೋಟಿ ಮಾತ್ರ ಆಗಿರುತ್ತದೆ.
ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯ, ಇಂದಿಗೂ ಸಿಂಪಲ್ ಲೈಫ್ ಬದುಕುತ್ತಿರುವ ರಾಕೇಶ್ ಶರ್ಮ!
ಬಾಹ್ಯಾಕಾಶ ನೌಕೆಯಲ್ಲಿ ಇಂಧನದ ಪ್ರಮಾಣವು ಸೀಮಿತವಾಗಿದೆ. ಇದನ್ನು ದೀರ್ಘಕಾಲದವರೆಗೆ ಬಳಸಬೇಕಾಗುತ್ತದೆ. ಆದ್ದರಿಂದಲೇ ಅದನ್ನು ನೇರವಾಗಿ ಬೇರೆ ಗ್ರಹಕ್ಕೆ ಕಳುಹಿಸುವುದಿಲ್ಲ. ಹೀಗಾದಲ್ಲಿ ಅದರಲ್ಲಿನ ಎಲ್ಲಾ ಇಂಧನ ಖಾಲಿಯಾಗುತ್ತದೆ. ಇದರಿಂದಾಗ ತನ್ನ ಗುರಿ ಪೂರ್ಣಗೊಳಿಸಲು ಸಾಧ್ಯವಾಗೋದಿಲ್ಲ. ಅದಕ್ಕಾಗಿಯೇ ಭೂಮಿಯ ಸುತ್ತ ತಿರುಗುವಾಗ ಕಡಿಮೆ ಇಂಧನವನ್ನು ಬಳಸಿ ನೌಕೆಯನ್ನು ಮುಂದಕ್ಕೆ ಚಲಿಸಲಾಗುತ್ತದೆ.
ಆಸ್ಟ್ರೇಲಿಯಾದ ರಾತ್ರಿ ಆಕಾಶದಲ್ಲಿ ಕಂಡ ಚಂದ್ರಯಾನ-3, ಫೋಟೋ ವೈರಲ್!
ರಾಕೆಟ್‌ಗಳು ಭೂಮಿಯ ಚಲನೆ ಹಾಗೂ ಗುರುತ್ವಾಕರ್ಷಣೆಯಿಂದ ಬಲವನ್ನು ಪಡೆದುಕೊಂಡು ತನ್ನ ಪ್ರಯಾಣವನ್ನು ಸುಗಮಮವಾಗಿ ಮಾಡುತ್ತದೆ. ಭೂಮಿಯಲ್ಲಿ ಕುಳಿತ ಇಸ್ರೋ ವಿಜ್ಞಾನಿಗಳು ಪ್ರತಿ ಕಕ್ಷೆ ಪೂರ್ಣವಾದ ಬಳಿಕ ಅದನ್ನು ಇನ್ನಷ್ಟು ಎತ್ತರದ ಕ್ಷಕೆಗೆ ಏರಿಸುವ ಪ್ರಯತ್ನ ಮಾಡುತ್ತಾರೆ. ಭೂಮಿಯು ಪ್ರತಿ ಗಂಟೆಗೆ 1600 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ನೌಕೆಗಳು ಇದರ ಲಾಭ ಪಡೆದುಕೊಳ್ಳುತ್ತದೆ. ಕ್ಷಕೆಗಳನ್ನು ಏರಿಸುವ ಪ್ರಕ್ರಿಯೆಯೇ ಸಮಯ ತೆಗೆದುಕೊಳ್ಳುತ್ತದೆ. ಅದರಿಂದಾಗಿ ಭಾರತದ ಚಂದ್ರಯಾನ 40 ರಿಂದ 42 ದಿನ ತೆಗೆದುಕೊಳ್ಳುತ್ತದೆ. ಇಸ್ರೋ ಈವರೆಗೂ ಮೂರು ಬಾರಿ ಚಂದ್ರಯಾನ-3 ನೌಕೆಯ ಕಕ್ಷೆಯನ್ನು ಬದಲಿಸಿದೆ.