ವಿಜ್ಞಾನ ಬರವಣಿಗೆ;  ಕೊಳ್ಳೇಗಾಲ ಶರ್ಮ, ಶ್ರೀನಿಧಿಗೆ ಅಂತಾರಾಷ್ಟ್ರೀಯ ಸ್ಥಾನ

Suvarna News   | Asianet News
Published : Oct 19, 2020, 04:52 PM ISTUpdated : Oct 19, 2020, 05:52 PM IST
ವಿಜ್ಞಾನ ಬರವಣಿಗೆ;  ಕೊಳ್ಳೇಗಾಲ ಶರ್ಮ, ಶ್ರೀನಿಧಿಗೆ ಅಂತಾರಾಷ್ಟ್ರೀಯ ಸ್ಥಾನ

ಸಾರಾಂಶ

ಕನ್ನಡದ ಇಬ್ಬರು ವಿಜ್ಞಾನ ಲೇಖಕರಿಗೆ ಅತ್ಯುನ್ನತ ಗೌರವ/ ಕೊಳ್ಳೇಗಾಲ ಶರ್ಮ ಹಾಗೂ ಟಿ. ಜಿ. ಶ್ರೀನಿಧಿಗೆ ಮನ್ನಣೆ/ ವೈಜ್ಞಾನಿಕ ಬೆಳವಣಿಗೆ ಮತ್ತು ಸಂಶೋಧನೆ/ ನವೆಂಬರ್ ಒಂದರಿಂದ ಶುರುವಾಗಲಿರುವ ಸಮ್ಮೇಳನ

ಬೆಂಗಳೂರು(ಅ. 19)  ಜರ್ಮನಿಯ ಫಾಲಿಂಗ್ ವಾಲ್ಸ್ ಪ್ರತಿಷ್ಠಾನ ಪ್ರಕಟಿಸುವ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ (Falling Walls Science Breakthroughs of the Year) ಪಟ್ಟಿಯಲ್ಲಿ ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಇಬ್ಬರು ಕನ್ನಡಿಗರು ಸ್ಥಾನಪಡೆದಿದ್ದಾರೆ.ಕೊಳ್ಳೇಗಾಲ ಶರ್ಮ ಹಾಗೂ ಟಿ. ಜಿ. ಶ್ರೀನಿಧಿ ಈ ಮನ್ನಣೆಗೆ ಪಾತ್ರರಾಗಿದ್ದು 2020ನೇ ಸಾಲಿನ ಫಾಲಿಂಗ್ ವಾಲ್ಸ್ ಪಟ್ಟಿಯ ಸೈನ್ಸ್ ಎಂಗೇಜ್‌ಮೆಂಟ್ ವಿಭಾಗದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.     

ಜರ್ಮನಿಯಲ್ಲಿ ನಡೆಯುವ ಪ್ರತಿಷ್ಠಿತ ಫಾಲಿಂಗ್ ವಾಲ್ಸ್ ವಾರ್ಷಿಕ ಸಮ್ಮೇಳನದ ಅಂಗವಾಗಿ ಈ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕೊರೋನಾವೈರಸ್ ಜಾಗತಿಕ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷದ ಸಮ್ಮೇಳನವನ್ನು ನ.1ರಿಂದ 10ರವರೆಗೆ ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತಿದೆ.

ಐಶ್ವರ್ಯಾ ಶ್ರೀಧರ್; ಕಿರಿ ವಯಸ್ಸಿನಲ್ಲಿ ಏರಿದ್ದು ಪೋಟೋಗ್ರಫಿಯ ಶಿಖರ

ಜರ್ಮನಿಯ ಬರ್ಲಿನ್ ಗೋಡೆಯನ್ನು ಕೆಡವಲಾಗಿದ್ದರ ನೆನಪಿನಲ್ಲಿ ನಡೆಯುವ ಈ ಸಮ್ಮೇಳನವು ವಿಜ್ಞಾನ ಪ್ರಸಾರಕ್ಕಿರುವ ಅಡ್ಡಗೋಡೆಗಳನ್ನು ನಿವಾರಿಸುವ ಉದ್ದೇಶ ಹೊಂದಿದೆ. ಈ ಸಮ್ಮೇಳನದ ಅಂಗವಾಗಿ ವರ್ಷದ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು ವಿಶ್ವದೆಲ್ಲೆಡೆಯ ಹಲವು ವಿಜ್ಞಾನಿಗಳು, ತಂತ್ರಜ್ಞರು, ವಿಜ್ಞಾನ ಸಂವಹನಕಾರರು ಅದರಲ್ಲಿ ಸ್ಥಾನ ಪಡೆದಿದ್ದಾರೆ. ಅಂತಿಮ ಸುತ್ತಿನ ಈ ಪಟ್ಟಿಯಿಂದ 10 ವಿಜೇತರನ್ನು ಆಯ್ಕೆಮಾಡಿ ನವೆಂಬರ್ 8ರಂದು ಪ್ರಕಟಿಸಲಾಗುವುದು.     

ಕೊಳ್ಳೇಗಾಲ ಶರ್ಮ: 
ಹಿರಿಯ ವಿಜ್ಞಾನ ಸಂವಹನಕಾರರಾದ ಕೊಳ್ಳೇಗಾಲ ಶರ್ಮರಿಗೆ ವಿಜ್ಞಾನ ಸಂವಹನದಲ್ಲಿ ಹಲವು ದಶಕಗಳ ಅನುಭವವಿದೆ. ಮೈಸೂರಿನ ಕೇಂದ್ರೀಯ ಆಹಾರ ವಿಜ್ಞಾನ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿರುವ ಅವರು ಈವರೆಗೆ ಸಾವಿರಾರು ಜನಪ್ರಿಯ ವಿಜ್ಞಾನ ಲೇಖನ ಹಾಗೂ ಅಂಕಣ ಬರಹಗಳನ್ನು, ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಪ್ರಶಸ್ತಿಗಳನ್ನು ಪಡೆದಿರುವ ಶರ್ಮ ತಮ್ಮ 'ಜಾಣಸುದ್ದಿ' ಪಾಡ್‌ಕಾಸ್ಟ್ ಸರಣಿಯಿಂದ ಜನಪ್ರಿಯರು. ಕಳೆದ ನಾಲ್ಕು ವರ್ಷಗಳಿಂದ ವಿಜ್ಞಾನದ ವಿಷಯಗಳನ್ನು ಧ್ವನಿರೂಪದಲ್ಲಿ ತಲುಪಿಸುತ್ತಿರುವ 'ಜಾಣಸುದ್ದಿ' ಸಂಚಿಕೆಗಳು ಇದೀಗ ಪ್ರತಿದಿನವೂ ಪ್ರಕಟವಾಗುತ್ತಿವೆ ಹಾಗೂ ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ಹೊಸದೊಂದು ಆಯಾಮವನ್ನು ಕಟ್ಟಿಕೊಟ್ಟಿವೆ. ಈ ಸರಣಿಗಾಗಿಯೇ ಶರ್ಮ ಅವರಿಗೆ ಫಾಲಿಂಗ್ ವಾಲ್ಸ್ ಮನ್ನಣೆ ದೊರೆತಿದೆ.

ಟಿ. ಜಿ. ಶ್ರೀನಿಧಿ:
ಟಿ. ಜಿ. ಶ್ರೀನಿಧಿ 2007ರಲ್ಲಿ ಪ್ರಾರಂಭಿಸಿದ ಇಜ್ಞಾನ ಜಾಲತಾಣದ ಮೂಲಕ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ವಿಷಯಗಳನ್ನು ಕನ್ನಡದ ಓದುಗರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪತ್ರಿಕಾ ಬರಹ ಹಾಗೂ ಪುಸ್ತಕಗಳ ಮೂಲಕವೂ ಪರಿಚಿತರಾಗಿರುವ ಅವರು ವಿಜ್ಞಾನ-ತಂತ್ರಜ್ಞಾನದ ಇ-ಪುಸ್ತಕಗಳು ಹಾಗೂ ವೀಡಿಯೋಗಳನ್ನು ಕೂಡ ಪ್ರಕಟಿಸಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ ಹಾಗೂ ಇಜ್ಞಾನ ಜಾಲತಾಣಕ್ಕಾಗಿ ಇಂಡಿಯನ್ ಬ್ಲಾಗರ್ ಅವಾರ್ಡ್ಸ್ ಗೌರವ ಪಡೆದಿದ್ದಾರೆ. ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ  ಕನ್ನಡ ದೈನಿಕವೊಂದಕ್ಕೆ ಅವರು ಬರೆದ 'ಕೊರೊನಾಲಜಿ' ಸರಣಿ ಬರಹಗಳಿಗಾಗಿ ಅವರಿಗೆ ಫಾಲಿಂಗ್ ವಾಲ್ಸ್ ಮನ್ನಣೆ ದೊರೆತಿದೆ. ಇಜ್ಞಾನ ಜಾಲತಾಣದಲ್ಲೂ ಪ್ರಕಟವಾದ ಈ ಸರಣಿಯ ಬರಹಗಳ ಸಂಕಲನವನ್ನು ಗೂಗಲ್ ಪ್ಲೇ ಬುಕ್ಸ್‌ನಲ್ಲಿ ಉಚಿತ ಇ-ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗಿದೆ.

ಸಮ್ಮೇಳನ ಜಾಲತಾಣದ ಕೊಂಡಿ ಇಲ್ಲಿದೆ

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ