ಚಂದ್ರನಲ್ಲಿ 4ಜಿ ನೆಟ್ವರ್ಕ್ ಸ್ಥಾಪಿಸಲು ನಾಸಾ ರೆಡಿ!

By Kannadaprabha NewsFirst Published Oct 19, 2020, 9:27 AM IST
Highlights

ಚಂದ್ರನಲ್ಲಿ 4ಜಿ ನೆಟ್ವರ್ಕ್ ಸ್ಥಾಪಿಸಲು ನಾಸಾ ರೆಡಿ!| ನೋಕಿಯಾ ಕಂಪನಿಗೆ 105 ಕೋಟಿ ರು.ಗೆ ಗುತ್ತಿಗೆ| ಚಂದ್ರನ ಮೇಲೆ ಮನುಷ್ಯ ಕುಳಿತು ಕೆಲಸ ಮಾಡಲು ಈ ಯತ್ನ

 

ಸ್ಯಾನ್‌ ಫ್ರಾನ್ಸಿಸ್ಕೋ(ಅ.19): ಚಂದ್ರನ ಮೇಲೂ 4ಜಿ ಎಲ್‌ಟಿಇ ಮೊಬೈಲ್‌ ನೆಟ್‌ವರ್ಕ್ ಸಿಗುವಂತೆ ಮಾಡಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ಪ್ರಸಿದ್ಧ ದೂರಸಂಪರ್ಕ ಕಂಪನಿ ನೋಕಿಯಾಗೆ 14.1 ಮಿಲಿಯನ್‌ ಡಾಲರ್‌ (ಸುಮಾರು 105 ಕೋಟಿ ರು.) ಮೊತ್ತದ ಕಾಮಗಾರಿಯನ್ನು ಗುತ್ತಿಗೆ ನೀಡಿದೆ.

ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೇರಲು ಅಮೆರಿಕ ‘ಟಿಪ್ಪಿಂಗ್‌ ಪಾಯಿಂಟ್‌’ ಎಂಬ 2775 ಕೋಟಿ ರು. ಮೌಲ್ಯದ ಯೋಜನೆ ರೂಪಿಸಿದೆ. ಅದರ ಅಂಗವಾಗಿ ಚಂದ್ರನ ಮೇಲೆ ಮೊಬೈಲ್‌ ನೆಟ್‌ವರ್ಕ್ ಸಿಗುವಂತೆ ಮಾಡುವ ಮೂಲಕ ಭೂಮಿ ಹಾಗೂ ಚಂದ್ರನ ನಡುವೆ ಅತ್ಯುತ್ತಮ ಗುಣಮಟ್ಟದ ಫೋಟೋ, ವಿಡಿಯೋ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವಂತೆ ಮತ್ತು ವೇಗವಾಗಿ ಸಂಪರ್ಕ ಸಾಧಿಸುವಂತೆ ಮಾಡುವ ಕಾರ್ಯ ಆರಂಭಿಸಿದೆ.

ಚಂದ್ರನ ಮೇಲೆ 4ಜಿ ನೆಟ್‌ವರ್ಕ್ ಸ್ಥಾಪನೆಯಾದ ನಂತರ ಭೂಮಿಯಿಂದ ಕಳುಹಿಸುವ ರೋವರ್‌ಗಳನ್ನು ಇಲ್ಲಿಂದಲೇ ಸುಲಭವಾಗಿ ನಿಯಂತ್ರಿಸಬಹುದು ಮತ್ತು ಬೇಕಾದ ಹಾಗೆ ಓಡಾಡಿಸಬಹುದು. ಆ ರೋವರ್‌ಗಳಿಂದ ಉತ್ಕೃಷ್ಟಗುಣಮಟ್ಟದ ಲೈವ್‌ ವಿಡಿಯೋಗಳನ್ನು ಪಡೆಯಬಹುದು. ಇದು ಚಂದ್ರನ ಮೇಲ್ಮೈ ಅಧ್ಯಯನಕ್ಕೆ ಇನ್ನಷ್ಟುನೆರವು ನೀಡಲಿದೆ.

ಏಕೆ ಬೇಕು ಮೊಬೈಲ್‌ ನೆಟ್ವರ್ಕ್?

2028ರೊಳಗೆ ಚಂದ್ರನ ಮೇಲೇ ವಿಜ್ಞಾನಿಗಳು ಕುಳಿತು ಸಂಶೋಧನೆ ನಡೆಸುವಂತಹ ವ್ಯವಸ್ಥೆಯನ್ನು ರೂಪಿಸಲು ನಾಸಾ ನಿರ್ಧರಿಸಿದೆ. ಮನುಷ್ಯರು ಚಂದ್ರನ ಮೇಲೆ ಉಳಿದುಕೊಳ್ಳಲು ಹಾಗೂ ಅಲ್ಲಿಂದಲೇ ಕೆಲಸ ಮಾಡಲು ಸಾಧ್ಯವಾಗುವಂತೆ ಮಾಡುವುದು ನಾಸಾದ ಉದ್ದೇಶ. ಇದು ಸಾಧ್ಯವಾಗಬೇಕು ಅಂದರೆ ಸಂವಹನ ಸುಧಾರಿಸಬೇಕು. ಅದಕ್ಕಾಗಿ 4ಜಿ ನೆಟ್‌ವರ್ಕ್ ಬೇಕು. ಜೊತೆಗೆ ಚಂದ್ರನ ಮೇಲೆ ದೀರ್ಘಕಾಲ ಬಾಳಿಕೆ ಬರುವ ವಿದ್ಯುತ್‌ ವ್ಯವಸ್ಥೆಯನ್ನೂ ರೂಪಿಸಲು ನಾಸಾ ಸಿದ್ಧತೆ ನಡೆಸುತ್ತಿದೆ.

ಹಿಂದಿನ ಪ್ರಯತ್ನ ಏನಾಗಿತ್ತು?

ಚಂದ್ರನ ಮೇಲೆ ಅಮೆರಿಕದ ಅಪೋಲೋ-17 ಬಾಹ್ಯಾಕಾಶ ನೌಕೆ ಇಳಿಯುವ ಜಾಗದಲ್ಲಿ ಎಲ್‌ಟಿಇ ನೆಟ್‌ವರ್ಕ್ ಸಿಗುವಂತೆ ಮಾಡಲು ಜರ್ಮನಿಯ ಬಾಹ್ಯಾಕಾಶ ಕಂಪನಿಯಾದ ಪಿಟಿಸೈಂಟಿಸ್ಟ್‌ ಹಾಗೂ ಬ್ರಿಟನ್ನಿನ ವೊಡಾಫೋನ್‌ ಜೊತೆ 2018ರಲ್ಲೇ ನಾಸಾ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಆ ಯೋಜನೆ ಆರಂಭವಾಗಿರಲಿಲ್ಲ.

click me!