ಬಾಹ್ಯಾಕಾಶ ನೌಕೆಗೆ ಕಲ್ಪನಾ ಚಾವ್ಲಾ ಹೆಸರು!

By Suvarna NewsFirst Published Oct 4, 2020, 1:13 PM IST
Highlights

2003ರ ಬಾಹ್ಯಾಕಾಶಯಾನದ ವೇಳೆ ಸಾವನ್ನಪ್ಪಿದ ಭಾರತೀಯ ಮೂಲದ ಗಗನಯಾತ್ರಿ| ಬಾಹ್ಯಾಕಾಶ ನೌಕೆಗೆ ಕಲ್ಪನಾ ಚಾವ್ಲಾ ಹೆಸರು| 

 

ವಾಷಿಂಗ್ಟನ್(ಅ.04)‌: 2003ರ ಬಾಹ್ಯಾಕಾಶಯಾನದ ವೇಳೆ ಸಾವನ್ನಪ್ಪಿದ ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಬಾಹ್ಯಾಕಾಶ ನೌಕೆಯೊಂದಕ್ಕೆ ಇಡುವ ಮೂಲಕ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಗೌರವ ಸಲ್ಲಿಸಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸರಕುಗಳನ್ನು ಹೊತ್ತ ‘ಎಸ್‌.ಎಸ್‌. ಕಲ್ಪನಾ ಚಾವ್ಲಾ’ ನೌಕೆ ವರ್ಜಿನಿಯಾ ಉಡಾವಣಾ ನೆಲೆಯಿಂದ ಶನಿವಾರ ಹಾರಾಟ ಕೈಗೊಂಡಿದೆ. ಇದರಲ್ಲಿ ವೈಜ್ಞಾನಿಕ ಸಂಶೋಧನೆಗಳು, ತಂತ್ರಜ್ಞಾನ ಉಪಕರಣಗಳು, ರಾಸಾಯನಿಕ ಉತ್ಪನ್ನಗಳು ಸೇರಿದಂತೆ ಸುಮಾರು 3,628 ಕೇಜಿ ತೂಕದ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರ ಸ್ಮರಣಾರ್ಥ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸುವ ನಾಸಾ ನೌಕೆಗಳಿಗೆ ಗಗನಯಾತ್ರಿಗಳ ಹೆಸರನ್ನು ಇಡುವ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. ನಾಥ್ರ್ರಾಪ್‌ ಗ್ರಮ್ಮನ್‌ ಸಿಗ್ನಸ್‌ ಸಿದ್ಧಪಡಿಸಿರುವ ನೌಕೆಗೆ ಕಲ್ಪನಾ ಚಾವ್ಲಾ ಹೆಸರನ್ನು ಇಡಲಾಗಿದೆ. ಈ ನೌಕೆ ಸೋಮವಾರ ಮುಂಜಾನೆ 5.20ರ ವೇಳೆಗೆ ಬಾಹ್ಯಾಕಾಶ ನಿಲ್ದಾಣವನ್ನು ತಲುಪುವ ನಿರೀಕ್ಷೆ ಇದೆ.

click me!