800 ವರ್ಷಗಳ ನಂತರ ಶನಿ-ಗುರು ಅಪರೂಪದ ಸಂಗಮ..!

By Kannadaprabha NewsFirst Published Dec 20, 2020, 9:40 AM IST
Highlights

ಬಾಹ್ಯಾಕಾಶ ವೀಕ್ಷಕರಿಗೆ ಒಂದು ಅಪರೂಪದ ಅವಕಾಶ. ಹೆಚ್ಚುಕಡಿಮೆ 800 ವರ್ಷಗಳ ಹಿಂದೆ ನಡೆದ ವಿದ್ಯಮಾನವೊಂದು ಈಗ ಮತ್ತೆ ಪುನಾರಾವರ್ತನೆಯಾಗಲಿದೆ!

-ಜಿ.ಎಂ. ಕೊಟ್ರೇಶ್

ಸೌರವ್ಯೂಹದ ಎರಡು ಮಹಾಗ್ರಹಗಳಾದ ಗುರು ಮತ್ತು ಶನಿ ಗ್ರಹಗಳು ಒಂದಕ್ಕೊಂದು ಸಮೀಪಿಸುತ್ತಿವೆ. ಇದೇ ತಿಂಗಳಲ್ಲಿ ಇವು ಒಂದಕ್ಕೊಂದು ಅತೀ ಹತ್ತಿರದಲ್ಲಿ ಕಾಣಿಸಿಕೊಳ್ಳಲಿವೆ. ಅದರಲ್ಲೂ ನಾಳೆ (21ರ ಸೋಮವಾರ) ಸಂಜೆ ಅವು ಜೊತೆಯಾಗಿ ಬೆಳಗುತ್ತವೆ. ಅಂದರೆ ಎರಡೂ ಒಂದಾದಂತೆ ಕಾಣಿಸುತ್ತವೆ!

ಈ ಘಟನೆ ಎರಡು ಕಾರಣಗಳಿಗಾಗಿ ಮಹತ್ವವನ್ನು ಪಡೆದಿದೆ. ಮೊದಲನೆಯದು ಇವು ಒಂದಕ್ಕೊಂದು ಇಷ್ಟುಹತ್ತಿರ ಬರುವುದೇ ಅಪರೂಪ. ಎರಡನೆಯದಾಗಿ ಸರಿಯಾಗಿ ದಕ್ಷಿಣಾಯಣ ಅಂತ್ಯದ ದಿನ ಅಂದರೆ ಭೂಮಿಯ ಉತ್ತರಾರ್ಧ ಗೋಳ ಸೂರ್ಯನಿಂದ ಅತಿ ದೂರ ತಲುಪಿದ ದಿನವೇ ಇವೂ ಒಂದಾಗುತ್ತಿವೆ. ಇದೂ ಕೂಡ ಅಪರೂಪವೇ.

ಬಾನಂಗಳದಲ್ಲಿ ಉಲ್ಕೆಗಳ ವಿಸ್ಮಯ; ಇದೊಂದು ಅಪೂರ್ವ ವಿದ್ಯಾಮಾನ

ಸೌರವ್ಯೂಹದ ಅತಿ ದೊಡ್ಡ ಸದಸ್ಯರಾದ ಇವು ಸೂರ್ಯನ ಸುತ್ತ ಅತಿ ನಿಧಾನವಾಗಿ ಸುತ್ತುತ್ತವೆ. ಗುರು ಗ್ರಹವು ಸೂರ್ಯನ ಸುತ್ತ ಒಂದು ಸುತ್ತು ಬರಲು ಭೂಮಿಯ ಲೆಕ್ಕದಲ್ಲಿ 12 ವರ್ಷಗಳಷ್ಟುಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಶನಿ ಗ್ರಹವು ಬಹುತೇಕ 30 ವರ್ಷಗಳಷ್ಟುಸಮಯ ತೆಗೆದುಕೊಳ್ಳುತ್ತದೆ. ಅಂದರೆ ಶನಿ ಗ್ರಹದ ಒಂದು ವರ್ಷ ಭೂಮಿಯ ಮೇಲಿನ 30 ವರ್ಷಗಳಿಗೆ ಸಮ!

ಹಾಗೆಯೇ ಗುರು ಗ್ರಹದ ಒಂದು ವರ್ಷ ನಮ್ಮ 12 ವರ್ಷಗಳಿಗೆ ಸಮ. ಹಾಗಾಗಿ ಇವೆರಡೂ ತಮ್ಮ ತಮ್ಮ ಪಥದಲ್ಲಿ ಸುತ್ತುತ್ತಾ ಒಂದಕ್ಕೊಂದು ಸಮೀಪದಲ್ಲಿರುವಂತೆ ಕಾಣಿಸಿಕೊಳ್ಳಲು ನೂರಾರು ವರ್ಷಗಳಷ್ಟುಕಾಲವಾಗುತ್ತದೆ. ಈ ಹಿಂದೆ ಅವು ಈ ರೀತಿಯಾಗಿ ಕಾಣಿಸಿಕೊಂಡಿದ್ದು 1226ರ ಮಾಚ್‌ರ್‍ 4ರಂದು. ಅಂದರೆ 795 ವರ್ಷಗಳಷ್ಟುಹಿಂದೆ! ಅಂಥ ಸಮಯ ಈಗ ಮತ್ತೆ ಬಂದಿದೆ. ಹಾಗಾಗಿ ಬಾಹ್ಯಾಕಾಶ ವೀಕ್ಷಕರಿಗೆ ಈ ವಿದ್ಯಮಾನ ಮಹತ್ವದ್ದೆನಿಸಿದೆ.

ನಾಳೆ, ನಾಡಿದ್ದು ಆಗಸದಲ್ಲಿ ವಿಸ್ಮಯ: ಮಿಸ್‌ ಮಾಡ್ದೆ ನೋಡಿ..!

ವಾಸ್ತವವಾಗಿ ಇವೆರಡೂ ದೈತ್ಯ ಕಾಯಗಳು ಭೌತಿಕವಾಗಿ ತಮ್ಮ ತಮ್ಮ ಪಥದಲ್ಲಿ ಒಂದಕ್ಕೊಂದು ಬಹುದೂರವೇ ಇದ್ದರೂ ಮಾ.21ರಂದು ಸೂರ್ಯನ ಸುತ್ತ ಚಲಿಸುವಾಗ ಭೂಮಿಯ ನೇರಕ್ಕೆ ಒಂದರ ಹಿಂದೊಂದರಂತೆ ಬರುತ್ತವೆ. ಹಾಗಾಗಿ ಭೂಮಿಯಿಂದ ನೋಡುವವರಿಗೆ ಒಂದಕ್ಕೊಂದು ತೀರಾ ಹತ್ತಿರ, ಬಹುತೇಕ ಎರಡೂ ಒಂದಾದಂತೆ ಹೆಚ್ಚು ಹೊಳಪಿನಿಂದ ಕಾಣಿಸುತ್ತವೆ.

ಯಾವ ಸಮಯದಲ್ಲಿ ನೋಡಬೇಕು?:

ನಮಗೆ ಸೂರ್ಯನಿರುವ ದಿಕ್ಕಿನ ಕಡೆಗೇ ಇವು ಬರುವುದರಿಂದ ರಾತ್ರಿಯ ವೇಳೆ ನಮಗೀ ದೃಶ್ಯ ಕಾಣಸಿಗದು. ಭೂಮಿಯ ಮೇಲೆ ಸೂರ್ಯೋದಯದ ಬಳಿಕ ಇವುಗಳ ಉದಯವಾಗಲಿದ್ದು, ಸಂಜೆ ಪಶ್ಚಿಮದಲ್ಲಿ ಸೂರ್ಯ ಮುಳುಗಿದ ಬಳಿಕ ಸುಮಾರು ಒಂದೆರಡು ತಾಸು ತಡವಾಗಿ ಇವೂ ಮುಳುಗುತ್ತವೆ.

ಹಾಗಾಗಿ ಸಂಜೆ ವೇಳೆ ಮಾತ್ರ ಈ ದೃಶ್ಯ ಕಾಣಲು ಸಾಧ್ಯ. ಆಸಕ್ತರು ಡಿಸೆಂಬರ್‌ 21ರ ಮುಸ್ಸಂಜೆ 6.30ರಿಂದ ಪಶ್ಚಿಮದ ಆಗಸದಲ್ಲಿ ಸ್ವಲ್ಪ ದಕ್ಷಿಣಕ್ಕೆ (ನೈಋುತ್ಯ), ಸುಮಾರು 30ರಿಂದ 35 ಡಿಗ್ರಿಯಷ್ಟುಎತ್ತರಕ್ಕೆ ಕಣ್ಣಾಡಿಸಿದರೆ ಈ ಜೋಡಿ ಕಾಯಗಳನ್ನು ಕಾಣಬಹುದು.

ಅನ್ಯಗ್ರಹದ ಜೊತೆ ಸ್ನೇಹ ಸಂಪಾದಿಸಲು ಮುಂದಾದ ಎಲನ್ ಮಸ್ಕ್; ಏನಿದು ಹೊಸ ಟಾಸ್ಕ್?

ಈ ರೀತಿ ಕಾಣಿಸಿಕೊಳ್ಳಲು ಪ್ರತಿ ಬಾರಿಯೂ 800 ವರ್ಷಗಳಷ್ಟುಸಮಯ ತೆಗೆದುಕೊಳ್ಳದಿದ್ದರೂ ನೂರಾರು ವರ್ಷಗಳಷ್ಟುಸಮಯವಂತೂ ಆಗುತ್ತದೆ. 2080ರ ಮಾಚ್‌ರ್‍ನಲ್ಲಿ ಮತ್ತೊಮ್ಮೆ ಮತ್ತೆ ಜೊತೆಯಾಗಿ ಕಾಣಿಸಲಿವೆ. ಅದನ್ನು ಬಿಟ್ಟರೆ ಮತ್ತೆ ಈ ಅವಕಾಶ ಸಿಗುವುದು 2400ನೇ ಇಸವಿಯಲ್ಲಿ ಅಂದರೆ 380 ವರ್ಷಗಳ ಬಳಿಕ! ಅದಕ್ಕೇ ಈಗಲೇ ಈ ಅವಕಾಶ ಉಪಯೋಗಿಸಿಕೊಳ್ಳಲು ಸಿದ್ಧರಾಗಿ. ಬರಿಗಣ್ಣಿನಿಂದ ಕಾಣಬಹುದಾದರೂ ದೂರದರ್ಶಕವಿದ್ದರೆ ಹೆಚ್ಚು ಸ್ಪಷ್ಟವಾಗಿ ಕಾಣಬಹುದು

click me!