ಅಂತರಿಕ್ಷದಲ್ಲಿ ಇಸ್ರೋ ಡಾಕಿಂಗ್‌: ಈ ಸಾಧನೆ ಮಾಡಿದ ಜಗತ್ತಿನ 4ನೇ ದೇಶ!

Published : Jan 17, 2025, 07:04 AM IST
ಅಂತರಿಕ್ಷದಲ್ಲಿ ಇಸ್ರೋ ಡಾಕಿಂಗ್‌: ಈ ಸಾಧನೆ ಮಾಡಿದ ಜಗತ್ತಿನ 4ನೇ ದೇಶ!

ಸಾರಾಂಶ

ಡಾಕಿಂಗ್ ಬಳಿಕ ಎರಡೂ ನೌಕೆಗಳನ್ನು ಒಂದು ಘಟಕವಾಗಿ ನಿಯಂತ್ರಿಸುವ ಪ್ರಯೋಗ ಕೂಡಾ ಯಶಸ್ವಿಯಾಗಿ ನಡೆಸಲಾಗಿದೆ. ಅನ್‌ಡಾಕಿಂಗ್ (ನೌಕೆಗಳ ಬೇರ್ಪಡುವಿಕೆ) ಮತ್ತು ಪವರ್ ಟ್ರಾನ್ಸಫರ್ ಪ್ರಕ್ರಿಯೆಗಳು ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ  ಇಸ್ರೋ

ಬೆಂಗಳೂರು(ಜ.17):  ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿಗೆ ಅಚ್ಚರಿಯ ಮೇಲೆ ಅಚ್ಚರಿ ನೀಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಮತ್ತೊಂದು ಐಸಿಹಾಸಿಕ ಸಾಧನೆ ಮಾಡಿದೆ. ಕಳೆದ ಡಿ.30ರಂದು ಹಾರಿಬಿಡಲಾಗಿದ್ದ ಸ್ಪೇಡೆಕ್ಸ್ 1 ಮತ್ತು ಸ್ಪೀಡೆಕ್ಸ್ 2 ನೌಕೆಗಳನ್ನು ಯಶಸ್ವಿಯಾಗಿ ಡಾಕಿಂಗ್ (ಪರಸ್ಪರ ಜೋಡಣೆ) ಮಾಡಲಾಗಿದೆ ಎಂದು ಇಸ್ರೋ ಶುಭ ಸುದ್ದಿ ನೀಡಿದೆ. 

ತನ್ಮೂಲಕ ಎರಡು ಬಾರಿ ಮುಂದೂಡಿ ಕೆಯಾಗಿದ್ದ ಪ್ರಯೋಗ ಯಶಸ್ವಿಯಾಗಿದೆ. ಇದರೊಂದಿಗೆ ಇಂಥ ಸಾಧನೆ ಮಾಡಿದ ವಿಶ್ವದ 4ನೇ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಿದೆ. ಇದುವರೆಗೆ ಅಮೆರಿಕ, ರಷ್ಯಾ, ಚೀನಾ ಮಾತ್ರವೇ ಈ ತಂತ್ರಜ್ಞಾನವನ್ನು ಸಿದ್ದಿಸಿಕೊಂಡಿದ್ದವು. 

History in Space: ಇಸ್ರೋ ಸ್ಪೇಡೆಕ್ಸ್‌ ಮಿಷನ್‌ ಯಶಸ್ವಿ; ಬಾಹ್ಯಾಕಾಶದಲ್ಲಿ ಉಪಗ್ರಹಗಳ ಡಾಕಿಂಗ್‌ ಪೂರ್ಣ!

ಈ ಕುರಿತು ಗುರುವಾರ ಬೆಳಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಇಸ್ರೋ, 'ಬಾಹ್ಯಾಕಾಶದ ಇತಿಹಾಸದಲ್ಲಿ ಭಾರತ ತನ್ನ ಹೆಸರನ್ನು ಜೋಡಣೆ ಮಾಡಿದೆ! ಗುಡ್ ಮಾರ್ನಿಂಗ್ ಇಂಡಿಯಾ, ಇಸ್ರೋದ ಸ್ಪೇಡೆಕ್ಸ್ ಯೋಜನೆಯು ಐತಿಹಾಸಿಕ ಡಾಕಿಂಗ್‌ನಲ್ಲಿ ಯಶಸ್ಸು ಸಾಧಿಸಿದೆ ಈ ಕ್ಷಣಕ್ಕೆ ಸಾಕ್ಷಿಯಾಗಲು ಹೆಮ್ಮೆಯಾಗುತ್ತಿದೆ' ಎಂದು ಸಂಭ್ರಮ ವ್ಯಕ್ತಪಡಿಸಿದೆ. ಜೊತೆಗೆ, 'ಡಾಕಿಂಗ್ ಬಳಿಕ ಎರಡೂ ನೌಕೆಗಳನ್ನು ಒಂದು ಘಟಕವಾಗಿ ನಿಯಂತ್ರಿಸುವ ಪ್ರಯೋಗ ಕೂಡಾ ಯಶಸ್ವಿಯಾಗಿ ನಡೆಸಲಾಗಿದೆ. ಅನ್‌ಡಾಕಿಂಗ್ (ನೌಕೆಗಳ ಬೇರ್ಪಡುವಿಕೆ) ಮತ್ತು ಪವರ್ ಟ್ರಾನ್ಸಫರ್ ಪ್ರಕ್ರಿಯೆಗಳು ಮುಂದಿನ ದಿನಗಳಲ್ಲಿ ನಡೆಯಲಿದೆ' ಎಂದು ಇಸ್ರೋ ಮಾಹಿತಿ ನೀಡಿದೆ.

ಏನಿದು ಡಾಕಿಂಗ್ ಮತ್ತು ಅನ್‌ಡಾಕಿಂಗ್? 

ಒಂದು ನೌಕೆ ಜೊತೆ ಇನ್ನೊಂದು ನೌಕೆ ಸೇರ್ಪಡೆಯಾಗುವುದು ಅಥವಾ ನಂಟು ಬೆಸೆಯುವುದಕ್ಕೆ ಡಾಕಿಂಗ್ ಎನ್ನಲಾಗುತ್ತದೆ. ಅನ್ ಡಾಕಿಂಗ್ ಎಂದರೆ, ಬಾಹ್ಯಾಕಾಶದಲ್ಲಿ ಪರಸ್ಪರ ಜೋಡಣೆ ಯಾಗಿದ್ದ ಎರಡು ನೌಕೆಗಳು ಬೇರ್ಪಡುವುದು.

ಡಾಕಿಂಗ್‌ನಿಂದ ಏನೇನು ಅನುಕೂಲ? 

• ಸ್ವದೇಶಿ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಗೆ ವಿವಿಧ ಭಾಗಗಳನ್ನು ಉಡಾವಣೆ ಮಾಡಿ ಜೋಡಣೆ ಮಾಡಬೇಕು. ಅದಕ್ಕೆ ಸ್ಪೇಡೆಕ್ಸ್‌ ಪ್ರಯೋಗ ತುಂಬಾ ಸಹಕಾರಿ 
• ಚಂದ್ರ ಹಾಗೂ ಅದರಿಂದಾಚೆಗಿನ ಯಾನಕ್ಕೆ ಡಾಕಿಂಗ್ ಅತಿ ಮುಖ್ಯ. ಅಂತರಿಕ್ಷದಲ್ಲೇ ನೌಕೆಗಳ ಜೋಡಣೆ, ಯಾತ್ರಿಕರು, ವಸ್ತುಗಳ ವರ್ಗಾವಣೆಗೂ ಅನುಕೂಲ

ಡಾಕಿಂಗ್ ಪ್ರಕ್ರಿಯೆ ನಡೆದಿದ್ದು ಹೇಗೆ? 

• ಚೇಸರ್ ಹಾಗೂ ಟಾರ್ಗೆಟ್ ಎಂಬ 2 ಉಪಗ್ರಹಗಳನ್ನು ಡಿ.30ರಂದು ಉಡಾವಣೆ ಮಾಡಲಾಗಿತ್ತು 
• ಹಂತಹಂತವಾಗಿ ಚೇಸರ್ ಉಪಗ್ರಹವನ್ನು ಟಾರ್ಗೆಟ್ ಸ್ಯಾಟಲೈಟ್ ಸನಿಹಕ್ಕೆ ನಿಧಾನವಾಗಿ ತರಲಾಯಿತು 
• ಸೆನ್ಸರ್‌ಗಳ ಮೂಲಕ ಚೇಸರ್ ಉಪಗ್ರಹವು ಟಾರ್ಗೆಟ್‌ನ ಡಾಕಿಂಗ್ ಪೋರ್ಟ್‌ಗೆ ಸುಸೂತ್ರ ಜೋಡಣೆಯಾಯಿತು 
• ಉಭಯ ಉಪಗ್ರಹಗಳ ನಡುವೆ ಸಂಪರ್ಕ, ಸಂವಹನ ನಡೆಯಿತು. ಇನ್ನು ಅನ್ ಡಾಕಿಂಗ್ ನಡೆಯಬೇಕು

ಇದು ಮಹತ್ವಾಕಾಂಕ್ಷಿ ಯೋಜನೆಗಳ ಮೆಟ್ಟಿಲು ಉಪಗ್ರಹಗಳ ಬಾಹ್ಯಾ ಕಾಶ ಡಾಕಿಂಗ್ ಪ್ರಕ್ರಿಯೆ ಯನ್ನು ಯಶಸ್ವಿಯಾಗಿ ಪೂರ್ಣಗೊ ಳಿಸಿದ ಇಸ್ರೋದ ವಿಜ್ಞಾನಿಗಳು ಹಾಗೂ ತಜ್ಞರಿಗೆ ಅಭಿನಂದನೆಗಳು. ಇದು ಮುಂಬರುವ ವರ್ಷಗಳಲ್ಲಿ ಕೈಗೊಳ್ಳಲಾಗುವ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಗಳಿಗೆ ಮೆಟ್ಟಿಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

475 ಕಿ.ಮೀ ಎತ್ತರದ ಬಾಹ್ಯಾಕಾಶದಲ್ಲಿ ಡಾಕಿಂಗ್‌ ಪ್ರಕ್ರಿಯೆಗೆ ಇಸ್ರೋ ಮತ್ತಷ್ಟು ಸನಿಹ

ಅಸಾಧ್ಯವಾದುದನ್ನೂ ಸಾಧಿಸಿ ತೋರಿಸಿದಿರಿ ಇಸ್ರೋಗೆ ಅಭಿನಂದನೆ. ಕೊನೆಗೂ ಸಾಧಿಸಿ ತೋರಿಸಿದಿರಿ. ಸ್ಪೇಡೆಕ್ಸ್ ಯೋಜನೆಯು ನಂಬಲಸಾಧ್ಯವಾದುದನ್ನು ಸಾಧಿಸಿ ತೋರಿಸಿದೆ. ಡಾಕಿಂಗ್ ಪೂರ್ಣಗೊಂಡಿದೆ ಹಾಗೂ ಇದು ಸಂಪೂರ್ಣವಾಗಿ ಸ್ವದೇಶಿ ಭಾರತೀಯ ಡಾಕಿಂಗ್ ವ್ಯವಸ್ಥೆಯಾಗಿದೆ. ಇದು ಭಾರತೀಯ ಬಾಹ್ಯಾಕಾಶ ಕೇಂದ್ರ, ಚಂದ್ರಯಾನ-4 ಹಾಗೂ ಗಗನಯಾನ ಯೋಜನೆಗಳಿಗೆ ದಾರಿಯನ್ನು ಸುಗಮಗೊಳಿಸಿದೆ. ಪ್ರಧಾನಿಯವರ ಪ್ರೋತ್ಸಾಹ ಬೆಂಗಳೂರಿನಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತಿದೆ ಎಂದು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. 

ಇದು ದೇಶದ ಮುಂದಿನ ಯೋಜನೆಗೆ ಮೈಲುಗಲ್ಲು ಸ್ಪೇಡೆಕ್ಸ್‌ ಯೋಜನೆಯ ಭಾಗವಾಗಿ ಉಪಗ್ರಹಗಳ ಡಾಕಿಂಗ್ ಅನ್ನು ಸಾಧಿಸಿದ ಇಸ್ರೋ ವಿಜ್ಞಾನಿಗಳು ಹಾಗೂ ಬಾಹ್ಯಾಕಾಶ ಎಂಜಿಯರ್‌ಗಳ ಅಸಾಧಾರಣ ಕಾರ್ಯದಿಂದ ನಮಗೆ ಅತ್ಯಧಿಕ ಹೆಮ್ಮೆಯಾಗಿದೆ. ಇದು ದೇಶದ ಸಾಧನೆಯಾಗಿದೆ. ಹಲವು ವರ್ಷಗಳಿಂದ ಬೆಳೆಸಿಕೊಂಡು ಬರಲಾಗಿರುವ ಮುಂದಿನ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಇದು ಮಹತ್ವದ ಮೈಲುಗಲ್ಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ