ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಎರಡು ಉಪಗ್ರಹಗಳ ಡಾಕಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಮೂಲಕ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರು (ಜ.16): ಕಕ್ಷೆಯಲ್ಲಿ ಚಲಿಸುತ್ತಿದ್ದ ಎರಡು ಉಪಗ್ರಹಗಳನ್ನು ಪರಸ್ಪರ ಕೇವಲ ಮೂರು ಮೀಟರ್‌ಗಳಷ್ಟು ಹತ್ತಿರಕ್ಕೆ ತಂದ ಕೆಲವು ದಿನಗಳ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜನವರಿ 16, ಗುರುವಾರದಂದು ಬೆಳಗ್ಗೆ ಸ್ಪೇಡೆಕ್ಸ್ ಯೋಜನೆಯ ಉಪಗ್ರಹಗಳ ಡಾಕಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
ಇಸ್ರೋ ಸ್ಪೇಡೆಕ್ಸ್ ಯೋಜನೆಯ ಯಶಸ್ಸನ್ನು ತನ್ನ ಸಾಮಾಜಿಕ ಜಾಲತಾಣ ಎಕ್ಸ್ ಅಧಿಕೃತ ಖಾತೆಯಲ್ಲಿ ಹೆಮ್ಮೆಯಿಂದ ಘೋಷಿಸಿದೆ. "ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ" ಎಂದು ಇಸ್ರೋ ಹೇಳಿದೆ. ಸ್ಪೇಡೆಕ್ಸ್ ಡಾಕಿಂಗ್ ಪ್ರಕ್ರಿಯೆ ಯಾವ ಯಾವ ಹಂತಗಳಲ್ಲಿ ನೆರವೇರಿತು ಎಂದು ಇಸ್ರೋ ವಿವರಿಸಿದೆ.
1. ಪರಸ್ಪರ 15 ಮೀಟರ್‌ಗಳ ಅಂತರ ಹೊಂದಿದ್ದ ಉಪಗ್ರಹಗಳನ್ನು ಜಾಗರೂಕವಾಗಿ ಚಲಿಸುವಂತೆ ಮಾಡಿ, ಅವುಗಳ ನಡುವಿನ ಅಂತರವನ್ನು ಕೇವಲ ಮೂರು ಮೀಟರ್‌ಗಳಿಗೆ ತಗ್ಗಿಸಲಾಯಿತು.
2. ಅವುಗಳನ್ನು ಪರಸ್ಪರ ಸರಿಯಾಗಿ ಹೊಂದಿಸುವ ಮೂಲಕ, ಡಾಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಈ ಮೂಲಕ ಎರಡು ಬಾಹ್ಯಾಕಾಶ ನೌಕೆಗಳು ಪರಸ್ಪರ ಒಂದಕ್ಕೊಂದು ಯಶಸ್ವಿಯಾಗಿ ಸಂಪರ್ಕ ಹೊಂದಿದವು.
3. ಉಪಗ್ರಹಗಳು ಒಂದಕ್ಕೊಂದು ಸಂಪರ್ಕಿಸಿದ ಬಳಿಕ, ಬಾಹ್ಯಾಕಾಶ ನೌಕೆಯನ್ನು ಜಾಗರೂಕವಾಗಿ ಹಿಂದಕ್ಕೆ ಸರಿಸಿ, ಉಪಗ್ರಹಗಳು ಒಂದಕ್ಕೊಂದು ಬಲವಾಗಿ ಹಿಡಿದುಕೊಂಡಿವೆ ಎಂದು ಖಚಿತ ಪಡಿಸಲಾಯಿತು.
4. ಅಂತಿಮವಾಗಿ, ಈ ಉಪಗ್ರಹ ವ್ಯವಸ್ಥೆಯನ್ನು ಲಾಕ್ ಮಾಡಿ, ಅವು ಸ್ಥಿರವಾಗಿರುವಂತೆ ಮಾಡಲಾಯಿತು.
ಈ ಹಂತಗಳು ಯಶಸ್ವಿಯಾಗುವ ಮೂಲಕ, ಇಸ್ರೋದ ಡಾಕಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿತು.
ಇಸ್ರೋ ಈ ಹಿಂದೆ ಜನವರಿ 7 ಮತ್ತು ಜನವರಿ 9ರಂದು ಡಾಕಿಂಗ್ ನಡೆಸಲು ಉದ್ದೇಶಿಸಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಆ ದಿನಗಳ ಡಾಕಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಯಿತು. ಈ ಉಪಗ್ರಹಗಳನ್ನು ಇಸ್ರೋ ಡಿಸೆಂಬರ್ 30ರಂದು ಉಡಾವಣೆಗೊಳಿಸಿತ್ತು.
ಜನವರಿ 12ರಂದು ಇಸ್ರೋ ತಾನು ಎರಡು ಉಪಗ್ರಹಗಳನ್ನು ಸನಿಹಕ್ಕೆ ತರುವ ಪ್ರಯೋಗವನ್ನು ಯಶಸ್ವಿಯಾಗಿ ಕೈಗೊಂಡಿರುವುದಾಗಿ ಘೋಷಿಸಿತು. ಇಸ್ರೋ ಮೊದಲಿಗೆ ಎರಡು ಉಪಗ್ರಹಗಳ ನಡುವಿನ ಅಂತರವನ್ನು 15 ಮೀಟರ್‌ಗಳಿಗೆ ಇಳಿಸಿತು. ಆ ಬಳಿಕ, ಅದನ್ನು ಕೇವಲ 3 ಮೀಟರ್‌ಗಳಿಗೆ ತಗ್ಗಿಸಲಾಯಿತು. ಆದರೆ, ಬಳಿಕ ಉಪಗ್ರಹಗಳನ್ನು ಸುರಕ್ಷಿತ ಅಂತರಕ್ಕೆ ಚಲಿಸುವಂತೆ ಮಾಡಲಾಯಿತು. ಈ ಪ್ರಕ್ರಿಯೆಗಳಿಂದ ಲಭಿಸುವ ಮಾಹಿತಿಗಳನ್ನು ವಿಶ್ಲೇಷಿಸಿ, ಆ ಬಳಿಕ ಡಾಕಿಂಗ್ ಪ್ರಕ್ರಿಯೆ ನಡೆಸುವುದಾಗಿ ಇಸ್ರೋ ತಿಳಿಸಿತ್ತು.
ಡಾಕಿಂಗ್ ಎಂದರೇನು?: ಡಾಕಿಂಗ್ ಎನ್ನುವುದು ಅತ್ಯಂತ ವೇಗವಾಗಿ ಚಲಿಸುತ್ತಿರುವ ಎರಡು ಬಾಹ್ಯಾಕಾಶ ನೌಕೆಗಳನ್ನು ಒಂದೇ ಕಕ್ಷೆಯಲ್ಲಿ ಸರಿಯಾಗಿ ಹೊಂದಿಸುವುದಾಗಿದೆ. ಒಂದು ಬಾರಿ ಅವುಗಳು ಪರಸ್ಪರ ಸರಿಯಾಗಿ ಹೊಂದಿಕೊಂಡ ಬಳಿಕ, ಅವುಗಳನ್ನು ಸ್ವಯಂಚಾಲಿತವಾಗಿ ಅಥವಾ ನಿಯಂತ್ರಿತ ವಿಧಾನದ ಮೂಲಕ ಒಂದಕ್ಕೊಂದು ಸನಿಹಕ್ಕೆ ತರಲಾಗುತ್ತದೆ. ಆ ನಂತರ ಅವೆರಡೂ ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಜೋಡಿಸಲಾಗುತ್ತದೆ. ಒಂದೇ ರಾಕೆಟ್‌ನಿಂದ ಭಾರೀ ತೂಕದ, ಬೃಹತ್ ಗಾತ್ರದ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆಗೊಳಿಸಲು ಸಾಧ್ಯವಿಲ್ಲ. ಅಂತಹ ಬಾಹ್ಯಾಕಾಶ ನೌಕೆಗಳ ಉಡಾವಣೆ ಅಥವಾ ಜೋಡಣೆಯ ಕಾರ್ಯಾಚರಣೆಗಳಿಗೆ ಈ ಡಾಕಿಂಗ್ ತಂತ್ರಜ್ಞಾನ ಅತ್ಯಂತ ಮುಖ್ಯವಾಗಿದೆ.
ಭಾರತ ಯಾಕೆ ಈ ಸಮಯದಲ್ಲಿ ಡಾಕಿಂಗ್ ಪ್ರಕ್ರಿಯೆ ನೆರವೇರಿಸಿದೆ?: ಇಸ್ರೋ ಭವಿಷ್ಯದಲ್ಲಿ ಬಹುದೊಡ್ಡ ಬಾಹ್ಯಾಕಾಶ ಯೋಜನೆಗಳನ್ನು ಹಾಕಿಕೊಂಡಿದೆ. ಇದರಲ್ಲಿ, 2035ರ ವೇಳೆಗೆ ಭಾರತದ ಬಾಹ್ಯಾಕಾಶ ಕೇಂದ್ರ ನಿರ್ಮಾಣ, 2040ರ ವೇಳೆಗೆ ಚಂದ್ರನ ಅಂಗಳಕ್ಕೆ ಮಾನವರ ಯಾನಗಳೂ ಸೇರಿವೆ. ಇಂತಹ ಮಹತ್ವದ ಗುರಿಗಳನ್ನು ಸಾಧಿಸಬೇಕಾದರೆ, 30 ಟನ್‌ಗಳಷ್ಟು ಭಾರೀ ತೂಕವನ್ನು ಭೂಮಿಯಿಂದ 2,000 ಕಿಲೋಮೀಟರ್ ಮೇಲಿರುವ ಭೂಮಿಯ ಕೆಳಕಕ್ಷೆಗೆ ಒಯ್ಯುವ ಹೊಸ ರಾಕೆಟ್ ನಿರ್ಮಾಣ ಸೇರಿದಂತೆ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ನಡೆಸುವಲ್ಲಿ ಇಸ್ರೋ ಕಾರ್ಯನಿರತವಾಗಿದೆ.
ಇವೆಲ್ಲ ಮಹತ್ವಾಕಾಂಕ್ಷಿ ಯೋಜನೆಗಳನ್ನು ನಡೆಸಲು, ಬಾಹ್ಯಾಕಾಶದಲ್ಲಿ ಬಾಹ್ಯಾಕಾಶ ನೌಕೆಗಳ ಡಾಕಿಂಗ್ ನಡೆಸುವ ಸಾಮರ್ಥ್ಯ ಇರಲೇಬೇಕು. ಉದಾಹರಣೆಗೆ, ಐದು ಪ್ರತ್ಯೇಕ ಮಾಡ್ಯುಲ್‌ಗಳನ್ನು ಬಾಹ್ಯಾಕಾಶದಲ್ಲಿ ಜೋಡಿಸುವ ಮೂಲಕ ಭಾರತೀಯ ಅಂತರಿಕ್ಷ ಸ್ಟೇಷನ್ ಅನ್ನು ನಿರ್ಮಿಸಲಾಗುತ್ತದೆ. ಇವುಗಳಲ್ಲಿ ಮೊದಲ ಮಾಡ್ಯುಲ್ ರೋಬಾಟಿಕ್ ಆಗಿದ್ದು, ಅದನ್ನು 2028ರಲ್ಲಿ ಉಡಾವಣೆಗೊಳಿಸಲು ಉದ್ದೇಶಿಸಲಾಗಿದೆ.
ಡಾಕಿಂಗ್ ಪರೀಕ್ಷೆ ಏನನ್ನು ಒಳಗೊಂಡಿದೆ? ಡಾಕಿಂಗ್ ಪರೀಕ್ಷೆ ಹಲವಾರು ಸರಣಿ ಹಂತಗಳನ್ನು ಒಳಗೊಂಡಿದ್ದವು. ಎರಡು ಉಪಗ್ರಹಗಳ ಪೈಕಿ, ಚೇಸರ್ ಉಪಗ್ರಹವನ್ನು (ಎಸ್‌ಡಿಎಕ್ಸ್01) ಅನ್ನು ಕ್ರಮೇಣ ಟಾರ್ಗೆಟ್ (ಎಸ್‌ಡಿಎಕ್ಸ್02) ಉಪಗ್ರಹದ ಬಳಿಗೆ ಒಯ್ಯಲಾಯಿತು.
ಎರಡು ಉಪಗ್ರಹಗಳು ನಿಧಾನವಾಗಿ ಒಂದಕ್ಕೊಂದು ಹತ್ತಿರ ಹತ್ತಿರ ಸಾಗುತ್ತಾ, ತಮ್ಮ ನಡುವಿನ ಅಂತರವನ್ನು 5 ಕಿಲೋಮೀಟರ್, 1.5 ಕಿಲೋಮೀಟರ್, 500 ಮೀಟರ್, 225 ಮೀಟರ್, 15 ಮೀಟರ್, ಮತ್ತು ಅಂತಿಮವಾಗಿ 3 ಮೀಟರ್‌ಗಳಿಗೆ ತಗ್ಗಿಸಿದವು. ಅಂತಮ ಹಂತದಲ್ಲಿ, ಎರಡೂ ಉಪಗ್ರಹಗಳಲ್ಲಿರುವ ರಿಂಗ್‌ಗಳು ಒಂದಕ್ಕೊಂದು ಸಂಪರ್ಕಿಸಿ, ಬಳಿಕ ಹಿಡಿದುಕೊಂಡವು. ಒಂದು ಬಾರಿ ಅವೆರಡು ರಿಂಗ್‌ಗಳು ಒಂದಕ್ಕೊಂದು ಸಂಪರ್ಕಿಸಿದ ಬಳಿಕ, ಅವುಗಳನ್ನು ಎಳೆದು, ಬಾಹ್ಯಾಕಾಶದಲ್ಲಿ ಸುರಕ್ಷಿತವಾಗಿ ಲಾಕ್ ಮಾಡಲಾಯಿತು.
ಈ ರೀತಿ ಒಂದಕ್ಕೊಂದು ಸಂಪರ್ಕ ಹೊಂದಿದ ಬಳಿಕ, ಎರಡು ಉಪಗ್ರಹಗಳು ಪರಸ್ಪರ ವಿದ್ಯುತ್ ಶಕ್ತಿಯನ್ನು ಹಂಚಿಕೊಳ್ಳಲಿವೆ. ಇಸ್ರೋ ವಿಜ್ಞಾನಿಗಳು ಪರಸ್ಪರ ಸಂಪರ್ಕಗೊಂಡಿರುವ ಎರಡು ಉಪಗ್ರಹಗಳನ್ನು ಒಂದೇ ಉಪಗ್ರಹವಾಗಿ ಹೇಗೆ ನಿಯಂತ್ರಿಸಲು ಸಾಧ್ಯ ಎಂಬುದನ್ನೂ ಪ್ರದರ್ಶಿಸಲಿದ್ದಾರೆ. ಈ ಪ್ರಯೋಗಗಳು ಯಶಸ್ವಿಯಾದ ಬಳಿಕ, ಅವೆರಡು ಉಪಗ್ರಹಗಳು ಪರಸ್ಪರ ದೂರಾಗಲಿವೆ. ಅವುಗಳು ಮುಂದಿನ ಎರಡು ವರ್ಷಗಳ ಕಾಲ ಬಾಹ್ಯಾಕಾಶದಲ್ಲಿ ಪ್ರತ್ಯೇಕವಾಗಿ ಉಳಿದು, ವಿವಿಧ ಪ್ರಯೋಗಗಳನ್ನು ಕೈಗೊಳ್ಳಲಿವೆ.
ಭಾರತದ ಡಾಕಿಂಗ್ ಪ್ರಕ್ರಿಯೆಯ ವಿನ್ಯಾಸವೇನು?: ಕಳೆದ ಹಲವಾರು ವರ್ಷಗಳಿಂದ, ಬೇರೆ ಬೇರೆ ಬಾಹ್ಯಾಕಾಶ ಸಂಸ್ಥೆಗಳು ವಿವಿಧ ರೀತಿಯ ಡಾಕಿಂಗ್ ವ್ಯವಸ್ಥೆಗಳನ್ನು ಬಳಸಿಕೊಂಡಿದ್ದು, ಅವುಗಳಲ್ಲಿ ಕೆಲವು ಜೊತೆಯಾಗಿ ಕಾರ್ಯ ನಿರ್ವಹಿಸಬಲ್ಲವು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳುವ ಬಾಹ್ಯಾಕಾಶ ನೌಕೆಗಳು, ಇಂಟರ್ನ್ಯಾಷನಲ್ ಡಾಕಿಂಗ್ ಸಿಸ್ಟಮ್ ಸ್ಟ್ಯಾಂಡರ್ಡ್ ಅನ್ನು ಬಳಸುತ್ತವೆ. ಆದರೆ, ಭಾರತ ಒಂದು ಆ್ಯಂಡ್ರೋಜಿನಸ್ (ಉಭಯಲಿಂಗಿ) ಡಾಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡಿದೆ.
ಅಂದರೆ, ಚೇಸರ್ ಮತ್ತು ಟಾರ್ಗೆಟ್ ಎರಡೂ ಉಪಗ್ರಹಗಳಲ್ಲಿರುವ ಡಾಕಿಂಗ್ ವ್ಯವಸ್ಥೆಗಳು ಸಂಪೂರ್ಣವಾಗಿ ಒಂದೇ ರೀತಿಯವಾಗಿದ್ದು, ಅವುಗಳು ಒಂದಕ್ಕೊಂದು ಸೂಕ್ತವಾಗಿ ಹೊಂದಿಕೊಳ್ಳುತ್ತವೆ. ಈ ವ್ಯವಸ್ಥೆ ಇತರ ಬಾಹ್ಯಾಕಾಶ ಸಂಸ್ಥೆಗಳು ಬಳಸುವ ಇಂಟರ್ನ್ಯಾಷನಲ್ ಡಾಕಿಂಗ್ ಸಿಸ್ಟಮ್ ಸ್ಟ್ಯಾಂಡರ್ಡ್ (ಐಡಿಎಸ್ಎಸ್) ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಆದರೆ, ಭಾರತದ ವ್ಯವಸ್ಥೆ ಸರಳವಾಗಿದ್ದು, ಕೇವಲ ಎರಡು ಮೋಟರ್‌ಗಳನ್ನು ಬಳಸುತ್ತದೆ. ಆದರೆ, ಐಡಿಎಸ್ಎಸ್ ವ್ಯವಸ್ಥೆ ಚಲನೆಯನ್ನು ನಿಯಂತ್ರಿಸಲು 24 ಮೋಟರ್‌ಗಳನ್ನು ಬಳಸುತ್ತದೆ. ಈ ಮೋಟರ್‌ಗಳು, ಡಾಕಿಂಗ್ ಪ್ರಕ್ರಿಯೆಯ ವೇಳೆಗೆ ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಸರಿಯಾಗಿ ಹೊಂದಿಸಲು ನೆರವಾಗುತ್ತವೆ. ಆದರೆ, ಭಾರತದ ಡಾಕಿಂಗ್ ವ್ಯವಸ್ಥೆ ಕೇವಲ ಎರಡು ಮೋಟರ್‌ಗಳನ್ನು ಹೊಂದಿರುವುದರಿಂದ, ಇದು ಹೆಚ್ಚು ದಕ್ಷತೆಯನ್ನು ಹೊಂದಿ, ಕಡಿಮೆ ಸಂಕೀರ್ಣವಾದ ವ್ಯವಸ್ಥೆಯಾಗಿದೆ.
ಭಾರತೀಯ ನೌಕಾ ದಿನ 2024: ಅಸಾಧಾರಣ ಪ್ರಗತಿ, ಕಾರ್ಯತಂತ್ರದ ಶಕ್ತಿಯತ್ತ ಭಾರತೀಯ ನೌಕಾಪಡೆಯ ಹಾದಿ
ಈ ಯೋಜನೆ, ಲೇಸರ್ ರೇಂಜ್ ಫೈಂಡರ್, ರಾಂಡೇವೂ ಸೆನ್ಸರ್, ಹಾಗೂ ಪ್ರಾಕ್ಸಿಮಿಟಿ ಮತ್ತು ಡಾಕಿಂಗ್ ಸೆನ್ಸರ್‌ಗಳನ್ನು ಬಳಸಿ, ಎರಡು ಉಪಗ್ರಹಗಳು ಒಂದಕ್ಕೊಂದು ಸನಿಹಕ್ಕೆ ಚಲಿಸಿ, ಸಂಪರ್ಕ ಹೊಂದುವಾಗಿನ ಚಲನೆಯನ್ನು ಅತ್ಯಂತ ನಿಖರವಾಗಿರುವಂತೆ ನೋಡಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಉಪಗ್ರಹ ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆಯಲ್ಲಿ ಬಳಸುವಂತಹ ಹೊಸ ಪ್ರೊಸೆಸರ್ ಅನ್ನು ಬಳಸಿಕೊಳ್ಳಲಿದೆ. ಇದು ಇನ್ನೊಂದು ಉಪಗ್ರಹದ ಸ್ಥಾನ, ವೇಗವನ್ನು ನಿಖರವಾಗಿ ತಿಳಿಯಲು ನೆರವಾಗುತ್ತದೆ.
100 ಕೃತಕ ಸೂರ್ಯಗ್ರಹಣ ಸೃಷ್ಟಿಗೆ ಸಾಹಸ, ನಾಳೆ ಇಸ್ರೋದಿಂದ ಉಡಾವಣೆ: ಗಿರೀಶ್ ಲಿಂಗಣ್ಣ
ಇದು ಭವಿಷ್ಯದಲ್ಲಿ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಗಳ ನಿರ್ಮಾಣದ ದೃಷ್ಟಿಯಿಂದ ಅತ್ಯಂತ ಮುಖ್ಯ ಹೆಜ್ಜೆಯಾಗಿದ್ದು, ಭವಿಷ್ಯದಲ್ಲಿ ಬಾಹ್ಯಾಕಾಶ ನೌಕೆಗಳು ಉಪಗ್ರಹಗಳಿಂದ ನ್ಯಾವಿಗೇಶನ್ ಮಾಹಿತಿಗಳ ಅವಶ್ಯಕತೆಯಿಲ್ಲದೆ, ಸ್ವಯಂಚಾಲಿತವಾಗಿ ಡಾಕಿಂಗ್ ನಡೆಸಲು ಶಕ್ತವಾಗಲಿವೆ.
(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)