ಬ್ಲೂಬರ್ಡ್ ಉಡಾವಣೆ: ಭಾರತೀಯ ರಾಕೆಟ್ ಬೆನ್ನೇರಿ ಅಮೆರಿಕಾದ ದೈತ್ಯ ಉಪಗ್ರಹದ ಬಾಹ್ಯಾಕಾಶ ಸವಾರಿ!

Published : Aug 11, 2025, 01:19 PM IST
girish linganna

ಸಾರಾಂಶ

ಬ್ಲಾಕ್ 2 ಉಪಗ್ರಹಗಳನ್ನು ಗರಿಷ್ಠ 40 ಮೆಗಾಹರ್ಟ್ಝ್ ಗಳಷ್ಟು ಹೆಚ್ಚಿನ ಬೀಮ್ ಸಾಮರ್ಥ್ಯ ಹೊಂದಿರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದು 120 ಎಂಬಿಪಿಎಸ್ ವೇಗದ ಸೇವೆಗಳನ್ನು ಒದಗಿಸಲಿದೆ.

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಅಮೆರಿಕಾದ ಜೊತೆಗೂಡಿ, ಜಗತ್ತಿನ ಅತ್ಯಂತ ವೆಚ್ಚದಾಯಕ ಭೂ ವೀಕ್ಷಣಾ ಉಪಗ್ರಹವಾದ ನಿಸಾರ್ ಅನ್ನು ಜುಲೈ 30ರಂದು ಉಡಾವಣೆಗೊಳಿಸಿದ ಬಳಿಕ, ಭಾರತ 6,500 ಕೆಜಿ ತೂಕದ, ಬ್ಲಾಕ್ 2 ಬ್ಲೂಬರ್ಡ್ ಎಂಬ ಇನ್ನೊಂದು ಅಮೆರಿಕನ್ ಉಪಗ್ರಹದ ಉಡಾವಣೆ ನಡೆಸಲು ಸಿದ್ಧವಾಗುತ್ತಿದೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಈ ಉಡಾವಣೆ ನೆರವೇರಲಿದೆ ಎಂದು ಇಸ್ರೋ ಮುಖ್ಯಸ್ಥರಾದ ವಿ ನಾರಾಯಣನ್ ಅವರು ಆಗಸ್ಟ್ 10, ಭಾನುವಾರ ಹೇಳಿಕೆ ನೀಡಿದ್ದಾರೆ.

ಬ್ಲಾಕ್ 2 ಬ್ಲೂಬರ್ಡ್ ಉಪಗ್ರಹ ದೊಡ್ಡದಾದ, 2,400 ಚದರ ಅಡಿಗಳನ್ನು ವ್ಯಾಪಿಸಿರುವ ಸಂವಹನ ಪ್ಯಾನೆಲ್‌ಗಳನ್ನು ಹೊಂದಿದೆ. ಇದು 12 ಎಂಬಿಪಿಎಸ್ ವೇಗದಲ್ಲಿ ಮಾಹಿತಿಗಳನ್ನು ರವಾನಿಸುವ ಸಲುವಾಗಿ ವಿನ್ಯಾಸಗೊಂಡಿದ್ದು, ವಿಶೇಷ ಉಪಕರಣಗಳ ಅಗತ್ಯವಿಲ್ಲದೆ, ತಮ್ಮ ಸ್ಮಾರ್ಟ್ ಫೋನುಗಳ ಮೂಲಕವೇ ಜನರಿಗೆ ದೂರವಾಣಿ ಕರೆ, ಅಂತರ್ಜಾಲ ಮತ್ತು ವೀಡಿಯೋ ಸೇವೆಗಳನ್ನು ಬಳಸಲು ಅವಕಾಶ ನೀಡುತ್ತದೆ. ಬ್ಲಾಕ್ 2 ಉಪಗ್ರಹಗಳನ್ನು ಗರಿಷ್ಠ 40 ಮೆಗಾಹರ್ಟ್ಝ್ ಗಳಷ್ಟು ಹೆಚ್ಚಿನ ಬೀಮ್ ಸಾಮರ್ಥ್ಯ ಹೊಂದಿರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದು 120 ಎಂಬಿಪಿಎಸ್ ವೇಗದ ಸೇವೆಗಳನ್ನು ಒದಗಿಸಲಿದೆ. ಇದು ಆರಂಭದ ಉದ್ದೇಶಿತ 12 ಎಂಬಿಪಿಎಸ್‌ಗಿಂತ ಸಾಕಷ್ಟು ಹೆಚ್ಚಿನ ವೇಗವನ್ನು ಹೊಂದಿದೆ.

ಅಮೆರಿಕಾದ ಈ ನೂತನ ಉಪಗ್ರಹ ಸೆಪ್ಟೆಂಬರ್ ತಿಂಗಳಲ್ಲಿ ಭಾರತಕ್ಕೆ ಆಗಮಿಸುವ ನಿರೀಕ್ಷೆಗಳಿದ್ದು, ಇಸ್ರೋದ ಅತ್ಯಂತ ಭಾರದ ರಾಕೆಟ್ ಆಗಿರುವ ಎಲ್‌ವಿಎಂ - 3 - ಎಂ5 ಮೂಲಕ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ಆಗಸಕ್ಕೆ ಏರಲಿದೆ. ಬ್ಲಾಕ್ 2 ಬ್ಲೂಬರ್ಡ್ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಯಲ್ಲಿ, ಅಂದಾಜು ಭೂಮಿಯಿಂದ 600 - 900 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿ ಅಳವಡಿಸಲಾಗುತ್ತದೆ. ಉಪಗ್ರಹಗಳು ಅಲ್ಲಿ ದಿನಕ್ಕೆ ಎರಡು ಬಾರಿ ಪರಿಭ್ರಮಣೆ ನಡೆಸಿ, ದೂರವಾಣಿ, ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸಲಿವೆ. ಬ್ಲೂಬರ್ಡ್ ಉಪಗ್ರಹ ಎಎಸ್‌ಟಿ & ಸೈನ್ಸ್ ನಿಂದ ಪೇಟೆಂಟ್ ಪಡೆದಿರುವ ತಂತ್ರಜ್ಞಾನವನ್ನು ಬಳಸಿಕೊಂಡು, ತನ್ನ ಸ್ಪೇಸ್ ಮೊಬೈಲ್ ಜಾಲದ ಭಾಗವಾಗಿ, ನೇರವಾಗಿ ಮೊಬೈಲ್ ಫೋನ್‌ಗಳಿಗೆ ಸಂಪರ್ಕ ಸಾಧಿಸಲಿದೆ.

ಈ ಉಪಗ್ರಹ 64.38 ಚದರ ಮೀಟರ್‌ಗಳ ಸಂವಹನ ಪ್ಯಾನೆಲ್ ಹೊಂದಿದ್ದು, 3ಜಿಪಿಪಿ ಮೊಬೈಲ್ ಫ್ರೀಕ್ವೆನ್ಸಿ ಬಳಸಿಕೊಂಡು, ಜಗತ್ತಿನಾದ್ಯಂತ ಪ್ರಮುಖ ಟೆಲಿಕಾಂ ಪೂರೈಕೆದಾರರೊಡನೆ ಕಾರ್ಯ ನಿರ್ವಹಿಸಲಿದೆ. ಎಎಸ್‌ಟಿ ಸ್ಪೇಸ್ ಮೊಬೈಲ್ ಬ್ಲೂ ಒರಿಜಿನ್ ಸಂಸ್ಥೆಯ ನ್ಯೂ ಗ್ಲೆನ್ ರಾಕೆಟ್, ಸ್ಪೇಸ್ ಎಕ್ಸ್ ಸಂಸ್ಥೆಯ ಉಡಾವಣಾ ವಾಹನಗಳು, ಮತ್ತು ಇಸ್ರೋದಂತಹ ಹಲವು ಸಂಸ್ಥೆಗಳ ಜೊತೆಗೆ ತನ್ನ ಮುಂದಿನ ತಲೆಮಾರಿನ ಉಪಗ್ರಹಗಳ ಉಡಾವಣೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದೆ.

ಎಲ್ಎಂವಿ3 ರಾಕೆಟ್ ಗರಿಷ್ಠ 10,000 ಕೆಜಿ ತೂಕ ಹೊಂದಿರುವ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ಅಳವಡಿಸುವ ಸಾಮರ್ಥ್ಯ ಹೊಂದಿದ್ದು, ಇದು 6,500 ಕೆಜಿ ತೂಕ ಹೊಂದಿರುವ ಬ್ಲಾಕ್ 2 ಬ್ಲೂಬರ್ಡ್ ಉಪಗ್ರಹದ ಉಡಾವಣೆಗೆ ಅತ್ಯಂತ ಸೂಕ್ತ ರಾಕೆಟ್ ಆಗಿದೆ. ಇದು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದು, ಇಸ್ರೋ ಹಿಂದೆ 5,796 ಕೆಜಿ ತೂಕದ ವನ್ ವೆಬ್ ಉಪಗ್ರಹಗಳನ್ನು ಉಡಾವಣೆಗೊಳಿಸಿದ್ದು ಇಲ್ಲಿಯ ತನಕದ ಅತ್ಯಂತ ತೂಕದ ಉಡಾವಣೆಯಾಗಿತ್ತು. ಎಲ್ಎಂವಿ3 ರಾಕೆಟ್ 49.13 ಮೀಟರ್ ಎತ್ತರವಿದ್ದು, 640 ಟನ್‌ಗಳ ಲಿಫ್ಟ್-ಆಫ್ ತೂಕ ಹೊಂದಿದೆ. ಆ ಮೂಲಕ ಇದು ತನ್ನ ಅಸಾಧಾರಣ ಶಕ್ತಿ ಸಾಮರ್ಥ್ಯಗಳಿಗಾಗಿ 'ಬಾಹುಬಲಿ' ಎಂಬ ಅನ್ವರ್ಥನಾಮ ಸಂಪಾದಿಸಿದೆ.

ಜಾಗತಿಕವಾಗಿ ತತ್ಸಮಾನ ಭಾರೀ ತೂಕದ ಉಪಗ್ರಹಗಳಿಗೆ ಹೋಲಿಸಿದರೆ, ಬ್ಲಾಕ್ 2 ಬ್ಲೂಬರ್ಡ್ ಉಪಗ್ರಹ 6,500 ಕೆಜಿ ತೂಕ ಹೊಂದಿದ್ದು, ಇಲ್ಲಿಯ ತನಕ ಉಡಾವಣೆಗೊಂಡ ಅತ್ಯಂತ ತೂಕದ ಒಂಟಿ ಉಪಗ್ರಹಗಳ ಪೈಕಿ ತಾನೂ ಒಂದಾಗಲಿದೆ. ಪ್ರಸ್ತುತ ಉಪಗ್ರಹಗಳ ಪೈಕಿ, ಅತ್ಯಂತ ಹೆಚ್ಚು ತೂಕ ಹೊಂದಿರುವ ಉಪಗ್ರಹ ಎಂಬ ಕೀರ್ತಿ ಜುಪಿಟರ್ 3 ಉಪಗ್ರಹದ್ದಾಗಿದ್ದು, ಇದು 9,200 ಕೆಜಿ ತೂಕ ಹೊಂದಿದೆ. ಇದನ್ನು ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ ಹೆವಿ ರಾಕೆಟ್ ಉಡಾವಣೆಗೊಳಿಸಿದೆ. ಇನ್ನುಳಿದಂತೆ, ಎನ್ವಿಸ್ಯಾಟ್ 8,200 ಕೆಜಿ, ಮತ್ತು ಹಬಲ್ ಸ್ಪೇಸ್ ಟೆಲಿಸ್ಕೋಪ್ 12,250 ಕೆಜಿ ತೂಕ ಹೊಂದಿವೆ. ಬ್ಲಾಕ್ 2 ಬ್ಲೂಬರ್ಡ್ ಸಹ ಅತ್ಯಂತ ಹೆಚ್ಚಿನ ತೂಕ ಹೊಂದಿರುವ ಅಗ್ರ ಹತ್ತು ಉಪಗ್ರಹಗಳ ಪೈಕಿ ಒಂದಾಗಿರಲಿದ್ದು, ಇಸ್ರೋದ ಉಡಾವಣಾ ಸಾಮರ್ಥ್ಯಕ್ಕೆ ಮತ್ತು ಎಎಸ್‌ಟಿ ಸ್ಪೇಸ್ ಮೊಬೈಲ್‌ಗೆ ಮಹತ್ವದ ಸಾಧನೆಯಾಗಲಿದೆ.

ಬ್ಲಾಕ್ 2 ಬ್ಲೂಬರ್ಡ್ ಹೊಂದಿರುವ 2,400 ಚದರ ಅಡಿಗಳ ಸಂವಹನ ಅರೇಗಳು ಅವುಗಳನ್ನು ಭೂಮಿಯ ಕೆಳಕಕ್ಷೆಯಲ್ಲಿ ಅಳವಡಿಸಿರುವ ಅತ್ಯಂತ ಬೃಹತ್ತಾದ ವಾಣಿಜ್ಯಿಕ ಸಂವಹನ ಅರೇಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿಸಲಿವೆ. ಈ ಬೃಹತ್ ಸಂವಹನ ಅರೇಗಳು ವಿಶಾಲ ಪ್ರದೇಶಗಳಲ್ಲಿ ನೇರವಾಗಿ ಸ್ಮಾರ್ಟ್ ಫೋನ್‌ಗಳಿಗೆ ಸಂಪರ್ಕ ಕಲ್ಪಿಸಲಿವೆ. ಎಎಸ್‌ಟಿ ಸ್ಪೇಸ್ ಮೊಬೈಲ್ ಸಂಸ್ಥೆ ಅಮೆರಿಕಾದಾದ್ಯಂತ ನಿರಂತರ ಸೇವೆ ಒದಗಿಸಲು 45ರಿಂದ 60 ಬ್ಲೂಬರ್ಡ್ ಉಪಗ್ರಹಗಳ ಅವಶ್ಯಕತೆ ಹೊಂದಿದೆ. ಇಸ್ರೋ ನಡೆಸಲಿರುವ ಉಡಾವಣೆ ದೊಡ್ಡದಾದ ಉಪಗ್ರಹ ಪುಂಜದ ನಿಯೋಜನಾ ಉದ್ದೇಶದ ಭಾಗವಾಗಿರಲಿದೆ.

ನಿಸಾರ್ ಉಪಗ್ರಹದ ಬಳಿಕ, ಪ್ರಸ್ತುತ ಯೋಜನೆ ಭಾರತ ಮತ್ತು ಅಮೆರಿಕಾ ನಡುವಿನ ಬಾಹ್ಯಾಕಾಶ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿದೆ. ಚೆನ್ನೈ ಬಳಿಯ ಎಸ್ಆರ್‌ಎಂ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ, ಕಟ್ಟಂಕುಳತ್ತೂರಿನ ಘಟಿಕೋತ್ಸವ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾದ ಸಿ ಪಿ ರಾಧಾಕೃಷ್ಣನ್ ಅವರು ನಾರಾಯಣನ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣನ್, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯನ್ನು ವಿವರಿಸಿದರು. 1963ರಲ್ಲಿ ಇಸ್ರೋ ಹೇಗೆ ಅಮೆರಿಕಾ ಒದಗಿಸಿದ ಸಣ್ಣ ರಾಕೆಟ್ ಮೂಲಕ ತನ್ನ ಕಾರ್ಯಾಚರಣೆ ಆರಂಭಿಸಿ, ಭಾರತದ ಬಾಹ್ಯಾಕಾಶ ಯಾತ್ರೆಗೆ ನಾಂದಿ ಹಾಡಿತು ಎಂದು ನಾರಾಯಣನ್ ನೆನಪಿಸಿದರು.

1975ರಲ್ಲಿ, ಅಮೆರಿಕಾ ಒದಗಿಸಿದ ಉಪಗ್ರಹ ಮಾಹಿತಿಗಳ ಮೂಲಕ, ಇಸ್ರೋ ಸಮೂಹ ಸಂವಹನವನ್ನು ಹೇಗೆ ಸಾಧಿಸಬಹುದು ಎಂದು ಪ್ರದರ್ಶಿಸಿ, ಆರು ರಾಜ್ಯಗಳ 2,400 ಗ್ರಾಮಗಳಲ್ಲಿ 2,400 ಟಿವಿ ಸೆಟ್‌ಗಳಲ್ಲಿ ಪ್ರಸಾರ ಸೇವೆ ಆರಂಭಿಸಿತು. "ಇಸ್ರೋ ಈ ರೀತಿ ತಳಮಟ್ಟದಿಂದ ತನ್ನ ಕಾರ್ಯಚರಣೆಗಳನ್ನು ಆರಂಭಿಸಿದ್ದು, ಜುಲೈ 30ರಂದು ಜಗತ್ತಿನ ಅತ್ಯಂತ ವೆಚ್ಚದಾಯಕ ಉಪಗ್ರಹವಾದ ನಿಸಾರ್ ಅನ್ನು ಉಡಾವಣೆಗೊಳಿಸುವ ಮೂಲಕ ಐತಿಹಾಸಿಕ ಸಾಧನೆ ನಿರ್ಮಿಸಿತು. ಇಂದು ನಾವು ಜಗತ್ತಿನ ಅತ್ಯಾಧುನಿಕ ರಾಷ್ಟ್ರಗಳೊಡನೆ ಭುಜಕ್ಕೆ ಭುಜ ಕೊಟ್ಟು ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿದ್ದೇವೆ" ಎಂದು ನಾರಾಯಣನ್ ಸಂತೋಷ ವ್ಯಕ್ತಪಡಿಸಿದರು.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ