
ಗಿರೀಶ್ ಲಿಂಗಣ್ಣ, (ಲೇಖಕರು ವಿಜ್ಞಾನ ಬರಹಗಾರ)
ಗ್ರೌಂಡ್ ಪೆನಟ್ರೇಟಿಂಗ್ ರೇಡಾರ್ (ಜಿಪಿಆರ್) ಎನ್ನುವುದು ಪುರಾತತ್ವ ಶಾಸ್ತ್ರಜ್ಞರು ಮತ್ತು ತನಿಖಾಧಿಕಾರಿಗಳು ಭೂಮಿಯನ್ನು ಅಗೆಯದೆ, ನೆಲದಾಳದಲ್ಲಿ ಇರುವುದನ್ನು ಹುಡುಕುವ ವಿಧಾನವನ್ನು ಒದಗಿಸಿದೆ. ಆದರೆ, ಈ ವಿಧಾನ ಅತ್ಯಂತ ತೇವವಾದ, ಕೆಸರಿನಿಂದ ಕೂಡಿದ ನೆಲದಾಳದಲ್ಲಿ ಅಡಗಿರುವ ಅಸ್ಥಿಪಂಜರದ ಅವಶೇಷಗಳನ್ನು ಹುಡುಕಬಲ್ಲದೇ? ಇದರ ಉತ್ತರ ಆಸಕ್ತಿಕರವಾಗಿದ್ದರೂ, ಅಷ್ಟೊಂದು ಸರಳವಾಗಿಲ್ಲ.
ಜಿಪಿಆರ್ ನೋಡಲು ಹೇಗಿರುತ್ತದೆ?: ಒಂದು ಆಧುನಿಕ ಹುಲ್ಲು ಕತ್ತರಿಸುವ ಯಂತ್ರವನ್ನು ಅದರ ಬ್ಲೇಡುಗಳಿಲ್ಲದೆ ಊಹಿಸಿಕೊಳ್ಳಿ. ಜಿಪಿಆರ್ ವ್ಯವಸ್ಥೆ ಬಹುತೇಕ ಹಾಗೇ ಕಾಣಿಸುತ್ತದೆ. ಇದು ಸಾಮಾನ್ಯವಾಗಿ ಚಕ್ರಗಳನ್ನು ಹೊಂದಿದ್ದು, ಒಂದು ಸಣ್ಣ ಸೂಟ್‌ಕೇಸಿನ ಗಾತ್ರದಲ್ಲಿ ಇರುತ್ತದೆ. ಇದು ಇಲೆಕ್ಟ್ರಾನಿಕ್ ಉಪಕರಣಗಳು ಮತ್ತು ಚಿತ್ರವನ್ನು ತೋರಿಸಲು ಪರದೆಯನ್ನು ಹೊಂದಿರುತ್ತದೆ. ಎಲ್ಲಕ್ಕಿಂತ ಮುಖ್ಯವಾದ ಭಾಗವೆಂದರೆ, ಇದರ ಆ್ಯಂಟೆನಾ ಆಗಿದ್ದು, ಇದು ಒಂದು ಚಪ್ಪಟೆಯಾದ, ಡಬ್ಬಿಯ ಆಕಾರದ, ಬಹುತೇಕ ಒಂದು ಲ್ಯಾಪ್‌ಟಾಪ್ ಗಾತ್ರದ ಉಪಕರಣವಾಗಿದೆ. ಇದನ್ನು ನೆಲದಲ್ಲಿ ತಳ್ಳುವ ಅಥವಾ ಎಳೆಯುವ ಮೂಲಕ ಸಾಗಿಸಲಾಗುತ್ತದೆ.
ಕೇಬಲ್‌ಗಳು ಈ ಆ್ಯಂಟೆನಾವನ್ನು ಒಂದು ಮುಖ್ಯ ಕಂಪ್ಯೂಟರ್ ಘಟಕಕ್ಕೆ ಸಂಪರ್ಕಿಸುತ್ತವೆ. ಈ ಕಂಪ್ಯೂಟರ್ ಒಂದು ಗಟ್ಟಿಯಾದ ಟ್ಯಾಬ್ಲೆಟ್ ರೀತಿಯಲ್ಲಿದ್ದು, ನೆಲದಾಳದ ಚಿತ್ರಗಳನ್ನು ನೇರವಾಗಿ ಪ್ರದರ್ಶಿಸುತ್ತದೆ. ಇವುಗಳ ಕೆಲವು ಆಧುನಿಕ ಮಾದರಿಗಳಂತೂ ಇನ್ನೂ ಸಣ್ಣದಾಗಿವೆ. ಅವುಗಳನ್ನು ಕೈಯಲ್ಲಿ ಹಿಡಿಯಬಹುದಾಗಿದ್ದು, ದೊಡ್ಡದಾದ ಲೋಹ ಶೋಧಕಗಳಂತೆ ಬಳಸಬಹುದು. ಜಿಪಿಆರ್ ಯಂತ್ರಗಳು ಸಾಗಾಣಿಕೆಗೆ ಸುಲಭವಾಗಿದ್ದು, ಅವುಗಳು ದೊಡ್ಡದಾದ ಯಂತ್ರಗಳು ಹೋಗಲು ಸಾಧ್ಯವಿಲ್ಲದ ಕೆಸರು ಮತ್ತು ದೊರಗು ನೆಲಗಳಲ್ಲೂ ಸಾಗಬಲ್ಲವು.
ಜಿಪಿಆರ್ ಹೇಗೆ ಕಾರ್ಯಾಚರಿಸುತ್ತದೆ?: ಜಿಪಿಆರ್ ಹೆಚ್ಚಿನ ಫ್ರೀಕ್ವೆನ್ಸಿಯ ಇಲೆಕ್ಟ್ರೋಮ್ಯಾಗ್ನೆಟಿಕ್ ತರಂಗಗಳನ್ನು ವಿಶೇಷ ಆ್ಯಂಟೆನಾ ಮೂಲಕ ನೆಲದಾಳಕ್ಕೆ ಕಳುಹಿಸುತ್ತದೆ. ಈ ತರಂಗಗಳು ನೆಲದಾಳದಲ್ಲಿ ಇರುವ ವಸ್ತುಗಳ ವಿಧದ ಆಧಾರದಲ್ಲಿ ವಿಭಿನ್ನ ವೇಗದಲ್ಲಿ ಸಾಗುತ್ತವೆ. ಈ ತರಂಗಗಳು ಮೂಳೆಗಳು, ಲೋಹ ಅಥವಾ ಖಾಲಿ ಜಾಗಗಳಂತಹ ವಸ್ತುಗಳಿಗೆ ತಗುಲಿದರೆ, ಅವು ಭೂಮಿಯ ಮೇಲಿರುವ ಇನ್ನೊಂದು ಆ್ಯಂಟೆನಾಗೆ ಪ್ರತಿಫಲಿಸುತ್ತವೆ. ಈ ರೀತಿ ಪ್ರತಿಫಲಿಸುವ ತರಂಗಗಳು ಒಂದು ಸಂಕೇತವನ್ನು ಸೃಷ್ಟಿಸಿ, ಅದು ಪರದೆಯ ಮೇಲೆ ಚಿತ್ರದ ರೂಪದಲ್ಲಿ ಕಾಣಿಸುತ್ತದೆ.
ಈ ಚಿತ್ರಗಳು ತಜ್ಞರಿಗೆ ನೆಲದಾಳದಲ್ಲಿ ಹುದುಗಿರುವುದು ಏನು ಎಂಬುದನ್ನು ಪತ್ತೆಹಚ್ಚಲು ನೆರವಾಗುತ್ತವೆ. ಮೂಳೆಗಳು ಬಹುತೇಕ ಕ್ಯಾಲ್ಸಿಯಂ ಫಾಸ್ಫೇಟ್ ನಿಂದ ಮಾಡಲ್ಪಟ್ಟಿರುತ್ತವೆ. ರೇಡಾರ್ ತರಂಗಗಳು ತಗುಲಿದಾಗ, ಈ ವಸ್ತು ಮಣ್ಣಿಗಿಂತ ಭಿನ್ನವಾಗಿ ವರ್ತಿಸುತ್ತದೆ. ಈ ಕಾರಣದಿಂದ, ಮೂಳೆಗಳು ರೇಡಾರ್ ತರಂಗಗಳನ್ನು ಬಲವಾಗಿ ಪ್ರತಿಫಲಿಸಿ, ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಗಟ್ಟಿಯಾದ ಮೂಳೆಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಸಣ್ಣದಾದ, ಈಗಾಗಲೇ ಕೊಳೆಯಲಾರಂಭಿಸಿರುವ ಮೃದು ಪದರಗಳು ಖಾಲಿ ಅಥವಾ ಅಡಚಣೆ ಉಂಟಾದ ಮಣ್ಣು ಕಾಣಿಸುವಂತೆ ಮಾಡುತ್ತವೆ. ಇದೂ ಸಹ ಪರದೆಯ ಮೇಲೆ ವಿಚಿತ್ರ ಮಾದರಿಯಾಗಿ ಕಾಣಿಸುತ್ತದೆ.
ಜೌಗು ಪ್ರದೇಶದಲ್ಲಿನ ಸಮಸ್ಯೆಗಳು: ಒದ್ದೆಯಾದ ಮತ್ತು ಜೌಗು ಮಣ್ಣು ಜಿಪಿಆರ್ ಕಾರ್ಯವನ್ನು ಕಷ್ಟಕರವಾಗಿಸುತ್ತದೆ. ಯಾಕೆಂದರೆ, ಒದ್ದೆಯಾದ ಮಣ್ಣು, ಅದರಲ್ಲೂ ಜೇಡಿಮಣ್ಣನ್ನು ಹೊಂದಿರುವ ಮಣ್ಣು ಬಹಳಷ್ಟು ನೀರು ಮತ್ತು ವಿದ್ಯುತ್ ಶಕ್ತಿಯನ್ನು ಹೊಂದಿರುತ್ತದೆ. ಇಂತಹ ಪರಿಸ್ಥಿತಿಗಳು ರೇಡಾರ್ ಸಂಕೇತಗಳನ್ನು ದುರ್ಬಲಗೊಳಿಸುತ್ತವೆ. 'ಸಿಗ್ನಲ್ ಅಟೆನುಯೇಷನ್' ಎನ್ನುವ ಈ ಪ್ರಕ್ರಿಯೆಯಲ್ಲಿ, ರೇಡಾರ್ ಸಂಕೇತಗಳು ಕ್ಷಿಪ್ರವಾಗಿ ಕಳೆದುಹೋಗುತ್ತವೆ. ಇಷ್ಟಾದರೂ ಇಂತಹ ಸ್ಥಳಗಳಲ್ಲಿ ಮೂಳೆಗಳನ್ನು ಹುಡುಕುವುದು ಅಸಾಧ್ಯವೇನಲ್ಲ. ಆದರೆ, ಇಲ್ಲಿ ಸವಾಲೆಂದರೆ, ಸರಿಯಾದ ರೇಡಾರ್ ಫ್ರೀಕ್ವೆನ್ಸಿಯನ್ನು ಆರಿಸುವುದು. ಕಡಿಮೆ ಫ್ರೀಕ್ವೆನ್ಸಿ (ಅಂದರೆ 100ರಿಂದ 400 ಮೆಗಾಹರ್ಟ್ಝ್) ಒದ್ದೆ ಮಣ್ಣಿನಲ್ಲಿ ಬಹಳ ಆಳಕ್ಕಿಳಿಯಬಲ್ಲದು. ಆದರೆ, ಇದು ನೀಡುವ ಚಿತ್ರಣ ಅಷ್ಟೊಂದು ವಿಸ್ತೃತವಾಗಿರುವುದಿಲ್ಲ. ಹೆಚ್ಚಿನ ಫ್ರೀಕ್ವೆನ್ಸಿ (800ರಿಂದ 1,600 ಮೆಗಾಹರ್ಟ್ಝ್) ಹೆಚ್ಚು ವಿಸ್ತೃತ ಚಿತ್ರಗಳನ್ನು ನೀಡುತ್ತದಾದರೂ, ಒದ್ದೆ ಮಣ್ಣಿನಲ್ಲಿ ಹೆಚ್ಚು ಆಳಕ್ಕೆ ಸಾಗಲಾರದು.
ಎಷ್ಟು ಆಳದ ತನಕ ಇದು ಶೋಧಿಸಬಲ್ಲದು?: ಒಣ ನೆಲದಲ್ಲಿ, ಜಿಪಿಆರ್ 3ರಿಂದ 6 ಅಡಿ ಆಳದ ತನಕ ಮೂಳೆಗಳನ್ನು ಗುರುತಿಸಬಲ್ಲದು. ಆದರೆ ಒದ್ದೆ, ಜೌಗು ನೆಲದಲ್ಲಿ ಇದರ ಸಾಮರ್ಥ್ಯ ಬಹಳ ಕಡಿಮೆಯಾಗಿದ್ದು, 1 ರಿಂದ 3 ಅಡಿಗಳ ತನಕ ಗುರುತಿಸಬಲ್ಲದು. ಇದು ನೀರು ಎಷ್ಟರಮಟ್ಟಿಗೆ ಉಪ್ಪು ನೀರಾಗಿದೆ ಮತ್ತು ಮಣ್ಣಿನಲ್ಲಿ ಎಷ್ಟರ ಪ್ರಮಾಣದಲ್ಲಿ ಜೇಡಿಮಣ್ಣಿದೆ ಎಂಬುದರ ಮೇಲೆ ಅವಲಂಬಿಸಿದೆ. ಸಿಹಿನೀರಿನ ಜೌಗು ನೆಲದಲ್ಲಿ ಜಿಪಿಆರ್ ಉಪ್ಪು ನೀರಿನ ಜೌಗಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಉಪ್ಪು ವಿದ್ಯುತ್ ವಾಹಕತೆಯನ್ನು ಹೆಚ್ಚಿಸಿ, ಕ್ಷಿಪ್ರವಾಗಿ ರೇಡಾರ್ ಸಂಕೇತಗಳನ್ನು ದುರ್ಬಲಗೊಳಿಸುತ್ತದೆ.
ಅದರೊಡನೆ ಮೂಳೆಯ ಆಯಸ್ಸು ಸಹ ಮುಖ್ಯವಾಗುತ್ತದೆ. ಮೂಳೆಗಳು ಹಳೆಯದಾದಷ್ಟೂ ಅವುಗಳು ಕಾಲಕ್ರಮೇಣ ಮಣ್ಣಿನೊಡನೆ ಮಿಶ್ರವಾಗುವುದರಿಂದ ಅವುಗಳನ್ನು ಗುರುತಿಸುವುದು ಕಷ್ಟಕರವಾಗುತ್ತದೆ. ಹೊಸ ಜಿಪಿಆರ್ ಯಂತ್ರಗಳು ಆಧುನಿಕ ತಂತ್ರಾಂಶಗಳನ್ನು ಬಳಸಿಕೊಂಡು, ಪತ್ತೆ ಕಾರ್ಯವನ್ನು ಸುಲಭವಾಗಿಸುತ್ತವೆ. 'ಮೈಗ್ರೇಶನ್ ಪ್ರೊಸೆಸಿಂಗ್'ನಂತಹ ತಂತ್ರಗಳು ಮಸುಕಾಗಿರುವ ಚಿತ್ರಗಳನ್ನು ಸ್ಪಷ್ಟವಾಗಿಸಲು ನೆರವಾಗುತ್ತವೆ. ದುರ್ಬಲ ಸಂಕೇತಗಳನ್ನು ಸ್ಪಷ್ಟವಾಗಿಸಲು ವಿಶೇಷ ಫಿಲ್ಟರ್‌ಗಳನ್ನು ಬಳಸಲಾಗುತ್ತದೆ. ಕೆಲವು ತಜ್ಞರು ಭಿನ್ನ ಫ್ರೀಕ್ವೆನ್ಸಿಗಳ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಆ್ಯಂಟೆನಾಗಳನ್ನು ಬಳಸಿಕೊಂಡು, ಒಟ್ಟಾರೆಯಾಗಿ ಹೆಚ್ಚು ಉತ್ತಮವಾದ ಚಿತ್ರವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.
ಜಿಪಿಆರ್ ಚಿತ್ರಗಳು ಹೇಗೆ ಕಾಣಿಸುತ್ತವೆ?: ಜಿಪಿಆರ್ ಮಾಹಿತಿಗಳು ನೆಲದಾಳದ ನಕ್ಷೆಯಂತೆ ಅಥವಾ ಕ್ರಾಸ್ ಸೆಕ್ಷನ್ ಚಿತ್ರಗಳಂತೆ ಕಾಣಿಸುತ್ತವೆ. ಅಸ್ಥಿಪಂಜರಗಳು ಸಾಮಾನ್ಯವಾಗಿ ಚಿತ್ರಗಳಲ್ಲಿ ಬಾಗಿದ ಅಥವಾ ನೇರ ರೇಖೆಗಳಂತೆ ಕಾಣಿಸುತ್ತವೆ. ಒಂದು ಪೂರ್ಣ ಪ್ರಮಾಣದ ಅಸ್ಥಿಪಂಜರ ಬಲವಾದ ಸಂಕೇತಗಳ ಒಂದು ಸರಣಿಯಂತೆ ಕಾಣಿಸಲಿದ್ದು, ಇದು ಮಾನವ ದೇಹದ ಆಕಾರವನ್ನು ಹೋಲುತ್ತದೆ. ಒಂದು ಮೂಳೆ ಸಣ್ಣದಾದ, ಪ್ರತ್ಯೇಕವಾದ ಸಂಕೇತದ ರೀತಿಯಲ್ಲಿ ಕಾಣಿಸುತ್ತದೆ. ತಜ್ಞರು ತಲೆಬುರುಡೆಯ ದುಂಡಗಿನ ಆಕಾರ, ಕೈ ಮತ್ತು ಕಾಲುಗಳಿಗೆ ನೇರ ರೇಖೆಗಳು, ಅಥವಾ ಪಕ್ಕೆಲುಬುಗಳು ಸಂಕೇತಗಳ ಸಮೂಹದಂತೆ ಕಾಣಿಸಬಹುದು. ಒಂದು ವೇಳೆ ದೇಹವನ್ನು ಹೂಳುವ ಸಂದರ್ಭದಲ್ಲಿ, ನೆಲಕ್ಕೆ ಏನಾದರೂ ತೊಂದರೆ ಉಂಟಾದಲ್ಲಿ ಅದು ಪರದೆಯ ಮೇಲೆ ಅಸ್ತವ್ಯಸ್ತತೆ ತೋರಿಸುತ್ತದೆ.
ನೈಜ ಬಳಕೆಗಳು ಮತ್ತು ಸವಾಲುಗಳು: ಪೊಲೀಸರು ಬಚ್ಚಿಟ್ಟ ಸಮಾಧಿಗಳನ್ನು ಶೋಧಿಸಲು ಜಿಪಿಆರ್ ಬಳಸಿಕೊಳ್ಳುತ್ತಾರೆ. ಪುರಾತತ್ವ ಶಾಸ್ತ್ರಜ್ಞರು ಹಳೆಯದಾದ ಹೂತುಹೋದ ಪ್ರದೇಶಗಳನ್ನು ಅಗೆಯದೆ ಶೋಧಿಸಲು ಬಳಸುತ್ತಾರೆ. ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟಲಿಜೆನ್ಸ್ - ಎಐ) ನೆರವಿನಿಂದ ಜಿಪಿಆರ್ ಮಾಹಿತಿಗಳನ್ನು ಓದುವುದು ಸುಲಭವಾಗಿದ್ದು, ಮೂಳೆಗಳನ್ನು ಕಲ್ಲು ಅಥವಾ ಬೇರುಗಳೆಂದು ತಪ್ಪು ತಿಳಿಯುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಹಾಗೆಂದು ಜಿಪಿಆರ್ ಯಾವಾಗಲೂ ಪರಿಪೂರ್ಣವಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನಲು ಸಾಧ್ಯವಿಲ್ಲ. ಮರದ ಶವ ಪೆಟ್ಟಿಗೆಗಳು ಅಥವಾ ಬಟ್ಟೆಗಳು ಜಿಪಿಆರ್ ನಲ್ಲಿ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಬಹಳ ಹಳೆಯ ಕುರುಹುಗಳು ಸಾಕಷ್ಟು ನಶಿಸಿ ಹೋಗುವ ಸಾಧ್ಯತೆಗಳಿದ್ದು, ಕೆಲವು ಸಂದರ್ಭಗಳಲ್ಲಿ ಅವು ಜಿಪಿಆರ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳೇ ಇಲ್ಲ. ಬಹಳ ತೇವ ಹೊಂದಿರುವ ಪ್ರದೇಶಗಳಲ್ಲಿ, ಅತ್ಯಂತ ಉತ್ತಮವಾದ ಜಿಪಿಆರ್ ವ್ಯವಸ್ಥೆಗಳೂ ಸಹ ಒಂದು ಅಥವಾ ಎರಡು ಅಡಿಗಳಿಗಿಂತ ಆಳಕ್ಕೆ ಸಾಗಿ ಸ್ಕ್ಯಾನ್ ಮಾಡಲು ಸಾಧ್ಯವಿಲ್ಲ.
ಜಿಪಿಆರ್ ನಲ್ಲಿ ಮುಂದಿನ ಬದಲಾವಣೆಗಳೇನು?: ಹೊಸ ತಂತ್ರಜ್ಞಾನಗಳು ಜಿಪಿಆರ್ ಅನ್ನು ಇನ್ನಷ್ಟು ಶಕ್ತಿಶಾಲಿಯಾಗಿಸುತ್ತಿವೆ. ಆ್ಯಂಟೆನಾಗಳು ಹಲವು ದಿಕ್ಕುಗಳಲ್ಲಿ ಸಂಕೇತಗಳನ್ನು ಕಳುಹಿಸಬಲ್ಲವಾಗಿದ್ದು, ಇತರ ವಸ್ತುಗಳ ನಡುವೆ ಮೂಳೆಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಜಿಪಿಆರ್ ಅಳವಡಿತ ಡ್ರೋನ್‌ಗಳು ದೊಡ್ಡದಾದ ಜೌಗು ಪ್ರದೇಶವನ್ನು ಮೇಲ್ಭಾಗದಿಂದ ಕ್ಷಿಪ್ರವಾಗಿ ಸ್ಕ್ಯಾನ್ ಮಾಡುತ್ತವೆ. ಜಿಪಿಆರ್ ಜೊತೆಗೆ, ಇತರ ಉಪಕರಣಗಳನ್ನು ಅಂದರೆ, ಇಲೆಕ್ಟ್ರಿಕಲ್ ಅಥವಾ ಮ್ಯಾಗ್ನೆಟಿಕ್ ಸೆನ್ಸರ್‌ಗಳನ್ನು ಬಳಸುವುದರಿಂದ, ಉತ್ತಮ ಫಲಿತಾಂಶ ಲಭಿಸಲು ಸಾಧ್ಯವಿದೆ. ಜೌಗು ಪ್ರದೇಶಗಳಂತಹ ಸ್ಥಳಗಳಲ್ಲಿ, ಜಿಪಿಆರ್ ಅನ್ನು ಜಾಗರೂಕವಾಗಿ ಬಳಸಿದರೆ ಯಶಸ್ಸು ಲಭಿಸುತ್ತದೆ.
ಇದಕ್ಕೆ ಸ್ಥಳೀಯ ಮಣ್ಣಿನ ಕುರಿತ ಜ್ಞಾನ, ಮತ್ತು ಇತರ ವಿಧಾನಗಳೊಡನೆ ಜಿಪಿಆರ್ ಅನ್ನು ಮಿಶ್ರಗೊಳಿಸುವುದು ಉತ್ತಮ ಫಲಿತಾಂಶ ಲಭಿಸುತ್ತದೆ. ಜಿಪಿಆರ್ ಎಲ್ಲದರ ಮೂಲಕವೂ ನೋಡಲು ಸಾಧ್ಯವಿಲ್ಲ. ಆದರೆ, ಇದು ನೆಲದಾಳದಲ್ಲಿ ಇರುವ ರಹಸ್ಯಗಳನ್ನು ಶೋಧಿಸುವ ಸಲುವಾಗಿ ಇಂದಿನ ತನಕ ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನವಾಗಿದೆ. ಒಂದು ವೇಳೆ ತನಿಖಾಧಿಕಾರಿಗಳು ಜೌಗು ಪ್ರದೇಶಗಳಲ್ಲಿ ಏನಾದರೂ ವಿಚಿತ್ರವಾದ ಯಂತ್ರಗಳನ್ನು ಹಿಡಿದುಕೊಂಡು ಏನನ್ನಾದರೂ ಶೋಧಿಸುವುದು ಕಂಡರೆ, ಅವರು ನೆಲದಾಳದ ಪ್ರತಿಫಲನಗಳನ್ನು ಗಮನಿಸುತ್ತಿದ್ದಾರೆ ಎಂದು ನೀವು ಊಹಿಸಬಹುದು. ಸಮುದ್ರಗಳು ಮತ್ತು ಗ್ರಹಗಳನ್ನು ಶೋಧಿಸಲು ಬಳಸುವ ತಂತ್ರಜ್ಞಾನವನ್ನು ಇಂದು ನಮ್ಮ ಕಾಲ ಕೆಳಗಿರುವ ನೆಲದಲ್ಲಿರುವ ರಹಸ್ಯಗಳನ್ನು ಶೋಧಿಸಲೂ ಬಳಸಲಾಗುತ್ತದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.