
ಬೆಂಗಳೂರು(ಮಾ.08): ಭಾರತದ ಯಶಸ್ವಿ ಚಂದ್ರಯಾನ3 ವಿಶ್ವದಲ್ಲೇ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಚಂದ್ರನ ಸೌತ್ ಪೋಲಾರ್‌ನಲ್ಲಿ ಇಳಿದ ಭಾರತದ ಚಂದ್ರಯಾನ 3 ಲ್ಯಾಂಡರ್ ಹಲವು ಮಾಹಿತಿಗಳನ್ನು, ಫೋಟೋಗಳನ್ನು ರವಾನಿಸಿದೆ. ಚಂದ್ರನ ಮೇಲಿನಿಂದ ಕಳುಹಿಸಿದ ಹಲವು ವರದಿಗಳನ್ನು ಅಧರಿಸಿ ಇಸ್ರೋ ಅಧ್ಯಯನ ನಡೆಸುತ್ತಿದೆ. ಈ ವೇಳೆ ಚಂದ್ರನ ಮೇಲೆ ಹಲವು ಭಾಗದಲ್ಲಿ ಐಸ್ ಇರುವಿಕೆ ಪತ್ತೆಯಾಗಿದೆ. ಚಂದ್ರನ ಮೇಲ್ಮೈನಲ್ಲಿ ಐಸ್ ಇರುವ ಬಗ್ಗೆ ಚಂದ್ರಯಾನ-3 ಇನ್ನಷ್ಟು ಮಾಹಿತಿ ನೀಡಿದೆ. ಚಂದ್ರನ ಮೇಲ್ಮೈ ಕೆಳಗೆ ಈ ಹಿಂದೆ ಅಂದಾಜಿಸಿದ್ದಕ್ಕಿಂತ ಹೆಚ್ಚು ಐಸ್ ಇರಬಹುದು ಎಂದು ಚಂದ್ರಯಾನ-3 ಅಧ್ಯಯನ ವರದಿ ಹೇಳುತ್ತಿದೆ.
ಕಮ್ಯುನಿಕೇಷನ್ಸ್ ಅರ್ಥ್ ಆಂಡ್ ಎನ್ವಿರಾನ್‌ಮೆಂಟ್ ಜರ್ನಲ್‌ನಲ್ಲಿ ಚಂದ್ರನ ಐಸ್ ಇರುವ ಬಗ್ಗೆ ಈ ಅಧ್ಯಯನ ಪ್ರಕಟವಾಗಿದೆ.ಚಂದ್ರನ ಧ್ರುವಗಳ ಮೇಲ್ಮೈಯಲ್ಲಿ ಹೆಚ್ಚು ಕಡೆ ಐಸ್ ಇರಬಹುದು ಎಂದು ಚಂದ್ರಯಾನ-3 ಮಿಷನ್ ಸಂಗ್ರಹಿಸಿದ ದತ್ತಾಂಶದ ಅಧ್ಯಯನವು ಸೂಚಿಸುತ್ತದೆ. ಚಂದ್ರನ ತಾಪಮಾನದಲ್ಲಿನ ದೊಡ್ಡ ವ್ಯತ್ಯಾಸಗಳು ಐಸ್ ರಚನೆಯ ಮೇಲೆ ಪರಿಣಾಮ ಬೀರುತ್ತವೆ. ಈ ಐಸ್ ಕಣಗಳನ್ನು ಪರೀಕ್ಷಿಸುವುದರಿಂದ ಅವುಗಳ ಹುಟ್ಟು ಮತ್ತು ಇತಿಹಾಸದ ಬಗ್ಗೆ ಬೇರೆ ಬೇರೆ ಕಥೆಗಳು ತಿಳಿಯುತ್ತವೆ ಎಂದು ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯ ವಿಜ್ಞಾನಿ ದುರ್ಗಾ ಪ್ರಸಾದ್ ಕರಣ್ ಪಿಟಿಐಗೆ ತಿಳಿಸಿದ್ದಾರೆ. ಚಂದ್ರನ ಮೇಲ್ಮೈಯಲ್ಲಿ ಮಂಜುಗಡ್ಡೆ ಹೇಗೆ ಶೇಖರಣೆಯಾಯಿತು ಮತ್ತು ಕಾಲಾನಂತರದಲ್ಲಿ ಹೇಗೆ ಚಲಿಸಿತು ಎಂಬುದನ್ನು ಈ ಅಧ್ಯಯನವು ವಿವರಿಸುತ್ತದೆ. ಇದು ಚಂದ್ರನ ಆರಂಭಿಕ ಭೌಗೋಳಿಕ ಪ್ರಕ್ರಿಯೆಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.
ಚಂದ್ರನ ಮೇಲಿಂದ ಸೂರ್ಯೋದಯ ಹೇಗೆ ಕಾಣುತ್ತೆ?ಬ್ಲೂ ಘೋಸ್ಟ್ ಕಳುಹಿಸಿದ ಅದ್ಭುತ ಚಿತ್ರ
ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ-3 ನೌಕೆ 2023 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿಯಿತು. ಬಳಿಕ ವಿಕ್ರಮ್ ಲ್ಯಾಂಡರ್ ಮುಖ್ಯವಾದ ಮಾಹಿತಿಯನ್ನು ಕಳುಹಿಸಿದೆ.
ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್‌ನಲ್ಲಿ ಅಳವಡಿಸಲಾಗಿದ್ದ ChaSTE ಎಂಬ ಉಪಕರಣವು ಚಂದ್ರನ ಮೇಲ್ಮೈ ಕೆಳಗಿನ 10 ಸೆಂಟಿಮೀಟರ್‌ವರೆಗೆ ತಾಪಮಾನವನ್ನು ಅಳೆದಿತ್ತು. ಇದರಿಂದ ಹೊರಬಂದ ಮಾಹಿತಿಯು ಈಗ ವಿಜ್ಞಾನ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಲ್ಯಾಂಡಿಂಗ್ ತಾಣವು ಸೂರ್ಯನ ಕಡೆಗೆ ವಾಲಿಕೊಂಡಿತ್ತು ಮತ್ತು ಅದರ ಇಳಿಜಾರು 6 ಡಿಗ್ರಿ ಇತ್ತು ಎಂದು ಸಂಶೋಧನೆಗಳು ಬಹಿರಂಗಪಡಿಸುತ್ತವೆ. ಈ ಸ್ಥಳದ ತಾಪಮಾನವು 82°C ಮತ್ತು -170°C ನಡುವೆ ಇತ್ತು ಎಂದು ಕಂಡುಹಿಡಿಯಲಾಗಿದೆ. ಕೇವಲ ಒಂದು ಮೀಟರ್ ದೂರದಲ್ಲಿರುವ ಸಮತಟ್ಟಾದ ನೆಲದ ಮೇಲಿನ ತಾಪಮಾನವು ಸುಮಾರು 60°C ಆಗಿತ್ತು. ಈ ಸಣ್ಣ ಇಳಿಜಾರಿನಿಂದಾಗಿ ಹೆಚ್ಚು ಸೌರ ಕಿರಣಗಳು ಮೇಲ್ಮೈಗೆ ತಲುಪಲು ಕಾರಣವಾಯಿತು. ಇದು ತಾಪಮಾನದ ಮೇಲೆ ಪರಿಣಾಮ ಬೀರಿತು ಮತ್ತು ಐಸ್ ರಚನೆಯ ಪ್ರಕ್ರಿಯೆಯನ್ನು ಬದಲಾಯಿಸಿತು.
ಒಂದು ಮೇಲ್ಮೈ 14 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಇಳಿಜಾರಾಗಿದ್ದು, ನೇರ ಸೂರ್ಯನ ಬೆಳಕಿನಿಂದ ರಕ್ಷಿಸಲ್ಪಟ್ಟರೆ, ಅಲ್ಲಿ ಮಂಜುಗಡ್ಡೆ ಶೇಖರಣೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ತೋರಿಸುವ ಮಾದರಿಯನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಅಂದರೆ, ಚಂದ್ರನ ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಯಾಗುವ ಅನೇಕ ಸ್ಥಳಗಳು ಇರಬಹುದು ಎಂದು ಅರ್ಥ. ಈ ಸಂಶೋಧನೆಯು ಭವಿಷ್ಯದಲ್ಲಿ ಮನುಷ್ಯರನ್ನು ಚಂದ್ರನಿಗೆ ಕಳುಹಿಸುವ ಯೋಜನೆಗಳಿಗೆ ಬಹಳ ಮುಖ್ಯವಾಗಿದೆ.
ಚಂದ್ರನ ಮೇಲ್ಮೈಯಲ್ಲಿ ಹೆಚ್ಚಿನ ನಿರ್ವಾತದ ವಾತಾವರಣ ಇರುವುದರಿಂದ ಐಸ್ ಕರಗುವ ಬದಲು ನೇರವಾಗಿ ಅನಿಲವಾಗಿ ಬದಲಾಗುತ್ತದೆ ಎಂದು ದುರ್ಗಾ ಪ್ರಸಾದ್ ಕರಣ್ ಪಿಟಿಐಗೆ ತಿಳಿಸಿದರು. ಅಂದರೆ, ದ್ರವ ರೂಪದ ನೀರನ್ನು ಕಂಡುಹಿಡಿಯುವ ಸಾಧ್ಯತೆ ಕಡಿಮೆ. ಭವಿಷ್ಯದಲ್ಲಿ ಚಂದ್ರನಲ್ಲಿ ಮಾನವ ವಸತಿಗಳನ್ನು ನಿರ್ಮಿಸಲು, ಐಸ್ ಅನ್ನು ಬೇರ್ಪಡಿಸಲು ಮತ್ತು ಬಳಸಲು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಬಹಳ ಮುಖ್ಯ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಚಂದ್ರನ ಮೇಲ್ಮೈಯಲ್ಲಿ ಐಸ್ ಹೇಗೆ ರೂಪುಗೊಂಡಿತು ಮತ್ತು ಹೇಗೆ ಚಲಿಸಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಭವಿಷ್ಯದ ಕಾರ್ಯಾಚರಣೆಗಳ ತಯಾರಿಗೆ ನಿರ್ಣಾಯಕ ಎಂದು ವಿಜ್ಞಾನಿಗಳಿಗೆ ಖಚಿತವಾಗಿದೆ. ಚಂದ್ರನ ಮೇಲ್ಮೈ ಕೆಳಗೆ ಮಂಜುಗಡ್ಡೆ ಪದರಗಳಿವೆ ಎಂಬ ಸೂಚನೆ ಭವಿಷ್ಯದ ಚಂದ್ರನ ಕಾರ್ಯಾಚರಣೆಗಳಿಗೆ ಬಹಳಷ್ಟು ಉಪಯುಕ್ತವಾಗಲಿದೆ ಎಂದು ವಿಜ್ಞಾನಿಗಳು ಭಾವಿಸುತ್ತಾರೆ. ಚಂದ್ರನಲ್ಲಿರುವ ದೊಡ್ಡ ಪ್ರಮಾಣದ ಐಸ್ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಸಂಪನ್ಮೂಲಗಳ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಮತ್ತು ಬಾಹ್ಯಾಕಾಶದಲ್ಲಿ ನೀರಿನ ಲಭ್ಯತೆಯ ಬಗ್ಗೆ ಹೊಸ ಸಂಶೋಧನೆಗಳನ್ನು ನಡೆಸಲು ಸಹಾಯ ಮಾಡುತ್ತದೆ.
ಆಳ ಸಮುದ್ರದಲ್ಲಿ ಮೀನುಗಾರರ ಬಲೆಗೆ ಸಿಕ್ಕ ವಿಚಿತ್ರ ಜೀವಿ, ಇದು ಏಲಿಯನ್ ಇರಬಹುದೇ?
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.