ISRO Gaganyaan Project : ಪ್ರಧಾನಿಗೆ, ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷರ ಪತ್ರ

By Kannadaprabha News  |  First Published Nov 29, 2021, 8:18 AM IST
  • ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆ
  •  ಬೆಂಗಳೂರಿನಿಂದ ಗುಜರಾತ್‌ಗೆ ಸ್ಥಳಾಂತರ ಮಾಡುವ ಪ್ರಸ್ತಾಪಕ್ಕೆ ಆಕ್ಷೇಪ

 ಬೆಂಗಳೂರು (ನ.29):   ಇಸ್ರೋ (ISRO) ಸಂಸ್ಥೆಯ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆಯನ್ನು (Gaganyana project) ಬೆಂಗಳೂರಿನಿಂದ (Bengaluru) ಗುಜರಾತ್‌ಗೆ (Gujarat) ಸ್ಥಳಾಂತರ ಮಾಡುವ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೂ ಪತ್ರ ಬರೆದಿರುವ ಅವರು, ಈ ವಿಚಾರದಲ್ಲಿ ತಾವು ಪ್ರಧಾನಿ ಬಳಿಗೆ ರಾಜ್ಯದ ಸಂಸದರ ನಿಯೋಗವನ್ನು ಕರೆದುಕೊಂಡು ಹೋಗಿ, ನಿಮ್ಮ ಕಚೇರಿಯ ಮೂಲಕ ಒತ್ತಡ ಹೇರಬೇಕು. ಈ ಯೋಜನೆ ಸ್ಥಳಾಂತರ ಪ್ರಸ್ತಾವನೆ ಕೈಬಿಡುವಂತೆ ಮಾಡಿ ಕನ್ನಡಿಗರ ಸ್ವಾಭಿಮಾನ ಮತ್ತು ಆತ್ಮಗೌರವ ಎತ್ತಿ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ, ಹಲವು ದಶಕಗಳಿಂದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಕೇಂದ್ರ ಕಚೇರಿ ಹಾಗೂ ಅದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುತ್ತಾರೆ. ನಿಮಗೆ ತಿಳಿದಿರುವಂತೆ 2007ರಿಂದ ಇಸ್ರೋ ‘ಮಾನವ ಸಹಿತ ಬಾಹ್ಯಾಕಾಶ ಗಗನಯಾನ’ ಯೋಜನೆಗೆ ಬೇಕಾದ ತಂತ್ರಜ್ಞಾನ ಸಿದ್ಧಪಡಿಸಿಕೊಂಡು ಬಂದಿದೆ. ಇಸ್ರೋ ಸಂಸ್ಥೆ 2023ರಲ್ಲಿ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನದ ಜಿಎಸ್‌ಎಲ್‌ವಿ ರಾಕೆಟ್‌ (GSLV Rocket ) ಉಡಾವಣೆಗೆ ಸಿದ್ಧತೆ ನಡೆಸಿದೆ. ಇದು ಯಶಸ್ವಿಯಾದರೆ ಅಮೆರಿಕ (America), ಚೀನಾ (China), ಸೋವಿಯತ್‌ ಯೂನಿಯನ್‌ ನಂತರ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಭಾರತವಾಗಲಿದೆ.

Tap to resize

Latest Videos

undefined

ಕನ್ನಡಿಗರು ಭಾವನಾತ್ಮಕ ವ್ಯಕ್ತಿಗಳಾಗಿದ್ದು, ಇಂತಹ ರಾಷ್ಟ್ರೀಯ ಕಾರ್ಯಕ್ರಮಗಳ ಆತಿಥ್ಯವನ್ನು ಬಹಳ ಹೆಮ್ಮೆಯಿಂದ ವಹಿಸಿಕೊಳ್ಳುತ್ತಾರೆ. ಅದೇ ರೀತಿ ಈ ಗಗನಯಾನ ಯೋಜನೆ ಬಗ್ಗೆಯೂ ಕನ್ನಡಿಗರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇದೀಗ ಈ ಯೋಜನೆಯನ್ನು ಬೆಂಗಳೂರಿನಿಂದ (Bengaluru) ಗುಜರಾತಿಗೆ ಸ್ಥಳಾಂತರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಕೇಳಿ ಕನ್ನಡಿಗರು ಬೇಸರಗೊಂಡಿದ್ದಾರೆ. ಈ ಯೋಜನೆ ಸ್ಥಳಾಂತರ ಆಗಿದ್ದೇ ಆದರೆ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವನ್ನು (Karnataka State) ಕಡೆಗಣಿಸಿ, ಅದಕ್ಕೆ ದ್ರೋಹ ಬಗೆದು, ಕನ್ನಡಿಗರ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಭಾವಿಸಲಾಗುವುದು ಎಂದು ಶಿವಕುಮಾರ್‌ (DK Shivakumar) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಕನ್ನಡಿಗರ ಸ್ವಾಭಿಮಾನ ಹಾಗೂ ಆತ್ಮ ಗೌರವಕ್ಕೆ ಧಕ್ಕೆ ತರಲಿದೆ. ದೇಶದ ಒಕ್ಕೂಟ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ದೇಶದ ಒಂದು ಭಾಗದ ಜನ ತಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಭಾವಿಸಿದರೆ ಅದು ಭವಿಷ್ಯದಲ್ಲಿ  ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ, ನಿಮ್ಮ ಕಾರ್ಯಾಲಯ ಕೂಡಲೇ ಮಧ್ಯ ಪ್ರವೇಶಿಸಿ ಯೋಜನೆಯನ್ನು  ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಪ್ರಯತ್ನವನ್ನು ತಡೆಯಬೇಕು. ನಿಮ್ಮಿಂದ ಆದಷ್ಟು ಬೇಗ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ಮನವಿ ಮಾಡಿದ್ದಾರೆ.

  • ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆ
  •  ಪ್ರಧಾನಿಗೆ, ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷರ ಪತ್ರ
  • ಬೆಂಗಳೂರಿನಿಂದ ಗುಜರಾತ್‌ಗೆ ಸ್ಥಳಾಂತರ ಮಾಡುವ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕು ಎಂದು ಮನವಿ
  • ಕನ್ನಡಿಗರ ಸ್ವಾಭಿಮಾನ ಮತ್ತು ಆತ್ಮಗೌರವ ಎತ್ತಿ ಹಿಡಿಯಬೇಕು ಎಂದು ಮನವಿ 
click me!