ಇನ್ನೆರಡೇ ದಿನ ಬಾಕಿ, ನಾಡಿದ್ದು ಸಂಜೆ 6.04ಕ್ಕೆ ವಿಕ್ರಂ ಲ್ಯಾಂಡರ್‌ ‘ಚಂದ್ರಸ್ಪರ್ಶ’ಕ್ಕೆ ಮುಹೂರ್ತ

By Kannadaprabha News  |  First Published Aug 21, 2023, 8:01 AM IST

ಬುಧವಾರ ಸಂಜೆ 6 ಗಂಟೆಗೆ ನೌಕೆಯ ಚಂದ್ರಸ್ಪರ್ಶಗೆ ಮುಹೂರ್ತ.  ಚಂದ್ರಯಾನ ನೌಕೆಯ ಲ್ಯಾಂಡಿಂಗ್‌ ದೃಶ್ಯ ನೇರಪ್ರಸಾರ ಇಸ್ರೋ ಘೋಷಣೆ.


ಬೆಂಗಳೂರು: ಭಾರತದ ‘ಚಂದ್ರಯಾನ-3’ ಯೋಜನೆ ಭಾನುವಾರ ಮತ್ತೊಂದು ಮಹತ್ವದ ಮೈಲಿಗಲ್ಲು ದಾಟಿದೆ. ಇತ್ತೀಚೆಗೆ ಗಗನನೌಕೆಯಿಂದ ಬೇರ್ಪಟ್ಟಿದ್ದ ವಿಕ್ರಂ ಲ್ಯಾಂಡರ್‌ನ ವೇಗ ತಗ್ಗಿಸಿ ಚಂದ್ರನ ಸಮೀಪದ ಕಕ್ಷೆಗೆ ಇಳಿಸುವ 2ನೇ ಯತ್ನವೂ ಯಶಸ್ವಿಯಾಗಿದೆ. ಇದೇ ವೇಳೆ, ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲೆ ಆ.23ರಂದು (ಬುಧವಾರ) ಇಳಿಯುವ ಸಮಯದ ‘ಮುಹೂರ್ತ’ವನ್ನೂ ನಿಗದಿಪಡಿಸಲಾಗಿದ್ದು, ಸಂಜೆ 6.04ಕ್ಕೆ ಇಳಿಯಲಿದೆ ಎಂದು ಇಸ್ರೋ ಪ್ರಕಟಿಸಿದೆ.

ಈ ಮುನ್ನ ಬುಧವಾರ ಸಂಜೆ 5.47ಕ್ಕೆ ಲ್ಯಾಂಡ್‌ ಆಗಲಿದೆ ಎಂದು ಇಸ್ರೋ ಹೇಳಿತ್ತು. ಆದರೆ ಈಗ ಲ್ಯಾಂಡಿಂಗ್‌ ಅನ್ನು 17 ನಿಮಿಷ ಮುಂದೂಡಲಾಗಿದ್ದು, ಸಂಜೆ 6.04ಕ್ಕೆ ಇಳಿಯುವ ನಿರೀಕ್ಷೆಯಿದೆ. ಅಂದು ಚಂದ್ರನ ಮೇಲೆ ಇಳಿಸುವ ಕೊನೆಯ ಸಾಹಸ ಸಂಜೆ 5.45ಕ್ಕೆ ಆರಂಭವಾಗಲಿದೆ ಎಂದು ಅದು ಸ್ಪಷ್ಟಪಡಿಸಿದೆ.

Latest Videos

undefined

Chandrayaan-3 Landing: ಚಂದ್ರನ ಮೇಲೆ ಭಾರತದ ಸಾಫ್ಟ್‌ ಲ್ಯಾಂಡಿಗ್‌, ನೀವು ಎಲ್ಲೆಲ್ಲಾ ವೀಕ್ಷಿಸಬಹುದು?

ಪ್ರೊಪಲ್ಷನ್‌ ಮಾಡ್ಯೂಲ್‌ನಿಂದ ‘ವಿಕ್ರಂ’ ಲ್ಯಾಂಡರ್‌ ಹಾಗೂ ಅದರೊಳಗಿನ ‘ಪ್ರಗ್ಯಾನ್‌’ ರೋವರ್‌ ಅನ್ನು 25 ಕಿ.ಮೀ. ಗಿ 134 ಕಿ.ಮೀ. ಕಕ್ಷೆಗೆ ಭಾನುವಾರ ಯಶಸ್ವಿಯಾಗಿ ‘ಡಿ-ಬೂಸ್ಟಿಂಗ್‌’ (ಚಂದ್ರನ ಕಕ್ಷೆಗೆ ಸಮೀಪ ಮಾಡುತ್ತಲೇ ಲ್ಯಾಂಡರ್‌ನ ವೇಗವನ್ನು ಕಡಿಮೆ ಮಾಡುವುದು) ಮಾಡಲಾಗಿದೆ. ಇನ್ನು ಸಾಫ್‌್ಟಲ್ಯಾಂಡಿಂಗ್‌ಗೆ ಮುನ್ನ ಲ್ಯಾಂಡರ್‌ನ ಆಂತರಿಕ ಪರೀಕ್ಷೆಗಳು ಇನ್ನು 3 ದಿನ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ಟ್ವೀಟ್‌ ಮಾಡಿದೆ.

ಆ.23ರಂದು ಚಂದ್ರನ ದಕ್ಷಿಣ ಧ್ರುವದತ್ತ ವಿಕ್ರಂ ಲ್ಯಾಂಡರ್‌ ಇಳಿಸುವ ಪ್ರಕ್ರಿಯೆ ನಡೆಸಲಾಗುವುದು. ಈ ಪ್ರಕ್ರಿಯೆ ವೇಳೆ ಲ್ಯಾಂಡರ್‌ ಚಂದ್ರನ ಮೇಲ್ಮೈಗೆ ಸಮತಲವಾಗಿ (ಹಾರಿಜಾಂಟಲ್‌) ಚಲಿಸಲಿದೆ. ಬಳಿಕ ಲ್ಯಾಂಡರ್‌ ಮತ್ತು ಚಂದ್ರನ ಅತಿ ಸಮೀಪ ಅಂದರೆ 30 ಕಿ.ಮೀ ಸಮೀಪಕ್ಕೆ ಬಂದಾಗ ಅದನ್ನು ‘ವರ್ಟಿಕಲ್‌’ ಅಂದರೆ ಮೇಲಿಂದ ಕೆಳಗೆ ಲಂಬರೇಖೆಯಲ್ಲಿ ಸೆಕೆಂಡ್‌ಗೆ 1.68 ಕಿ.ಮೀ. ವೇಗದಲ್ಲಿ ಇಳಿಸಲಾಗುತ್ತದೆ.

ಚಂದ್ರನ ದಕ್ಷಿಣ ಧ್ರುವದಲ್ಲಿಳಿಯಲು ರಷ್ಯಾ ವಿಫಲ: ಚಂದ್ರನ ಅಂಗಣದಲ್ಲಿ ಕ್ರ್ಯಾಶ್ ಆದ ಲೂನಾ25

ಈ ಇಡೀ ಪ್ರಕ್ರಿಯಲ್ಲಿ ಇಸ್ರೋ ಯಶಸ್ವಿಯಾದರೆ ಭಾರತ ಚಂದ್ರಯಾನದಲ್ಲಿ ಯಶ ಕಂಡ ವಿಶ್ವದ 4ನೇ ದೇಶ ಮತ್ತು ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎನ್ನಿಸಿಕೊಳ್ಳಲಿದೆ. ಈವರೆಗೆ ಚಂದ್ರಯಾನದಲ್ಲಿ ಅಮೆರಿಕ, ರಷ್ಯಾ ಹಾಗೂ ಚೀನಾ ಮಾತ್ರ ಯಶಸ್ವಿಯಾಗಿವೆ.

click me!