ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್‌ಗಾಗಿ ದೇಶವೇ ಪೂಜೆ, ಹೋಮ ಹವನ ನಡೆಯುತ್ತಿದೆ. ಇದೀಗ ಖುದ್ದು ಇಸ್ರೋ ವಿಜ್ಞಾನಿಗಳು ಬೆಂಗಳೂರಿನ ಅಯ್ಯಪ್ಪ ಸ್ವಾಮಿ ದೇಗುದಲ್ಲಿ ವಿಶೇಷ ಪೂಜೆ ಸಲ್ಲಿಸಿದೆ.
ಬೆಂಗಳೂರು(ಆ.23) ಚಂದ್ರಯಾನ 3 ಮಿಷನ್ ಮೈಲಿಗಲ್ಲು ನಿರ್ಮಿಸಲು ಇನ್ನು ಕೆಲವೇ ಕ್ಷಣಗಳು ಮಾತ್ರ ಬಾಕಿ. ವಿಕ್ರಮ್ ಲ್ಯಾಂಡರ್‌ನ್ನು ಯಶಸ್ವಿಯಾಗಿ ಇಳಿಸಲು ಇಸ್ರೋ ತಯಾರಿ ಮಾಡಿಕೊಂಡಿದೆ. ಭಾರತದ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್‌ಗೆ ದೇಶದ ಮೂಲೆ ಮೂಲೆಯಲ್ಲಿ ಪೂಜೆ ಹೋಮ ಹವನಗಳು ನಡೆಯುತ್ತಿದೆ. ಇದೀಗ ಇಸ್ರೋ ವಿಜ್ಞಾನಿಗಳ ತಂಡ ಬೆಂಗಳೂರಿನ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಚಂದ್ರಯಾನ 3 ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಆಂಧ್ರ ಪ್ರದೇಶದ ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು.
ಚಂದ್ರಯಾನ 3 ಮಿಷನ್ ಯಶಸ್ವಿ ಲ್ಯಾಂಡಿಂಗ್‌ಗೆ ಇಸ್ರೋ ವಿಜ್ಞಾನಿಗಳ ತಂಡ ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ಇರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. ಇಸ್ರೋ ಚೇರ್ಮೆನ್ ಎಸ್ ಸೋಮನಾಥ್ ಸೇರಿದಂತೆ ವಿಜ್ಞಾನಿಗಳ ತಂಡ ಅಯ್ಯಪ್ಪ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದೆ.
ಇಸ್ರೋಗೆ ಮತ್ತೊಂದು ಗೆಲುವು, 5.47ರಿಂದ ವಿಕ್ರಮ್ ಲ್ಯಾಂಡರ್ ಇಳಿಸುವ ಪ್ರಕ್ರಿಯೆ ಆರಂಭ!
ಇಸ್ರೋ ಜುಲೈ 14 ರಂದು ಶ್ರೀಹರಿಕೋಟಾದಿಂದ ಚಂದ್ರಯಾನ 3 ಉಪಗ್ರಹ ಉಡಾವಣೆ ಮಾಡಲಾಗಿತ್ತು. ಈ ಉಡಾವಣೆಗೂ ಮೊದಲು ಇಸ್ರೋ ವಿಜ್ಞಾನಿಗಳ ತಂಡ ತಿರುಪತಿ ತಿಪ್ಪಪ್ಪನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿತ್ತು. ಇಸ್ರೋದ ಮೂವರು ಮಹಿಳಾ ವಿಜ್ಞಾನಿಗಳು ಹಾಗೂ ಇಬ್ಬರು ಪುರುಷ ವಿಜ್ಞಾನಿಗಳು ತಿಮ್ಮಪ್ಪನ ಸನ್ನಿಧಿಗೆ ಆಗಮಿಸಿ ಯಶಸ್ವಿ ಚಂದ್ರಯಾನಕ್ಕೆ ಪ್ರಾರ್ಥಿಸಿದ್ದರು. ಈ ವೇಳೆ ಅವರು ತಮ್ಮ ಜತೆ ಉಪಗ್ರಹದ ಚಿಕ್ಕ ಪ್ರತಿಕೃತಿಯನ್ನೂ ತಂದು ದೇವರ ಮುಂದೆ ಇರಿಸಿ ಯಶಸ್ಸಿಗಾಗಿ ಬೇಡಿಕೊಂಡಿದ್ದರು. ಇನ್ನು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರು ತಿರುಪತಿ ಸಮೀಪದ ಸುಲ್ಳೂರುಪೇಟೆಯ ಚೆಂಗಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಬಗ್ಗೆ ಮಾತನಾಡಿದ ಸೋಮನಾಥ್, ‘ಚೆಂಗಲಮ್ಮ ದೇವಿಯ ದರ್ಶನಕ್ಕಾಗಿ ಬಂದಿದ್ದೆ. ಚಂದ್ರಯಾನದ ಯಶಸ್ಸಿಗಾಗಿ ಆಶೀರ್ವಾದ ಬಯಸಿದೆ’ ಎಂದಿದ್ದರು. ಇಸ್ರೋ ವಿಜ್ಞಾನಿಗಳ ಈ ನಡೆ ಭಾರಿ ವಿವಾದಕ್ಕೂ ಕಾರಣವಾಗಿತ್ತು. ವಿಜ್ಞಾನಿಗಳಿಗೆ ವಿಜ್ಞಾನದ ಮೇಲೆ ನಂಬಿಕೆ ಇಲ್ಲ ಅನ್ನೋ ಮಾತುಗಳನ್ನು ಆಡಿದ್ದರು. ಕೆಲವರು ಚಂದ್ರಯಾನ 3 ಮಿಷನ್ ವಿರುದ್ಧವೂ ಮಾತನಾಡಿದ್ದರು.
ಚಂದ್ರನ ಅಂಗಳದಲ್ಲಿ ಆಟವಾಡಲು ವಿಕ್ರಮ ಸಿದ್ಧ: ಭಾರತ ಸಾಧಿಸಿದ್ದು ಹೇಗೆ ಯಾರೂ ಮಾಡದ ದಾಖಲೆ ?
ಚಂದ್ರಯಾನ-3 ರಾಕೆಟ್ ಉಡಾವಣೆ ಮಾಡುವಾಗ ದೊಡ್ಡ ದೊಡ್ಡ ವಿಜ್ಞಾನಿಗಳೇ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿ ಉಡಾವಣೆ ಮಾಡಿದ್ದು, ತುಂಬಾ ಹಾಸ್ಯಾಸ್ಪದ ಸಂಗತಿ. ಇನ್ನೂ ನಾವು ಯಾವ ಶತಮಾನದಲ್ಲಿದ್ದೇವೆ ಅಂತ ಯೋಚನೆ ಮಾಡಬೇಕಾಗಿದೆ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದರು. ವಿದ್ಯಾವಂತರೇ ಮೌಢ್ಯಕ್ಕೊಳಗಾದರೆ ಈ ದೇಶವನ್ನು ಸುಧಾರಣೆ ಮಾಡುವವರು ಯಾರು? ಇಂದು ಬೆರಳ ತುದಿಯಲ್ಲೇ ಏನೆಲ್ಲ ನೋಡುವ ಅವಕಾಶ ಇದೆ. ಆದರೂ ಮೌಢ್ಯಗಳಿಗೆ ಒಳಗಾದರೆ ಹೇಗೆ? ಬಹುಶಃ ಶರಣರಷ್ಟುಮೌಢ್ಯಗಳನ್ನು ವಿರೋಧ ಮಾಡಿದವರು ಮತ್ತೊಬ್ಬರಿಲ್ಲ. ಅವರÜ ಸಾಹಿತ್ಯವನ್ನೇ ಓದುತ್ತಾ ಮತ್ತೆ ಮೌಢ್ಯಗಳಿಗೆ ಒಳಗಾಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್‌ಗಾಗಿ ಇಸ್ರೋ ವಿಜ್ಞಾನಿಗಳು ಅಯ್ಯಪ್ಪ ದೇಗುಲದಲ್ಲಿ ಪೂಜೆ ಸಲ್ಲಿಸಿದರೆ, ಕೋಟ್ಯಾಂತರ ಭಾರತೀಯರು ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ್ದಾರೆ. ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.