
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅನಿರೀಕ್ಷಿತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಸುದೀರ್ಘ ಸಮಯ ಕಳೆದು, ಅಂತಿಮವಾಗಿ ಭೂಮಿಗೆ ಮರಳಲಿದ್ದಾರೆ. ಬೋಯಿಂಗ್ ಸಂಸ್ಥೆಯ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ತೆರಳಿ, ಅಲ್ಲಿಂದ ಮರಳುವ ಕೇವಲ ಹತ್ತು ದಿನಗಳ ಅವರ ಮೂಲ ಯೋಜನೆ, ಸರಣಿ ತಾಂತ್ರಿಕ ದೋಷಗಳ ಪರಿಣಾಮವಾಗಿ ಒಂಬತ್ತು ತಿಂಗಳಿಗೂ ಹೆಚ್ಚು ಅವಧಿಗೆ ವಿಸ್ತರಣೆಗೊಂಡಿತು. ಸ್ಟಾರ್ ಲೈನರ್ ಹೀಲಿಯಂ ಸೋರಿಕೆ, ಪ್ರೊಪಲ್ಷನ್ ವ್ಯವಸ್ಥೆಯ ಕಾರ್ಯಾಚರಣೆಯಲ್ಲಿ ಅಸಮರ್ಪಕತೆಯಂತಹ ಸಮಸ್ಯೆಗಳನ್ನು ಹೊಂದಿ, ನಾಸಾ ಗಗನಯಾತ್ರಿಗಳ ಪುನರಾಗಮನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಮಾಡಿತು.
ನಿಕ್ ಹೇಗ್ ಮತ್ತು ರಾಸ್‌ಕಾಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಅವರು ನಂತರ ಬಾಹ್ಯಾಕಾಶಕ್ಕೆ ತೆರಳಿದ್ದು, ಅವರೂ ಈ ಬಾರಿ ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಜೊತೆ ಸ್ಪೇಸ್ ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಭೂಮಿಗೆ ಆಗಮಿಸಲಿದ್ದಾರೆ.
ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳುವುದನ್ನು ಖಾತ್ರಿ ಪಡಿಸುವ ಸಲುವಾಗಿ ನಾಸಾ ಸ್ಪೇಸ್ ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಬಳಸುತ್ತಿದೆ. ಈಗಾಗಲೇ ಐಎಸ್ಎಸ್ ನಲ್ಲಿರುವ ಈ ಬಾಹ್ಯಾಕಾಶ ನೌಕೆ, ಆಗಸ್ಟ್ 2024ರಲ್ಲಿ ಹೇಗ್ ಮತ್ತು ಗೊರ್ಬುನೊವ್ ಅವರನ್ನು ಕರೆತಂದಿತ್ತು. ಈ ನೌಕೆಯಲ್ಲಿ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರಿಗೂ ಸ್ಥಳಾವಕಾಶವಿರುವಂತೆ ಮಾಡಲಾಗಿತ್ತು. ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಸಮಯ ಕಳೆದು, ಸುರಕ್ಷಿತವಾಗಿ ಭೂಮಿಗೆ ಬರುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿತ್ತು.
'ಗಗನಯಾನ'ದಲ್ಲಿ ಬಾಹ್ಯಾಕಾಶ ಡಾಕಿಂಗ್: ಅಸಾಧಾರಣ ಸಾಮರ್ಥ್ಯ ಪ್ರದರ್ಶಿಸಿದ ಭಾರತ
ಈ ಯೋಜನೆಯನ್ನು ಕ್ರ್ಯೂ-10 ಯೋಜನೆ ಎಂದು ಕರೆಯಲಾಗಿದ್ದು, ಇದು ಮಾರ್ಚ್ 12, 2025ರಂದು ಉಡಾವಣೆಗೊಳ್ಳಲಿದೆ. ಇದು ಪ್ರಸ್ತುತ ಕಾರ್ಯಾಚರಿಸುತ್ತಿರುವ ಸಿಬ್ಬಂದಿಗಳನ್ನು ಬಾಹ್ಯಾಕಾಶ ನಿಲ್ದಾಣದಿಂದ ಬಿಡುಗಡೆಗೊಳಿಸಲಿದೆ. ಈ ಯೋಜನೆ, ನಾಲ್ವರು ಬೇರೆ ಗಗನಯಾತ್ರಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಒಯ್ಯಲಿದ್ದು, ಅದಕ್ಕಾಗಿ ಹಿಂದೆ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ 6 ಎಂದು ಕರೆಯಲಾದ ಬಾಹ್ಯಾಕಾಶ ನೌಕೆಯನ್ನು ಬಳಸಲಿದೆ. ಆ ಬಳಿಕ, ಮಾರ್ಚ್ 19ರಂದು ಸುನಿತಾ ವಿಲಿಯಮ್ಸ್, ವಿಲ್ಮೋರ್, ಹೇಗ್ ಮತ್ತು ಗೊರ್ಬುನೊವ್ ಭೂಮಿಗೆ ಮರಳುವ ನಿರೀಕ್ಷೆಗಳಿದ್ದು, ಅಂತಿಮ ಘೋಷಣೆ ಇನ್ನೂ ಬರಬೇಕಿದೆ.
ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಫ್ಲೋರಿಡಾದ ಕೇಪ್ ಕ್ಯಾನಾವೆರಾಲ್ ಬಳಿ ಅಟ್ಲಾಂಟಿಕ್ ಸಮುದ್ರದಲ್ಲಿ ಇಳಿಯಲಿದೆ. ಇಲ್ಲಿನ ನೀರು ಸಾಮಾನ್ಯವಾಗಿ ಪ್ರಶಾಂತವಾಗಿರುವುದರಿಂದ, ಮತ್ತು ಕೆನೆಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ನಾಸಾದ ರಕ್ಷಣಾ ತಂಡಕ್ಕೆ ಇದು ಸನಿಹದಲ್ಲಿರುವುದರಿಂದ, ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಬಾಹ್ಯಾಕಾಶ ನೌಕೆ ಸಮುದ್ರದಲ್ಲಿ ಭೂಸ್ಪರ್ಶ ಮಾಡುವ ಮುನ್ನವೇ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಭೂಮಿಯ ವಾತಾವರಣವನ್ನು ಪ್ರವೇಶಿಸುವ ಮುನ್ನವೇ ಸಿಬ್ಬಂದಿಗಳು ಬಾಹ್ಯಾಕಾಶ ನೌಕೆಯ ಕಾರ್ಯ ವ್ಯವಸ್ಥೆಗಳು, ಉಷ್ಣ ನಿರೋಧಕ ಫಲಕಗಳು, ಮತ್ತು ಪ್ಯಾರಾಶೂಟ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಬಳಿಕ ವಾತಾವರಣದ ಘರ್ಷಣೆಯಿಂದ ಅಪಾರ ಪ್ರಮಾಣದ ಉಷ್ಣತೆ ಉಂಟಾಗುತ್ತದೆ. ಉಷ್ಣ ನಿರೋಧಕ ಫಲಕಗಳು ಗಗನಯಾತ್ರಿಗಳನ್ನು ಈ ಅತಿಯಾದ ಉಷ್ಣತೆಯಿಂದ ರಕ್ಷಿಸುತ್ತವೆ. ಬಾಹ್ಯಾಕಾಶ ನೌಕೆ ಇಳಿಯುವುದು ನಿಧಾನವಾಗಿ, ಸುರಕ್ಷಿತ ವೇಗವನ್ನು ತಲುಪಿದ ಬಳಿಕ, ಅದರ ಪ್ಯಾರಾಶೂಟ್‌ಗಳು ತೆರೆದು, ಬಾಹ್ಯಾಕಾಶ ನೌಕೆ ಹಗುರವಾಗಿ ಸಮುದ್ರದ ಮೇಲೆ ಇಳಿಯುವಂತೆ ಮಾಡುತ್ತವೆ.
ರಕ್ಷಣಾ ತಂಡಗಳು ಬೋಟ್‌ಗಳಲ್ಲಿ ಕಾಯುತ್ತಿದ್ದು, ಬಾಹ್ಯಾಕಾಶ ನೌಕೆ ಇಳಿದ ತಕ್ಷಣವೇ ಗಗನಯಾತ್ರಿಗಳನ್ನು ರಕ್ಷಿಸಿ, ನೆರವಾಗುತ್ತಾರೆ. ತಕ್ಷಣವೇ ಅವರಿಗೆ ವೈದ್ಯಕೀಯ ತಪಾಸಣೆಗಳನ್ನು ನಡೆಸಲು ವೈದ್ಯಕೀಯ ಸಿಬ್ಬಂದಿಗಳೂ ಉಪಸ್ಥಿತರಿರುತ್ತಾರೆ. ಬಾಹ್ಯಾಕಾಶ ನೌಕೆ ಇಳಿಯುವ ಪ್ರತಿ ಹಂತದಲ್ಲೂ ಅದರ ಸ್ಥಾನವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಅವಶ್ಯಕತೆ ಬಿದ್ದರೆ ಹೆಚ್ಚುವರಿ ರಕ್ಷಣಾ ತಂಡಗಳನ್ನೂ ನಿಯೋಜಿಸಲಾಗುತ್ತದೆ.
ಸ್ಪೇಸ್ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಬಳಸುತ್ತಿರುವುದು ಆ ಬಾಹ್ಯಾಕಾಶ ನೌಕೆ ಎಷ್ಟು ನಂಬಿಕಾರ್ಹ ಮತ್ತು ಸಮರ್ಥವಾಗಿದೆ ಎನ್ನುವುದನ್ನು ಪ್ರದರ್ಶಿಸುತ್ತದೆ. ಈ ಬಾಹ್ಯಾಕಾಶ ನೌಕೆ ನಾಸಾದ ವಾಣಿಜ್ಯಿಕ ಬಾಹ್ಯಾಕಾಶ ಯಾನ ಯೋಜನೆಗಳ ಪ್ರಮುಖ ಭಾಗವಾಗಿದ್ದು, ಮಾನವ ಸಹಿತ ಯೋಜನೆಗಳು ಮತ್ತು ಸಾಗಾಣಿಕಾ ಸವಾಲುಗಳನ್ನು ನಿಭಾಯಿಸಲು ತಾನೆಷ್ಟು ಸಮರ್ಥ ಎಂದು ಸಾಬೀತುಪಡಿಸಿದೆ. ಇದರ ಸಾಮರ್ಥ್ಯ ಮತ್ತು ಸುರಕ್ಷತಾ ವೈಶಿಷ್ಟ್ಯಗಳು ಗಗನಯಾತ್ರಿಗಳ ಭೂಮಿಗೆ ಮರಳುವ ಪ್ರಯಾಣಕ್ಕೆ ಅತ್ಯಂತ ನಂಬಿಕಾರ್ಹ ಆಯ್ಕೆಯನ್ನಾಗಿಸಿದೆ.
ಬಾಹ್ಯಾಕಾಶದಲ್ಲಿ ಇಷ್ಟೊಂದು ಸುದೀರ್ಘ ಕಾಲ ಜೀವಿಸುವುದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಹಾದಿ ಮಾಡಿಕೊಡುತ್ತದೆ. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ, ಸ್ನಾಯುಗಳ ನಷ್ಟ, ಮೂಳೆಗಳ ಸಾಂದ್ರತೆ ಕುಸಿತ, ಹಾಗೂ ದೇಹದ ದ್ರವಗಳ ಚಲನೆಯಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ. ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರು ಭೂಮಿಗೆ ಮರಳಿದ ಬಳಿಕ, ಈ ಸುದೀರ್ಘ ಬಾಹ್ಯಾಕಾಶ ಯಾತ್ರೆ ಪೂರೈಸಿದ ನಂತರ ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿ ಹೇಗಿದೆ ಎಂದು ತಿಳಿಯಲು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ. ಹೇಗ್ ಮತ್ತು ಗೊರ್ಬುನೊವ್ ಅವರೂ ಸಹ ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ. ಗಗನಯಾತ್ರಿಗಳು ಭೂಮಿಗೆ ಮರಳಿದ ಬಳಿಕ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಆರಂಭದಲ್ಲಿ ಅವರಿಗೆ ಸಣ್ಣಪುಟ್ಟ ಕೆಲಸಗಳೂ ಅತ್ಯಂತ ಶ್ರಮದಾಯಕ, ಕಷ್ಟಕರ ಎನಿಸಬಹುದು. ಭೂಮಿಗೆ ಬಂದ ಬಳಿಕ ಅವರಿಗೆ ಅವಶ್ಯಕ ವೈದ್ಯಕೀಯ ಸೇವೆ ಲಭಿಸುವಂತೆ ಮಾಡಲು ನಾಸಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
ಸ್ಟಾರ್‌ಲೈನರ್ ಹೊಂದಿದ್ದ ತಾಂತ್ರಿಕ ದೋಷಗಳ ಪರಿಣಾಮವಾಗಿ, ನಾಸಾ ಬೋಯಿಂಗ್ ತಂತ್ರಜ್ಞಾನದ ಮೇಲಿನ ಅವಲಂಬನೆಯ ಕುರಿತು ಮರುಪರಿಶೀಲನೆ ನಡೆಸಲಿದೆ. ಸೆಪ್ಟೆಂಬರ್ 2024ರಲ್ಲಿ, ಸಿಬ್ಬಂದಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯನ್ನು ಸಿಬ್ಬಂದಿಗಳಿಲ್ಲದೆ ಭೂಮಿಗೆ ಮರಳಿ ತರಲಾಗಿತ್ತು. ಈ ಪರಿಸ್ಥಿತಿ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳಿಗೆ ಹೆಚ್ಚುವರಿ ನಂಬಿಕಾರ್ಹ ಬಾಹ್ಯಾಕಾಶ ನೌಕೆಗಳನ್ನು ಹೊಂದುವ ಅವಶ್ಯಕತೆಯನ್ನು ಪ್ರದರ್ಶಿಸಿದೆ. ಸ್ಪೇಸ್ ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಈಗಾಗಲೇ ತಾನು ನಂಬಿಕಾರ್ಹ ಬಾಹ್ಯಾಕಾಶ ನೌಕೆ ಎಂದು ಸಾಬೀತುಪಡಿಸಿದ್ದು, ಅದರ ಸಾಮರ್ಥ್ಯದ ಕುರಿತು ನಾಸಾದ ವಿಶ್ವಾಸವನ್ನು ಹೆಚ್ಚಿಸಿದೆ.
ಬಾಹ್ಯಾಕಾಶ ವಾಸ ಅನಿರ್ದಿಷ್ಟಾವಧಿಗೆ ಮುಂದುವರಿದ ಸಂದರ್ಭದಲ್ಲಿ, ನಾಸಾ ಗಗನಯಾತ್ರಿಗಳ ಆತ್ಮವಿಶ್ವಾಸವನ್ನು ನಿರ್ವಹಿಸುವತ್ತ ಗಮನ ಹರಿಸಿತ್ತು. ಸುನಿತಾ ವಿಲಿಯಮ್ಸ್, ವಿಲ್ಮೋರ್, ಹೇಗ್ ಮತ್ತು ಗೊರ್ಬುನೊವ್ ಅವರು ಧನಾತ್ಮಕ ಮನಸ್ಥಿತಿ ಹೊಂದಿ, ವಿವಿಧ ಕಾರ್ಯಕ್ರಮಗಳಲ್ಲಿ (ಔಟ್ ರೀಚ್) ಪಾಲ್ಗೊಂಡು, ಬಾಹ್ಯಾಕಾಶದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪ್ರಸ್ತುತ ಬಾಹ್ಯಾಕಾಶ ಯೋಜನೆಯಲ್ಲಿ ಅವರು ನಿರಂತರವಾಗಿ ವೈಜ್ಞಾನಿಕ ಸಂಶೋಧನೆಗಳು ಮತ್ತು ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಅವರ ಬದ್ಧತೆಗೆ ಸಾಕ್ಷಿಯಾಗಿದೆ.
ಇಸ್ರೋ ಶತಕ: ಎನ್‌ವಿಎಸ್-02 ಉಪಗ್ರಹದ ತಾಂತ್ರಿಕ ದೋಷವನ್ನು ಪರಿಹರಿಸುತ್ತಿದೆ ಹಾಸನ ಎಂಸಿಎಫ್
ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರ ಅತ್ಯಂತ ಸುದೀರ್ಘ ಬಾಹ್ಯಾಕಾಶ ವಾಸ ಮತ್ತು ನಾಲ್ವರು ಗಗನಯಾತ್ರಿಗಳು ಭೂಮಿಗೆ ಮರಳುತ್ತಿರುವುದು ನಾಸಾ ಪಾಲಿಗೆ ಮಹತ್ವದ ಕ್ಷಣವಾಗಿದೆ. ಅವರ ಪುನರಾಗಮನವನ್ನು ಅತ್ಯಂತ ಜಾಗರೂಕವಾಗಿ ಆಯೋಜಿಸುತ್ತಿರುವುದು ಮತ್ತು ಸಹಯೋಗ ಹೊಂದಿ ಕಾರ್ಯಾಚರಿಸುತ್ತಿರುವುದು ದೀರ್ಘಾವಧಿಯ ಬಾಹ್ಯಾಕಾಶ ಯೋಜನೆಗಳಲ್ಲಿ ಗಗನಯಾತ್ರಿಗಳ ಕ್ಷೇಮ ನಾಸಾದ ಆದ್ಯತೆಯಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ಈ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಾಗ, ಅದು ಅನಿರೀಕ್ಷಿತ ಸವಾಲುಗಳ ಎದುರೂ ಮಾನವರ ಸ್ಥಿರತೆ ಮತ್ತು ಚಾಣಾಕ್ಷತೆಗೆ ಸಾಕ್ಷಿಯಾಗಲಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.