ಭೂಮಿ ಅಗಾಧ ಕಾಸ್ಮಿಕ್ ಕತ್ತಲಿನ ಒಂಟಿ ಚುಕ್ಕಿ! ನಮ್ಮದೆಂಥ ವ್ಯರ್ಥ ಅಹಂಕಾರವಿದು?

By Ajit HanamakkanavarFirst Published Dec 28, 2022, 4:04 PM IST
Highlights

ಮನುಷ್ಯನಿಗೆ ಈ ಭೂಮಿಯನ್ನು ಬಿಟ್ಟರೆ ಬೇರೆಡೆ ವಾಸಿಸಲು ಯಾವ ಜಾಗವೂ ಗೊತ್ತಿಲ್ಲ. ಆದರೂ ಅವನನ್ನು ಬಿಡೋಲ್ಲ ದ್ವೇಷ, ಅಸೂಯೆ, ಅಹಂಕಾರ. ಖಗೋಳಶಾಸ್ತ್ರ ಮನುಷ್ಯನನ್ನ ವಿನೀತಗೊಳಿಸುತ್ತದಂತೆ. ಏಷ್ಯಾನೆಟ್ ಸುವರ್ಣನ್ಯೂಸ್‌ನ ಅಜಿತ್ ಹನಮಕ್ಕನವರ್ ಅಮೆರಿಕದ ಖಗೋಳ ತಜ್ಞ ಕಾರ್ಲ್ ಸಗಾನ್ ಅವರ ಬರಹಕ್ಕೆ ಅಕ್ಷರ ರೂಪ ಕೊಟ್ಟಿದ್ದು ಹೀಗೆ. 

- ಅಜಿತ್ ಹನಮಕ್ಕನವರ್, ಏಷ್ಯಾನೆಟ್ ಸುವರ್ಣನ್ಯೂಸ್ 

ಕಾರ್ಲ್ ಸಗಾನ್ - ಈತನ ಹೆಸರನ್ನ ಹೆಸರನ್ನ ನಾನು ಮೊದಲು ಕೇಳಿದ್ದು ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಾಗ. 'ಕಾರ್ಲ್ ಸಗಾನ್‌ನಂತೆ ವಿಜ್ಞಾನ ಲೇಖಕನಾಗಬೇಕು ಅಂದುಕೊಂಡಿದ್ದೆ,' ಅಂತ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದ ಆತ. ಕಾರ್ಲ್ ಸಗಾನ್ ಬರೆದ ಉಳಿದದ್ದೆಲ್ಲ ಒಂದು ತೂಕವಾದರೆ - ಈ ಸಣ್ಣ ನೋಟ್‌ನದ್ದೇ ಒಂದು ತೂಕ.
 
ಅಮೆರಿಕದ ನಾಸಾದವರು ಸೆಪ್ಟೆಂಬರ್ 1977ರಲ್ಲಿ ವೋಯೇಜರ್ 1 ಅಂತ ಒಂದು ಉಪಗ್ರಹ ಹಾರಿಬಿಟ್ಟರು. ಗಂಟೆಗೆ 64,000 ಕಿಲೋಮೀಟರ್ ವೇಗದಲ್ಲಿ ಭೂಮಿಯಿಂದ ಸಾಧ್ಯವಾದಷ್ಟು ದೂರ ಪ್ರಯಾಣಿಸಿ, ಅಲ್ಲಿನ ಸ್ಥಿತಿಗತಿ ತಿಳಿಸಬೇಕು ಅಂತದರ ಅಜೆಂಡಾ. ಅಂಥ ಉಪಗ್ರಹ 1990 ಫೆಬ್ರವರಿ 14ಕ್ಕೆ ಭೂಮಿಯಿಂದ 600 ಕೋಟಿ ಕಿಲೋಮೀಟರ್ ದೂರ ಹೋಗಿತ್ತು. ಅಲ್ಲಿಂದ ಭೂಮಿಯದ್ದೊಂದು ಫೋಟೋ ತೆಗೆದು ಕಳಿಸ್ತು. ಇದೇ ಆ ಫೋಟೋ. ಅಲ್ಲಿ ಮಾರ್ಕ್ ಮಾಡಿದಾರಲ್ಲ, ಅದೇ ಭೂಮಿ... ಇದನ್ನ ನೋಡಿ ಕಾರ್ಲ್ ಸಗಾನ್ ಬರೆದ -
 
ನೋಡಿ… ಆ ಚುಕ್ಕಿಯನ್ನ ಇನ್ನೊಮ್ಮೆ ನೋಡಿ…
ಅಲ್ಲಿದೆಯಲ್ಲ, ಅದೇ ನಮ್ಮ ಮನೆ. ಆ ಬಿಂದುವಿನ ಮೇಲೆಯೇ ನಾವು ಪ್ರೀತಿಸಿದ - ನಾವು ದ್ವೇಷಿಸಿದ, ನಮಗೆ ಪರಿಚಯ ಇರುವ - ನಾವು ಕೇಳಿ ತಿಳಿದಿರುವ ಎಲ್ಲ ಜೀವಿಗಳು ಬಾಳಿ ಬದುಕಿದ್ದು. ನಮ್ಮ ಸುಖ - ದುಃಖಗಳ ಒಟ್ಟು ಮೊತ್ತವಿರುವುದೂ ಅಲ್ಲೇ. ಆತ್ಮವಿಶ್ವಾಸದಿಂದ ತುಂಬಿ ತುಳುಕುವ ಸಾವಿರಾರು ಧರ್ಮಗಳು, ಮತ - ಪಂಥಗಳು, ವಾದ- ಸಿದ್ಧಾಂತಗಳು, ಹುಟ್ಟಿ ಬೆಳೆದು ಮಣ್ಣಾಗಿದ್ದು ಅಲ್ಲೇ. ಬೇಟೆಗಾರರು - ಬೇಟೆಯಾದವರು, ಪ್ರತಿ ವೀರ - ಪ್ರತಿ ಹೇಡಿ, ಪ್ರತಿ ಪಾಪಿ - ಪ್ರತಿ ಸಾಧು, ಪ್ರತಿಯೊಬ್ಬ ರಾಜ - ಪ್ರತಿಯೊಬ್ಬ ರೈತ, ಪ್ರೀತಿಯಲ್ಲಿ ಬಿದ್ದ ಒಂದೊಂದೂ ಜೋಡಿ, ಒಬ್ಬೊಬ್ಬ ತಂದೆ - ಒಬ್ಬೊಬ್ಬ ತಾಯಿ, ಮಹಾನ್ ಸಾಮ್ರಾಟರು, ಭ್ರಷ್ಟ ರಾಜಕಾರಣಿಗಳು, ಸರ್ವಾಧಿಕಾರಿಗಳು - ಸೂಪರ್ ಸ್ಟಾರ್ಸ್ ಹೀಗೆ... ಮನುಷ್ಯ ಸಂಕುಲದ ಇತಿಹಾಸದಲ್ಲಿ ಆಗಿಹೋಗಿರುವ ಪ್ರತಿಯೊಬ್ಬರೂ - ಪ್ರತಿಯೊಂದೂ ಇದ್ದದ್ದು ಅಲ್ಲೇ. ಬೆಳಕಿನ ಕಂಭದಲ್ಲಿ ಧೂಳಿನ ಕಣದಂತೆ ತೇಲಾಡುತ್ತಿರುವ ಆ ಭೂಮಿಯ ಮೇಲೆ..!

ಭಾರತದ ಗಗನಯಾನಕ್ಕೆ ನಾಸಾ ಸಹಕಾರ: ಕ್ಯಾಥರಿನ್‌ ಲ್ಯೂಡರ್ಸ್‌

ಭೂಮಿ.. ಅಗಾಧವಾದ ಕಾಸ್ಮಿಕ್ ರಂಗಸ್ಥಳದಲ್ಲಿನ ಒಂದು ಸಣ್ಣ ವೇದಿಕೆ ಮಾತ್ರ. ಸುಮ್ಮನೆ ಯೋಚಿಸಿ ನೋಡಿ... ನೂರಾರು ಸಾಮ್ರಾಟರು - ಸಾವಿರಾರು ಸೇನಾಧಿಪತಿಗಳು ರಕ್ತದ ಹೊಳೆ ಹರಿಸಿ ಗಳಿಸಿದ್ದು ಏನನ್ನ? ಆ ಧೂಳಿನ ಕಣದ ಸಣ್ಣ ಭಾಗವೊಂದರ ಮೇಲಿನ ಕ್ಷಣಿಕ ಹಿಡಿತ ಮಾತ್ರ. ಆ ಚುಕ್ಕಿಯ ಒಂದು ಮೂಲೆಯಲ್ಲಿನ ಜನ, ದೂರದಿಂದ ಗುರುತಿಸುವುದಕ್ಕೂ ಆಗದ ಇನ್ನೊಂದು ಮೂಲೆಯ ಜನರ ಮೇಲೆ ದಂಡೆತ್ತಿಕೊಂಡು ಹೋಗಿ ಕ್ರೌರ್ಯ ಮೆರೆದದ್ದು, ಅತ್ಯುತ್ಸಾಹದಿಂದ ಕೊಂದು ಹಾಕಿದ್ದು, ಕಾಯಾ - ವಾಚಾ - ಮನಸಾ ದ್ವೇಷಿಸಿದ್ದು ಎಲ್ಲಾ ಯಾವುದಕ್ಕಾಗಿ?

ನಮ್ಮ ತೋರ್ಪಡಿಕೆಗಳು - ನಮಗೆ ನಾವೇ ಕಲ್ಪಿಸಿಕೊಂಡಿರುವ ಪ್ರಾಮುಖ್ಯತೆ, ನಮಗೊಂದು ವಿಶೇಷ ಸ್ಥಾನ ಇದೆ ಎಂಬ ಭ್ರಮೆ, ಎಲ್ಲವಕ್ಕೂ ತೆಳುವಾದ ಬೆಳಕಿನ ರೇಖೆಯಲ್ಲಿನ ಧೂಳಿನ ಕಣದಂಥ ಆ ಭೂಮಿಯೇ ಉತ್ತರ. ನಮ್ಮ ಗ್ರಹ ಅಗಾಧವಾದ ಕಾಸ್ಮಿಕ್ ಕತ್ತಲಿನ ಒಬ್ಬಂಟಿ ಚುಕ್ಕಿ ಮಾತ್ರ. ನಮ್ಮಿಂದ ನಮ್ಮನ್ನ ರಕ್ಷಿಸಲು ಇನ್ನೆಲ್ಲಿಂದಾದರೂ ಸಹಾಯ ಬರಬಹುದೆಂಬ ಯಾವ ಕುರುಹೂ ಇಲ್ಲ... 

ಈ ಭೂಮಿಯೊಂದನ್ನು ಬಿಟ್ಟರೆ ಜೀವಗಳನ್ನ ಪೋಷಿಸಬಲ್ಲ ಇನ್ನೊಂದು ಗ್ರಹದ ಪರಿಚಯ ನಮಗಿಲ್ಲ. ಮತ್ತೆಲ್ಲೋ ಹೋಗಿ ನೆಲೆ ನಿಲ್ಲಬಹುದಾದ ಇನ್ನೊಂದು ಜಾಗವೂ ನಮಗೆ ಗೊತ್ತಿಲ್ಲ. ಸದ್ಯಕ್ಕಂತೂ ಗೊತ್ತಿಲ್ಲ. ಹೋಗಿ ಬರಬಹುದಾದ ಗ್ರಹಗಳಿವೆ, ನೆಲೆಸುವಂಥವು? ಉಹುಂ! ಇರುವುದೊಂದೇ, ಇದು... ಬೆಳಕಿನ ರೇಖೆಯ ಮೇಲಿನ ಧೂಳಿನ ಕಣದಂಥ ಭೂಮಿ...

ಹೊತ್ತಿ ಉರಿಯುವ ಸೂರ್ಯನೂ ನಗುವ.ಫೋಟೋ ಶೇರ್ ಮಾಡಿದ ನಾಸಾ

ಖಗೋಳಶಾಸ್ತ್ರ ಮನುಷ್ಯನನ್ನ ವಿನೀತಗೊಳಿಸುತ್ತದಂತೆ - ವ್ಯಕ್ತಿತ್ವ ಗಟ್ಟಿಗೊಳಿಸುತ್ತಂತೆ. ಮನುಷ್ಯನದು ಅದೆಂಥ ವ್ಯರ್ಥ ಅಹಂಕಾರ ಎಂಬುದನ್ನು ತೋರಿಸುವುದಕ್ಕೆ ಈ ಫೋಟೋಕ್ಕಿಂತ ಹೆಚ್ಚಿಗೆ ಏನೂ ಬೇಕಾಗಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ, ಪರಸ್ಪರರನ್ನು ಇನ್ನಷ್ಟು ಪ್ರೀತಿ - ಆದರದಿಂದ ನೋಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟ ಫೋಟೋ ಇದು. ಆ ಬೆಳಕಿನ ಬಿಂಬದಲ್ಲಿನ ಬಿಂದುವನ್ನು ಇನ್ನಷ್ಟು ಪ್ರೀತಿಸುವ - ರಕ್ಷಿಸುವ ಹೊಣೆ ನಮ್ಮದು. ನಮಗೆ ಗೊತ್ತಿರುವ ಮನೆ ಅದೊಂದೇ...!
 
ಮೇ 11, 1996 - ಕಾರ್ಲ್ ಸಗಾನ್

click me!