ಅಂತರಿಕ್ಷದಲ್ಲಿ ಈ ಸಿಂಪಲ್ ಕೆಲಸಗಳು ಕೂಡಾ ಕಷ್ಟ ಕಷ್ಟ!

By Web Desk  |  First Published Nov 8, 2019, 2:55 PM IST

ಗಗನಯಾತ್ರಿಯಾಗೋದು ಸುಲಭದ ವಿಷಯವಿಲ್ಲ. ಅವರು ಗಗನನೌಕೆಯನ್ನು ನಿಭಾಯಿಸಬೇಕಷ್ಟೇ ಅಲ್ಲ, ಪ್ರತಿದಿನ ಮಾಡುವ ಕೆಲಸಗಳನ್ನೂ ದೊಡ್ಡದೊಂದು ಸವಾಲನ್ನು ನಿರ್ವಹಿಸುವ ರೀತಿ ಮಾಡಬೇಕಾಗುತ್ತದೆ. ಇವೆರಡರಲ್ಲಿ ಹೋಲಿಸಿದರೆ ಗಗನನೌಕೆ ನಿಭಾಯಿಸುವುದೇ ಸುಲಭ ಎಂಬ ಉತ್ತರ ಅವರಿಂದ ಬಂದರೂ ಆಶ್ಚರ್ಯವಿಲ್ಲ. ಏಕೆಂದರೆ ಭೂಮಿಯಲ್ಲಿ ಸುಲಭವಾದ ಕೆಲಸಗಳೆಲ್ಲ ಆಗಸದಲ್ಲಿ ಅಸಾಧ್ಯವಾಗಿ ನಿಲ್ಲುತ್ತವೆ. ತಲೆ ಕೆಳಗೆ ಮಾಡಿದರೂ ಸಿಂಪಲ್ ಆಗಿ ಏನೊಂದನ್ನೂ ಮಾಡಲಾಗುವುದಿಲ್ಲ. 


ಮೇಲೇರಿದಂತೆಲ್ಲ ಸುಲಭ ಎಂಬುದರ ವ್ಯಾಖ್ಯಾನವೇ ಬದಲಾಗಿ ಹೋಗುತ್ತದೆ. ನಿಲುಕುವ ದೂರದಲ್ಲೇ ಬದುಕು ಇಷ್ಟು ಕಷ್ಟವಾದರೆ ಬೇರೆ ಗ್ರಹದಲ್ಲಿ ಹೋಗಿ ವಾಸಿಸುವ ಕನಸು ಖಂಡಿತಾ ಸಲೀಸಿನದ್ದಲ್ಲ. ಬೇಸಿಕ್ ಎನ್ನುವಂಥ ಕೆಲಸಗಳು ಗಗನದಲ್ಲಿ ಎಷ್ಟು ಕಷ್ಟವಾಗುತ್ತವೆ ಎಂಬುದನ್ನು ನೋಡಿದರೆ, ಈ ಭೂಮಿಯಲ್ಲಿ ನಮಗೆ ದೊರೆತ ಬದುಕು ಎಂಥ ವರದಾನ ಎಂಬುದು ಅರ್ಥವಾಗುತ್ತದೆ. ಸ್ಪೇಸ್‌ನಲ್ಲಿ ಕಷ್ಟವೆನಿಸೋ ಸಿಂಪಲ್ ಕೆಲಸಗಳಿವು...

ಪುರುಷರಿಗಂತ ಮಹಿಳೆಯರೇ ಹೆಚ್ಚೊತ್ತು ನಿದ್ರಿಸುತ್ತಾರೆ: ಏಕೆಂದು ಇಲ್ಲಿದೆ! .

Tap to resize

Latest Videos

undefined

1. ನಿದ್ರಿಸೋದು

ಇಲ್ಲೇನೋ ಮಲಗಿದಲ್ಲೇ ಇತ್ತಿಂದಿತ್ತ ಇತ್ತಿಂದತ್ತ ತಿರುಗಿ ಹೇಗೆ ಆರಾಮೆನಿಸುತ್ತದೋ ಹಾಗೆ ನಿದ್ರಿಸುತ್ತೇವೆ. ಅಷ್ಟರ ಮೇಲೆಯೂ ನಿದ್ರೆಯ ಕುರಿತು, ಹಾಸಿಗೆ, ಮಂಚ ಪ್ರತಿಯೊಂದರ ಕುರಿತೂ ನಮ್ಮ ದೂರುಗಳು ನೂರಿರುತ್ತವೆ. ಆದರೆ ಗಗನದಲ್ಲಿ ಹಾಗೆ ಅತ್ತಿಂದಿತ್ತ ತಿರುಗಲು ನೆಲ, ಗೋಡೆ ಏನೊಂದೂ ಇಲ್ಲ. ಸುಮ್ಮನೆ ನಿದ್ರಿಸಿದರೆ ತೇಲಿಕೊಂಡು ಎತ್ತ ಸಾಗುತ್ತೀವೋ ದೇವರಿಗೇ ಗೊತ್ತು. ನೌಕೆಯ ಕ್ಯಾಬಿನ್ ಒಳಗೇ ಹಾರಾಡುತ್ತಾ ಮಲಗುವುದು ಕಲ್ಪಿಸಿಕೊಳ್ಳಲೂ ಅಸಾಧ್ಯ. ಅದಕ್ಕಾಗಿಯೇ ಗಗನಯಾತ್ರಿಗಳು ತಮ್ಮ ನೌಕೆಯ ಗೋಡೆ, ಬುಡಕ್ಕೆ ಜೋಡಿಸಿದ ಸ್ಲೀಪಿಂಗ್ ಬ್ಯಾಗೊಳಗೆ ಹೋಗಿ ನಿದ್ರಿಸುತ್ತಾರೆ. 

2. ಬ್ರೆಡ್ ತಿನ್ನುವುದು

ಗಗನಕ್ಕೆ ಹೋಗೋ ಆಸೆ ಇದ್ರೆ ಪ್ರೀತಿಯ ಟೋಸ್ಟ್‌ಗೆ ತಿಲಾಂಜಲಿ ಇಡಿ. ಬ್ರೆಡ್ಡನ್ನು ಗಗನಕ್ಕೆ ಕೊಂಡೊಯ್ಯಲು ಅನುಮತಿ ಇಲ್ಲ. ಏಕೆಂದರೆ ಅದರ ಚೂರುಗಳು ಎಲ್ಲೆಡೆ ಹಾರಿಹೋಗಿಬಿಡುತ್ತವೆ. ಅದಕ್ಕಾಗಿಯೇ ವಿಶೇಷವಾಗಿ ಪ್ಯಾಕ್ ಮಾಡಲಾದ ಟಾರ್ಟಿಲ್ಲಾ ಎಂಬ ಚಪಾತಿ ಮಾದರಿಯ ತಿಂಡಿಯನ್ನು ಆಕಾಶಕ್ಕೆ ತೆಗೆದುಕೊಂಡು ಹೋಗಲಾಗುತ್ತೆ. 

3. ಹಲ್ಲುಜ್ಜುವುದು

ಸ್ವಲ್ಪ ಫ್ಲೋರೈಡ್ ದೇಹ ಸೇರಿದರೆ ನಾವೇನು ಸಾಯುವುದಿಲ್ಲ. ಹಾಗಾಗಿಯೇ ಗಗನಯಾತ್ರಿಯು ಸ್ವಚ್ಛತೆ ಉದ್ದೇಶದಿಂದ ಬಳಸಿದ ಟೂತ್‌ಪೇಸ್ಟನ್ನು ನುಂಗಬೇಕಾಗುತ್ತದೆ. ಬ್ರಶ್ ಆದ ಬಳಿಕ ಬ್ರಶ್ಶನ್ನು ಸ್ವಚ್ಛಗೊಳಿಸಲು ಬಾಯಿಗೆ ಸ್ವಲ್ಪ ನೀರು ಹಾಕಿಕೊಂಡು ಅದನ್ನು ಬ್ರಶ್ ಮೇಲೆ ಉಗಿಯುತ್ತಾರೆ. 

4. ಕೈ ತೊಳೆಯುವುದು

ಬಾಹ್ಯಾಕಾಶದಲ್ಲಿ ಇಲ್ಲಿಯಂತೆ ಕೈ ತೊಳೆಯಲಾರಿರಿ. ಗಗನಯಾತ್ರಿಗಳು ತಮ್ಮೊಂದಿಗೆ ಸೋಪಿನ ನೀರನ್ನು ಪೌಚ್‌ನೊಳಗಿಟ್ಟುಕೊಂಡು ತೆಗೆದುಕೊಂಡು ಹೋಗಿರುತ್ತಾರೆ. ಕೈ ತೊಳೆಯಬೇಕೆಂದಾಗ ಇದನ್ನು ಸ್ಟ್ರಾ ಮೂಲಕ ಸ್ವಲ್ಪವೇ ಹೊರಗೆ ಊದುತ್ತಾರೆ. ಗುರುತ್ವಾಕರ್ಷಣೆ ಇಲ್ಲದ ಕಾರಣ ನೀರು ಚಂಡಿನಂತೆ ಅಲ್ಲಿ ತೇಲಲಾರಂಭಿಸುತ್ತದೆ. ಇದನ್ನು ಕ್ಯಾಚ್ ಹಿಡಿದು ಕೈ  ಉಜ್ಜಿಕೊಂಡು ಟವೆಲ್‌ನಿಂದ ಒರೆಸಿಕೊಳ್ಳುತ್ತಾರೆ ಗಗನಯಾತ್ರಿಗಳು. 

ಶೇವಿಂಗ್ ಬಳಿಕ ತ್ವಚೆ ತುರಿಸುತ್ತದೆಯೇ? ಹೀಗ್ ಮಾಡಿ

5. ಶೇವಿಂಗ್ ಹಾಗೂ ಹೇರ್‌ಕಟ್

ನೀವು ಕೂದಲನ್ನು ತೆಗೆದ ಬಳಿಕ ಅದು ನಿಮ್ಮ ಸುತ್ತಲೂ ಹಾರಾಡುತ್ತಿದ್ದರೆ ಅಲ್ಲಿ ಹೆಚ್ಚು ಕಾಲ ಇರಲಾಗುವುದೇ? ಸಾಧ್ಯವಿಲ್ಲ ಅಲ್ಲವೇ? ಒಂದು ವೇಳೆ ಬಾಹ್ಯಾಕಾಶದಲ್ಲಿ ಕೂದಲು ಕತ್ತರಿಸಿದರೆ ಇದೇ ಆದೀತು. ಆದ್ದರಿಂದ ಆಸ್ಟ್ರೋನಟ್ಸ್ ತಮ್ಮೊಂದಿಗೆ ವಾಕ್ಯೂಮ್ ಅಟ್ಯಾಚ್ ಆಗಿರುವ ಹೇರ್ ಶೇವರ್ ಕೊಂಡೊಯ್ಯುತ್ತಾರೆ. ಇದು ಟ್ರಿಮ್ ಮಾಡಿದ ಕೂದಲನ್ನೆಲ್ಲ ಒಳಗೆ ಸೆಳೆದು ಹಿಡಿದಿಟ್ಟುಕೊಳ್ಳುತ್ತದೆ. 

6. ಅಳುವುದು

ಗಗನಯಾತ್ರಿಗಳು ಅತ್ತರೆ ಕಣ್ಣೀರು ಕೆಳ ಬೀಳದೆ ಕಣ್ಣಿನ ಸುತ್ತ ತುಂಬಿಕೊಳ್ಳುತ್ತದೆ. ಅದನ್ನು ಕೈಯಿಂದ ಅಥವಾ ಬಟ್ಟೆಯಿಂದ ಒರೆಸಿಕೊಳ್ಳದ ಹೊರತು ಅದು ಸ್ಥಳ ಖಾಲಿ ಮಾಡದು. 

ಇದೇನು ಅಚ್ಚರಿ! ದೆಹಲಿಯಲ್ಲಿ ಟಾಯ್ಲೆಟ್ ಗಾಗಿಯೇ ಇದೆ ಒಂದು ಮ್ಯೂಸಿಯಂ! .

7. ಸ್ನಾನ

ನೀರಿಲ್ಲ, ಇದ್ದರೂ ಬೀಳಲ್ಲ ಎಂದು ಸ್ನಾನ ಮಾಡದೆ ಇದ್ದರೆ ಗಗನಯಾತ್ರಿಗಳು ಒಬ್ಬರಿಗೊಬ್ಬರ ವಾಸನೆ ತಡೆದುಕೊಂಡು ಬದುಕಲಾಗುವುದೇ?  ಹಾಗಾಗಿಯೇ ಅವರು ಮುಂಚೆಯೇ ಮಿಕ್ಸ್ ಮಾಡಿದ ಸೋಪ್ ವಾಟರನ್ನು ಬಟ್ಟೆಗೆ ಹಾಕಿಕೊಂಡು ಅದರಿಂದ ಮೈ ಒರೆಸಿಕೊಂಡು ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಇದು ಬೇಗವೂ ಆಗುತ್ತದೆ, ಜೊತೆಗೆ ಹರಿವ ನೀರನ್ನೂ ಬೇಡುವುದಿಲ್ಲ. 

8. ಟಾಯ್ಲೆಟ್

ಅಂತರಿಕ್ಷಕ್ಕೆ ಹಾರುವ ಮುನ್ನ ಗಗನಯಾತ್ರಿಗಳಿಗೆ ಟಾಯ್ಲೆಟ್ ತರಬೇತಿ ನೀಡಲಾಗುತ್ತದೆ. ನೌಕೆಯೊಳಗೆ ಬಹಿರ್ದೆಸೆಗಾಗಿ ಎರಡು ರೀತಿಯ ವಿಶೇಷ ವಾಕ್ಯೂಮ್ ಟಾಯ್ಲೆಟ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಮೂತ್ರ ಮಾಡುವುದಾದರೆ ಟ್ಯೂಬ್‌ನೊಳಕ್ಕೇ ಮಾಡಬೇಕು, ಮಲವನ್ನು ಕೂಡಾ ಸಣ್ಣ ಕಮೋಡ್‌ನೊಳಗೆ ಮಾಡಬೇಕು. ಎರಡಕ್ಕೂ ವಾಕ್ಯೂಮ್ ವ್ಯವಸ್ಥೆ ಇರುವುದರಿಂದ ಅದು ಎಲ್ಲವನ್ನೂ ವೇಗವಾಗಿ ಒಳಗೆಳೆದುಕೊಳ್ಳುತ್ತದೆ. ಇಲ್ಲದಿದ್ದಲ್ಲಿ ಹೊರ ಹಾಕಿದ್ದೆಲ್ಲ ಸುತ್ತಲೂ ತೇಲುವ ಅಪಾಯವಿರುತ್ತದೆ. 

click me!