ಇಲ್ಲಿ ಸಿಂಹಾಸನಕ್ಕೇ ಕಮೋಡ್ ಫಿಕ್ಸ್ ಮಾಡಿಸಿಕೊಂಡಿದ್ದ ರಾಜರ ಕುರಿತ ಮಾಹಿತಿಯಿದೆ. ಆನೆಗಳಿಗೆ ಹೇಗೆ ಟಾಯ್ಲೆಟ್ ಬಳಕೆ ಕಲಿಸಿಕೊಡಲಾಗುತ್ತಿತ್ತು, ಮಲಬದ್ಧತೆ ದೂರಗೊಳಿಸಬಲ್ಲ ಟಾಯ್ಲೆಟ್‌ಗಳು ಮುಂತಾದ ವಿಷಯಗಳಷ್ಟೇ ಅಲ್ಲ, ಸಾವಿರಾರು ವರ್ಷಗಳಿಂದ ದೇಶವಿದೇಶಗಳಲ್ಲಿ ಕಂಡುಬಂದ ಟಾಯ್ಲೆಟ್‌ಗಳೆಲ್ಲದರ ಮಾದರಿಗಳು ಕೂಡಾ ಇಲ್ಲಿವೆ.

ಸಾಯೋದ್ರೊಳಗೆ ನೋಡಲೇಬೇಕಾದ 10 ಜಾಗಗಳಿವು

ಇವನ್ನೆಲ್ಲ ನೀವು ನೋಡ್ಬೇಕಂದ್ರೆ ದೆಲ್ಲಿಯ ಟಾಯ್ಲೆಟ್ ಮ್ಯೂಸಿಯಂಗೆ ಹೋಗಬೇಕು. ಏನು ಟಾಯ್ಲೆಟ್ ಮ್ಯೂಸಿಯಮ್ಮಾ ಎಂದು ಮೂಗು ಮುಚ್ಚಿಕೊಳ್ಳಬೇಡಿ. ಇದು ವಾಸನೆರಹಿತ ಸ್ವಚ್ಛ ತರಹೇವಾರಿ ಟಾಯ್ಲೆಟ್‌ಗಳ ಸಂಗ್ರಹ. ಜಗತ್ತಿನ ಅತಿ ಚಿತ್ರವಿಚಿತ್ರ ಮ್ಯೂಸಿಯಂಗಳ ಪೈಕಿ ಟಾಪ್ 10 ರಲ್ಲಿ ಸ್ಥಾನ ಗಳಿಸುವಲ್ಲಿ ಈ ಮ್ಯೂಸಿಯಂ ಯಶಸ್ವಿಯಾಗಿದೆ. 

ನಿಮಗೆ ಬರೀ ಇಂಡಿಯನ್ ಹಾಗೂ ಕಮೋಡ್ ಎರಡೇ ರೀತಿಯ ಟಾಯ್ಲೆಟ್ ಗೊತ್ತಿರುವುದಾದರೆ ಮ್ಯೂಸಿಯಂ ಒಳಹೊಕ್ಕರೆ ನೀವು ಬೆಕ್ಕಸ ಬೆರಗಾಗುವುದರಲ್ಲಿ ಅನುಮಾನವಿಲ್ಲ. ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ ಈ ಯೋಜನೆಯ ಹರಿಕಾರರಾಗಿದ್ದು, ಜಗತ್ತಿನಾದ್ಯಂತ ಟಾಯ್ಲೆಟ್ ಕುರಿತು ಸಿಕ್ಕಿದ ಅಷ್ಟೂ ಮಾಹಿತಿಗಳನ್ನು ಸಂಗ್ರಹಿಸಿ ಈ ಕನಸಿನ ಯೋಜನೆಯನ್ನು ಸಾಕಾರಗೊಳಿಸಿದ್ದಾರೆ. ಇವರ ಸುಲಭ್ ಎನ್‌ಜಿಒ 1970ರಿಂದಲೂ ದೇಶದ  ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸುಮಾರು 50,000 ವಾಲಂಟೀರ್‌ಗಳು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಪರಿಸರ ಸ್ವಚ್ಛತೆ ಹಾಗೂ ಕಸ ನಿರ್ವಹಣೆ ಸಂಬಂಧ ಈ ಎನ್‌ಜಿಒ ಕೆಲಸ ಮಾಡುತ್ತದೆ.

ಮಳೆ ಬೇಜಾರಾದ್ರೆ ಈ ಪ್ಲೇಸಿಗೆ ವಿಸಿಟ್ ಮಾಡಿ

ಈ ಮ್ಯೂಸಿಯಂನ ಒಳಾಂಗಣ ಹಾಗೂ ನೂರಾರು ಟಾಯ್ಲೆಟ್ ಮಾದರಿಗಳು ಕೇವಲ ದೊಡ್ಡವರನ್ನಲ್ಲ, ಮಕ್ಕಳನ್ನು ಕೂಡಾ ಇಂಪ್ರೆಸ್ ಮಾಡುವಷ್ಟು ಚೆನ್ನಾಗಿವೆ. 2500 ಬಿಸಿಯಿಂದ ಹಿಡಿದು 2019ರವರೆಗಿನ ಟಾಯ್ಲೆಟ್ ವ್ಯವಸ್ಥೆಗಳು ಹೇಗೆಲ್ಲ ಇದ್ದವೆಂದು ಇಲ್ಲಿ ಕಾಣಬಹುದು. ಸುಮಾರು 50 ದೇಶಗಳ ಟಾಯ್ಲೆಟ್ ಮಾದರಿಗಳು ಇಲ್ಲಿವೆ. 
ಎಂಥೆಂಥ ಮಾದರಿಗಳಿವೆ? 

ಕಿಂಗ್ 14ನೇ ಲೂಯಿಸ್‌(1638-1715)ನ ಸಿಂಹಾಸನ ಮಾದರಿಯ ಟಾಯ್ಲೆಟ್‌‌ನ ರೆಪ್ಲಿಕಾ ಇಲ್ಲಿದೆ. ಈ ರಾಜ ತಾನು ಆಸ್ಥಾನದಲ್ಲಿ ಸಮಾಲೋಚನೆಯಲ್ಲಿರುವಾಗ ಕೂಡಾ ಟಾಯ್ಲೆಟ್ ಬಳಕೆ ಮಾಡುತ್ತಿದ್ದನಂತೆ! ಇನ್ನು ಟ್ರೆಶರ್ ಚೆಸ್ಟ್ ಎಂಬುದರ ವಿಶೇಷವೆಂದರೆ ಲಾಕರ್‌ನಂತೆ ಕಾಣುವ ಕಮೋಡ್- ಇದನ್ನು ಇಂಗ್ಲಿಷರು ಮನೆಯಿಂದ ಹೊರ ಹೋಗುವಾಗ ದರೋಡೆಕೋರರನ್ನು ಮೂರ್ಖರಾಗಿಸಲು ಬಳಸುತ್ತಿದ್ದರಂತೆ! ಇದಲ್ಲದೆ., ಯೂರೋಪ್‌ನ ಕ್ಲಬ್‌ಗಳಲ್ಲಿ ಬಳಸುತ್ತಿದ್ದ ಕುಶನ್ ಛೇರ್ ಮಾದರಿಯ ಲೂ, 1700ರ ಛೇಂಬರ್ ಪಾಟ್ ಫಾರ್ ಲೇಡೀಸ್, ಬುಕ್ ಓದಲು ಬಳಸುವ ಸ್ಟೂಲ್‌ನಂಥ ಫ್ರೆಂಚ್ ಕಮೋಡ್, ಫ್ಯಾಕ್ಸ್ ಮೆಶಿನ್‌ನಂಥ ಟಾಯ್ಲೆಟ್, ಪ್ರಿಂಟರ್‌ನಂಥ ಕಮೋಡ್, ಎಲ್ಲಿಗೆ ಬೇಕೆಂದರಲ್ಲಿ ಕೊಂಡೊಯ್ಯಬಹುದಾದ ಟೆಂಟ್ ಟಾಯ್ಲೆಟ್, ಬುಕ್ ಕೇಸ್‌ನಂಥ ಟಾಯ್ಲೆಟ್, ಮನುಷ್ಯರ ಮಲವನ್ನು ಬೂದಿಯಾಗಿಸುವ ಎಲೆಕ್ಟ್ರಿಕ್ ಟಾಯ್ಲೆಟ್ ಮುಂತಾದ ವಿಶೇಷ ಮಾದರಿಗಳು ಇಲ್ಲಿವೆ. ಇವಲ್ಲದೆ ಟಾಯ್ಲೆಟ್ ಫರ್ನಿಚರ್‌ಗಳು, ಛೇಂಬರ್ ಪಾಟ್‌ಗಳು ಮುಂತಾದವು ಕೂಡಾ ಪ್ರದರ್ಶನಕ್ಕಿವೆ. 

ಈ ಊರಿನ ಮನೆ, ಅಂಗಡಿಗೆ ಇಲ್ಲ ಬೀಗ!

ಇನ್ನು ಇಲ್ಲಿನ ಗೋಡೆಗಳ ಮೇಲೆ ಟಾಯ್ಲೆಟ್‌ಗೆ ಸಂಬಂಧಿಸಿದ ಜೋಕ್‌ಗಳು ಹಾಗೂ ಪರೋಡಿಗಳು ನಿಮ್ಮನ್ನು ನಗಿಸಲು ಸಜ್ಜಾಗಿ ಕುಳಿತಿವೆ. ಜೊತೆಗೆ, ಪ್ರಾಚೀನ ಕಾಲದಿಂದ, ಮಧ್ಯಯುಗ, ನವಯುಗಗಳಲ್ಲಿ ಟಾಯ್ಲೆಟ್ ವ್ಯವಸ್ಥೆ ಹೇಗೆಲ್ಲ ಇತ್ತು ಎಂಬ ಇತಿಹಾಸ ವಿವರಣೆ ಇದೆ. 

ಇವೆಲ್ಲವುಗಳೊಂದಿಗೆ ಸಾವಿರಾರು ವರ್ಷಗಳಿಂದ ಟಾಯ್ಲೆಟ್ ಪರಂಪರೆ ಬೆಳೆದುಬಂದ ಕುರಿತ ಮಾಹಿತಿಗಳು ಇಲ್ಲಿ ಲಭ್ಯವಿವೆ. 480 ಬಿಸಿಯಲ್ಲಿ ನಡೆದ ಪರ್ಶಿಯನ್ ವಾರ್ 3ರಲ್ಲಿ ಗ್ರೀಕರ ವಿರುದ್ಧ ಪರ್ಶಿಯನ್ಸ್ ಸೋಲಲು ಹೇಗೆ ಶೌಚಾಲಯಗಳ ಕೊರತೆ ಕಾರಣವಾಯ್ತು, 222 ಎಡಿಯಲ್ಲಿ ರೋಮನ್ ದೊರೆ ಹೇಲಿಯೋಗ್ಯಾಬಸ್‌ನನ್ನು ಟಾಯ್ಲೆಟ್‌ನಲ್ಲಿ ಕೊಂದ ವಿಷಯ, ಮನುಸ್ಮೃತಿ ಹಾಗೂ ವಿಷ್ಣುಪುರಾಣದಲ್ಲಿ ವಿವಾಹಿತರು ಹಾಗೂ ಅವಿವಾಹಿತರಿಗೆ ಬೇರೆ ಬೇರೆ ರೀತಿಯ ಟಾಯ್ಲೆಟ್ ಶಿಷ್ಠಾಚಾರಗಳಿದ್ದ ಕುರಿತ ಸಂಗತಿ ಇರುವುದು ಮುಂತಾದ ಆಸಕ್ತಿಕರ ವಿಷಯಗಳನ್ನಿಲ್ಲಿ ಕೊಡಲಾಗಿದೆ. 

" ಮ್ಯೂಸಿಯಂ, ಟಾಯ್ಲೆಟ್ ಅಭಿವೃದ್ಧಿ ಕುರಿತ ಇತಿಹಾಸದ ಟ್ರೆಂಡ್‌ಗಳನ್ನು ತಿಳಿಸುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶಗಳು ಇಲ್ಲಿವೆ'' ಎನ್ನುತ್ತಾರೆ ಮ್ಯೂಸಿಯಂ ಸಂಚಾಲಕ ಗೌರವ್ ಚಂದ್ರ. ಸಾಹಿತ್ಯ ಪ್ರೇಮಿಗಳಿಗಾಗಿ, ಶೌಚ ಕಾರ್ಯದಿಂದ ಪ್ರೇರಣೆಗೊಂಡು ರಚನೆಯಾದ ಸಾಹಿತ್ಯಗಳ ಕುರಿತ ವಿಷಯಸಂಗ್ರಹವಿದೆ. ಮಲಬದ್ಧತೆಗೆ ಔಷಧಿ, ಟಾಯ್ಲೆಟ್ ಸೈನ್‌ಗಳ ಪ್ರದರ್ಶನ, ಜಗತ್ತಿನ ಅತಿ ದುಬಾರಿ ಟಾಯ್ಲೆಟ್ ಕುರಿತ ವಿಷಯಗಳೆಲ್ಲವನ್ನೂ ಇಲ್ಲಿ ತಿಳಿಯಬಹುದು. 

ದುಬೈಯ ಬೀದಿಗಳಲ್ಲಿ ಕಂಡದ್ದನ್ನು ಕೊಂಡು ತಿನ್ನುತ್ತಾ...?

ಭಾರತದಲ್ಲಿ ಸಾರ್ವಜನಿಕ ಶೌಚಾಲಯಗಳು ಆರಂಭವಾಗಿದ್ದೇ 1940ರಲ್ಲಿ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಅವು ಪಾಳು ಬಿದ್ದವು. ಮ್ಯೂಸಿಯಂ ಹೊರಗಿನ ಸ್ಥಳದಲ್ಲಿ ಹೀಗೆ ಭಾರತದಲ್ಲಿ ಸುಲಭ್ ಇಂಟರ್‌ನ್ಯಾಷನಲ್ ಅಭಿವೃದ್ಧಿಪಡಿಸಿದ ಟಾಯ್ಲೆಟ್ ಮಾದರಿಗಳನ್ನು ಪ್ರದರ್ಶನಕ್ಕಿಡಲಾಗಿದೆ.  ಮ್ಯೂಸಿಯಂ ಪ್ರತಿದಿನ 10.30ರಿಂದ ಸಂಜೆ 5ರವರೆಗೆ ಸಾರ್ವಜನಿಕರಿಗೆ ತೆರೆದಿದ್ದು, ಪ್ರವೇಶ ಉಚಿತವಾಗಿರುತ್ತದೆ.