ಪ್ರಕೃತಿಯ ಒಳಿತಿಗೆ ಒಂದು ದಿರಿಸು ಮತ್ತೆ ಧರಿಸಿ: ರಿಕ್ಕಿ ಕೇಜ್‌

By Suvarna NewsFirst Published May 20, 2022, 9:39 AM IST
Highlights

ಗ್ರ್ಯಾಮಿ, ಕೇನ್ಸ್‌ನಲ್ಲಿ ಒಂದೇ ದಿರಿಸು ಧರಿಸಿದ ಸಂಗೀತಕಾರ ರಿಕ್ಕಿ ಕೇಜ್‌,ಪ್ರಕೃತಿಯ ಒಳಿತಿಗೆ ಒಂದು ದಿರಿಸು ಮತ್ತೆ ಧರಿಸಿ.

ಸಾಮಾನ್ಯವಾಗಿ ಅಂತಾರಾಷ್ಟಿ್ರಯ ಮಟ್ಟದ ಕಾರ್ಯಕ್ರಮಗಳಲ್ಲಿ ಆ ಕಾರ್ಯಕ್ರಮಕ್ಕೆಂದೇ ಅದ್ದೂರಿ ದಿರಿಸುಗಳನ್ನು ಧರಿಸುವವರಿದ್ದಾರೆ. ಆ ದಿರಿಸುಗಳೇ ಹೈಲೈಟ್‌ ಆಗುತ್ತವೆ. ಆದರೆ ಕರ್ನಾಟಕದ ಹೆಮ್ಮೆಯ ಸಂಗೀತಕಾರ ರಿಕ್ಕಿ ಕೇಜ್‌ ಈ ಸಂಪ್ರದಾಯ ಮುರಿದಿದ್ದಾರೆ. ಗ್ರ್ಯಾಮಿ ಅವಾರ್ಡ್ಸ್ ಮತ್ತು ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಒಂದೇ ದಿರಿಸು ಧರಿಸಿದ್ದಾರೆ. ಈ ಮೂಲಕ ಪ್ರಕೃತಿಯ ಒಳಿತಿಗಾಗಿ ಒಂದು ದಿರಿಸನ್ನು ಮತ್ತೆ ಧರಿಸಿ ಎಂಬ ಸಂದೇಶ ಸಾರಿದ್ದಾರೆ.

‘ನಾನು ಗ್ರ್ಯಾಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಂದು ಧರಿಸಿದ್ದ ದಿರಿಸನ್ನು ಕೇನ್ಸ್‌ ಚಿತ್ರೋತ್ಸವದಲ್ಲೂ ಧರಿಸಿದ್ದೇನೆ. ಪರಿಸರ ನಾಶದಲ್ಲಿ ಫ್ಯಾಶನ್‌ ಇಂಡಸ್ಟ್ರಿಯ ಕೊಡುಗೆ ದೊಡ್ಡದಿದೆ. ಒಂದು ದಿರಿಸನ್ನು ಮತ್ತೆ ಧರಿಸುವುದರ ಮೂಲಕ ಪರಿಸರ ಉಳಿಸುವುದಕ್ಕೆ ನಮ್ಮ ಕೊಡುಗೆ ನೀಡಬಹುದಾಗಿದೆ. ಈ ಪ್ರಕೃತಿ ನಾವು ಏನು ಧರಿಸಿದ್ದೇವೆ ಎಂದು ನೋಡುವುದಿಲ್ಲ, ಹೇಗೆ ನೋಡಿಕೊಂಡಿರಿ ಎಂಬುದನ್ನು ಮಾತ್ರ ನೆನಪಲ್ಲಿ ಇಟ್ಟುಕೊಂಡಿರುತ್ತದೆ’ ಎಂದಿದ್ದಾರೆ ರಿಕ್ಕಿ. ಅವರ ಈ ನಡವಳಿಕೆ ವಿಶ್ವಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಧಾನಿ ಮೋದಿ ಭೇಟಿ

ರಿಕಿ ಕೇಜ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಸಂಭ್ರಮ ಹಂಚಿಕೊಂಡಿದ್ದಾರೆ. ಅಂದಹಾಗೆ ಮೊದಲ ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದ ಸಮಯದಲ್ಲೂ ಅಂದರೆ 2015ರಲ್ಲಿ ರಿಕಿ ಕೇಜ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಇದೀಗ 2022ರಲ್ಲಿ ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದಾಗಲು ಮೋದಿ ಭೇಟಿಯಾಗಿದ್ದಾರೆ. ಈ ಎನಡು ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಎರಡು ಫೋಟೋಗಳನ್ನು ಸ್ವತಃ ರಿಕಿ ಕೇಜ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಇದೀಗ ಎರಡನೇ ಬಾರಿ ಪ್ರಶಸ್ತಿ ಖುಷಿಯಲ್ಲಿ ರಿಕಿ ಕೇಜ್ ಮೋದಿ ಅವರನ್ನು ರಿಕಿ ಭೇಟಿ ಮಾಡಿ, ಗ್ರ್ಯಾಮಿ ಅವಾರ್ಡ್ ಅನ್ನು ತೋರಿಸಿದ್ದಾರೆ. ರಿಕಿ ಭೇಟಿಯಾಗಿರುವ ಫೋಟೋವನ್ನು ಪ್ರಧಾನಿ ಮೋದಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಸಂಗೀತದ ಕಡೆಗಿನ ನಿಮ್ಮ ಒಲವು ಮತ್ತು ಉತ್ಸಾಹ ಇನ್ನಷ್ಟು ಬಲಗೊಳ್ಳುತ್ತಲೇ ಇರುತ್ತದೆ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು. ನಿಮ್ಮನ್ನು ಭೇಟಿಯಾಗಿದ್ದು ಖುಷಿ ಆಯಿತು' ಮೋದಿ ಟ್ವೀಟ್ ಮಾಡಿದ್ದಾರೆ.

ಎರಡನೇ ಗ್ರ್ಯಾಮಿ ಪ್ರಶಸ್ತಿ 

ಖ್ಯಾತ ಬ್ರಿಟಿಷ್‌ ಡ್ರಮ್ಮರ್‌ ಸ್ಟೆವಾರ್ಟ್‌ ಕೋಪ್‌ಲ್ಯಾಂಡ್‌ ಜೊತೆ ಸೇರಿ ರಿಕಿ ಕೇಜ್‌ ಸಂಯೋಜಿಸಿರುವ ‘ಡಿವೈನ್‌ ಟೈಡ್ಸ್‌’ ಎಂಬ ಒಂಭತ್ತು ಗೀತೆಗಳ ಆಲ್ಬಮ್‌ಗೆ ಅತ್ಯುತ್ತಮ ನ್ಯೂ ಏಜ್‌ ಆಲ್ಬಮ್‌ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ಲಾಸ್‌ ವೆಗಾಸ್‌ನ ಎಂಜಿಎಂ ಗ್ರ್ಯಾಂಡ್‌ ಮಾಕ್ರ್ಯೂ ಬಾಲ್‌ರೂಮ್‌ನಲ್ಲಿ ಸೋಮವಾರ ನಡೆದ 64ನೇ ಗ್ರ್ಯಾಮಿ ಅವಾರ್ಡ್ಸ್ ಸಮಾರಂಭದಲ್ಲಿ ರಿಕಿ ಕೇಜ್‌ ಮತ್ತು ಸ್ಟೆವಾರ್ಟ್‌ ಕೋಪ್‌ಲ್ಯಾಂಡ್‌ ಜಂಟಿಯಾಗಿ ಪ್ರಶಸ್ತಿ ಸ್ವೀಕರಿಸಿದರು.

click me!