
ಒಂದು ಕಡೆ ಸಿನಿಮಾ ಮತ್ತೊಂದು ಕಡೆ ಕಿರುತೆರೆ ಮಗದೊಂದು ಕಡೆ ರಾಜಕೀಯ ಅಂತ ಸದಾ ಬ್ಯುಸಿ ಇರುವವರು ಭಾವನಾ ರಾಮಣ್ಣ. ಡಾಲಿ ಧನಂಜಯ ನಟನೆಯ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ'ದಲ್ಲಿ ಇವರ ಪಾತ್ರಕ್ಕೆ ಜನ ಭೇಷ್ ಅಂತಿದ್ದಾರೆ. ಭಾವನಾ ರಾಮಣ್ಣ ಅದ್ಭುತ ಭರತನಾಟ್ಯ ಕಲಾವಿದೆಯೂ ಹೌದು ಅನ್ನೋ ವಿಚಾರ ಹಲವರಿಗೆ ಗೊತ್ತಿಲ್ಲ. ಈ ದಾವಣಗೆರೆಯ ಬ್ಯೂಟಿ ಫ್ಯಾಶನ್ ಜಗತ್ತಿನಲ್ಲೂ ಕಮಾಲ್ ಮಾಡಿದವರು. ಇಷ್ಟೆಲ್ಲ ಸಾಧನೆ ಮಾಡಿರೋ ಈ ಹೆಣ್ಮಗಳು ಯಾಕಿನ್ನೂ ಸಿಂಗಲ್ಲಾಗೇ ಇದ್ದಾರೆ ಅನ್ನೋದು ಸದ್ಯದ ಪ್ರಶ್ನೆ. ಹಾಗೆ ನೋಡಿದರೆ ಭಾವನಾ ಸಿನಿಮಾ ಇಂಡಸ್ಟ್ರಿಗೆ ಬಂದೇ ಇಪ್ಪತ್ತಾರು ವರ್ಷ ಕಳೆದಿದೆ. ಇಪ್ಪತ್ತು ಇಪ್ಪತ್ತೆರಡರ ಹರೆಯದಲ್ಲಿ ಇಂಡಸ್ಟ್ರಿಗೆ ಬಂದಿರಬಹುದು ಅಂದುಕೊಂಡರೂ ವಯಸ್ಸು ನಲವತ್ತೆಂಟು ದಾಟಿದೆ. ವಯಸ್ಸು ಇಷ್ಟಾದರೂ ಭಾವನಾ ಯಾಕೆ ಮದುವೆ ಆಗಿಲ್ಲ ಅಂದರೆ ಅದಕ್ಕೂ ಒಂದು ಕಾರಣ ಇದೆ.
ತಾನ್ಯಾಕೆ ಮದುವೆ ಆಗಿಲ್ಲ ಅನ್ನೋ ಪ್ರಶ್ನೆಗೆ ಉತ್ತರವನ್ನು ಭಾವನಾ ಅವರೇ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಅವರ ಈ ಮಾತುಗಳು ಅವರು ಯಾಕೆ ಈವರೆಗೆ ಮದುವೆ ಆಗಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ನೀಡುವಂತಿದೆ. ಅಷ್ಟಕ್ಕೂ ಭಾವನಾ ಹೇಳಿರುವ ಮಾತುಗಳಿವು - 'ನನಗೆ ಮದುವೆ ಆಗದಿರಲು ಇದೇ ಅನ್ನುವಂಥಾ ನಿರ್ದಿಷ್ಟ ಕಾರಣಗಳೇನೂ ಇಲ್ಲ. ಆದರೂ ನಾನು ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತೇನೆ, ಬೇಗ ಅಪ್‌ಸೆಟ್ ಆಗುತ್ತೇನೆ. ನನಗೆ ತಾಳ್ಮೆ ಇಲ್ಲ, ನನ್ನ ಈ ಸ್ವಭಾವ ಇದು ಬೇರೆಯವರಿಗೆ ಕಿರಿಕಿರಿ ಎನಿಸಬಾರದು. ಆದರೆ ನಾನು ಎಲ್ಲಾ ವಿಚಾರದಲ್ಲಿ ಸ್ವಲ್ಪ ಪರಿಪೂರ್ಣತೆ ಬಯಸುತ್ತೇನೆ. ಸ್ವತಂತ್ರ ಸ್ವಭಾವದ ನನಗೆ ಸಂಬಂಧಗಳಲ್ಲಿ ಬಂಧಿಯಾಗಲು ಇಷ್ಟವಿಲ್ಲ. ನನ್ನನ್ನು ನೋಡಿದವರೂ ನಾನು ಅವರಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತೇನೆ ಎಂದು ಎನಿಸಿಲ್ಲದಿರಬಹುದು. ಮದುವೆ ಆಗಿಲ್ಲವೆಂದರೆ ಜೀವನ ಹಾಳಾಯ್ತು ಎಂಬ ಭಾವನೆ ನನಗೆ ಇಲ್ಲ. ಮದುವೆಯಾಗಿ ಪತಿಯನ್ನು ಕಳೆದುಕೊಂಡವನ್ನು ನೋಡಿದ್ದೇನೆ, ಇನ್ನೂ ಕೆಲವರ ಕಷ್ಟದ ದಿನಗಳನ್ನು ನೋಡಿದ್ದೇನೆ. ಇದನ್ನೆಲ್ಲಾ ನೆನಪಿಸಿಕೊಂಡರೆ ನಾನು ಸೇಫ್ ಇದ್ದೇನೆ ಅನ್ನಿಸುತ್ತದೆ. ಇರುವುದರಲ್ಲಿ ಸದ್ಯಕ್ಕೆ ಖುಷಿಯಾಗಿದ್ದೇನೆ,' ಎಂದು ಭಾವನಾ ಹೇಳಿದ್ದಾರೆ.
ಸುಶ್ಮಿತಾ ಸೇನ್ ಆದ್ಮೇಲೆ ಪ್ರೇಮಾನೇ ತುಂಬಾ ಹೈಟ್; ಚಿತ್ರರಂಗದ ಅಚ್ಚರಿ ಸತ್ಯಗಳನ್ನು ತೆರೆದಿಟ್ಟ ನಟಿ ಭಾವನ
ಸ್ವತಂತ್ರ ಮನೋಭಾವದ ಕೆಲ ನಟಿಯರು ವಿವಾಹದಂಥ ಬಂಧನದಲ್ಲಿ ಸಿಲುಕಲು ಇಷ್ಟ ಪಡೋದಿಲ್ಲ. ಮದುವೆಯಂಥ ಸಂಬಂಧಗಳು ತಮ್ಮ ಸ್ವತಂತ್ರ ಬದುಕಿಗೆ ಅಡ್ಡಿಯಾಗುತ್ತೆ ಅನ್ನೋದು ಒಂದು ಕಾರಣ. ಜೊತೆಗೆ ತನ್ನ ಮನೋಭಾವಕ್ಕೆ ಹೊಂದಾಣಿಕೆ ಆಗದಂಥಾ ವ್ಯಕ್ತಿ ಸಿಕ್ಕರೆ ಇಬ್ಬರ ಬದುಕೂ ನರಕ ಸದೃಶವಾಗುತ್ತದೆ ಅನ್ನೋದು ಕೆಲವರ ಮನೋಭಾವ. ಇಬ್ಬಿಬ್ಬರ ಬದುಕನ್ನು ಇಬ್ಬಂದಿತನದಲ್ಲಿ ಸಿಲುಕಿಸುವ ಬದಲು ವಿವಾಹದ ಬಂಧನಕ್ಕೆ ಒಳಪಡದೇ ಇರಲು ಕೆಲವೊಬ್ಬರು ನಿರ್ಧರಿಸುತ್ತಾರೆ. 'ಮದುವೆ ಆಗಿಲ್ಲವೆಂದರೆ ಜೀವನ ಹಾಳಾಯ್ತು ಎಂಬ ಭಾವನೆ ನನಗೆ ಇಲ್ಲ. ಮದುವೆಯಾಗಿ ಪತಿಯನ್ನು ಕಳೆದುಕೊಂಡವನ್ನು ನೋಡಿದ್ದೇನೆ, ಇನ್ನೂ ಕೆಲವರ ಕಷ್ಟದ ದಿನಗಳನ್ನು ನೋಡಿದ್ದೇನೆ. ಇದನ್ನೆಲ್ಲಾ ನೆನಪಿಸಿಕೊಂಡರೆ ನಾನು ಸೇಫ್ ಇದ್ದೇನೆ ಅನ್ನಿಸುತ್ತದೆ. ಇರುವುದರಲ್ಲಿ ಸದ್ಯಕ್ಕೆ ಖುಷಿಯಾಗಿದ್ದೇನೆ,' ಎಂಬ ಭಾವನಾ ಮಾತುಗಳು ವಿವಾಹ ಮಾಡಿಕೊಳ್ಳದೇ ಇರೋದರ ಬಗ್ಗೆ ಅವರಿಗೆ ಬೇಸರ ಇಲ್ಲ ಅನ್ನೋದನ್ನು ಹೇಳುತ್ತವೆ.
ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಭಾವನಾ ಹೆಸರು ನಂದಿನಿ ರಾಮಣ್ಣ ಅಂತಿತ್ತು. ನಿರ್ದೇಶಕ ಕೋಡ್ಲು ರಾಮಕೃಷ್ಣ, ನಂದಿನಿ ಹೆಸರನ್ನು ಭಾವನಾ ರಾಮಣ್ಣ ಎಂದು ಬದಲಿಸಿದರು. 1996ರಲ್ಲಿ ತುಳು ಚಿತ್ರದ ಮೂಲಕ ನಟನೆ ಆರಂಭಿಸಿದ ಭಾವನಾ 1997ರಲ್ಲಿ 'ನೀ ಮುಡಿದ ಮಲ್ಲಿಗೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ನಂತರ ನಂ 1, ಚಂದ್ರಮುಖಿ ಪ್ರಾಣಸಖಿ, ದೇವೀರಿ, ದೀಪಾವಳಿ, ಎಲ್ಲರ ಮನೆ ದೋಸೆನೂ, ಕುರಿಗಳು ಸಾರ್ ಕುರಿಗಳು, ಪರ್ವ, ನಿನಗಾಗಿ, ಚೆಲ್ವಿ, ರಾಂಗ್ ನಂಬರ್, ಪ್ರೀತಿ ಪ್ರೇಮ ಪ್ರಣಯ, ಶಾಂತಿ, ಫ್ಯಾಮಿಲಿ, ಇಂತಿ ನಿನ್ನ ಪ್ರೀತಿಯ, ಆಪ್ತರಕ್ಷಕ, ಚಿಂಗಾರಿ, ಭಾಗೀರಥಿ, ಕ್ರೇಜಿ ಸ್ಟಾರ್, ನಿರುತ್ತರ ಸಿನಿಮಾಗಳಲ್ಲಿ ಭಾವನಾ ನಟಿಸಿದ್ದಾರೆ.
'ರಾಮಾಚಾರಿ' ಧಾರಾವಾಹಿಯಿಂದ ನಟಿ ಭಾವನಾ ಔಟ್; ಮಾನ್ಯತಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ
ಸದ್ಯಕ್ಕೀಗ ಭಾವನಾ ಅವರಿಗೆ ಒಂದು ಸಿನಿಮಾ ನಿರ್ಮಾಣ ಮಾಡಬೇಕೆನ್ನುವುದು ಆಸೆ ಇದೆಯಂತೆ. ಜೊತೆಗೆ ಮಹಿಳೆಯರನ್ನು ಸಬಲೀಕರಣಗೊಳಿಸುವ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಭಾವನಾ ಸಂದರ್ಶನದಲ್ಲಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.