ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ನೋಡಿದವ್ರೆಲ್ಲ ಇನ್ಸ್‌ಪೆಕ್ಟರ್ ಗಿರಿಜಾ ಪಾತ್ರವನ್ನು ಹೊಗಳಿದ್ದೇ ಹೊಗಳಿದ್ದು. ಲಕ್ಷಣ ಸೀರಿಯಲ್‌ನಲ್ಲಿ ಡೆವಿಲ್ ಪಾತ್ರದ ಮೂಲಕ ಬೆಂಕಿ ಹಚ್ಚಿದ್ದ ಈ ಹೆಣ್ಮಗಳ ಹಿಸ್ಟರಿ ಇಲ್ಲಿದೆ ನೋಡಿ
ಈಕೆಯ ಹೆಸರು ಪ್ರಿಯಾ ಷಟಮರ್ಶನ. ಕಳೆದ ವರ್ಷ ಮುಕ್ತಾಯ ಕಂಡ 'ಲಕ್ಷಣ' ಸೀರಿಯಲ್‌ನಲ್ಲಿ ಬೆಂಕಿಯಂತೆ ಉಜ್ವಲಿಸಿದ ಪಾತ್ರ ಡೆವಿಲ್ ಈಕೆಯೇ. ಈ ಪುಣ್ಯಾತ್ತಿಗಿತ್ತಿಯ ಆಕ್ಟಿಂಗ್ ಎದುರು ಹೀರೋ ಹೀರೋಯಿನ್‌ಗಳೇ ಮಂಡಿಯೂರಿದ್ರು. ಅಂಥಾ ಆಕ್ಟಿಂಗ್ ಈಕೆಗಿತ್ತು. ಆ ಸೀರಿಯಲ್ ಒಂದಿಷ್ಟು ಕಾಲ ನಿಂತದ್ದೇ ಈಕೆಯ ಪಾತ್ರದಿಂದ ಅಂತ ಹೇಳಬಹುದು. ಇರಲಿ, ಇದಾದ ಮೇಲೆ ಸಿನಿಮಾಕ್ಕೆ ಅಂದರೆ ಸ್ಯಾಂಡಲ್‌ವುಡ್‌ಗೆ ಬಲಗಾಲಿಟ್ಟು ಬಂದರು ಪ್ರಿಯಾ. ಸಾಲು ಸಾಲು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಈಕೆಗೆ ನಿಜಕ್ಕೂ ಬ್ರೇಕ್ ನೀಡಿದ್ದು 'ಭೀಮ'.
ಹೌದು, ದುನಿಯಾ ವಿಜಯ್ ನಟನೆಯ ಈ ಸಿನಿಮಾದಲ್ಲಿ ಇನ್ಸ್‌ಪೆಕ್ಟರ್ ಗಿರಿಜಾ ಆಗಿ ಈಕೆ ಅಬ್ಬರಿಸಿದ್ದು ನೋಡಿದರೆ ಅಳ್ಳೆದೆಯವರಿಗೆ ಜೀವ ನಡುಕ ಹುಟ್ಟಬೇಕು. ಬೇರೆ ಯಾವ ಸ್ಟಾರ್ ಸಿನಿಮಾಗಳು ಬಾರದ ಕಾರಣಕ್ಕೋ ಅಥವಾ ದುನಿಯಾ ವಿಜಯ್ ಕಟ್ಟಿಕೊಟ್ಟ ಬೆಂಗಳೂರಿನ ಭಯಾನಕ ಜಗತ್ತಿಗೋ ಗೊತ್ತಿಲ್ಲ. ಈ ಸಿನಿಮಾವನ್ನು ಒಂದಿಷ್ಟು ಜನ ನೋಡ್ತಿದ್ದಾರೆ. ಸಿನಿಮಾಕ್ಕೆ ತಕ್ಕಮಟ್ಟಿನ ರೆಸ್ಪಾನ್ಸ್ ಸಿಕ್ತಿದೆ. ಈ ಸಿನಿಮಾದಲ್ಲಿ ಇಂದಿನ ಯುವ ಜನತೆ ಮುಳುಗೇಳುತ್ತಿರುವ ಎದೆಯಲ್ಲಿ ನಡುಕ ಹುಟ್ಟಿಸುವ ಜಗತ್ತೊಂದರ ಪರಿಚಯವಿದೆ. ಇಡಿಕ್ಕಿಡೀ ಜನಾಂಗವೇ ಹಾದಿ ತಪ್ಪುತ್ತಿರುವುದನ್ನು ದುನಿಯಾ ವಿಜಯ್ ಈ ಚಿತ್ರದಲ್ಲಿ ತಂದಿದ್ದಾರೆ. ಅಂದಹಾಗೆ ಈ ಸಿನಿಮಾದ ಈ ಕಥೆಯನ್ನು ಅವರಿಗೆ ಹೊಳೆಸಿದ್ದು ಅವರ ಮಗನೇ ಅಂತೆ. ಆತನ ಜನರೇಶನ್ ಹುಡುಗರ ಈ ಭಯಾನಕ ಜಗತ್ತನ್ನು ಕಂಡು ದುನಿಯಾ ವಿಜಯ್‌ಗೆ ಜೀವ ಬಾಯಿಗೆ ಬಂದಿತ್ತಂತೆ. ಇದು ಹೀಗಿದೆ ಅಂದಾಗ ಇದನ್ನು ಯಾಕೆ ಜಗತ್ತಿಗೆ ತೋರಿಸಬಾರದು ಅಂತ ಈ ಸಿನಿಮಾ ಕಥೆಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ ವಿಜಯ್.
ಈ ಸಿನಿಮಾದಲ್ಲಿ ಮನೆ ಮಾತಾಗಿದ್ದು ಪ್ರಿಯಾ ಷಟಮರ್ಶನ ಪಾತ್ರ. ಆಕೆಗೆ ಇನ್ಸ್‌ಪೆಕ್ಟರ್ ಗಿರಿಜಾ ಪಾತ್ರ ಯಾವ ಲೆವೆಲ್‌ನ ಹೆಸರು ತಂದುಕೊಟ್ಟಿದೆ ಅಂದರೆ ಆಕೆ ಕೆಲವು ವರ್ಷ ಅವಕಾಶಕ್ಕೆ ಕಾಯೋದು ಬೇಡ ಅನಿಸುತ್ತೆ. ಅವಕಾಶಗಳೇ ಆಕೆಯ ಮನೆ ಬಾಗಿಲು ತಟ್ಟಬಹುದು. ಯಾಕೆಂದರೆ ಇನ್ಸ್ಟಾದ ಟ್ರೋಲ್‌ಪೇಜ್‌ಗಳೆಲ್ಲ ಈ ನಟಿಗೆ ಬಹುಪರಾಕ್ ಅಂತಿವೆ. ಈ ಸಿನಿಮಾ ನೋಡಿದವ್ರೆಲ್ಲ ಈಕೆ ಅದ್ಭುತ ನಟನೆಗೆ ಜೈ ಅಂದಿದ್ದಾರೆ. ಇಂಥಾ ಇನ್ಸ್‌ಪೆಕ್ಟರ್ ಇದ್ರೆ ಖಂಡಿತಾ ಈ ಹುಡುಗ್ರು ಹಾದಿತಪ್ಪಲ್ಲ. ಜಗತ್ತಲ್ಲಿ ಕೆಟ್ಟವರೆಲ್ಲ ಹದ್ದುಬಸ್ತಿನಲ್ಲಿರುತ್ತಾರೆ ಅಂತಿದ್ದಾರೆ.
ಅಷ್ಟಕ್ಕೂ ಹೀಗೆ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಅಬ್ಬರಿಸಿರೋ ಪ್ರಿಯಾ ಷಟಮರ್ಶನ ಮೂಲತಃ ಮೈಸೂರಿನವರು. 'ಲಕ್ಷಣ' ಸೀರಿಯಲ್‌ನ ನಾಯಕಿ ವಿಜಯಲಕ್ಷ್ಮೀ ಹಾಗೂ ಈ ಸೀರಿಯಲ್‌ನಲ್ಲಿ ವಿಲನ್ ಆಗಿ ನಟಿಸಿರೋ ಸುಕೃತಾ ಈಕೆಯ ಬೆಸ್ಟ್ ಫ್ರೆಂಡ್ಸ್. ಇವ್ರು ಮೂರು ಜನ ಟೈಮ್ ಇದ್ದಾಗಲೆಲ್ಲ ಲೇಡೀಸ್ ಗ್ಯಾಂಗ್ ಮಾಡಿಕೊಂಡು ಟೂರ್, ದೇವಸ್ಥಾನ ಅಂತ ಸುತ್ತಾಡ್ತಿರುತ್ತಾರೆ. ಸುಮಾರು ೧೬ ವರ್ಷದಿಂದ ಇವರು ರಂಗಭೂಮಿಯಲ್ಲಿದ್ದಾರೆ. ಸೀರಿಯಲ್ ಮಾಡಲಿ, ಸಿನಿಮಾ ಮಾಡ್ಲಿ ಥಿಯೇಟರ್ ಬಿಡಲ್ಲ,. ರಂಗಭೂಮಿಯೇ ನನ್ನ ತವರು ಅನ್ನೋ ಈಕೆ ಮೈಸೂರಿನ ಮಂಡ್ಯ ರಮೇಶ್ ಅವರ ನಟನಾ ಮೂಲಕ ಅನೇಕ ರಂಗಪ್ರಯೋಗಗಳಲ್ಲಿ ಮಿಂಚಿದ್ದಾರೆ. ಮತ್ತೊಂದು ವಿಚಾರ ಅಂದರೆ ಈಕೆಗೆ ಮದುವೆ ಆಗಿದೆ. ಅವಿನಾಶ್ ಅನ್ನೋ ರಂಗಭೂಮಿ, ಸಿನಿಮಾ ನಟ ಈಕೆಯ ಪತಿ. ಒಂಥರಾ ಲೈಫನ್ನು ತನ್ನದೇ ರೀತಿ ಅನುಭವಿಸುತ್ತಾ, ಸಿನಿಮಾಗಳಲ್ಲೂ ಹೆಸರು ಮಾಡುತ್ತಾ ಇರೋ ಈ ನಟಿಗೆ ಈಗ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಇಂಥಾ ಕಲಾವಿದೆಗೆ ನಿಜಕ್ಕೂ ಹೆಚ್ಚು ಅವಕಾಶ ಸಿಗಬೇಕು ಅಂತ ಈಕೆಯ ಅಭಿಮಾನಿಗಳು ಮೆಚ್ಚುಗೆಯಿಂದ ಹೇಳ್ತಾರೆ.