
ಬೆಂಗಳೂರು (ಆ.8): ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಆ ಸ್ಥಳದಲ್ಲಿ ದೊಡ್ಡ ಮಾಲ್ ಬರಲಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಇದರ ನಡುವೆ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳು ಬಾಲಣ್ಣ ಅವರ ಕುಟುಂಬದ ವರ್ತನೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ವಿಷ್ಣುವರ್ಧನ್ ಅವರಿಗೆ ಬದುಕಿದ್ದಾಗಲೂ ನೆಮ್ಮದಿ ಕೊಟ್ಟಿಲ್ಲ. ಸತ್ತಾಗಲೂ ನೆಮ್ಮದಿ ಕೊಟ್ಟಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ. ಇನ್ನೊಂದೆಡೆ ಬಾಲಣ್ಣ ಅವರ ಪುತ್ರಿ ಗೀತಾ ಬಾಲಿ ಈ ವಿಚಾರದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವಿಷ್ಣುವರ್ಧನ್ ಅವರ ಅಭಿಮಾನಿಯೊಬ್ಬರು, ನಮ್ಮ ಈಗಿನ ಸ್ಟಾರ್ ನಟರು ಈ ವಿಚಾರವವಾಗಿ ಮಾತನಾಡಬೇಕು ಇಲ್ಲದೇ ಇದಲ್ಲಿ ಅವರು ಬದುಕಿದ್ದೂ ಸತ್ತಂಗೆ ಎಂದು ಹೇಳಿದ್ದಾರೆ. ಅವರ ಮಾತುಗಳು ಇಲ್ಲಿವೆ.
ತುಂಬಾ ನೋವಿನ ವಿಚಾರವಿದು. ಬಾಲಣ್ಣ ಕುಟುಂಬದವರಿಗೆ ಜಾಗ ಕೊಟ್ಟಿರೋದು ಸರ್ಕಾರ. ಬಾಲಣ್ಣ ಕುಟುಂಬದವರ ಪಿತ್ರಾರ್ಜಿತ ಆಸ್ತಿ ಇದಲ್ಲ. ಆದರೆ, ಮೊದಲಿಗೇ ಅವರು 10 ಎಕರೆ ಜಾಗವನ್ನು ಅಕ್ರಮವಾಗಿ ಮಾರಿಕೊಂಡಿದ್ದರು. ಇನ್ನು 10 ಎಕರೆ ಜಾಗ ಮಾತ್ರವೇ ಉಳಿದಿತ್ತು. 10 ಎಕರೆ ಮಾರಿರೋ ಹಣದಲ್ಲಿ ಉಳಿದ 10 ಎಕರೆಯಲ್ಲಿ ಸ್ಟುಡಿಯೋ ಅಭಿವೃದ್ಧಿ ಮಾಡ್ತೇವೆ ಎಂದಿದ್ದರು. ಅದು ಲೀಸ್‌ನಲ್ಲಿರುವ ಜಾಗ. ಅಂದಿನ ಅಧಿಕಾರಿಗಳು ಇಡೀ ಜಾಗದ ದಾಖಲೆಗಳನ್ನು ನೂರೆಂಟು ರೀತಿಯಲ್ಲಿ ತಿರುಚಿ ಏನೋ ಮಾಡಿದರು.
ಸರ್ಕಾರದವರೇ ಬಂದು ವಿಷ್ಣುವರ್ಧನ್ ಸಮಾಧಿಗೆ ಇಲ್ಲಿ ಜಾಗ ಇದೆ. ಈ ಸ್ಥಳದಲ್ಲಿ ಅವರಿಗೆ ಭಾವನಾತ್ಮಕ ಸಂಬಂಧ ಇದೆ. ಬಂಧನ ಚಿತ್ರದಿಂದಲೂ ಅವರಿಗೆ ಈ ಸ್ಟುಡಿಯೋ ವಿಶೇಷವಾಗಿತ್ತು. ಅಂದಿನ ಕಾಲದಲ್ಲಿ ಬಾಲಣ್ಣ ಅವರೇ ವಿಷ್ಣುವರ್ಧನ್ ಹಾಗೂ ಭಾರತಿ ಅವರನ್ನು ವಿವಾಹ ಮಾಡಿಸಿದ್ದರು ಅಂತಾ ಹೇಳಿತ್ತು. ಸರ್ಕಾರ ಮಾಡಿದ ಅಚಾತುರ್ಯದಿಂದ ವಿಷ್ಣು ಸರ್ ಅವರನ್ನು ಇಲ್ಲಿ ಮಣ್ಣು ಮಾಡಿದ್ದೆವು. ಆ ಬಳಿ ಇದನ್ನು ಅಭಿವೃದ್ಧಿ ಮಾಡ್ತೇವೆ ಅಂತಾ ಸರ್ಕಾರ ಹೇಳಿತ್ತು.
ಆದ್ರ ಇಲ್ಲಿ ಅವರ ಮನೆಯವರು ಕೇಳಿದ್ದಷ್ಟು ಜಾಗ ನೀಡಿಲ್ಲ ಅನ್ನೋ ಕಾರಣಕ್ಕೆ ಮೈಸೂರಲ್ಲಿ ವಿಷ್ಣು ಕುಟುಂಬ ಜಾಗ ಕೇಳಿತ್ತು. ಅಲ್ಲಿ ಸ್ಮಾರಕ ಮಾಡಿದ್ದಾರೆ. ಇದು ಪುಣ್ಯಭೂಮಿಯಾಗಿ ಇರಲಿ ಎನ್ನುವುದು ನಮ್ಮ ಆಸೆಯಾಗಿತ್ತು. ಸರ್ಕಾರದಿಂದ ಇದನ್ನು ಕೊಡೋಕೆ ಶಕ್ತಿ ಇಲ್ಲ ಎಂದಾದಲ್ಲಿ ಅಭಿಮಾನಿಗಳೇ ಹಣ ಹಾಕಿ ಈ ಜಾಗ ಖರೀದಿ ಮಾಡ್ತೇವೆ ಎಂದೂ ಹೇಳಿದ್ದೆವು. ಅದಕ್ಕೊಂದು ನಿಗದಿಯಾಗಿರುವ ಬೆಲೆ ಕಟ್ಟಿ ಎಂದಿದ್ದೆವು. ಇಲ್ಲೊಂದು ಗುಡಿ ಕಟ್ಟಿ, ಬಂದಂತ ಅಭಿಮಾನಿಗಳು ಕೈ ಮುಗಿದುಕೊಂಡು ಹೋಗಲು ದಾರಿ ಮಾಡುತ್ತೇವೆ ಎಂದಿದ್ದೆವು.
ಬಾಲಣ್ಣ ಅವರ ಮೊಮ್ಮಗ 2024ರಲ್ಲಿ ಅಭಿಮಾನಿಗಳ ಮೇಲೆ ಸ್ಟೇ ತಂದಿದ್ದ. ನಮ್ಮನ್ನು ಕುಗ್ಗಿಸಲು ಮಾಡಿದ ಕ್ರಮವಾಗಿತ್ತು. ಇನ್ನೊಂದು ವಿಚಾರ ಏನೆಂದರೆ, ಇಲ್ಲಿನ 10 ಗುಂಟೆ ನಮಗೆ ಎಲ್ಲಾ ನೀಡಲು ಬರೆದುಕೊಟ್ಟಿದ್ದರು. ಅದಕ್ಕೂ ಅವರು ಮನ್ನಣೆ ಕೊಟ್ಟಿಲ್ಲ. ಸ್ಟುಡಿಯೋ ಅಭಿವೃದ್ಧಿ ಮಾಡೋದಾಗಿದ್ದರೆ, ವಿಷ್ಣು ಸ್ಮಾರಕ ಅಲ್ಲಿದ್ದರೆ ಏನಾಗುತ್ತಿತ್ತು. ಅದೇನು ಅವರ ಎದೆ ಮೇಲೆ ಇರುತ್ತಿರಲಿಲ್ಲ. ವಿಷ್ಣು ಕುಟುಂಬದವರಾಗಲಿ, ಅಭಿಮಾನಿಗಳಾಗಲಿ ಬಾಲಣ್ಣ ಅವರ ಕುಟುಂಬಕ್ಕೆ ಏನು ಅನ್ಯಾಯ ಮಾಡಿದ್ದಾರೆ? ಇಂದು ಸ್ಮಾರಕವನ್ನು ಒಡೆದು ಕಮರ್ಷಿಯಲ್‌ಗೆ ಕೊಡಬೇಕು ಎಂದು ಹೊರಟಿದ್ದಾರಲ್ಲ ಇದಕ್ಕೆ ಏನು ಹೇಳೋದು?
ಸಿನಿಮಾ ರಂಗದ ಮಹಾನ್ ನಟನಿಗೆ ಹೀಗೆ ಮಾಡಿದ್ದಾರೆ. ಇವರನ್ನ ಇಲ್ಲಿಯವರೆಗೂ ಬಿಟ್ಟವರು ಯಾರು? ಈಗ ಇರುವ ಸ್ಟಾರ್ ನಟರೆಲ್ಲ ಬದುಕಿದ್ದೂ ಸತ್ತ ರೀತಿಯೇ ಅಲ್ವಾ? ಇದು ತುಂಬಾ ನೋವಿನ ಸಂಗತಿ. ಈಗಲಾದರೂ ಕೂಡ ಸ್ಟಾರ್ ನಟರು ಮಾತನಾಡಬೇಕು. ಈ ಜಾಗದ ವಿಚಾರವನ್ನು ಪರಿಹಾರ ಮಾಡಿಕೊಡಬೇಕು. ಪುಣ್ಯಭೂಮಿಗೆ ಜಾಗ ಮಾಡಿಕೊಟ್ಟರೆ ಬಹಳ ಒಳ್ಳೆಯದು. ಇಲ್ಲದೇ ಇದ್ದರೆ ಮುಂದಿನ ಪರಿಣಾಮಗಳು ಸರಿ ಇರೋದಿಲ್ಲ. ಬಾಲಣ್ಣ ಅವರ ಸಂಪಾದನೆ ಮಾಡಿರುವ ಜಾಗ ಕೇಳ್ತಿಲ್ಲ. ಸರ್ಕಾರ ಕೊಟ್ಟಿರೋ ಜಾಗವನ್ನೇ ಕೊಡಿ ಅಂತಿದ್ದೇವೆ ಎಂದು ಹೇಳಿದ್ದಾರೆ. ವಿಷ್ಣುವರ್ಧನ್ ಅವರಿಗೆ ಬದುಕಿದ್ದಾಗಲೂ ನೆಮ್ಮದಿ ಇಲ್ಲ, ಸತ್ತಾಗ ನೆಮ್ಮದಿ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.