ವಿನೋದ್ ರಾಜ್ ಅವರ ಪುತ್ರ ಯುವರಾಜ್ ಅವರು ತಮ್ಮ ಅಜ್ಜಿ ಲೀಲಾವತಿ ಅವರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ. ನನಗೆ ಕನ್ನಡ ಕಲಿಸಿದ್ದು ಅಜ್ಜಿ ಎಂದಿದ್ದಾರೆ.
ಹಿರಿಯ ನಟಿ ಲೀಲಾವತಿ ಅಗಲಿ ಇಂದಿಗೆ ಮೂರು ದಿನವಾಗಿದೆ. ಹಾಲು ತುಪ್ಪ ಕಾರ್ಯ ಅವರ ತೋಟದ ಮನೆಯಲ್ಲಿ ನಡೆದಿದೆ. ಈ ವೇಳೆ ವಿನೋದ್ ರಾಜ್ ಅವರ ಪುತ್ರ ಯುವರಾಜ್ ಅವರು ತಮ್ಮ ಅಜ್ಜಿಯೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅಜ್ಜಿ ಮಾಡಿದ ಒಳ್ಳೆ ಕೆಲಸಗಳು ಎಲ್ಲರಿಗೂ ಮಾದರಿ ಎಂದಿದ್ದಾರೆ.
ನನಗೆ ಕನ್ನಡ ಕಲಿಸಿಕೊಟ್ಟಿದ್ದೇ ಅಜ್ಜಿ ಲೀಲಾವತಿ. ಅವರ ಹೆಸರು ಉಳಿಸುವ ಕೆಲ ಮಾಡುತ್ತೇನೆಎಂದು ಮೊಮ್ಮಗ ಯುವರಾಜ್ ಹೇಳಿದ್ದಾರೆ. ಈ ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಯುವರಾಜ್, ಅಜ್ಜಿಯನ್ನು ಕಳೆದುಕೊಂಡು ತುಂಬಾ ಕಷ್ಟವಾಗಿದೆ. ಮನೆಯಲ್ಲಿ ಎಲ್ಲಾ ಜಾಗದಲ್ಲೂ ಅವರ ನೆನಪು ಕಾಡ್ತಿದೆ. ತುಂಬಾ ದುಃಖವಾಗುತ್ತಿದೆ ಎಂದಿದ್ದಾರೆ.
ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ಚೆನ್ನೈನಿಂದ ಆಗಮಿಸಿದ ವಿನೋದ್ ರಾಜ್ ಪತ್ನಿ ಮತ್ತು ಮಗ
ನಾನು ಚೆನ್ನೈನಲ್ಲಿದ್ದೆ, ಅಲ್ಲೇ ನಾನು ವಿದ್ಯಾಭ್ಯಾಸ ಮಾಡುತ್ತಿರುವುದು. ಅಜ್ಜಿಯ ನೆನಪಾದಾಗ ನಾನು ಇಲ್ಲಿಗೆ ಬಂದು ಹೋಗುತ್ತಿದ್ದೆ. ಅವರು ಕೂಡ ಚೆನ್ನೈಗೆ ಬಂದು ನನ್ನ ಜೊತೆ ಇರುತ್ತಿದ್ದರು. ಅಜ್ಜಿ ನನಗೆ ಎಲ್ಲರನ್ನೂ ಗೌರವಿಸಬೇಕು. ನಮ್ಮ ಹೃದಯವನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು. ಎಲ್ಲರಿಗೂ ಒಳ್ಳೆಯದನ್ನೇ ಮಾಡಬೇಕು ಎಂದು ಹೇಳುತ್ತಿದ್ದರು. ನಾನು ಚೆನ್ನೈನಲ್ಲಿ ಇದ್ದ ಕಾರಣ ನನಗೆ ಕನ್ನಡ ಚೆನ್ನಾಗಿ ಮಾತನಾಡಲು ಬರುತ್ತಿರಲಿಲ್ಲ. ಕನ್ನಡ ಜೊತೆಗೆ ಎಲ್ಲವನ್ನೂ ಹೇಳಿಕೊಟ್ಟಿರುವುದು ನನಗೆ ಅಜ್ಜಿ ಎಂದರು.
ಡಾನ್ಸ್ ರಾಜಾ ಡಾನ್ಸ್ ಸಿನೆಮಾ ನಾನು ನೋಡಿದ್ದೇನೆ. ಆ ಸಿನೆಮಾದಲ್ಲಿ ಅಜ್ಜಿ ಮತ್ತು ಅಪ್ಪಾಜಿ (ವಿನೋದ್‌ರಾಜ್) ಅವರ ಸಂಬಂಧದ ಬಗ್ಗೆ ನೋಡಿದ್ದೇನೆ. ಅದೇ ರೀತಿ ಅವರಿಬ್ಬರೂ ತಮ್ಮ ನಿಜ ಜೀವನದಲ್ಲೂ ಇದ್ದರೂ. ಅದು ಖುಚಿ ಇದೆ.
ಅಜ್ಜಿ ಏನಂದುಕೊಂಡಿದ್ದರೋ ಅದೇ ರೀತಿ ಈ ತೋಟದ ಮನೆ, ಕೃಷಿ ಮಾಡಿದ್ದಾರೆ. ಅವರ ನಿರ್ಧಾರಗಳ ರೀತಿಯಲ್ಲೇ ನಾನು ಕೂಡ ಮುಂದೆ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಹಿರಿಯ ನಟಿ ಲೀಲಾವತಿಗೆ ಹಾಲು-ತುಪ್ಪ ಕಾರ್ಯ ನೆರವೇರಿಸಿದ ಕುಟುಂಬ ಹಾಗೂ ಸೋಲದೇವನಹಳ್ಳಿ ಗ್ರಾಮಸ್ಥರು
ಅಜ್ಜಿಯನ್ನು ಕಳೆದುಕೊಂಡ ತಂದೆಯವರೊಂದಿಗೆ ಇದ್ದು ಧೈರ್ಯ ಹೇಳಿದ್ದೇನೆ. ಅವರು ಈಗ ಧೈರ್ಯವಾಗಿದ್ದಾರೆ ಎಂದು ಯುವರಾಜ್ ಹೇಳಿದ್ದಾರೆ. ಪ್ರಸ್ತುತ ಚೆನ್ನೈನಲ್ಲಿರುವ ಯುವರಾಜ್ ಐಟಿ ಉದ್ಯೋಗಿಯಾಗಿದ್ದಾನೆ. ಈ ಬಗ್ಗೆ ಸ್ವತಃ ವಿನೋದ್ ರಾಜ್ ಸ್ಪಷ್ಟಪಡಿಸಿದ್ದಾರೆ. ಅಮ್ಮನಿಗೆ ಅವನು ನಟನೆಗೆ ಬರುವುದು ಇಷ್ಟ ಇರಲಿಲ್ಲ. ಒಳ್ಳೆಯ ಮನಷ್ಯನಾಗಿರಬೇಕೆಂದು ಬಯಸಿದ್ದರು. ಒಳ್ಳೆಯ ಮಾರ್ಕ್ಸ್ ತೆಗೆದುಕೊಂಡಿದ್ದಾನೆ ಈಗ ಉದ್ಯೋಗದಲ್ಲಿದ್ದಾನೆ ಎಂದರು.
ನಟಿ ಲೀಲಾವತಿ ನಿಧನದ ಸುದ್ದಿ ಬಳಿಕ ಅವರ ಅಂತಿಮ ದರ್ಶನಕ್ಕೆ ಚೆನ್ನೈನಿಂದ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಮಗ ಯುವರಾಜ್ ಬಂದಿದ್ದು, ಮೊದಲ ಬಾರಿಗೆ ಕರ್ನಾಟಕದ ಜನತೆ ಮುಂದೆ ಕಾಣಿಸಿಕೊಂಡರು.