ಉಪೇಂದ್ರ ಸಿನಿಮಾಗಾಗಿ ಒಂದೇ ಕಡೆ 40 ಸೆಟ್‌ ನಿರ್ಮಾಣ

Kannadaprabha News   | Asianet News
Published : Mar 04, 2021, 08:41 AM ISTUpdated : Mar 04, 2021, 08:46 AM IST
ಉಪೇಂದ್ರ ಸಿನಿಮಾಗಾಗಿ ಒಂದೇ ಕಡೆ 40 ಸೆಟ್‌ ನಿರ್ಮಾಣ

ಸಾರಾಂಶ

ಅಂದು ನೆತ್ತಿ ಸುಡುವ ಬಿಸಿಲು. ಆದರೂ ಅಲ್ಲಿನ ಕೆಲಸಗಾರರಿಗೆ ವಿಶ್ರಾಂತಿ ಇಲ್ಲ. ವಾರದ ಕೊನೆಯ ದಿನ. ಆದರೂ ಹೆಚ್ಚು ಕಮ್ಮಿ 250 ರಿಂದ 300 ಮಂದಿ ಕೆಲಸಗಾರರು ಅಲ್ಲಿದ್ದರು. ಒಂದು ಕಡೆ ಜೈಲು ನಿರ್ಮಾಣ, ಮತ್ತೊಂದು ಕಡೆ ಮುಂಬೈನ ಯಾವುದೋ ಗಲ್ಲಿ ನಿರ್ಮಾಣ, ದೊಡ್ಡದೊಂದು ನಗರದ ಬೀದಿ, ಪುಟ್ಟಹಳ್ಳಿ, ಹೀರೋ ಎಂಟ್ರಿ ಕೊಡುವ ಮುಖ್ಯ ಪ್ರವೇಶ ದ್ವಾರ, ಜೈಲಿನ ಒಳಗಿರುವ ಸಣ್ಣ ಸಣ್ಣ ಸೆಲ್‌ಗಳು, ಖೈದಿಗಳನ್ನು ಒಂದೇ ಕಡೆ ಸೇರಿಸುವ ದೊಡ್ಡ ಮೈದಾನ.... ಹೀಗೆ ಇಡೀ ಮಿನರ್ವ ಮಿಲ್‌ ಕಬ್ಜ ಆಗಿತ್ತು.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಮಿನರ್ವ ಮಿಲ್‌ ಅನ್ನು ಹೀಗೆ ಆಕ್ರಮಿಸಿಕೊಂಡಿದ್ದು ನಿರ್ದೇಶಕ ಆರ್‌ ಚಂದ್ರು ಹಾಗೂ ಕಲಾ ನಿರ್ದೇಶಕ ಶಿವಕುಮಾರ್‌. ಅದು ಉಪೇಂದ್ರ ಅವರ ನಟನೆಯ ‘ಕಬ್ಜ’ ಚಿತ್ರಕ್ಕಾಗಿ ಕಳೆದ ಒಂದು ತಿಂಗಳಿನಿಂದಲೂ ಇಲ್ಲಿ ಸೆಟ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಸಾಮಾನ್ಯವಾಗಿ ಬಿನ್ನಿ ಮಿಲ್‌, ಮಿನರ್ವ ಮಿಲ್‌, ಮೈಸೂರು ಲ್ಯಾಂಫ್ಸ್‌... ಹೀಗೆ ಬೆಂಗಳೂರಿನ ಒಂದಿಷ್ಟುಹಳೆಯ ಕೈಗಾರಿಕಾ ಕಟ್ಟಡಗಳಲ್ಲಿ ನಾಲ್ಕೈದು ದಿನಗಳ ಕಾಲ ಹಾಡು, ಫೈಟ್‌ಗಾಗಿ ಸೆಟ್‌ಗಳನ್ನು ಹಾಕುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಇಡೀ ಮಿನರ್ವ ಮಿಲ್‌ ಅನ್ನೇ ಬಾಡಿಗೆಗೆ ತೆಗೆದುಕೊಂಡು ಒಟ್ಟು 40 ಸೆಟ್‌ಗಳನ್ನು ಹಾಕುತ್ತಿದ್ದಾರೆ ನಿರ್ದೇಶಕ ಆರ್‌ ಚಂದ್ರು. ಈಗಾಗಲೇ ಯಶ್‌ ನಟನೆಯ ‘ಕೆಜಿಎಫ್‌’ ಚಿತ್ರಕ್ಕೆ ಸೆಟ್‌ಗಳನ್ನು ಹಾಕಿ ಸೈ ಎನಿಸಿಕೊಂಡಿರುವ ಕಲಾ ನಿರ್ದೇಶಕ ಶಿವಕುಮಾರ್‌ ಸಾರಥ್ಯದಲ್ಲಿ ಆಂಧ್ರ ಹಾಗೂ ತಮಿಳುನಾಡಿನಿಂದ ಬಂದಿರುವ ಸಿನಿ ಕಾರ್ಮಿಕರು ಕಳೆದ ಒಂದು ತಿಂಗಳಿನಿಂದಲೂ ಸೆಟ್‌ಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಂಠೀರವ ಸ್ಟುಡಿಯೋ, ಮಿನರ್ವಮಿಲ್‌ನಲ್ಲಿ 40 ಸೆಟ್‌ ನಿರ್ಮಾಣ;ಫೆ.26ರಿಂದ ‘ಕಬ್ಜ’ಗೆ ಶೂಟಿಂಗ್‌ ಆರಂಭ! 

ಮಿನರ್ವ ಮಿಲ್‌ಗೇ ಹೊಸ ರೂಪ

ಉಪೇಂದ್ರ ಹಾಗೂ ಸುದೀಪ್‌ ಕಾಂಬಿನೇಷನ್‌ನಲ್ಲಿ ಬರುತ್ತಿರುವ ‘ಕಬ್ಜ’ ಚಿತ್ರಕ್ಕಾಗಿ ಹಾಕುತ್ತಿರುವ ಸೆಟ್‌ಗಳಿಂದಲೇ ಪಾಳು ಬಿದ್ದ ಕಾರ್ಖಾನೆಯಾಗಿದ್ದ ಮಿನರ್ವ ಮಿಲ್‌ಗೆ ಹೊಸ ರೂಪ ಬರುತ್ತಿದೆ. ಛಾಯಾಗ್ರಾಹಕ ಎಜೆ ಶೆಟ್ಟಿಕ್ಯಾಮೆರಾ ಕಣ್ಣಿನಲ್ಲಿ ಈ ಹೊಸ ಮಿನರ್ವ ಮಿಲ್‌ ಅನ್ನು ತೆರೆ ಮೇಲೆ ಕಣ್ಣು ತುಂಬಿಕೊಳ್ಳಬಹುದು. ಮಿಲ್‌ಗೆ ಕಾಲಿಟ್ಟಕೂಡಲೇ ಎದುರಾಗುವುದು ನಗರ ಪ್ರದೇಶದಲ್ಲಿ ಕಾಣುವ ದೊಡ್ಡ ಸ್ಟ್ರೀಟ್‌. ಇದು ಮುಂಬೈ ನೆನಪಿಸುವ ಬೀದಿ. ಅದರ ಪಕ್ಕದಲ್ಲೇ ಪುಟ್ಟಸಿಟಿ, ಇದಕ್ಕೆ ಹೊಂದಿಕೊಂಡಿರುವ ಅಂಗಡಿಗಳಿಂದ ಕೂಡಿರುವ ವ್ಯಾಪಾರದ ಬೀದಿ, ಇದರ ಅಕ್ಕ-ಪಕ್ಕ ಎರಡು ದೊಡ್ಡ ಜೈಲುಗಳು. ಅದರ ಒಳಗೆ ಇಬ್ಬರು, ಮೂವರನ್ನು ಬಂಧಿಸಿಡಬಹುದಾದ ಜೈಲಿನ ಸೆಲ್‌ಗಳು, ಈ ಎಲ್ಲಾ ಸೆಟ್‌ಗಳನ್ನು ರಂಗೇರಿಸುವ ನಗರದಲ್ಲಿ ಕಾಣುವ ಮೈದಾನ, ಹೀರೋ ಇಂಟ್ರಡಕ್ಷನ್‌ ಬೀದಿ, ಖೈದಿಗಳನ್ನು ಒಂದು ಕಡೆ ಸೇರಿಸುವ ಗ್ರೌಂಡ್‌, ಆ್ಯಕ್ಷನ್‌ ದೃಶ್ಯಗಳ ಚಿತ್ರೀಕರಣಕ್ಕಾಗಿಯೇ ಒಂದಿಷ್ಟುತಾತ್ಕಾಲಿಕ ಮನೆಗಳು ಸೇರಿದಂತೆ ಒಟ್ಟು 40 ಸೆಟ್‌ಗಳನ್ನು ಏಕಕಾಲದಲ್ಲಿ ನಿರ್ಮಿಸುತ್ತಿದ್ದಾರೆ.

"

ಕೆಜಿಎಫ್‌ ನಂತರ ಕಬ್ಜ

ಈ ಮಿನರ್ವ ಮಿಲ್‌ ಅನ್ನು ಇತ್ತೀಚೆಗೆ ಸೂಕ್ತವಾಗಿ ಬಳಸಿಕೊಂಡಿದ್ದು ‘ಕೆಜಿಎಫ್‌’ ಚಿತ್ರ. ಆಗಲೂ ಇದೇ ಶಿವಕುಮಾರ್‌ ಅವರೇ ಪ್ರಶಾಂತ್‌ ನೀಲ್‌ ಹಾಗೂ ಯಶ್‌ ಕಾಂಬಿನೇಷನ್‌ನ ಚಿತ್ರಕ್ಕಾಗಿ ಇದೇ ಮಿನರ್ವ ಮಿಲ್‌ನಲ್ಲಿ ಸೆಟ್‌ಗಳನ್ನು ಹಾಕಿದ್ದರು. ಪ್ರಶಾಂತ್‌ ನೀಲ್‌ ಲೈಟಿಂಗ್‌ ಸಂಯೋಜನೆಯಲ್ಲಿ ಹೆಚ್ಚು ಆಟವಾಡಿದರೆ, ನಿರ್ದೇಶಕ ಆರ್‌ ಚಂದ್ರು ಪ್ರತಿಯೊಂದು ದೃಶ್ಯಕ್ಕೂ ಕಲರ್‌ಫುಲ್‌ ಸೆಟ್‌ಗಳನ್ನು ಹಾಕುವ ಮೂಲಕ ಅದ್ದೂರಿ ಮೇಕಿಂಗ್‌ನಲ್ಲಿ ತಮ್ಮ ಕೈ ಚಳಕ ತೋರಿಸಲು ಹೊರಟಿದ್ದಾರೆ. ಒಟ್ಟಿನಲ್ಲಿ ‘ಕೆಜಿಎಫ್‌’ ಚಿತ್ರದ ನಂತರ ‘ಕಬ್ಜ’ ಮಿನರ್ವ ಮಿಲ್‌ನಲ್ಲಿ ಸದ್ದು ಮಾಡುತ್ತಿದೆ.

ಉಪ್ಪಿ- ಕಿಚ್ಚ ಕಾಂಬೋ,ಈಗ ಕಬ್ಜ ಚಿತ್ರದ ಪವರ್‌ ಹೆಚ್ಚಾಗಿದೆ: ಆರ್‌ ಚಂದ್ರು 

ಸದ್ಯದಲ್ಲೇ ಉಪೇಂದ್ರ ಅವರ ಜತೆಗೆ ನಟ ಸುದೀಪ್‌ ಅವರೂ ಕೂಡ ಇದೇ ಮಿನರ್ವ ಮಿಲ್‌ಗೆ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ‘ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್‌ ಎದುರು ಮಿಂಚಿದ ಬಾಲಿವುಡ್‌ ನಟ ಡ್ಯಾನಿಷ್‌ ಅಖ್ತರ್‌ ಸೈಫ್‌ ‘ಕಬ್ಜ’ ಚಿತ್ರಕ್ಕೂ ಎಂಟ್ರಿ ಆಗಿದ್ದಾರೆ.

ಪ್ಯಾನ್‌ ಇಂಡಿಯಾ ಚಿತ್ರಕ್ಕೆ ಈ ಮೇಕಿಂಗ್‌ ಬೇಕು: ಆರ್‌ ಚಂದ್ರು

ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಲಾಕ್‌ಡೌನ್‌ಗೂ ಮೊದಲೇ ಒಂದಿಷ್ಟುಸೆಟ್‌ಗಳನ್ನು ಹಾಕಿದ್ವಿ. ಆದರೆ, ಮಳೆಗೆ ಎಲ್ಲಾ ಹಾಳಾಗಿವೆ. ಹೀಗಾಗಿ ಈ ಬಾರಿ ವುಡ್‌ ಬಳಸಿ ದೊಡ್ಡ ಮಟ್ಟದಲ್ಲಿ ಸೆಟ್‌ಗಳನ್ನು ಹಾಕುತ್ತಿದ್ದೇವೆ. ಕತೆಗೆ ಅಗತ್ಯ ಇರುವ ಸೆಟ್‌ಗಳನ್ನೇ ಹಾಕುತ್ತಿದ್ದೇವೆ. ಪ್ಯಾನ್‌ ಇಂಡಿಯಾ ಚಿತ್ರ ಎಂದ ಮೇಲೆ ಇಂಥ ಅದ್ದೂರಿ ಮೇಕಿಂಗ್‌ ಅಗತ್ಯವಿದೆ. ಮೊದಲ ಬಾರಿಗೆ ಇಡೀ ಮಿನರ್ವ ಮಿಲ್‌ ಅನ್ನು ಬುಕ್‌ ಮಾಡಿಕೊಂಡಿರುವುದು...

ಉಪ್ಪಿಯ ಕಬ್ಜ ಪೋಸ್ಟರ್‌ಗೆ 10 ಲಕ್ಷ ಹಿಟ್ಸ್‌;ಆರ್‌. ಚಂದ್ರು ಜತೆ ನಾಲ್ಕು ಮಾತು

ಇದು ಆರ್‌ ಚಂದ್ರು ಹೇಳುವ ಮಾತು. 40 ಸೆಟ್‌ಗಳಲ್ಲೂ ಸುಮಾರು 80 ದಿನಗಳ ಕಾಲ ಶೂಟಿಂಗ್‌ ಮಾಡುವ ಪ್ಲಾನ್‌ ಚಿತ್ರತಂಡದ್ದು. ಬಹುಶಃ ಲಾಕ್‌ಡೌನ್‌ ನಂತರ ಕನ್ನಡ ಸಿನಿಮಾವೊಂದು ಇಷ್ಟುದೊಡ್ಡ ಮಟ್ಟದಲ್ಲಿ ವೆಚ್ಚ ಮಾಡಿ ಸೆಟ್‌ಗಳನ್ನು ಹಾಕುತ್ತಿರುವುದು ಇದೇ ಮೊದಲು. ಅಂಥದ್ದೊಂದು ಹೆಗ್ಗಳಿಕೆಗೆ ‘ಕಬ್ಜ’ ಸಿನಿಮಾ ಪಾತ್ರವಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?