
ಪ್ರಿಯಾ ಕೆರ್ವಾಶೆ
- ನನ್ನ ಹುಟ್ಟೂರು ಉತ್ತರ ಕರ್ನಾಟಕದ ಸಿಂಧನೂರು. ಪಿಯುಸಿಯಲ್ಲಿ ಡುಮ್ಕಿ ಹೊಡೆದೆ. ಆಮೇಲೆ ಸಿನಿಮಾ ಮಾಡಬೇಕು ಅಂತ ಬೆಂಗಳೂರಿಗೇನೋ ಬಂದೆ. ಐಬಿಎಂನಲ್ಲಿ ಇಟ್ಟಿಗೆ ಶಿಫ್ಟ್ ಮಾಡುವ ಕೆಲಸಕ್ಕೆ ಸೇರಿಕೊಂಡೆ. ಮುಂದೆ ಸೀರಿಯಲ್ ಸೆಟ್‌ನಲ್ಲಿ ಲೈಟ್ ಬಾಯ್ ಕೆಲಸ ಸಿಕ್ಕಿತು. ಆಮೇಲೆ ಅಲ್ಲೇ ಪ್ರೊಡಕ್ಷನ್ ಬಾಯ್, ಅಸಿಸ್ಟೆಂಟ್ ಡೈರೆಕ್ಟರ್ ತನಕ ಕೆಲಸ ಸಿಕ್ಕಿತು.
- ಕಳೆದ ನಾಲ್ಕೈದು ವರ್ಷಗಳಿಂದ ಸರಿಯಾದ ಅವಕಾಶ ಸಿಗದೆ ಊರು, ಬೆಂಗಳೂರಿನ ನಡುವೆ ಅಲೆದಾಡುತ್ತಿದ್ದೆ. ತುಂಬಿದ ಬಸ್ಸಿನಲ್ಲಿ ನಮ್ಮೂರ ಜನರ ಜೊತೆ ಓಡಾಟ. ಡಾಬಾದಲ್ಲಿ ಊಟಕ್ಕೆ ಅಂತ ಬಸ್ ನಿಲ್ಲಿಸಿದರೆ ಜನ ಅಲ್ಲಿ ಊಟ ಮಾಡಲು ದುಡ್ಡಿಲ್ಲದೆ, ದೂರದಲ್ಲಿ ಕೂತು ತಾವು ಮನೆಯಿಂದ ಕಟ್ಟಿಕೊಂಡು ಬಂದ ಒಣರೊಟ್ಟಿ, ಖಾರಪುಡಿ ತಿನ್ನುತ್ತಿದ್ದರು. ಕೆಲವರು ಬಸ್ಸಿಗೂ ಕಾಸಿಲ್ಲದೆ ಟ್ರಕ್‌ನಲ್ಲಿ ಓಡಾಡುತ್ತಿದ್ದರು. ಆದರೂ ಬೆಂಗಳೂರಿಗೆ ಬಂದಿಳಿದಾಗ ಅವರ ಮುಖದಲ್ಲೊಂದು ಹುಮ್ಮಸ್ಸು, ವಿಧಾನಸೌಧ ಕಂಡಾಗ ಆಗುವ ಖುಷಿ ಇವೆಲ್ಲ ನನ್ನನ್ನು ಬಹಳ ಕಾಡಿಸಿತ್ತು. ಇದನ್ನೆಲ್ಲ ಸಿನಿಮಾ ಮೂಲಕ ಹೇಳಬೇಕು ಅಂತ ತೀವ್ರವಾಗಿ ಅನಿಸುತ್ತಿತ್ತು.
- ಸಿನಿಮಾ ಮಾಡೇ ಬಿಡಾಣ ಅನಿಸಿತು. ಕೆಲಸಕ್ಕಿಳಿದೆ. ಕಥೆ ತಲೆಯಲ್ಲಿತ್ತು. ಕ್ಯಾಮರಾಮೆನ್ ಸುರೇಶ್ ಬಾಬು ಹಾಗೂ ಸಿಂಕ್ ಸೌಂಡ್ ಕೆಲಸ ಮಾಡುತ್ತಿದ್ದ ಸ್ನೇಹಿತನ ಸಮೇತ ಸಿನಿಮಾ ಕೆಲಸ ಶುರು ಮಾಡಿದೆ. ನನಗೆ ಸೀರಿಯಸ್ ಸಿನಿಮಾ ಜನ ನೋಡುತ್ತಾರೆ ಅನ್ನುವ ನಂಬಿಕೆ ಇಲ್ಲ. ಜೊತೆಗೆ ದೊಡ್ಡವರ ಮೂಲಕ ಕಥೆ ಹೇಳೋದಕ್ಕಿಂತ ಹುಡುಗರ ಮೂಲಕ ಹೇಳಿದರೆ ಪರಿಣಾಮಕಾರಿ ಅನಿಸಿತು. ಹಾಗೆ ರೀಲ್ಸ್ ಮಾಡುತ್ತಿದ್ದ ಕೊಪ್ಪಳದ ಹುಡುಗ ಜಗದೀಶ ಮತ್ತು ನನ್ನ ಸಂಬಂಧಿ ಆದಿ ಎಂಬ ಹುಡುಗನನ್ನು ಹಾಕಿಕೊಂಡು ಸಿನಿಮಾ ಕೆಲಸ ಶುರು ಮಾಡಿದೆ. 15 ದಿನದಲ್ಲಿ ಸಿನಿಮಾ ಶೂಟಿಂಗ್ ಕೆಲಸ ಮುಗಿಸಿದ್ದೇವೆ.
ಗಗನ ಕುಸುಮ ಚಿತ್ರ ವಿಮರ್ಶೆ: ವಿಷಾದವನ್ನು ದಾಟಿಸುವ ಚಿತ್ರರಂಗದ ಕಥನ
- ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಳಿಸಿದ್ದೆ. ತಿರಸ್ಕೃತಗೊಂಡಿತು. ಕಾರಣ ಕೇಳಿದಾಗ ಒಂದು ಲೆಟರ್‌ಹೆಡ್ ನೀಡಿದರು. ಅದರಲ್ಲಿ ನಿರ್ದೇಶನ, ಸಿನಿಮಾಟೋಗ್ರಫಿ, ನಟನೆ ಸೇರಿ ಎಲ್ಲಾ ವಿಭಾಗಕ್ಕೂ ಅತ್ಯಂತ ಕನಿಷ್ಠ ಸಿ ಗ್ರೇಡ್ ಕೊಟ್ಟಿದ್ದರು. ಜೊತೆಗೆ ಮಕ್ಕಳ ಅಭಿನಯ ಮನಮುಟ್ಟುವಂತಿಲ್ಲ, ಚಲನಚಿತ್ರೋತ್ಸವಕ್ಕೆ ಈ ಸಿನಿಮಾ ಅನರ್ಹ ಎಂದು ಷರಾ ಬರೆದಿದ್ದರು. ನನ್ನ ಕೆಲಸಕ್ಕೆ ಏನಾದ್ರೂ ಹೇಳಲಿ, ಆದರೆ ಮಕ್ಕಳ ನಟನೆಗೆ ಹೀಗಂದರಲ್ಲ ಅಂತ ಬಹಳ ನೋವಾಯ್ತು. ನಾಲ್ಕು ಜನರಿಗಾದರೂ ನಮ್ಮ ಸಿನಿಮಾ ಮುಟ್ಟಲಿ ಎಂದು ಟ್ರೇಲರ್ ಕಟ್ ಮಾಡಿ ರಿಲೀಸ್ ಮಾಡಿದೆ.
- ಹಲವು ಮಂದಿ ಇಂಡಸ್ಟ್ರಿಯ ದಿಗ್ಗಜರು ಫೋನ್ ಮಾಡಿ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ಶೇರ್ ಮಾಡಿಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.