ತಮಿಳು ನಟ ವಿಶಾಲ್ ಅವರು ಪುನೀತ್ ರಾಜ್‌ಕುಮಾರ್ ನಿಧನದ ವೇಳೆ ಕೊಟ್ಟ ಮಾತು ಇದೀಗ ಉಳಿಸಿಕೊಂಡಿದ್ದಾರೆ. ಈ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.
ತಮಿಳು ನಟ ವಿಶಾಲ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಇಂದು(ಸೆ.10) ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿ ಸುಮಾರು ಎರಡು ಗಂಟೆಗಳ ಕಾಲ ಕಾಲ ಕಳೆದಿದ್ದಾರೆ. ಮಕ್ಕಳೊಂದಿಗೆ ಪೋಟೋ ತೆಗೆಸಿಕೊಂಡು, ಧಾಮದ ನಾಯಿಮರಿಯನ್ನು ಮುದ್ದಾಡಿದ್ದಾರೆ. ಅಸಲಿಗೆ ವಿಶಾಲ್ ಏನ್ ಹೇಳಿದ್ರು, ಯಾಕೆ ಶಕ್ತಿಧಾಮಕ್ಕೆ ಬಂದಿದ್ದರು, ಈ ಸ್ಟೋರಿ ನೋಡಿ.
ಅಪ್ಪು ಅಗಲಿಕೆ ನಮ್ಮೆಲ್ಲರಿಗೂ ನೋವು ತಂದಿತ್ತು. ಅಪ್ಪು ಬಗ್ಗೆ ಎಲ್ಲರೂ ಸಾಕಷ್ಟು ಒಳ್ಳೆಯ ಮಾತುಗಳ್ನಾಡಿ ಅಪ್ಪು ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಆದ್ರೆ ಅದ್ರಲ್ಲೊಬ್ಬ ನಟ, ಅಪ್ಪು ಕಾರ್ಯವನ್ನ ಮುಂದುವರಿಸುವುದಾಗಿ ಮಾತು ಕೊಟ್ಟಿದ್ದರು. ಅಷ್ಟೇ ಅಲ್ಲ ರಾಜ್ ಕುಟುಂಬದ ಜೊತೆ ಸಂಬಂಧ ಬೆಸೆದುಕೊಂಡಿರುವ ಶಕ್ತಿಧಾಮಕ್ಕೆ ಬರುವುದಾಗಿ ಹೇಳಿದ್ರು. ಅದೇ ರೀತಿ ಇವತ್ತು ಶಕ್ತಿ ಧಾಮಕ್ಕೆ ಬಂದಿದ್ರು ಹಾಗೂ ಸಂತಸ ವ್ಯಕ್ತಪಡಿಸಿದ್ರು.
ನಾನು ಶಕ್ತಿಧಾಮದ ಸ್ವಯಂ ಸೇವಕನಾಗಿರ್ತೀನಿ, ರಾಜ್ ಕುಟುಂಬ ಅನುಮತಿ ನೀಡಲಿ; ಶಕ್ತಿಧಾಮ ಭೇಟಿ ಬಳಿಕ ವಿಶಾಲ್ ಮಾತು
ಶಕ್ತಿಧಾಮದ ಮಕ್ಕಳೊಂದಿಗೆ ಫೋಟೋಗೆ ಫೋಸ್ ಕೊಟ್ಟ ವಿಶಾಲ್
ಹೌದು...ಕರುನಾಡು ರತ್ನ ಡಾ.ಪುನೀತ್‌ರಾಜ್‌ಕುಮಾರ್ ನಿಧನದ ವೇಳೆ ಶಕ್ತಿಧಾಮಕ್ಕೆ ಭೇಟಿ ನೀಡುವುದಾಗಿ ವಿಶಾಲ್ ಹೇಳಿದ್ದರು. ಅದರಂತೆ ತಮಿಳಿನ ಪ್ರಖ್ಯಾತ ನಟ ವಿಶಾಲ್ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ ಮಕ್ಕಳ ಜೊತೆ ಬೆರತು ಮಾತನಾಡಿದರು.ಈ ಮೂಲಕ ತಾವು ಕೊಟ್ಟ ಮಾತನಂತೆ ನಡೆದುಕೊಂಡಿದ್ದಾರೆ.
ತಮಿಳುನಾಡಿನಲ್ಲಿ ವಿಶಾಲ್ ಅಂದ್ರೆ ಒಂದು ರೀತಿಯಲ್ಲಿ ಸಂಚಲನ ಮೂಡುತ್ತದೆ. ಅತ್ಯಂತ ಯಶಸ್ವಿ ನಟರಾಗಿರುವ ವಿಶಾಲ್ ಇಂದು ಮೈಸೂರಿನ ಶಕ್ತಿಧಾಮಕ್ಕೆ ಅಗಮಿಸಿದ್ರು. ಕೆಂಪು ಬಣ್ಣದ ಕಾರಿನಲ್ಲಿ ಆಗಮಿಸಿದ ನಟ ವಿಶಾಲ್ ನೇರವಾಗಿ ಶಕ್ತಿಧಾಮಕ್ಕೆ ಆಗಮಿಸಿ ಮಕ್ಕಳ ಜೊತೆ ಮಾತನಾಡಿದರು. ಈ ವೇಳೆ ಶಕ್ತಿಧಾಮದ ಮಕ್ಕಳು ಹಾಡನ್ನ ಹಾಡುವ ಮೂಲಕ ನಟ ವಿಶಾಲ್ ರನ್ನ ಬರಮಾಡಿಕೊಂಡ್ರು.
ಬೆಳಗ್ಗೆ 11.30ರ ಸುಮಾರಿಗೆ ಶಕ್ತಿಧಾಮಕ್ಕೆ ಆಗಮಿಸಿದ ವಿಶಾಲ್ ಗೆ ಮಕ್ಕಳು ಸರಳ ಸ್ವಾಗತ ನೀಡಿದ್ರು. ಮಕ್ಕಳ ಹಾಡು, ಕುಣಿತ ಹಾಗೂ ಮಕ್ಕಳೊಡನೆ ಮಾತನಾಡಿ ಹೊರ ಬಂದ ವಿಶಾಲ್ ಮಕ್ಕಳ ಜೊತೆ ಕುಳಿತು ಫೋಟೊ ತೆಗೆಸಿಕೊಂಡ್ರು. ಈ ವೇಳೆ ನಟ ವಿಶಾಲ್ ಭಾವುಕರಾಗಿ ಮಾತನಾಡಿದ್ರು.
ಇನ್ನೂ ಶಕ್ತಿಧಾಮವನ್ನ ದೇವಾಲಯಕ್ಕೆ ಹೋಲಿಸಿದ ವಿಶಾಲ್, ಅಲ್ಲಿ ಮಕ್ಕಳಲ್ಲೇ ದೇವರನ್ನ ಕಂಡೆ ಇಂತಹ ಪವಿತ್ರ ಸ್ಥಳದಲ್ಲಿ ಸ್ವಯಂ ಸೇವಕನಾಗಲು ಭಯಸುತ್ತೇನೆ. ಯಾವ ಸಮಯದಲ್ಲಿ ಕರೆ ಮಾಡಿದ್ರು ಶಕ್ತಿಧಾಮದ ಸಹಾಯಕ್ಕೆ ನಿಲ್ಲುತ್ತೇನೆಂದು ಹೇಳಿದ್ರು. ಇದಕ್ಕೆ ರಾಜ್ ಕುಟುಂಬದ ಅನುಮತಿಯನ್ನ ಸಹ ಕೇಳಿಕೊಂಡ್ರು. ಇದೇ ವೇಳೆ ಮಕ್ಕಳ ಜೊತೆ ಕಳೆದ ಸಮಯವನ್ನ ನೆನಪಿಸಿಕೊಂಡ್ರು. ಮತ್ತೇ ಬರುವುದಾಗಿ ಹೇಳಿ ಹೊರಟರು.
ಶಕ್ತಿಧಾಮದ ನಾಯಿಮರಿ ಮುದ್ದಾಡಿದ ತಮಿಳು ನಟ.
ಇನ್ನು ಇದೇ ಸಂದರ್ಭದಲ್ಲಿ ಶಕ್ತಿಧಾಮದ ಆವರಣದಲ್ಲಿ ಓಡಾಡಿದ ನಟ ವಿಶಾಲ್, ಅಲ್ಲಿನ ವಾತಾವರಣವನ್ನು ಸವಿದರು. ಈ ವೇಳೆ ಅಲ್ಲೇ ದಾರಿಯಲ್ಲಿ ಸಿಕ್ಕ ನಾಯಿಮರಿಯ‌್ನ ಎತ್ತಿ ಅಪ್ಪಿಕೊಂಡು ಮುದ್ದಾಡಿದರು ಸ್ಟಾರ್ ನಟ.
ಒಟ್ಟಿನಲ್ಲಿ ಪುನೀತ್ ರಾಜ್ ಕುಮಾರ್ ಸೇವಾ ಕಾರ್ಯಗಳನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದ ನಟ ವಿಶಾಲ್, ಇವತ್ತು ಶಕ್ತಿಧಾಮಕ್ಕೆ ಬಂದು ಎಲ್ಲವನ್ನು ಕಣ್ಣಾರೇ ಕಂಡು ಇನ್ನಷ್ಟು ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲ ಶಕ್ತಿಧಾಮದ ಜೊತೆ ನಿಲ್ಲುವುದಾಗಿ ಭರವಸೆ ಕೂಡ ನೀಡಿದ್ದಾರೆ.