ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿಗೆ ವೀಕ್ಷಕರು ನೀಡಿದ ಪ್ರೀತಿ ಮತ್ತು ರೇಟಿಂಗ್ ಯಶಸ್ಸಿಗೆ ಧನ್ಯವಾದ ಸಮರ್ಪಿಸುತ್ತ, ಸ್ಟಾರ್ ಸುವರ್ಣ ವಾಹಿನಿ ಈಗ ಮತ್ತೊಂದು ಹೊಸ ಧಾರಾವಾಹಿ ಪ್ರಸ್ತುತಪಡಿಸುತ್ತಿದೆ.
ತನ್ನೆಲ್ಲಾ ಧಾರಾವಾಹಿಗಳ ನಾಯಕಿಯರ ಮೂಲಕ ಕರ್ನಾಟಕದ ಎಲ್ಲಾ ಸ್ತರದ ಮಹಿಳೆಯರ ಬದುಕಿಗೆ ಕನ್ನಡಿ ಹಿಡಿದಿದೆ ಸ್ಟಾರ್ ಸುವರ್ಣ. ಸಂಘರ್ಷದ ಐಎಎಸ್ ಅಧಿಕಾರಿ ಇಂದಿರಾ, ಮನಸೆಲ್ಲಾ ನೀನೆಯ ಡಯಟೀಷಿಯನ್ ರಾಗಾ, ಉನ್ನತ ಶಿಕ್ಷಣದ ಮೂಲಕ ಮುಗಿಲು ಮುಟ್ಟುವ ಕನಸು ಕಾಣುತ್ತಿರುವ ಸರಸು, ಗೃಹಿಣಿಯರ ಪ್ರತಿನಿಧಿ ಆಶಾ.. ಇವರೆಲ್ಲರ ರೀತಿ ವಿಭಿನ್ನ ಪಾತ್ರಗಳ ಜೊತೆಗೆ ಬದಲಾವಣೆಯ ಬೆಳಕಿಗೆ ಮತ್ತೊಂದು ಹಣತೆ ಹಚ್ಚಲು ಬರ್ತಿದ್ದಾಳೆ ರುಕ್ಕು. ಜನವರಿ 4ರಿಂದ ಸೋಮವಾರದಿಂದ ಶನಿವಾರ ರಾತ್ರಿ 8.30ಕ್ಕೆ ರೈತ ಮಹಿಳೆ ರುಕ್ಕುವಿನ ಕತೆಯನ್ನು ಕನ್ನಡ ಕಿರುತೆರೆ ವೀಕ್ಷಕರು ಕಣ್ತುಂಬಿಕೊಳ್ಳಬಹುದು.
ಹಳ್ಳಿ ಹೆಣ್ಣು ಮಕ್ಕಳೆಂದರೆ ಮೂಗು ಮುರಿಯುವ ಜನರೆದುರು, ಆತ್ಮವಿಶ್ವಾಸ ಮತ್ತು ಛಲದಿಂದ ಮನೆಯ ಜವಾಬ್ದಾರಿ ಹೊತ್ತಿರುವ ಮುಗ್ಧ ಮನಸ್ಸಿನ ಗಟ್ಟಿಗಿತ್ತಿ ರುಕ್ಕು. ತಂದೆಯಿಲ್ಲದ ಕುಟುಂಬಕ್ಕೆ ಆಧಾರಸ್ತಂಭವಾಗಿರುವ ರುಕ್ಕು, ಅಕ್ಕನ ಮದುವೆ ಮಾಡಿ, ತಂಗಿಯ ವಿದ್ಯಾಭ್ಯಾಸಕ್ಕಾಗಿ ನಿಸ್ವಾರ್ಥವಾಗಿ ದುಡಿದಿರುತ್ತಾಳೆ. ಓದು ಬರಹವಿಲ್ಲದಿದ್ರೂ, ಆಲೋಚನೆಯಲ್ಲಿ ಶ್ರೀಮಂತಿಕೆ, ಜೀವನದಲ್ಲಿ ಸರಳತೆಯಿರಬೇಕು ಎಂದು ನಂಬಿರುವ ರುಕ್ಕುವಿನದ್ದು ಎಲ್ಲರೂ ಮೆಚ್ಚುವ ವ್ಯಕ್ತಿತ್ವ. ತನ್ನ ತಂಗಿ ರಾಧಿಕಾ ಪಾಲಿಗೆ ರುಕ್ಕು ತಾಯಿಯಿದ್ದಂತೆ. ಹೃದಯವಂತೆ ಮತ್ತು ಬುದ್ಧಿವಂತೆಯಾಗಿರುವ ರಾಧಿಕಾಗೂ ಅಕ್ಕ ಅಂದ್ರೆ ಅಕ್ಕರೆ ಮಾತ್ರವಲ್ಲ, ಅಪಾರ ಹೆಮ್ಮೆ, ಗೌರವ. ಇವರಿಬ್ಬರ ಈ ಅನುಬಂಧಕ್ಕೆ ಸವಾಲಾಗುವ ಸಂದರ್ಭ ಸೃಷ್ಟಿಯಾಗಲಿದ್ದು, ಈ ಧರ್ಮಸಂಕಟವೇ ರುಕ್ಕು ಧಾರಾವಾಹಿಯ ಬಹು ದೊಡ್ಡ ತಿರುವಾಗಲಿದೆ. ರುಕ್ಕುವಿನ ಜೀವನದಲ್ಲಿ ದೊಡ್ಡ ಪ್ರಭಾವ ಬೀರುವ ಮತ್ತೊಂದು ಪಾತ್ರ ಬಂಗಾರಮ್ಮ. ಊರಿನ ಮಖ್ಯಸ್ಥೆಯಾಗಿರುವ ಬಂಗಾರಮ್ಮ ಪ್ರತಿಷ್ಠೆ ಮತ್ತು ಮರ್ಯಾದೆಗೆ ಮತ್ತೊಂದು ಹೆಸರಂತೆ ಬದುಕುತ್ತಿರುವ ಮಹಿಳೆ, ನಾಯಕ ಮುರುಳಿಯ ತಾಯಿ. ಹೊಲ ಗದ್ದೆ ಬೇಸಾಯವೆಂದು ತನ್ನಷ್ಟಕ್ಕೆ ತನ್ನ ಪ್ರಪಂಚದಲ್ಲೇ ತೃಪ್ತಿ ಕಾಣುವ ರುಕ್ಕು ಬದುಕು ಬಂಗಾರಮ್ಮನ ಪ್ರವೇಶದಿಂದ ಬದಲಾಗುತ್ತದೆ.
'ಲಕ್ಷ್ಮಿ ಬಾರಮ್ಮ' ಚಿನ್ನು ಈಗ 'ಮನಸೆಲ್ಲಾ ನೀನೇ' ಅಂತಿದ್ದಾರೆ; ಯಾರಿಗೆ ಗೊತ್ತಾ?
ರುಕ್ಕು ಧಾರಾವಾಹಿಯ ಮತ್ತೊಂದು ವಿಶೇಷತೆ ಅಂದ್ರೆ ಕನ್ನಡ ಕಿರುತೆರೆಯ ಪ್ರತಿಭಾನ್ವಿತ ನಿರ್ದೇಶಕ ರಾಮ್ ಜಿ ಇದೇ ಮೊದಲ ಬಾರಿಗೆ, ನಿರ್ದೇಶನದ ಜೊತೆಗೆ ರುಕ್ಕು ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋಗಳು ಮತ್ತು ಶೀರ್ಷಿಕೆ ಗೀತೆ ಜನಪ್ರಿಯವಾಗಿದೆ. ಜನವರಿ 4ರಿಂದ ರಾತ್ರಿ 8.30ಕ್ಕೆ ಕನ್ನಡ ಕಿರುತೆರೆಯಲ್ಲಿ ಹಿಂದೆಂದೂ ನೋಡಿರದ ನೇಗಿಲ ಯೋಗಿಯ ಕತೆ ಪ್ರಸಾರವಾಗಲಿದ್ದು, ವೀಕ್ಷಕರ ಅಭಿಮಾನ ಮತ್ತು ಆಶೀರ್ವಾದದ ನಿರೀಕ್ಷೆಯಲ್ಲಿ ನಿಮ್ಮ ಮುಂದೆ ಬರುತ್ತಿದ್ದಾಳೆ ರುಕ್ಕು. ಕತೆ, ಚಿತ್ರಕತೆ, ಪಾತ್ರವರ್ಗ ಮತ್ತು ಉನ್ನತ ಮಟ್ಟದ ನಿರ್ಮಾಣ ರುಕ್ಕ ಧಾರಾವಾಹಿಯ ಯಶಸ್ಸಿಗೆ ಕಾರಣವಾಗಲಿದೆ ಎನ್ನುವುದು ಸ್ಟಾರ್ ಸುವರ್ಣ ವಾಹಿನಿಯ ವಿಶ್ವಾಸ.