ಇಡೀ ಚಿತ್ರವನ್ನು ದೈವ ನರ್ತಕರು ಹಾಗೂ ಅವರ ಕುಟುಂಬಕ್ಕೆ ಸಮರ್ಪಿಸಿದ್ದೇನೆ. ದೈವದ ಸೇವೆ ಮಾಡುವಂತದ್ದು ವಿಶೇಷ ಮತ್ತು ಪುಣ್ಯದ ಕಾರ್ಯ. ಕಾಂತಾರ ಚಿತ್ರ ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಸದ್ದು ಮಾಡಿದೆ: ರಿಷಬ್ ಶೆಟ್ಟಿ
ಮಂಗಳೂರು(ಅ.06): ‘ಕಾಂತಾರ’ ಚಲನಚಿತ್ರದ ಯಶಸ್ಸು ಕಂಡು ಇದೀಗ ಹಿಂದಿ, ಮಲೆಯಾಳಂ, ತೆಲುಗು, ತಮಿಳು ಸೇರಿ ನಾಲ್ಕು ಭಾಷೆಗಳಿಗೆ ಡಬ್ಬಿಂಗ್‌ಗೆ ಬೇಡಿಕೆ ಬರುತ್ತಿದೆ. ಇದು ಎಲ್ಲ, ಹೇಗೆ, ಯಾವಾಗ ಎಂಬ ಬಗ್ಗೆ ನಮ್ಮ ಪ್ರೊಡಕ್ಷನ್ ಹೌಸ್ ಕೆಲವೇ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಚಿತ್ರದ ನಾಯಕ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಕಾಂತಾರ ಚಿತ್ರ ತೆರೆಕಂಡ ಆರಂಭದ ಯಶಸ್ಸಿನ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಅವರು ಸಂತಸ ಹಂಚಿಕೊಂಡರು.
ಕಾಂತಾರ ಎಂದರೆ ನಿಗೂಢ ಕಾಡು. ಕಾಂತಾರ ಸಿನಿಮಾ ಒಂದು ಸವಾಲು ಆಗಿತ್ತು. ನಾಡಿನ ನಂಬಿಕೆ, ಆಚಾರ, ವಿಚಾರಗಳಿಗೆ, ದೈವರಾಧನೆಗೆ ಎಲ್ಲೂ ಧಕ್ಕೆಯಾಗದಂತೆ, ಅದರ ಶ್ರೇಷ್ಠತೆ, ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಸಿನಿಮಾ ಮಾಡಬೇಕಾಗಿತ್ತು. ನಾನು ಎಳೆಯ ಪ್ರಾಯಗಳಿಂದಲೂ ದೈವ, ದೇವರುಗಳ ಬಗ್ಗೆ ಭಕ್ತಿ ಇರಿಸಿಕೊಂಡವನು. ಆರಾಧಿಸುತ್ತಾ ಬಂದವನು. ದೈವರಾಧನೆ ಜತೆಗೆ ಬೆಳೆದವನು. ದೈವಗಳ ಕೃಪೆಯಿಂದ ಎಲ್ಲರ ಸಹಕಾರದಿಂದ ಕಾಂತಾರ ಸಿನಿಮಾ ಸಾಕಾರಗೊಂಡಿದೆ. ಈ ಸಿನಿಮಾ ನಮ್ಮಿಂದ ಆಗಿದ್ದು ಎಂದು ನಾನು ಹೇಳುವುದಿಲ್ಲ. ನಾವು ನಂಬಿರುವ ದೈವಗಳೇ ಮಾಡಿಸಿದ್ದು ಎಂದಷ್ಟೆಹೇಳಬಲ್ಲೆ ಎಂದು ಭಾವುಕತೆಯಿಂದ ಹೇಳಿದ್ದಾರೆ.
ಸಾಲು ಸಾಲು ರಜೆ ಥಿಯೇಟರ್ ಹೌಸ್‌ಫುಲ್: ರಿಷಬ್ 'ಕಾಂತಾರ'ಗೆ ಹೊಡಿತು ಜಾಕ್‌ಪಾಟ್!
ದೈವ ನರ್ತಕ ಕುಟುಂಬಕ್ಕೆ ಸಮರ್ಪಣೆ:
ಇಡೀ ಚಿತ್ರವನ್ನು ದೈವ ನರ್ತಕರು ಹಾಗೂ ಅವರ ಕುಟುಂಬಕ್ಕೆ ಸಮರ್ಪಿಸಿದ್ದೇನೆ. ದೈವದ ಸೇವೆ ಮಾಡುವಂತದ್ದು ವಿಶೇಷ ಮತ್ತು ಪುಣ್ಯದ ಕಾರ್ಯ. ಕಾಂತಾರ ಚಿತ್ರ ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಸದ್ದು ಮಾಡಿದೆ. ಆನೇಕ ವರ್ಷಗಳಿಂದ ಊರಿಗೆ ಬಾರದ, ದೈವಗಳ ಕೋಲ, ನೇಮಗಳಲ್ಲಿ ಪಾಲ್ಗೊಳ್ಳದ ಹಲವಾರು ಮಂದಿ ಇದೀಗ ಊರಿಗೆ ಬರಬೇಕು, ನಮ್ಮ ಮನೆತನದ, ಊರಿನ ಕೋಲ, ನೇಮಗಳಲ್ಲಿ ಪಾಲ್ಗೊಳುವಂತೆ ಪ್ರೇರೇಪಣೆ ಬಂದಿರುವುದಾಗಿ ದೂರವಾಣಿ ಕರೆ, ಮೆಸೇಜ್‌ಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಕೂಡಾ ಸಿನಿಮಾ ಯಶಸ್ಸಿನ ಹಿಂದಿದೆ. ಸಶಕ್ತ ನಿರ್ಮಾಪಕನಿಂದ ಮಾತ್ರ ಚಿತ್ರವನ್ನು ಎಲ್ಲೆಡೆ ತಲುಪಿಸಲು ಸಾಧ್ಯ ಎನ್ನುತ್ತಾರೆ ರಿಷಬ್ ಶೆಟ್ಟಿ.
‘ಕಾಂತಾರ’ ಕ್ಲೈಮ್ಯಾಕ್ಸ್ ನೋಡುತ್ತಿದ್ದಂತೆ ಮಹಿಳೆ ಮೇಲೆ ದೈವ ಆವಾಹನೆ?
ಕಾಂತಾರ ನಾಯಕಿ ಸಪ್ತಮಿ ಗೌಡ ಮಾತನಾಡಿ, ನಾನು ಬೆಂಗಳೂರಿನವಳು. ಈ ಚಿತ್ರದಲ್ಲಿ ನಟಿಸುವ ಮೊದಲು ನನಗೆ ಕೋಲ, ನೇಮಗಳ ಬಗ್ಗೆ ತಿಳಿದಿರಲಿಲ್ಲ. ಅದೆಲ್ಲಾ ಹೊಸತು. ಚಿತ್ರದಲ್ಲಿ ಪಾತ್ರ ಮಾಡುವ ಸಂದರ್ಭದಲ್ಲಿ ಇದರ ಬಗ್ಗೆ ತಿಳಿಯುವಂತಾಯಿತು. ಇದರ ಆಚಾರ, ವಿಚಾರ, ನಂಬಿಕೆಗಳನ್ನು ಚಾಚೂ ತಪ್ಪದೆ ಶ್ರದ್ಧೆಯಿಂದ ಪಾತ್ರ ಮಾಡಿದ್ದೇನೆ. ಇನ್ನೂ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಇಲ್ಲಿಗೆ ಬಂದು ಕೋಲ, ನೇಮಗಳಲ್ಲಿ ಭಾಗವಹಿಸುತ್ತೇನೆ ಎಂದರು. ಚಿತ್ರದಲ್ಲಿ ಪಾತ್ರ ಮಾಡಿರುವ ಪ್ರಮೋದ್ ಶೆಟ್ಟಿ, ದೈವನರ್ತಕ ಮುಖೇಶ್, ಪ್ರಕಾಶ್ ತುಮಿನಾಡು, ಶನಿಲ್ ಗುರು ಅವರು ಚಿತ್ರದ ಚಿತ್ರೀಕರಣದ ವೇಳೆ ತಮ್ಮ ಅನುಭವ, ಪರಿಶ್ರಮ ಹಂಚಿಕೊಂಡರು.
ಬರಲಿದೆಯೇ ಕಾಂತಾರ-2..?
ಕಾಂತಾರ ಚಲನಚಿತ್ರ ಅದ್ಭುತ ಯಶಸ್ಸು ಕಾಣುತ್ತಿರುವಂತೆಯೇ ಇದೀಗ ಕಾಂತಾರ-2 ಬರಲಿದೆಯೇ ಎಂಬ ಕುತೂಹಲ ಚಿತ್ರಪ್ರೇಮಿಗಳನ್ನು ಕಾಡುತ್ತಿದೆ. ಈ ಕುತೂಹಲವನ್ನು ಹಾಗೆಯೇ ಉಳಿಸಿಕೊಂಡಿರುವ ಚಿತ್ರದ ನಾಯಕ, ನಿರ್ದೇಶಕ ರಿಷಬ್ ಶೆಟ್ಟಿ, ‘ಇದನ್ನು ದೈವೇಚ್ಛೆಗೆ ಬಿಟ್ಟಿದ್ದೇನೆ’ ಎನ್ನುವ ಮೂಲಕ ಪ್ರಶ್ನೆಯಾಗಿಯೇ ಉಳಿಸಿಕೊಂಡಿದ್ದಾರೆ.
ಕಾಂತಾರ-2 ಬರಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಯನ್ನು ಪ್ರಶ್ನೆಯಾಗಿಯೇ ಉಳಿಸಿಕೊಂಡ ರಿಷಬ್ ಶೆಟ್ಟಿಯವರು ಈಗಷ್ಟೆಕಾಂತಾರ ಸಿನಿಮಾ ಬಂದಿದೆ. ನಮ್ಮ ರಾಜ್ಯ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಚಿತ್ರಕ್ಕೆ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ. ಕಾಂತಾರ-2 ಸಿನಿಮಾ ಬಗ್ಗೆ ಈಗ ಏನನ್ನೂ ಹೇಳಲಾರೆ. ಇದನ್ನು ದೈವಚ್ಚೆಗೆ ಬಿಟ್ಟಿದ್ದೇನೆ. ದೈವದ ಇಚ್ಛೆ ಇದ್ದರೆ ಬರಬಹುದು ಎಂದ ಹೇಳುವ ಮೂಲಕ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ.