
ಹುಬ್ಬಳ್ಳಿ (ಆ.11): ಪ್ರಣವ್ ದೇವರಾಜ್ ನಾಯಕ ನಟನಾಗಿ, ದಿಯಾ ಖ್ಯಾತಿಯ ಖುಷಿ ನಾಯಕಿಯಾಗಿ ಅಭಿನಯಿಸಿರುವ ಸನ್ ಆಫ್ ಮುತ್ತಣ್ಣ ಸಿನಿಮಾ ಆ. 22ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಹಿರಿಯ ಹಾಸ್ಯನಟ ರಂಗಾಯಣ ರಘು ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಾತನ ಫಿಲ್ಮ್ಸ್ ಹಾಗೂ ಎಸ್.ಆರ್.ಕೆ. ಫಿಲ್ಮ್ಸ್ ಸಹಯೋಗದಲ್ಲಿ ಸಿನಿಮಾ ನಿರ್ಮಿಸಲಾಗಿದೆ ಎಂದರು. ಚಿತ್ರದಲ್ಲಿ ನಾನು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಚಿನ್ ಬಸ್ರೂರು ಸಂಗೀತವಿರುವ ಚಿತ್ರಕ್ಕೆ ಹಾಡುಗಳನ್ನು ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ.
ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರವನ್ನು ಶ್ರೀಕಾಂತ ಹುಣಸೂರು ನಿರ್ದೇಶನ ಮಾಡಿದ್ದಾರೆ ಎಂದರು. ಅಪ್ಪ-ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾನು ಹಾಗೂ ಪ್ರಣವ ದೇವರಾಜ್ ತಂದೆ- ಮಗನಾಗಿ ಅಭಿನಯಿಸಿದ್ದೇವೆ. ಅಪ್ಪ-ಮಗನ ಬಾಂಧವ್ಯದ ಸನ್ನಿವೇಶಗಳು ಮನಸ್ಸಿಗೆ ಹತ್ತಿರವಾಗಲಿದೆ. ಚಿತ್ರದ ಕಮಂಗಿ ನನ್ನ ಮಗನೆ ಹಾಡು ಈಗಾಗಲೇ ಜನಮನ ಗೆದ್ದಿದೆ. ಮಿಡ್‌ನೈಟ್ ರಸ್ತೆಯಲ್ಲಿ ಹಾಡಿಗೂ ಮೆಚ್ಚುಗೆ ಪಡೆದಿದೆ. ಟೀಸರ್ ಕೂಡ ಮೆಚ್ಚುಗೆ ಪಡೆದಿದೆ ಎಂದರು.
ಚಿತ್ರದ ತಾರಾ ಬಳಗದಲ್ಲಿ ಸುಚೇಂದ್ರ ಪ್ರಸಾದ್, ಗಿರೀಶ ಶಿವಣ್ಣ, ತಬಲಾ ನಾಣಿ, ಶ್ರೀನಿವಾಸ ಪ್ರಭು, ಸುಧಾ ಬೆಳವಡಿ, ಅರುಣ ಚಕ್ರವರ್ತಿ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು. ನಾಯಕ ನಟ ಪ್ರಣವ್ ದೇವರಾಜ ಮಾತನಾಡಿ, ನನ್ನ ನಿಜ ಜೀವನಕ್ಕೆ ಈ ಚಿತ್ರ ತುಂಬಾ ಹತ್ತಿರವಾಗಿದ್ದು, ಚಿತ್ರ ನನ್ನ ಮನಸ್ಸಿಗೂ ಬಹಳ ಹತ್ತಿರವಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಬೆಂಗಳೂರು, ಕಾಶಿ, ವಾರಾಣಸಿಯಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದ ಅವರು, ಪ್ರೇಕ್ಷಕರು ಆಶೀರ್ವಾದ ಮಾಡಬೇಕು ಎಂದರು.
ಸಮಾಧಿ ಸ್ಥಳ ವಿವಾದದಲ್ಲಿತ್ತು: ದಿ. ನಟ ವಿಷ್ಣುವರ್ಧನ ಅವರ ಸಮಾಧಿಯನ್ನು ಪೊಲೀಸರ ಸಮ್ಮುಖದಲ್ಲಿ ತೆರವು ಮಾಡಲಾಗಿದೆ ಎಂದು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ಸಮಾಧಿ ಜಾಗ ಮೊದಲಿನಿಂದಲೂ ವಿವಾದದಲ್ಲಿತ್ತು. ಆ ಜಾಗದಲ್ಲಿ ಬಾಲಣ್ಣ ಅವರ ಸ್ಟುಡಿಯೋ ಇತ್ತು. ಬಾಲಣ್ಣ ಅವರ ಕುಟುಂಬಸ್ಥರು ನ್ಯಾಯಾಲಯ ಮೊರೆ ಹೋಗಿದ್ದರು ಎಂದು ರಂಗಾಯಣ ರಘು ಹೇಳಿದರು. ಈಗಾಗಲೇ ಭಾರತಿ ಅಮ್ಮನವರು ಮೈಸೂರಿನಲ್ಲಿ ವಿಷ್ಣುವರ್ಧನ ಅವರ ಸಮಾಧಿ ನಿರ್ಮಿಸಿದ್ದಾರೆ. ಅದಕ್ಕೆ ನಟ ಸುದೀಪ ಅವರು ಕೈ ಜೋಡಿಸುವುದಾಗಿ ತಿಳಿಸಿದ್ದಾರೆ. ಮೈಸೂರಿನಲ್ಲಿ ನಿರ್ಮಿಸಿರುವ ವಿಷ್ಣವರ್ಧನ ಅವರ ಸಮಾಧಿ ಸ್ಥಳದಲ್ಲಿ ಟ್ರೇನಿಂಗ್ ಸೆಂಟರ್ ಮಾಡುವ ಉದ್ದೇಶವನ್ನು ಭಾರತಿ ಹಾಗೂ ಅನಿರುದ್ಧ ಅವರು ಹೊಂದಿದ್ದಾರೆ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.