
ನಟಿ ಶ್ರುತಿ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರವಿಚಂದ್ರನ್, ಶಿವರಾಜ್‌ಕುಮಾರ್, ಬಿ ಸಿ ಪಾಟೀಲ್, ಗೀತಾ ಶಿವರಾಜ್‌ಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ನೆನಪಿರಲಿ ಪ್ರೇಮ್, ಶರಣ್, ಅಮೂಲ್ಯ, ಸೋನಲ್ ಮೊಂಥೆರೋ, ಜಯಮಾಲ, ಮಾಳವಿಕಾ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಕಲಾವಿದರು, ತಂತ್ರಜ್ಞರು ಆಗಮಿಸಿ ಶ್ರುತಿ ಅವರಿಗೆ ಶುಭ ಕೋರಿದರು.
ಪುತ್ರಿ ಗೌರಿ ಶ್ರುತಿ ವೇದಿಕೆ ಮೇಲೆ ಹಾಡು ಹಾಡಿದ್ದು ಗಮನ ಸೆಳೆಯಿತು. ಶ್ರುತಿ, ‘ನಿರ್ದೇಶಕರು, ತಂತ್ರಜ್ಞರು, ಸಹ ಕಲಾವಿದರು, ಮಾಧ್ಯಮದವರು ಹಾಗೂ ಕುಟುಂಬದವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಇಷ್ಟು ವರ್ಷಗಳ ಕಾಲ ನಟನೆಯ ಹಾದಿಯಲ್ಲಿ ಸಾಗಿ ಬಂದಿದ್ದೇನೆ. ಐವತ್ತು ಎಂಬುದು ಸಂಭ್ರಮದ ದಿನ. ಮತ್ತಷ್ಟು ಒಳ್ಳೆಯ ಪಾತ್ರಗಳು, ಚಿತ್ರಗಳಲ್ಲಿ ನಟಿಸುವ ಆಸೆ ಇದೆ’ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಭಿಮಾನಿಗಳು ಆಚರಿಸಿದರು. ಡಾ. ವಿಷ್ಣು ಸೇನಾ ಸಮಿತಿಯು ಅಭಿಮಾನ್ ಸ್ಟುಡಿಯೋ ಸಮೀಪದಲ್ಲಿರುವ ಜೆಎಸ್‌ಎಸ್ ಮಹಾವಿದ್ಯಾಪೀಠದ ಎದುರಿನ ಜಾಗದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ತಾತ್ಕಾಲಿಕವಾದ ಮಂಟಪ ನಿರ್ಮಿಸಿ, ಮಂಟಪದಲ್ಲಿ ಡಾ. ವಿಷ್ಣುವರ್ಧನ್ ಅವರ ಭಾವಚಿತ್ರ ಹಾಗೂ ಪುತ್ಥಳಿಗೆ ಪೂಜೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ನೂರಾರು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಇದೇ ಸಂದರ್ಭ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಹಲವರು ಪಾಲ್ಗೊಂಡು ರಕ್ತದಾನ ಮಾಡಿದರು. ಕೆಲವರು ನೇತ್ರದಾನಕ್ಕೂ ತಮ್ಮ ಹೆಸರುಗಳು ನೋಂದಣಿ ಮಾಡಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ನಟನ ಜನ್ಮದಿನ ಆಚರಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.